ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ವಿವಾದಾತ್ಮಕ ಟ್ವೀಟ್ ಹಾಕಿದ ನಟಿ ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. “ದ್ವೇಷದ ನಡವಳಿಕೆ ಮತ್ತು ನಿಂದನಾತ್ಮಕ ನಡವಳಿಕೆ” ಕುರಿತು ಟ್ವಿಟ್ಟರ್ ನೀತಿಯನ್ನು ಕಂಗನಾರ ಖಾತೆ ಪದೇ ಪದೇ ಉಲ್ಲಂಘಿಸಿದೆ ಎಂದು ಟ್ವಿಟರ್ ತಿಳಿಸಿದೆ.
ಟ್ವಿಟರ್ ನ ಈ ಕ್ರಮವನ್ನು ಕಂಗನಾ ವಿರೋಧಿಸಿದ್ದಾರೆ. ನನ್ನ ಅಭಿವ್ಯಕ್ತಿಯನ್ನು ಪ್ರಸ್ತುತಿಪಡಿಸಲು ನನಗೆ ಹಲವಾರು ವೇದಿಕೆಗಳಿವೆ. ನನ್ನ ಕಲೆಯಾದ ಸಿನೆಮಾ ಮೂಲಕವೂ ನಾನು ಹೇಳಬಯಸುವುದನ್ನು ಹೇಳುತ್ತೇನೆ ಎಂದು ಕಂಗನಾ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರದ ಕುರಿತು ನೀಡಿದ ಪ್ರತಿಕ್ರಿಯೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯನ್ನು ಉದ್ದೇಶಿಸಿ ʼ2000 ದ ಆರಂಭದಲ್ಲಿ ನೀವು ತೋರುತ್ತಿದ್ದ ʼವಿರಾಟ್ ರೂಪʼವನ್ನು ಬಂಗಾಳದಲ್ಲಿ ತೋರಿಸಬೇಕುʼ ಎಂದು ಕಂಗನಾ ಟ್ವೀಟ್ ಮಾಡಿದ್ದರು.
ಹಿಂಸಾಚಾರವನ್ನು ಪ್ರಚೋದಿಸುವಂತಿದ್ದ ಕಂಗನಾರ ಟ್ವೀಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಿಂಸೆಗೆ ಪ್ರಚೋದಿಸುವ ಕಂಗನಾರ ಖಾತೆಯನ್ನು ಟ್ವಿಟರ್ ಅಳಿಸಿ ಹಾಕಬೇಕೆಂದೂ ಕೂಗು ಕೇಳಿ ಬಂದಿದ್ದವು.
ಅಪರಾಧಕ್ಕೆ ಪ್ರಚೋದಿಸುವ ಕೃತ್ಯಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಧ್ವೇಷಪೂರಿತ ಸಂದೇಶ ಹರಡುವ ಹಾಗೂ ಟ್ವಿಟರ್ ನಿಯಮಾವಳಿಗಳ ಪುನರಾವರ್ತಿತ ಉಲ್ಲಂಘನೆಗಾಗಿ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸುತ್ತೇವೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ಕಂಗನಾ ರಾಣಾವತ್ ವಿವಾದಾತ್ಮಕ ಟ್ವೀಟ್ ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆ ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರೆಂದು ಕರೆದು ವಿವಾದ ಸೃಷ್ಟಿಸಿದ್ದರು.