ಜಿಂಬಾಬ್ವೆಯ ಮಾಜಿ ನಾಯಕ ಹಾಗೂ ಆಲ್ರೌಂಡರ್ ಹೀತ್ ಸ್ಟ್ರೀಕ್ ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ವರದಿಯಾಗಿತ್ತು. ಈ ಸುದ್ದಿ ಸುಳ್ಳು ಎಂದು ಸ್ವತಃ ಹೀತ್ ಸ್ಟ್ರೀಕ್ ಅವರೇ ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸ್ಟ್ರೀಕ್, “ನಾನು ಇನ್ನು ಜೀವಂತವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ” ಎಂದು ಹೇಳಿದ್ದಾರೆ. ಪ್ರಸ್ತುತ ಹೀತ್ ಸ್ಟ್ರೀಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ವಾಸ್ತವವಾಗಿ ಮಂಗಳವಾರ ತಡರಾತ್ರಿ, ಅವರ ಸಹ ಆಟಗಾರ ಹೆನ್ರಿ ಒಲಂಗಾ ಅವರು, ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಆ ಬಳಿಕ ಸ್ಟ್ರೀಕ್ ನಿಧನದ ಸುದ್ದಿ ಎಲ್ಲೆಡೆ ಹಬ್ಬಿತ್ತು.
ಹೆನ್ರಿ ಒಲಂಗಾ ಅವರು ಇದೀಗ ತಾವು ಮೊದಲು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದು, ಹೊಸ ಟ್ವೀಟ್ನಲ್ಲಿ ಸ್ಟ್ರೀಕ್ ಅವರೊಂದಿಗಿನ ಸಂಭಾಷಣೆಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಈ ರೀತಿ ತಪ್ಪು ಮಾಹಿತಿ ನೀಡಿದಕ್ಕಾಗಿ ಹೀತ್ ಸ್ಟ್ರೀಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ ತೀವ್ರ ಬೇಸರವಾಗಿದೆ. ಈ ವದಂತಿ ಹಬ್ಬಿಸಿದವರು ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.
ಜಿಂಬಾಬ್ವೆ ಪರ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನು ಆಡಿರುವ ಹೀತ್ ಸ್ಟ್ರೀಕ್, 216 ಟೆಸ್ಟ್ ವಿಕೆಟ್ ಮತ್ತು 239 ವಿಕೆಟ್ಗಳನ್ನು ಪಡೆದಿದ್ದಾರೆ.
ನಿವೃತ್ತಿ ಬಳಿಕ ಹೀತ್ ಸ್ಟ್ರೀಕ್ ಐಪಿಎಲ್ನಲ್ಲಿ ಗುಜರಾತ್ ಲಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.