ಬೆಂಗಳೂರು: ನಾನು ಅರ್ಕಾವತಿ ಲೇಔಟ್ ನಲ್ಲಿ ಒಂದು ಗುಂಟೆ ಜಮೀನನ್ನು ಕೂಡ ಡಿ ನೋಟಿಫೈ ಮಾಡಿಲ್ಲ, ಇದನ್ನೇ ಕೆಂಪಣ್ಣನವರ ಸಮಿತಿ ಹೇಳಿದೆ. ಬೊಮ್ಮಾಯಿ ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.
ಅವರಿಂದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2003ರಲ್ಲಿ ಅರ್ಕಾವತಿ ಲೇಔಟ್ ಆದದ್ದು. ನಾವು ಅಧಿಕಾರಕ್ಕೆ ಬರುವ ಮೊದಲೇ ಇವೆಲ್ಲ ನಡೆದು ನೋಟಿಫಿಕೇಷನ್ ಆಗಿತ್ತು, 2750 ಎಕರೆಗೆ ನೋಟಿಫಿಕೇಷನ್ ಆಯ್ತು. ನಂತರ 1919 ಎಕರೆ 13 ಗುಂಟೆಗೆ ಅಂತಿಮವಾಗಿ ನೋಟಿಫಿಕೇಷನ್ ಆಯ್ತು. ಇದನ್ನು ಹೈಕೋರ್ಟ್ ನಲ್ಲಿ ಚಾಲೆಂಜ್ ಮಾಡಿದ್ರು. ಹೈಕೋರ್ಟ್ ನ ಏಕಸದಸ್ಯ ಪೀಠ ಈ ಮನವಿಯನ್ನು ತಿರಸ್ಕಾರ ಮಾಡಿತು. ನಂತರ ವಿಭಾಗೀಯ ಪೀಠಕ್ಕೆ ಹೋದರು, ಅಲ್ಲಿ ಬಿಡಿಎ ಮಾಡಿದ್ದ ನೋಟಿಫಿಕೇಷನ್ ಅನ್ನು ಎತ್ತಿಹಿಡಿಯಲಾಯಿತು. ಅದರ ವಿರುದ್ಧ ಸೊಂಡೂರು ರಾಮಸ್ವಾಮಿ ಮತ್ತು ಇನ್ನಿತರರು ಸುಪ್ರೀಂ ಕೋರ್ಟ್ ಗೆ ಹೋದರು, ಅಲ್ಲಿ ಕೂಡ ವಿಭಾಗೀಯ ಪೀಠ ಹೇಳಿದ್ದನ್ನು ಪುನರುಚ್ಚಾರ ಮಾಡಿ ಕೆಲವು ನಿರ್ದೇಶನಗಳನ್ನು ನೀಡಿದರು. ಇವುಗಳನ್ನು ಪರಿಶೀಲನೆ ಮಾಡಲು ಮಾನದಂಡಗಳನ್ನು ನಿಗದಿ ಮಾಡಿ 5 ಟೀಮ್ ಗಳನ್ನು ರಚಿಸಿ, ಕೆಎಎಸ್ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ಮಾಡಿದ್ರು. ಇದು ಆದದ್ದು ಯಡಿಯೂರಪ್ಪ ಅವರ ಕಾಲದಲ್ಲಿ. ಇದಾದ ನಂತರ ಈ ಟೀಮ್ ಗಳು ಪರೀಕ್ಷೆ ಮಾಡಿ ಕೆಲವೆಲ್ಲ ಭೂಮಿಗಳನ್ನು ಡಿಲೀಟ್ ಮಾಡಿ ಬಿಡಿಎ ಗೆ ಒಂದು ವರದಿ ನೀಡಿದ್ರು. ಬಿಡಿಎ ನವ್ರು ಈ ವರದಿಯಲ್ಲಿ ಪರೀಕ್ಷಿಸಿ ಅನುಮೋದನೆ ನೀಡಿದ್ರು. ಈ ಫೈಲ್ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿರುವಾಗ ಅವರ ಬಳಿ ಹೋಗಿತ್ತು, ಚುನಾವಣಾ ನೀತಿಸಂಹಿತೆ ಇದೆ ಎಂದು ಫೈಲ್ ಅನ್ನು ಅವರು ವಾಪಸು ಕಳುಹಿಸಲಾಯಿತು.
ನಮ್ಮ ಸರ್ಕಾರ ಬಂದ ಸುಪ್ರೀಂ ಕೋರ್ಟ್ ನ ಮಾನದಂಡಗಳ ಪ್ರಕಾರ ಮಾಡಿದ್ದಾರೆ ಎಂದು ನಮ್ಮ ಅಧಿಕಾರಿಗಳು ಹೇಳಿದ ಮೇಲೆ ನಾನು ಅನುಮೋದನೆ ಕೊಟ್ಟಿದ್ದೆ. ಜಗದೀಶ್ ಶೆಟ್ಟರ್ ಅವರು ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸದನದಲ್ಲಿ ಪ್ರಸ್ತಾಪ ಮಾಡಿದ್ರು, ನಾನು ಕೂಡಲೇ ಒಂದು ನ್ಯಾಯಾಂಗ ಸಮಿತಿ ರಚನೆ ಮಾಡಿ ತನಿಖೆ ಮಾಡಿಸೋಣ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಕೆಂಪಣ್ಣನವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೆ. ಅವರು 2 ವರ್ಷಗಳ ಕಾಲ ವಿಚಾರಣೆ ಮಾಡಿ ವರದಿ ನೀಡಿದ್ದಾರೆ. ಈ ವರದಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಾವುದೇ ಭೂಮಿಯನ್ನು ಡಿನೋಟಿಫೈ ಮಾಡಿಲ್ಲ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.

ಇದು ಕುಮಾರಸ್ವಾಮಿ, ರಾಜ್ಯಪಾಲರು, ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಅವರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಕೊನೆಗೆ ನಮ್ಮ ಬಳಿ ಬಂದಿತ್ತು. ಜಗದೀಶ್ ಶೆಟ್ಟರ್ ಕಾಲದಲ್ಲಿ ಡಿನೋಟಿಫೈ ಆಗಿಲ್ಲ, ಕುಮಾರಸ್ವಾಮಿ, ಯಡಿಯೂರಪ್ಪನವರ ಕಾಲದಲ್ಲಿ ಡಿನೋಟಿಫೈ ಆಗಿದೆ, ರಾಜ್ಯಪಾಲರ ಕಾಲದಲ್ಲೂ ಡಿನೋಟಿಫೈ ಆಗಿದೆ ಎಂದು ಹೇಳಿದ್ದಾರೆ. ಈ ವರದಿ ಬಂದ ಮೇಲೆ ವಿಜಯಾಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿದ್ದೆ, ಮಹೇಂದ್ರ ಜೈನ್ ಎಂಬ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದವರು, ರಮಣ ರೆಡ್ಡಿ ಅವರು ಹೀಗೆ ಸದಸ್ಯರಿದ್ದರು. ಈ ಸಮಿತಿಗೆ ನ್ಯಾ. ಕೆಂಪಣ್ಣನವರ ಸಮಿತಿಯ ವರದಿ ಆಧರಿಸಿ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿ ಎಂದು ಕೊಟ್ಟಿದ್ದೆವು ಎಂದರು.
ಭೂಮಿ ಕಳೆದುಕೊಂಡವರು ಮತ್ತೆ ಹೈಕೋರ್ಟ್ ಗೆ ಹೋದರು. 27-9-2021ರಲ್ಲಿ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿದ್ದರು, ಹೈಕೋರ್ಟ್ ನವರು ಮತ್ತೆ ಒಂದು ಸಮಿತಿ ರಚನೆ ಮಾಡಿದರು. ಕೇಶವ ನಾರಾಯಣ ಎಂಬ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಮಾಡಿದರು. ಸಂದೀಪ್ ಧವೆ ನಿವೃತ್ತ ಐಎಎಸ್ ಅಧಿಕಾರಿ, ಮೇಘರಿಕ್ ಎಂಬ ನಿವೃತ್ತ ಐಪಿಎಸ್ ಅಧಿಕಾರಿಗಳು ಈ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಇದು ಇನ್ನು ಪೂರ್ಣವಾಗಿಲ್ಲ.
ಕೇಶವ ನಾರಾಯಣ ಅಧ್ಯಕ್ಷತೆಯ ಸಮಿತಿಯು ಹಿಂದೆ ಕೆಂಪಣ್ಣನವರ ಸಮಿತಿ ನೀಡಿದ್ದ ವರದಿಯನ್ನು ಸೀಜ್ ಮಾಡಿದೆ. ಈಗ ಈ ಸಮಿತಿ ವರದಿ ನೀಡಬೇಕು. ಹೀಗಿರುವಾಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ಬೊಮ್ಮಾಯಿ ಅವರು ಜವಾಬ್ದಾರಿಯಿಂದ ಉತ್ತರ ನೀಡುವುದು ಬಿಟ್ಟು ಸಿದ್ದರಾಮಯ್ಯ ನವರ ಕಾಲದಲ್ಲಿ 852 ಎಕರೆ ಡಿನೋಟಿಫೈ ಆಗಿದೆ ಎಂದು ಸದನಕ್ಕೆ ಸುಳ್ಳು ಹೇಳುವುದು ಸರಿಯಲ್ಲ ಎಂದು ಹರಿಹಾಯ್ದರು.
ಈ ಸರ್ಕಾರ ಬಂದು 4 ವರ್ಷ ಆಯಿತು, ಈ ವೇಳೆ ವರದಿಯನ್ನು ಸದನದ ಮುಂದಿಟ್ಟು ಕ್ರಮ ಕೈಗೊಳ್ಳಬೇಕಿತ್ತು. ನಾವು ಯಾವಾಗ ಈ ಸರ್ಕಾರದ ಮೇಲೆ 40% ಕಮಿಷನ್ ಆರೋಪವನ್ನು ಆಂದೋಲನದ ರೀತಿ ಮಾಡಿ, ಇವರ ಹಗರಣಗಳನ್ನು ಹೊರ ತರಲು ಶುರು ಮಾಡಿದೆವೋ ತಮ್ಮ ಮೇಲೆ ಇರುವ ಆರೋಪ ಮಾಡಿ ಮುಚ್ಚಿಕೊಳ್ಳಲು ನಮ್ಮನ್ನು ದೂರುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಿದ್ರು, ಪಿಎಸ್‌ಐ ನೇಮಕಾತಿ ಹಗರಣ ಮುಚ್ಚಿ ಹಾಕಿದ್ರು, 40% ಕಮಿಷನ್ ಹಗರಣ ಮುಚ್ಚಿಹಾಕಲು ಹೊರಟಿದ್ದಾರೆ, ಕೊರೊನಾ ಕಾಲದಲ್ಲಿ ವೈದ್ಯಕೀಯ ಉಪರಕಣಗಳ ಖರೀದಿಯಲ್ಲಿ ನಡೆದಿದ್ದ ಅವ್ಯವಹಾರವನ್ನು ಮುಚ್ಚಿ ಹಾಕಲಾಗಿದೆ. ಹೀಗೆ ಅನೇಕ ಹಗರಣಗಳನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿದರು.
ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸುಳ್ಳು ಹೇಳಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
ಇಲ್ಲಿ ಹರಶ್ಚಂದ್ರನ ಮೊಮ್ಮಕ್ಕಳ ಹಾಗೆ ಮಾತನಾಡುತ್ತಾರೆ
ನಾವು ಲೋಕಾಯುಕ್ತ ಮುಚ್ಚಲೂ ಇಲ್ಲ, ಲೋಕಾಯುಕ್ತರನ್ನು ತೆಗೆದುಹಾಕುವುದಾಗಲೀ ಮಾಡಿಲ್ಲ. ಗುಜರಾತ್, ಗೋವಾ, ಅಸ್ಸಾಂ, ಮಧ್ಯಪ್ರದೇಶಗಳಲ್ಲಿ ಯಾಕಿನ್ನು ಎಸಿಬಿ ಮುಚ್ಚಿಲ್ಲ? ದೇಶದ 16 ರಾಜ್ಯಗಳು ಲೋಕಾಯುಕ್ತದ ಜೊತೆಗೆ ಎಸಿಬಿಯನ್ನು ಹೊಂದಿದೆ. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವವರು ಯಾಕೆ ಇನ್ನು ಲೋಕಪಾಲ್ ಅನ್ನು ಮಾಡಿಲ್ಲ? ಮೂರು ವರ್ಷಗಳ ಬಿಜೆಪಿ ಸರ್ಕಾರ ಎಸಿಬಿ ಮುಚ್ಚದೆ ಸುಮ್ಮನಿದ್ದದ್ದು ಯಾಕೆ? ಅಡ್ವೋಕೇಟ್ ಜನರಲ್ ಮೂಲಕ ಎಸಿಬಿ ರಚನೆಯನ್ನು ಸಮರ್ಥನೆ ಮಾಡಿಸಿರುವುದು ಯಾಕೆ? ಕೋರ್ಟಿನಲ್ಲಿ ಹಿಂದಿನ ಸರ್ಕಾರ ತಪ್ಪು ಮಾಡಿದೆ, ಎಸಿಬಿ ರದ್ದು ಮಾಡಿ ಎಂದು ಹೇಳಿಸಬೇಕಿತ್ತು. ಎಸಿಬಿ ಪರವಾಗಿರುವವರು ಬಿಜೆಪಿಯವರೇ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡಿದ್ದಾರೆ, ಇಲ್ಲಿ ಮಾತ್ರ ಹರಿಶ್ಚಂದ್ರನ ಮೊಮ್ಮಕ್ಕಳ ಹಾಗೆ ಮಾತನಾಡುತ್ತಾರೆ ಎಂದು ಗುಡುಗಿದರು.