ಜನತಾ ಪರಿವಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದುಕೊಂಡು ಈ ಇಬ್ಬರು ನಾಯಕರ ಕೆಲಸವನ್ನು ನೋಡಿದ್ದೇನೆ, ಕೇಳಿದ್ದೇನೆ. ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜತೆ ಕೆಲಸ ಮಾಡುವ ಅವಕಾಶ ನನಗೆ ಸಿಗಲಿಲ್ಲಯಾಕೆಂದರೆ ನಾನು ಕಾಂಗ್ರೆಸ್ ಸೇರಿದ್ದು 2006ರಲ್ಲಿ. ರಾಜೀವ್ ಗಾಂಧಿ ಅವರು ಬಹಳ ಚಿಕ್ಕ ವಯಸ್ಸಿಗೆ ಪ್ರಧಾನಿಯಾದವರು. ಅವರು ಪ್ರಧಾನಿಯಾಗಿ ದೇಶದ ಯುವ ಸಮೂಹದ ಮೇಲೆ ವಿಶ್ವಾಸ, ನಂಬಿಕೆ ಇಟ್ಟಿದ್ದರು. ಅವರು ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಬೇಕು. ಜಗತ್ತು ಆರ್ಥಿಕವಾಗಿ, ಶೈಕ್ಷಣಿಕವಾಗಿ ವೇಗವಾಗಿ ಬೆಳೆಯುತ್ತಿದೆ, ಅದರ ಜತೆ ಸ್ಪರ್ಧೆ ಮಾಡಲು ದೇಶವನ್ನು ಸಜ್ಜುಗೊಳಿಸಬೇಕು ಎಂದು ನಂಬಿದ್ದರು. ಯುವಕರಿಂದ ಸಮಾಜ ವಿಕಾಸ, ದೇಶದ ಬೆಳವಣಿಗೆ ಸಾಧ್ಯ ಎಂದು ನಂಬಿದ್ದರು. ಅದಕ್ಕಾಗಿ ಅನೇಕರ ಟೀಕೆಯನ್ನು ಲೆಕ್ಕಿಸದೆ 18 ವರ್ಷದವರಿಗೆ ಮತದಾನದ ಹಕ್ಕು ನೀಡಿದರು. ಹಳ್ಳಿಯಲ್ಲಿ ಕೂತು ಜಗತ್ತಿನ ಜೊತೆ ಸಂಪರ್ಕ ಸಾಧಿಸುವಂತೆ ಆಗಿರುವುದಕ್ಕೆ ರಾಜೀವ್ ಗಾಂಧಿ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73,74ನೇ ತಿದ್ದುಪಡಿ ತಂದರು. ಯಾಕೆಂದರೆ ಯುವಕರು ನಾಯಕರಾಗಬೇಕು ಎಲ್ಲರಿಗೂ ಅವಕಾಶ ಸಿಗಬೇಕು, ಎಲ್ಲ ಜಾತಿ ವರ್ಗದವರಿಗೆ ಮಹಿಳೆಯರಿಗೆ ರಾಜಕೀಯದಲ್ಲಿ ಪಾಲು ಸಿಗಬೇಕು. ಎಂದು ಪಂಚಾಯತ್ ರಾಜ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದರು. ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮೀಸಲಾತಿ ಸಿಕ್ಕಿದ್ದೇ ಈ ತಿದ್ದುಪಡಿ ಮೂಲಕ. 1995ರಲ್ಲಿ ಈ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂದು ಉಪಸಮಿತಿ ಶಿಫಾರಸ್ಸು ನೀಡಿದ್ದೆವು. ಅದನ್ನು ಯಥಾವತ್ತಾಗಿ ಅನುಮೋದನೆ ನೀಡಲಾಗಿತ್ತು. ಇದೆಲ್ಲವನ್ನು ಜನರಿಗೆ ಹೇಳಬೇಕು. ಕಾರಣ ಬಿಜೆಪಿಯವರು 127ನೆ ತಿದ್ದುಪಡಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಕೋರ್ಟ್ ಛೀಮಾರಿ ಹಾಕಿದ ಮೇಲೆ, ಉತ್ತರ ಪ್ರದೇಶ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿ ಮಾಡಿದ್ದಾರೆ. ಬಿಜೆಪಿಯವರು ಮಹಾ ಮೋಸಗಾರರು ಹಾಗೂ ಸುಳ್ಳುಗಾರರು. ನಾವು ಎಚ್ಚರದಿಂದ ಇರಬೇಕು. ಸುಳ್ಳು ಹೇಳಿಕೊಂಡೇ ಜನರ ದಾರಿ ತಪ್ಪಿಸಿದ್ದಾರೆ.
ನರೇಂದ್ರ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಹೇಳುತ್ತಾರೆ. ಬಿಜೆಪಿ ಸರ್ಕಾರದಲ್ಲಿ ಒಬ್ಬ ಮುಸಲ್ಮಾನರು ಇದ್ದಾರಾ? ಒಬ್ಬ ಶಾಸಕ, ಮಂತ್ರಿ ಇದ್ದಾರಾ? ಎಂದು ಅವರು ಈ ವೇಳೆ ಪ್ರಶ್ನಿಸಿದ್ದಾರೆ. ಸಮಾಜದ ಎಲ್ಲ ವರ್ಗದವರನ್ನು ಒಳಗೊಂಡ ರಾಜಕೀಯ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ.
ರಾಜೀವ್ ಗಾಂಧಿ ಅವರ ಕಾರ್ಯಕ್ರಮವನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತಂದವರು ದೇವರಾಜ ಅರಸು ಅವರು. ವಿಧಾನಸೌಧ ಪ್ರವೇಶಿಸುತ್ತೇನೆ ಎಂದು ಕನಸು ಕಾಣದವರನ್ನು ಬೆಳೆಸಿ ವಿಧಾನಸೌಧಕ್ಕೆ ಬರುವಂತೆ ಮಾಡಿದ್ದು ದೇವರಾಜ ಅರಸು ಅವರು. ನಿಜವಾಗಿ ಹಿಂದುಳಿದವರಿಗೆ ಮಿಸಲಾತಿ ಕೊಟ್ಟಿದ್ದು ಅರಸು ಅವರು. ಕರ್ನಾಟಕ ರಾಜಕಾರಣದಲ್ಲಿ ಧೀಮಂತ ನಾಯಕ ದೇವರಾಜ ಅರಸು. ಕರ್ನಾಟಕ ಏಕೀಕರಣ ಆದರೂ ರಾಜಕ್ಕೆ ಮೈಸೂರು ಎಂಬ ಹೆಸರು ಕರ್ನಾಟಕ ಎಂದು ಆಗಿದ್ದು 1973ರಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ. ಇಂತಹ ಅನೇಕ ಕೆಲಸಗಳನ್ನು ದೇವರಾಜ ಅರಸು, ರಾಜೀವ್ ಗಾಂಧಿ ಅವರು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.