
ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಎರಡೂವರೆ ವರ್ಷ ಆದ್ಮೇಲೆ ಸಿಎಂ ಬದಲಾವಣೆ ಬಗ್ಗೆ ಕೈ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಟೀಕೆ ಟಿಪ್ಪಣಿ ವ್ಯಕ್ತಪಡಿಸಿದರು. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಮಾಧ್ಯಮದವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ. ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಕೆಲವರು ಕೇಳಿದ ಪ್ರಶ್ನೆಯನ್ನು ಕೆಲವು ಮಾಧ್ಯಮಗಳು ತಿರುಚಿ ವರದಿ ಮಾಡಿ ವಿವಾದ ಸೃಷ್ಟಿಸುತ್ತಿರುವುದು ಬೇಸರ ತಂದಿದೆ.
ನನಗೆ ನನ್ನ ಗುರಿ ಗೊತ್ತಿದೆ, ನನಗೆ ಯಾವ ಆತುರವೂ ಇಲ್ಲ, ಈ ರೀತಿ ಹೇಳುವ ಅವಶ್ಯಕತೆಯೂ ಇಲ್ಲ.
ನಾನು ಯಾವುದೇ ಹುದ್ದೆಗಾಗಿ ಆತುರದಲ್ಲಿಲ್ಲ. ರಾಜ್ಯದ ಜನರ ಸೇವೆ ಮತ್ತು ಬೆಂಗಳೂರು ನಾಗರಿಕರಿಗೆ ಉತ್ತಮ ಆಡಳಿತ ನೀಡುವುದೇ ನನ್ನ ಉದ್ದೇಶ. ನಾನು ಸಾರ್ವಜನಿಕರ ಸೇವೆಗಾಗಿಯೇ ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆ. ಸತ್ಯವನ್ನು ತಿರುಚಿ, ದಾರಿ ತಪ್ಪಿಸುವ ವರದಿಗಳಿಂದ ದೂರವಿರುವಂತೆ ಮಾಧ್ಯಮ ಮಿತ್ರರಲ್ಲಿ ನನ್ನ ಮನವಿ. ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ತಿಳಿಸಿದರು.