ಬಸವಣ್ಣ ನವರ ವ್ಯಕ್ತಿತ್ವವನ್ನು ವಿಮರ್ಶಿಸುವ ಅಳತೆಗೋಲು ಬಹುಶಃ ಇದುವರೆಗೆ ಯಾವ ಅಧುನಿಕ ಲೇಖಕ/ವಿಮರ್ಶನಿಗೂ ಲಭ್ಯವಾಗಿರಲಿಕ್ಕಿಲ್ಲ. ಅವರ ಅಸಾಧಾರಣ ವ್ಯಕ್ತಿತ್ವವನ್ನು ಒಂದು ಸೀಮಿತ ವಿಮರ್ಶೆಯ ಚೌಕಟ್ಟಿನೊಳಗೆ ಹಿಡಿದಿಡುವುದು ಕಷ್ಟದ ಕಾರ್ಯ. ಅವರ ವ್ಯಕ್ತಿತ್ವವು ವಿಶಾಲವಾಗಿ ವ್ಯಾಪಿಸುವ ವಿಶೇಷ ಗುಣವುಳ್ಳದ್ದು. ಬಸವಣ್ಣನವರನ್ನು ಒಂದು ಧರ್ಮದ ಸಂಸ್ಥಾಪಕನಾಗಿˌ ಸಾಮ್ರಾಜ್ಯವೊಂದರ ದಕ್ಷ ಆಡಳಿತಗಾರ(ಪ್ರಧಾನಿ)ನಾಗಿˌ ಸಮಾಜಿಕ ಕ್ರಾಂತಿಯ ನೇತಾರನಾಗಿˌ ಸಾಹಿತಿಯಾಗಿ ನಮ್ಮ ಪ್ರಾಜ್ಞರು ಗುರುತಿಸಿದ್ದಾರೆ. ಇವೆಲ್ಲವುಗಳಾಚೆಗೂ ಅವರ ವ್ಯಕ್ಪಿತ್ವ ಗುರುತಿಸುವ ಅವಕಾಶಗಳು ನಿರಂತರ ಹುಟ್ಟಿಕೊಳ್ಳುತ್ತಲೆ ಹೋಗುವುದು ಮತ್ತೊಂದು ವಿಶೇಷ. ಚಾತುರ್ವರ್ಣಗಳು ಕ್ರೀಯಾಶೀಲವಾಗಿ ಅಸ್ತಿತ್ವದಲ್ಲಿದ್ದ ಉಚ್ಛ್ರಾಯ ಕಾಲದಲ್ಲಿ ಅದನ ರಕ್ಷಕರಾಗಿದ್ದ ವಿಪ್ರರ ಮನೆಯಲ್ಲಿ ಬಸವಣ್ಣನವರು ಜನಿಸಿಯೂ ಅವರುˌ ವೈದಿಕ ಸ್ಥಾಪಿತ ಮೈಲ್ಯಗಳ ವಿರುದ್ಧ ಯುದ್ದ ಸಾರಿದರು.
ಬಸವಣ್ಣನವರದ್ದು ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ವಿದ್ಯೆ ˌ ಅಂತಸ್ತು ˌ ಗೌರವˌ ಅಧಿಕಾರಗಳಿಗೆಲ್ಲ ಸಹಜವಾಗಿ ಭಾಜನರಾಗಿದ್ದರೂ ಶೋಷಿತ ಸಮಾಜದ ಒಳಿತಿಗಾಗಿ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದ ಅಪರೂಪದ ವ್ಯಕ್ತಿತ್ವ. ಉಚ್ಛ ಜಾತಿˌ ಅಧಿಕಾರˌ ಅಂತಸ್ತುಗಳೊಂದಿಗೆ ಅಪಾರ ಜ್ಞಾನˌ ಅಪರಿಮಿತ ವಿನಯˌ ಅಷ್ಟೇ ವಿಧೇಯತೆˌ ಮತ್ತು ಸೇವಾಮನೋಭಾವˌ ಇವು ಅವರಿಗಿದ್ದ ಹೆಚ್ಚುವರಿ ವಿಶೇಷ ಗುಣಗಳು ಅವರನ್ನು ವಿಶ್ವದ ಶ್ರೇಷ್ಠ ಚಿಂತಕರ ಸ್ಥಾನದಲ್ಲಿ ನಿಲ್ಲಿಸಿವೆ. ‘ಎನಗಿಂತ ಕಿರಿಯರಿಲ್ಲ’ ಎನ್ನುವ ಅವರ ಏಕೈಕ ಮಾತಿನಲ್ಲಿ ಬಸವಣ್ಣನವರ ಒಟ್ಟಾರೆ ವ್ಯಕ್ತಿತ್ವವನ್ನು ನಾವು ಗ್ರಹಿಸಬಹುದಾಗಿದೆ. ಬಸವಣ್ಣನವರು ಒಬ್ಬ ಪ್ರಧಾನಮಂತ್ರಿಯಾಗಿˌ ಒಂದು ಚಳುವಳಿಯ ನಾಯಕರಾಗಿ ಸಮಾಜದೊಂದಿಗೆ ವರ್ತಿಸುತ್ತಿದ್ದ ರೀತಿಗಿಂತ ಭಿನ್ನವಾಗಿ ಅವರು ತಮ್ಮ ಅನುಯಾಯಿಗಳಾಗಿದ್ದ ಸಮಕಾಲಿನ ಶರಣರ ಕುರಿತು ತೋರುತ್ತಿದ್ದ ಕಿಂಕರಭಾವ ಬಹುಶಃ ಜಗತ್ತಿನ ಬೇರಾವುದೇ ಪ್ರವಾದಿˌ ದಾರ್ಶನಿಕˌ ಅಥವ ಧರ್ಮಗುರುವಿನಲ್ಲೂ ಕಾಣಸಿಗದ ಅಪರೂಪದ ಗುಣ.
ಗಮನಿಸಬೇಕಾದ ಬಹುಮುಖ್ಯ ಸಂಗತಿ ಎಂದರೆ ಅವರ ಬಹುತೇಕ ಅನುಯಾಯಿಗಳು ತಲೆತಲಾಂತಗಳಿಂದ ಅಕ್ಷರ ಸಂಸ್ಕ್ರತಿಯಿಂದ ವಂಚಿಸಲ್ಪಟ್ಟ ತಳಸಮುದಾಯದವರು. ಮೇಲ್ವರ್ಗದವರನ್ನು ಎದುರು ಹಾಕಿಕೊಂಡು ದಮನಿತರ ಏಳಿಗೆಗೆ ದುಡಿಯುವುದಲ್ಲದೆ ಅವರೊಂದಿಗೆ ವೈಯಕ್ತಿಕವಾಗಿ ಬಸವಣ್ಣನವರು ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವುದೂ ಅಷ್ಟೆ ಮುಖ್ಯವಾದ ಸಂಗತಿಯಾಗಿದೆ. ದಮನಿತರ ಪರವಾಗಿ ಧ್ವನಿ ಎತ್ತುವ ಮಾರ್ಗದಲ್ಲಿ ಕಾರ್ಯ ಮಾಡುವ ಸಾಮ್ರಾಜ್ಯದ ರಾಜನಿಂದ ಮೊದಲ್ಗೊಂಡು ಪ್ರಸಂಗ ಬಂದರೆ ದೇವರನ್ನೂ ಅಲಕ್ಷಿಸಿ ನಡೆಯಬೇಕೆಂಬುವ ಪರಿ ಸಮ ಸಮಾಜ ನಿರ್ಮಾಣದಲ್ಲಿ ಅವರಿಗಿದ್ದ ಅನನ್ಯ ಕಕ್ಕುಲಾತಿಯನ್ನು ಪ್ರತಿಬಿಂಬಿಸುತ್ತದೆ. ಶರಣನೊಬ್ಬ ತಮ್ಮ ಮನೆಯ ಬಾಗಿಲಿಗೆ ಬಂದರೆ ಲಿಂಗವನ್ನು ಮರೆತು ಶರಣರನ್ನು ಆದರಿಸಬೇಕೆಂಬ ಅವರ ಮನದ ಬಯಕೆ ಅನೇಕ ವಚನಗಳಲ್ಲಿ ಪ್ರಕಟಗೊಂಡಿದೆ. ‘ಶರಣರ ಬರವೆನಗೆ ಪ್ರಾಣ ಜೀವಾಳವಯ್ಯ’ ಎನ್ನುವ ಅವರ ನುಡಿಯಲ್ಲಿ ಒಟ್ಟಾರೆ ಶರಣರ ಬಗೆಗೆ ಅವರಿಗಿದ್ದ ವಿಧೇಯತೆ ಎದ್ದುಕಾಣುತ್ತದೆ.
ತಾವು ಹುಟ್ಟುಹಾಕಿದ ಸರ್ವಾಂಗಿಣ ಚಳುವಳಿಯ ಸಿದ್ದಾಂತಗಳನ್ನು ಪ್ರಾಯೋಗಿಕವಾಗಿ ಸಮಾಜದಲ್ಲಿ ಬಿತ್ತಲು ಅವರು ಕಂಡುಕೊಂಡ ಎರಡು ಬಹುಮುಖ್ಯ ಮಾದ್ಯಮಗಳೆಂದರೆ ಶರಣರು ಮತ್ತು ವಚನಗಳು. ಶರಣರು ವ್ಯಕ್ತಿರೂಪದಲ್ಲಿ ನೋವುಂಡ ಸಮಾಜವನ್ನು ಪ್ರತಿನಿಧಿಸಿದರೆ ವಚನಗಳು ಶರಣರ ಮೂಲಕ ಹುಟ್ಟಿಕೊಳ್ಳುವ ವೈಚಾರಿಕ ಪ್ರತಿಮೆಗಳಾಗಿ ಪರಿಗಣಿಸಲ್ಪಡುತ್ತವೆ. ಹಾಗಾಗಿ ಅವರು ಶರಣರನ್ನು ತಮ್ಮ ಚಳುವಳಿಯ ಪ್ರಮುಖ ಕೀಲಿಕೈಯಾಗಿ ಪರಿಗಣಿಸಿದ್ದರು. ಶರಣರ ಸಾಂಗತ್ಯಕ್ಕೆ ಚಡಪಡಿಸಿ ನಿಲ್ಲುವ ಅವರ ಉತ್ಕಟವಾದ ಮನದಿಂಗಿತ ಈ ಕೆಳಗಿನ ಅವರ ವಚನದಲ್ಲಿ ಹೆಪ್ಪಿಟ್ಟು ನಿಂತದ್ದು ನೋಡಬಹುದಾಗಿದೆ:
“ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆˌ
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆˌ
ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು!
ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು!
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವಾ.”
ಹಾದಿ ತಪ್ಪಿ ತನ್ನ ತಾಯಿಯನ್ನು ಹುಡುಕಿ ಅಳುವ ಮಗು ಮತ್ತು ತನ್ನ ಹಿಂಡಿನಿಂದ ಬೇರ್ಪಟ್ಟ ಪಶುವಿನ ಉಪಮೆಗಳನ್ನು ಬಳಸಿˌ ಶರಣರ ಸಾಂಗತ್ಯ ಬಯಸುವ ಅವರ ಮನದಾಶೆಯು ಮಾರ್ಮಿಕವಾಗಿ ಅಭಿವ್ಯಕ್ತಿಸುತ್ತ ಸೂರ್ಯನ ಉದಯದಿಂದ ಕಮಲ ಅರಳುವಂತೆ ಶರಣರ ಸಾಂಗತ್ಯದಿಂದ ತಾವು ಲವಲವಿಕೆಯಿಂದಿರುವುದಾಗಿ ಹೇಳಿಕೊಳ್ಳುವಲ್ಲಿಗೆ ಶರಣರ ಬಗೆಗಿರುವ ಅವರ ಸೆಳೆತ ವಚನ ರೂಪತಳೆಯುತ್ತದೆ. ಬುದ್ದನಂತೆ ನಾಡು ತೊರೆದು ಕಾಡಿನಲ್ಲಿ ಅಂತಃರ್ಮುಖಿ ಧ್ಯಾನಸ್ಥನಾಗಿ ಉಳಿಯಬಯಸದ ಬಸವಣ್ಣ ಸಮಾಜದ ಕಟ್ಟಕಡೆಯ ಜನರೊಟ್ಟಿಗೆ ಸೇರಿ ಸಂಘಟಿತ ಸಂಘರ್ಷವನ್ನು ಹುಟ್ಟುಹಾಕುತ್ತಾರೆ. ತಮ್ಮೊಂದಿಗೆ ಹೆಗಲಿಗೆ ಹೆಗಲುಗೂಡಿಸುವ ಶರಣರನ್ನು ಅವರು ತಮ್ಮ ಹಿಂಬಾಲಕರೆಂದು ಆಜ್ಞಾಪಿಸದೆ ತಮ್ಮ ತಲೆಯ ಮೇಲಿಟ್ಟುಕೊಂಡು ಮುನ್ನಡೆಯುವ ಪರಿ ಜಗತ್ತಿನ ಬೇರಾವ ಕ್ರಾಂತಿಕಾರಿಯಲ್ಲೂ ಕಾಣಸಿಗುವುದಿಲ್ಲ.
ಶರಣರನ್ನು ಅವರು ತಮ್ಮ ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸ್ಥಾನದಲ್ಲಿರಿಸಿದ್ದು ಅವರ ಕೆಳಗಿನ ವಚನದಲ್ಲಿ ಕಾಣಬಹುದು:
“ಸಾಸವೆಯ ಮೇಲೆ ಸಾಗರವರಿದಂತಾಯಿತಯ್ಯ!
ಆನಂದದಿಂದ ನಲಿನಲಿದಾಡುವೆನುˌ
ಆನಂದದಿಂದ ಕುಣಿಕುಣಿದಾಡುವೆನುˌ
ಕೂಡಲಸಂಗನ ಶರಣರು ಬಂದರೆ
ಉಬ್ಬಿಕೊಬ್ಬಿ ಹರುಷದಲೋಲಾಡುವೆನು.”
ತಮ್ಮನ್ನು ತಾವು ಬಸವಣ್ಣ ಅತಿ ಚಿಕ್ಕ ಸಾಸಿವೆ ಕಾಳಿಗೆ ಹೋಲಿಸಿಕೊಂಡುˌ ಶರಣರನ್ನು ಅಘಾದವಾದ ಸಾಗರವೆಂದು ಬಗೆಯುವ ಉದಾತ್ ಚಿಂತನೆ ಅವರ ಶರಣರ ಬಗೆಗಿನ ಅದಮ್ಯ ಪ್ರೀತಿ ಮತ್ತು ವಿನಯವನ್ನು ಪ್ರಕಟಗೊಳಿಸುತ್ತದೆ. ಬಸವಣ್ಣನವರು ಈ ರೀತಿಯಾಗಿ ಸ್ಥಾವರ ಪರಿಕಲ್ಪನೆಯ ಜಡತ್ವವನ್ನು ಕೆಲವೊಂದು ಕಡೆ ನಯವಾಗಿ ಹಾಗೂ ಮತ್ತೆ ಕೆಲವೆಡೆ ಉಗ್ರವಾಗಿ ಖಂಡಿಸುತ್ತ ಚಲನಶೀಲ ಚಿಂತನೆಗಳಿಗೆ ಜನ್ಮನೀಡುತ್ತಾರೆ. ಚಳುವಳಿಯ ಮುಂದಾಳತ್ವ ವಸಿದವನು ಮಾಲಿಕನಂತೆ ವರ್ತಿಸದೆ ಸಮರ್ಥ ನಾಯಕನಂತೆ ವರ್ತಿಸಿದರೆ ಮಾತ್ರ ಅನುಯಾಯಿಗಳ ಪ್ರೀತಿಗೆ ಭಾಜನವಾಗಿ ನಿರ್ಧಾರಿತ ಗುರಿ ಯಾವ ಒಡಕ್ಕಿಲ್ಲದೆ ತಲುಪಬಹುದೆಂಬುದು ಬಸವಣ್ಣನವರ ಆಶಯವಾಗಿತ್ತು. ಬಸವಣ್ಣನವರು ಯಾವ ಸಮುದಾಯದ ಜನರಿಗಾಗಿ ಕಲ್ಯಾಣದಲ್ಲಿ ಚಳುವಳಿ ಆರಂಭಿಸಿದ್ದರೊ ಅದೇ ಸಮುದಾಯಗಳ ಜನರನ್ನು ಚಳುವಳಿಯ ಮುಖ್ಯ ಜೀವಾಳವಾಗಿಸಿದ್ದು ವಿಶೇಷ.
ಅನುಭವ ಮಂಟಪದ ಅಧ್ಯಕ್ಷ ಸ್ಥಾನಕ್ಕೆ ಪ್ರಭುದೇವರ ಆಯ್ಕೆಯ ಹಿಂದೆ ಎರಡು ಮಾನದಂಡಗಳು ಕೆಲಸ ಮಾಡಿರಲು ಸಾಧ್ಯ. ಒಂದು: ಅವರು ತಳಸಮುದಾಯಕ್ಕೆ ಸೇರಿದವರೆನ್ನುವುದಾದರೆ ಎರಡು: ಅವರ ಅಘಾದ ಪ್ರತಿಭೆ. ಪ್ರಭುದೇವರು ಈ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಅನುಭಾವಿ. ಬಸವಣ್ಣನವರು ಶರಣರನ್ನು ದೇವರಿಗಿಂತಲೂ ಹೆಚ್ಚಾಗಿ ಗೌರವಿಸುತ್ತಿದ್ದರೆನ್ನುವುದನ್ನು ಈ ಕೆಳಗಿನ ವಚನ ಸ್ಪಷ್ಟಪಡಿಸುತ್ತದೆ:
“ಸಮುದ್ರ ಘನವೆಂಬೆನೆ
ಧರೆಯ ಮೇಲಡಗಿತ್ತು ˌ
ಧರೆ ಘನವೆಂಬೆನೆ
ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ˌ
ನಾಗೇಂದ್ರ ಘನವೆಂಬೆನೆ
ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ˌ
ಅಂಥ ಪಾರ್ವತಿ ಘನವೆಂಬೆನೆ
ಪರಮೇಶ್ವರನ ಅರ್ಧಾಂಗಿಯಾದಳುˌ
ಅಂಥ ಪರಮೇಶ್ವರ ಘನವೆಂಬೆನೆˌ
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು.”
ಸಮುದ್ರ ˌಭೂಮಿ ˌನಾಗˌ ಪಾರ್ವತಿˌ ಪರಮೇಶ್ವರರಿಗಿಂತ ಶರಣರು ಅತಿ ಗೌರವಾನ್ವಿತರೆನ್ನುವುದು ಅವರ ಮೇಲಿನ ವಚನದಲ್ಲಿ ಘಾಡವಾಗಿ ಬಿಂಬಿತವಾಗಿದೆ. ದೇವರು ಕೂಡ ಶರಣರ ಮನದ ಕೊನೆಯ ಮೊನೆಯೊಳಗೆ ಅಡಗುವಷ್ಟು ಚಿಕ್ಕವನೆನ್ನುವ ಮೂಲಕ ಶರಣರು ತಮಗೆ ಅತ್ಯಂತ ಪೂಜ್ಯನೀಯರು ಎನ್ನುವ ಅವರ ಮನದಿಂಗಿತ ಮೇಲಿನ ವಚನದಲ್ಲಿ ಬಹಳ ನೇರವಾಗಿ ಪ್ರತಿಪಾದಿಸಲ್ಪಟ್ಟಿದೆ. ಕಲ್ಯಾಣದ ಚಳುವಳಿಯನ್ನು ಹುಟ್ಟುಹಾಕುವಾಗ ಅಂದಿನ ಸಮಾಜದಲ್ಲಿನ ಪ್ರತಿಯೊಂದು ಕಾಯಕ ಸಮುದಾಯದವರನ್ನು ಒಳಗೊಂಡಂತೆ ಬಸವಣ್ಣನವರು ಮಹಾಮನೆಯೊಂದನ್ನು ಕಟ್ಟುವ ಸಾಹಸಕ್ಕೆ ಕೈಹಾಕುತ್ತಾರೆ. ಆ ಮೂಲಕ ವರ್ಗˌ ವರ್ಣˌ ಲಿಂಗ ರಹಿತ ಸಮಸಮಾಜದ ಬೀಜವನ್ನು ಬಿತ್ತುವ ಘನ ಕಾರ್ಯ ಆರಂಭಿಸುತ್ತಾರೆ. ಅವರು ತಮ್ಮ ವೈಯಕ್ತಿಕ ಬದುಕನ್ನು ಲೆಕ್ಕಿಸದೆ ನಿರಂತರ ಜನಪರ ಚಿಂತನೆಯಲ್ಲಿ ತೊಡಗಿ ಶರಣರೇ ತನ್ನೆಲ್ಲ ಸರ್ವಸ್ವವೆನ್ನುವ ಹಂತವನ್ನು ತಲುಪಿದ್ದು ಈ ಕೆಳಗಿನ ವಚನದಲ್ಲಿ ಅರಳಿ ನಿಂತಿರುವುದು ನೋಡಬಹುದು:
“ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯ. ಬಡವನೆಂದೆನ್ನ ಕಾಡದಿರಯ್ಯ ಎನಗೊಡೆಯರುಂಟು ನಮ್ಮ ಕೂಡಲಸಂಗನ ಶರಣರು.”
ಅವರ ಚಳುವಳಿಯ ಮಾರ್ಗದಲ್ಲಿ ಬರುವ ಅಡಚಣೆಗಳನ್ನು ಮತ್ತು ಕೆಲವೊಮ್ಮೆ ಕಾಡುವ ಚಿಂತೆಗಳನ್ನು ದೂರಮಾಡಿಕೊಳ್ಳಲು ಶರಣರು ತಮ್ಮ ಜೊತೆಗಿರುವ ತನಕ ಯಾವ ಭಾದೆಯೂ ತಮಗಿಲ್ಲ ಎಂಬ ಬಲವಾದ ನಂಬಿಕೆಯನ್ನು ಈ ರೀತಿಯಾಗಿ ಮೇಲಿನ ವಚನದಲ್ಲಿ ವ್ಯಕ್ತಪಡಿಸುತ್ತಾರೆ. ಶರಣರು ತಮ್ಮ ಒಡೆಯರು ಎಂದು ನಿರ್ಭಿಡೆಯಿಂದ ನುಡಿಯುತ್ತಾರೆ. ಶರಣರ ಗಣ ತಮ್ಮೊಂದಿಗಿರುವ ತನಕ ಅದೇ ತಮ್ಮ ಚಳುವಳಿಗೆ ಬಹುದೊಡ್ಡ ಶಕ್ತಿ ಎಂದು ತಿಳಿದಿದ್ದ ಬಸವಣ್ಣ ಅವರನ್ನು ತನ್ನ ಒಡೆಯರು ಎಂದು ಸಂಭೋದಿಸುತ್ತಾರೆ. ಆರಂಭದಲ್ಲಿ ನಾನು ನಮೂದಿಸಿದಂತೆ ಕಲ್ಯಾಣದ ಚಳುವಳಿಯ ಬಹುಮುಖ್ಯ ಭಾಗವಾಗಿದ್ದ ಶರಣರು ವ್ಯಕ್ತಿಯನ್ನು ಪ್ರತಿನಿಧಿಸಿದರೆ ಬಸವಣ್ಣನವರ ಸಮಗ್ರ ಚಳುವಳಿಯ ಬಹುಮುಖ್ಯ ಮಾದ್ಯಮ ವಚನಗಳು. ಅದಕ್ಕೆ ಕಲ್ಯಾಣದ ಕಾಂತ್ರಿಯನ್ನು ವಚನ ಚಳುವಳಿ ಎಂಬ ಪರ್ಯಾಯ ಹೆಸರಿನಿಂದ ನಮ್ಮ ಸಾರಸ್ವತ ಲೋಕ ಗುರುತಿಸಿದೆ. ವಚನ ಸಾಹಿತ್ಯವು ನಾವೆಲ್ಲ ತಿಳಿದಂತೆ ಅನುವಂಶಿಯವಾಗಿ ಅಕ್ಷರ ಜ್ಞಾನಹೊಂದಿದ್ದ ಪಂಡಿತರು ರಚಿಸಿದ ಸಾಹಿತ್ಯವಲ್ಲ.
ಅದು ಬದುಕಿನಲ್ಲಿ ಕಷ್ಟಪಟ್ಟು ಕಾಯಕ ಮಾಡುವ ಅನುಭಾವಿಗಳು ಕೈಷಿಗೈದ ಶ್ರಮ ಸಂಸ್ಕ್ರತಿಯ ಅದ್ಭುತ ಸಾಹಿತ್ಯ. ಪಂಡಿತರ ಆಸ್ಥಾನ ಪಾಂಡಿತ್ಯವು ಸಾಮಾನ್ಯವಾಗಿ ಓದಿನಿಂದ ಬಂದುದಾದರೆ ಅನುಭಾವವು ಕಾಯಕ ನಿರತ ಶರಣರ ಅಂತರಂಗದ ಅರಿವಿನಿಂದ ಹುಟ್ಟಿಕೊಂಡ ಸ್ಪುರಣೆ. ಶರಣರು ಅಂತರಂಗ ಶೋಧಕರು ಹಾಗೂ ಬಹಿರಂಗ ಸಾಧಕರೇ ಹೊರತು ಓದಿನಿಂದ ರೂಪುಗೊಂಡ ಟೊಳ್ಳು ಪಂಡಿತರಲ್ಲ. ಹಾಗಾಗಿಯೇ ಶರಣರ ಮಹತ್ವ ಮನಗಂಡ ಬಸವಣ್ಣನವರು ತಮ್ಮ ಚಳುವಳಿಯುದ್ದಕ್ಕೂ ಅವರಿಗೆ ಗೌರವಾನ್ವಿತ ಸ್ಥಾನವನ್ನು ಕಲ್ಪಿಸುತ್ತಾರೆ. ಶರಣರ ಮನೆಯ ಸೇವಕನಾನೆಂಬ ಕಿಂಕರ ಭಾವವು ಅವರ ಅನೇಕ ವಚನಗಳಲ್ಲಿ ಪುನರಾವರ್ತನೆಯಾಗಿದೆ. ಅಂಥದ್ದೇ ಒಂದು ವಚನ ಈ ಕೆಳಗಿದೆ:
“ಒಕ್ಕುದ ಮಿಕ್ಕುದಂಡು ಕಿವಿವಿಡಿದಾಡುವೆˌ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನುˌ
ಕೂಡಲಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು.”
ಶರಣರ ಸಾಂಗತ್ಯವೊಂದಿದ್ದರೆ ತಮಗೆ ಬೇರೆ ಸುಪ್ಪತ್ತಿಗೆ ಬೇಡˌ ಮನೆಯಲ್ಲಿ ಒಕ್ಕುದ ಮಿಕ್ಕಿದ್ದನ್ನುಂಡು ಆನಂದದಿಂದ ನಲಿದಾಡುವೆ ಎನ್ನುತ್ತಾರೆ. ಶರಣರ ಮನೆಯ ಲೆಂಗಿಯ ಡಿಂಗರಿಗ ತಾವೆಂದು ಶರಣರ ಕುರಿತು ತಮರಿಗಿರುವ ವಿಧೇಯತೆಯ ಅತ್ಯಂತ ಪರಾಕಾಷ್ಠೆಯನ್ನು ಮೇಲಿನ ವಚನದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಜಗತ್ತಿನಲ್ಲಿಯೇ ಅತಿ ಮಹತ್ವದ ಚಳುವಳಿಯೊಂದರ ನಾಯಕ ತನ್ನ ಅನುಯಾಯಿಗಳಿಗೆ ನೀಡಿದ ಉನ್ನತ ಸ್ಥಾನವನ್ನು ಪರಿಗಣಿಸಿದಾಗ ಬಹುಶಃ ಬಸವಣ್ಣನವರು ಜಾಗತಿಕ ಪ್ರಗತಿಪರ ನಾಯಕತ್ವದ ಮಾದರಿಯಾಗಿಯುˌ ಸಮಗ್ರ ಚಳುವಳಿಯೊಂದರ ಆದರ್ಶವಾಗಿಯೂ ನಮ್ಮೆದುರಿಗೆ ಜ್ವಲಂತ ಉದಾಹರಣೆಯಾಗುತ್ತಾರೆ. ನಮ್ಮ ನಾಡಿನ ಸಾಂಸ್ಕ್ರತಿಕ ನಾಯಕರಾಗಿ ಮತ್ತು ನಮ್ಮೆಲ್ಲರ ಸಾಕ್ಷಿಪ್ರಜ್ಞೆಯಾಗಿ ನಮ್ಮ ಮನದಲ್ಲಿ ಶಾಸ್ವತವಾಗಿ ನೆಲೆನಿಲ್ಲುತ್ತಾರೆ.