ನಿರ್ದೇಶಕ ವಿಶ್ವಕ್ ಸೇನ್ ನಿರ್ದೇಶಿಸಿ, ನಟಿಸಿರುವ ‘ಕಲ್ಟ್’ ತೆಲುಗು ಚಿತ್ರದ ಟೀಸರ್ ಲಾಂಚ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆಯಿತು. ಈ ವೇದಿಕೆಯಲ್ಲಿ ರವಿ ಬಸ್ರೂರ್ ಅವರಿಗೆ 35 ಲಕ್ಷ ರೂ. ಬೆಲೆಬಾಳುವ ರೊಲೆಕ್ಸ್ ವಾಚ್ ಅನ್ನು ವಿಶ್ವಕ್ ಸೇನ್ ಗಿಫ್ಟ್ ಆಗಿ ನೀಡಿದರು.ನಂತರ ಮಾತನಾಡಿದ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು, ತಮ್ಮ ಜೀವನದ ಕೆಲವು ಘಟನೆಗಳನ್ನು ನೆನೆದು ಕಣ್ಣಿರು ಹಾಕಿದರು.

ಶೀಘ್ರವೇ ತೆರೆಗೆ ಬರಲು ಸಿದ್ಧವಿರುವ ಈ ಚಿತ್ರದ ಟೀಸರ್ ಲಾಂಚ್ ಈವೆಂಟ್ನಲ್ಲಿ ಹಳೆಯ ದಿನ ನೆನೆದು ಕಣ್ಣೀರಿಟ್ಟ ಬಸ್ರೂರ್, “18ನೇ ವಯಸ್ಸಿನಲ್ಲಿ ನಾನು ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಆಗ ವ್ಯಕ್ತಿಯೊಬ್ಬರು, ನನಗೆ 35,000 ಹಣ ನೀಡಿದರು.ನನ್ನ ಸಂಗೀತಕ್ಕೆ ಬೇಕಿದ್ದ ಬಹುಮುಖ್ಯ ಸಾಧನವಾದ ಕೀಬೋರ್ಡ್ ಖರೀದಿಸಲು 35,000 ರೂ. ಕೊಟ್ಟರು. ಅಂದು ಅವರು ಕೊಟ್ಟ ಆ ದುಡ್ಡು ನನ್ನ ಇಡೀ ಜೀವನವನ್ನೇ ಬದಲಿಸಿತು” ಎಂದರು.

ಅವರ ಹೆಸರೇ ರವಿ. ನನಗೆ ಮರುಜನ್ಮ ನೀಡಿದ ಅವರನ್ನು ನೆನೆದು, ಅಂದಿನಿಂದ ಕಿರಣ್ ಎಂಬ ನನ್ನ ಹೆಸರನ್ನು ರವಿ ಎಂದೇ ಮರುನಾಮಕರಣ ಮಾಡಿಕೊಂಡೆ. ನಾನು ಬದುಕಿರುವವರೆಗೂ ಎಲ್ಲರೂ ನನ್ನನ್ನು ರವಿ ಬಸ್ರೂರ್ ಎಂದೇ ಕರೆಯುತ್ತಾರೆ. ಆ ಸಂಪೂರ್ಣ ಕ್ರೆಡಿಟ್ ಅವರಿಗೆ ಹೋಗುತ್ತದೆ. ರವಿ ಮತ್ತು ವಿಶ್ವಕ್ ಸೇನ್ ಈ ಇಬ್ಬರನ್ನೂ ನನ್ನ ಜೀವನದಲ್ಲಿ ನಾನೆಂದಿಗೂ ಮರೆಯೋದಿಲ್ಲ” ಎಂದರು.






