ಬೆಂಗಳೂರು: ಕಿರುತೆರೆಯ ಜನಪ್ರಿಯ ನಟಿ ಕಾವ್ಯಾ ಗೌಡ(Kavya Gowda) ಹಾಗೂ ಅವರ ಪತಿ ಸೋಮಶೇಖರ್(Somshekar) ಮೇಲೆ ಅವರ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕಾವ್ಯಾ ಗೌಡ ನಟಿ ಜನಪ್ರಿಯತೆ ಸಹಿಸದೆ ಮನೆಗೆ ನುಗ್ಗಿ ಅತ್ಯಾ** ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಕಾವ್ಯಾ ಗೌಡ ಕೆಲ ವರ್ಷಗಳ ಹಿಂದೆ ಉದ್ಯಮಿ ಸೋಮಶೇಖರ್ ಅವರನ್ನು ಮದುವೆ ಆಗಿದ್ದರು. ಸೋಮಶೇಖರ್ ಹಾಗೂ ನಂದೀಶ್ ಇಬ್ಬರೂ ಸಹೋದರರಾಗಿದ್ದು, ಸೋಮಶೇಖರ್–ಕಾವ್ಯಾ ದಂಪತಿ ಹಾಗೂ ನಂದೀಶ್–ಪ್ರೇಮಾ ದಂಪತಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಕಾವ್ಯಾ ಹಾಗೂ ಪ್ರೇಮಾ ನಡುವೆ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: BENGALURU: ಮನೆ ಬಾಡಿಗೆಗೆ ಕೊಡುವವರಿಗೆ ಪೊಲೀಸರಿಂದ ವಾರ್ನಿಂಗ್: ಗಮನಿಸಲೇಬೇಕಾದ ಮಾಹಿತಿ ಇಲ್ಲಿದೆ
ಇತ್ತೀಚೆಗೆ ಕಾವ್ಯಾ ಮತ್ತು ಪ್ರೇಮಾ ಅವರ ಸಂಬಂಧಿಕರು ಮನೆಗೆ ಬಂದ ವೇಳೆ ಗಲಾಟೆ ನಡೆದಿದೆ. ಈ ವೇಳೆ ಸಂಬಂಧಿ ರವಿಕುಮಾರ್ ಮನೆಗೆ ನುಗ್ಗಿ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ರವಿಕುಮಾರ್ ಎನ್ನುವಾತ ಕಾವ್ಯಾ ಗೌಡ ಅವರಿಗೆ ಅತ್ಯಾಚಾರ ಬೆದರಿಕೆ ಕೂಡ ಹಾಕಿದ್ದಾನೆ ಎನ್ನಲಾಗಿದೆ. ಈ ಘಟನೆಯಲ್ಲಿ ಕಾವ್ಯಾ ಮೇಲೂ ಹಲ್ಲೆ ನಡೆದಿದ್ದು, ಹಲ್ಲೆಯಲ್ಲಿ ಗಾಯಗೊಂಡ ಸೋಮಶೇಖರ್ ಅವರನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಕಾವ್ಯಾ ಗೌಡ ಅವರ ಅಕ್ಕ ಭವ್ಯಾ ಗೌಡ ಅವರು ಪ್ರೇಮಾ, ನಂದೀಶ್, ಪ್ರಿಯಾ ಹಾಗೂ ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾವ್ಯಾ ಅವರಿಗೆ ಮಾನಸಿಕ ಹಿಂಸೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ‘ಗಾಂಧಾರಿ’ ಮತ್ತು ‘ರಾಧಾ ರಮಣ’ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಕಾವ್ಯಾ ಗೌಡ ಇತ್ತೀಚೆಗೆ ಬಣ್ಣದ ಲೋಕದಿಂದ ದೂರವಿದ್ದು, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕೆಲ ಜಾಹೀರಾತುಗಳಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ.













