ಕನ್ನಡ ಚಿತ್ರರಂಗದ ಗಾಯಕ ಅಜಯ್ ವಾರಿಯರ್ ಬಿಬಿಎಂಪಿ ಎಡವಟ್ಟಿನಿಂದ ಚರಂಡಿಗೆ ಬಿದ್ದು ಕಾಲು ಮೂಳೆ ಮುರಿದು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಕೇರಳದಲ್ಲಿ ಕುಟುಂಬದವರ ಭೇಟಿಗಾಗಿ ರೈಲಿನಲ್ಲಿ ಹೋಗಲು ದೊಡ್ಡಕಲ್ಲಸಂದ್ರ ಮೆಟ್ರೋ ಬಳಿ ಹೋಗುತ್ತಿದ್ದಾಗ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ತೆರೆದ ಒಳಚರಂಡಿಯೊಳಗೆ ಬಿದ್ದಿದ್ದಾರೆ.
ಕೈಯಲ್ಲಿ ಸೂಟ್ ಕೇಸ್ ಇದ್ದಿದ್ದರಿಂದ ಅವರು ಪಾರಾಗಿದ್ದು,ಕಾಲಿಗೆ ಗಾಯಗಳಾಗಿದ್ದು, ಹೊಲಿಗೆ ಹಾಕಲಾಗಿದೆ.

ಅಜಯ್ ವಾರಿಯರ್ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು, ಬಿಬಿಎಂಪಿ ಬೇಜಾಬ್ದಾರಿಯಿಂದ ನಾನು ಕಂಠ ಪೂರ್ತಿ ತುಂಬಿದ್ದ ಚರಂಡಿಯಲ್ಲಿ ಬಿದ್ದಿದ್ದೆ. ಕಾಲು ಮೂಳೆ ಮುರಿದಿದ್ದು, ನಾನು ಬದುಕಿದ್ದೆ ಪವಾಡ ಎಂದು ಹೇಳಿಕೊಂಡಿದ್ದಾರೆ.
ನಗರದಲ್ಲಿ ಮಳೆಯಾಗುತ್ತಿದ್ದುದ್ದರಿಂದ ರಸ್ತೆಯಲ್ಲಿ ನೀರು ತುಂಬಿದ್ದು, ಪಾದಚಾರಿ ಮಾರ್ಗದ ಮೂಲಕ ಹೋಗೋಣ ಎಂದು ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯ ಮೇಲೆ ಹಾಕಬೇಕಿದ್ದ ಸೀಮೆಂಟ್ ಕಲ್ಲುಗಳನ್ನು ಮುಚ್ಚಿರಲಿಲ್ಲ. ನೀರು ತುಂಬಿದ್ದರಿಂದ ಇದು ಗಮನಕ್ಕೆ ಬಾರದೇ ಗಾಯಕ ಅಜಯ್ ವಾರಿಯರ್ ಚರಂಡಿಯಲ್ಲಿ ಬಿದ್ದಿದ್ದಾರೆ.
ಇತ್ತೀಚೆಗಷ್ಟೇ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಿರುತೆರೆ ನಟಿ ಗಾಯಗೊಂಡಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿರುವುದು ದೂರಾದೃಷ್ಟಕರ.