ಕಾಂಗ್ರೆಸ್ ಹೈಕಮಾಂಡ್ ನಾಯಕರು ಹಾಗೂ ರಾಜ್ಯದ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರುವುದೊಂದು ರಾಜ್ಯಸಭಾ ಸ್ಥಾನ ಮತ್ತೆರಡು ವಿಧಾನ ಪರಿಷತ್ ಸ್ಥಾನಗಳು. ಈ ಮೂರು ಸೀಟುಗಳಲ್ಲೇ ಈಗ ಎಲ್ಲರನ್ನೂ ಸಮಾಧಾನ ಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗುತ್ತಿದೆ. ಅದನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ನಿರ್ಧಾರ ಮಾಡಬೇಕಾಗಿದೆ.
ಕಾಂಗ್ರೆಸ್ ಪಕ್ಷ ‘ಸಮಾಜಿಕ ನ್ಯಾಯ’ದ ಬಗ್ಗೆ ಮಾತನಾಡುತ್ತದೆ. ನಮ್ಮ ಪಕ್ಷ ಮಾತ್ರವೇ ಎಂದೆಂದಿಗೂ ಸಮಾಜಿಕ ನ್ಯಾಯ ಪರಿಪಾಲಕ ಎಂದು ಹೇಳಿಕೊಳ್ಳುತ್ತದೆ. ಅದೇ ರೀತಿ ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷ ಕೊಡಬಹುದಾದ ಸ್ಥಾನಗಳನ್ನು ಈ ರೀತಿ ಹಂಚಿದೆ. ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಪೈಕಿ ಅತಿಹೆಚ್ಚು ಜನಸಂಖ್ಯೆ ಇರುವ ಕುರಬ ಸಮುದಾಯದವರು. ಅವರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಲಾಗಿದೆ. ಯು.ಟಿ. ಖಾದರ್, ಅಲ್ಪಸಂಖ್ಯಾತ ಸಮುದಾಯದ ಯುವ ನೇತಾರ, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಸ್ಥಾನ ನೀಡಲಾಗಿದೆ. ಬಿ.ಕೆ. ಹರಿಪ್ರಸಾದ್, ಹಿಂದುಳಿದ ವರ್ಗಗಳ ಪೈಕಿ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಈಡಿಗ ಸಮುದಾಯದವರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ನೀಡಲಾಗಿದೆ. ಗೋವಿಂದರಾಜು, ಮೇಲ್ವರ್ಗವಾದ ಒಕ್ಕಲಿಗ ಸಮುದಾಯದವರು. ವಿಧಾನ ಪರಿಷತ್ ಪ್ರತಿಪಕ್ಷದ ಉಪನಾಯಕನ ಸ್ಥಾನ ನೀಡಲಾಗಿದೆ.
ಇನ್ನು ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರಿಗೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದ್ದರೂ, ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಿದ್ದರೂ ಕೆಪಿಸಿಸಿ ಹುದ್ದೆ ನೀಡಲಾಗಿದೆ. ಮತ್ತೊಂದು ಮೇಲ್ವರ್ಗ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಇದೇ ಲಿಂಗಾಯತ ಸಮುದಾಯದ ಈಶ್ವರ ಖಂಡ್ರೆ, ಮುಸ್ಲಿಂ ಸಮುದಾಯದ ಸಲೀಂ ಅಹಮದ್, ಪರಿಶಿಷ್ಟ ಪಂಗಡ (ನಾಯಕ) ಸಮುದಾಯದ ಸತೀಶ್ ಜಾರಕಿಹೊಳಿ, ಪರಿಶಿಷ್ಟ ಜಾತಿ ಬಲಗೈ ಪೈಕಿ ಆರ್. ಧ್ರುವನಾರಾಯಣ್ ಮತ್ತು ರೆಡ್ಡಿ (ಒಕ್ಕಲಿಗರ ಉಪ ಪಂಗಡ) ಸಮುದಾಯದ ರಾಮಲಿಂಗ ರೆಡ್ಡಿ ಅವರಿಗೆ ಕೆಪಿಸಿಸಿಯ ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
ಈ ಪೈಕಿ ಕಾಂಗ್ರೆಸ್ ಕಡೆಗಣಿಸಿರುವುದು ಅಥವಾ ಪರಿಗಣಿಸದೆ ಇರುವುದು ಪರಿಶಿಷ್ಟ ಜಾತಿಯ ಎಡಗೈ ಸಮುದಾಯವನ್ನು ಮತ್ತು ತನ್ನ ಸಾಂಪ್ರದಾಯಿಕ ಮತದಾರರಾದ ಕ್ರೈಸ್ತರನ್ನು. ಅಷ್ಟೇಯಲ್ಲ, ಮೇಲೆ ಉಲ್ಲೇಖಿಸಿದ ಹುದ್ದೆಗಳ ಪೈಕಿ ಎಲ್ಲೂ ಮಹಿಳೆಯರಿಗೆ ಸ್ಥಾನ ನೀಡಿಲ್ಲ. ಈಗ ಕೊಡಮಾಡಬಹುದಾದ ರಾಜ್ಯಸಭೆಗೆ ಹಿಂದೆಂದೂ ಕಾಂಗ್ರೆಸ್ ರಾಜ್ಯದ ವತಿಯಿಂದ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಹಾಲಿ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಒಬ್ಬರೇ ಒಬ್ಬರು ಮಹಿಳಾ ಪ್ರತಿನಿಧಿಗಳಿಲ್ಲ. ಕಾಂಗ್ರೆಸ್ ಈ ಬಗ್ಗೆ ಬಹಳ ಗಂಭೀರವಾದ ಯೋಚನೆ ಮಾಡಬೇಕಿದೆ.

ಇರುವ ಮೂರು ಸ್ಥಾನಕ್ಕೆ ನೂರು ಜನ ಆಕಾಂಕ್ಷಿಗಳಿದ್ದಾರೆ ನಿಜ. ಇದು ಚುನಾವಣೆ ವರ್ಷ ಎಂಬುದೂ ಖರೆ. ಅದರ ನಡುವೆಯೂ ಪರಿಗಣಿಸದಿರುವ ಸಮುದಾಯಗಳ ಬಗ್ಗೆ ಯೋಚನೆ ಮಾಡಬೇಕು. ದಲಿತರ ಪೈಕಿ ಬಲಗೈ ಸಮುದಾಯಗಳು ಬೆಂಬಲಿಸುವುದಿಲ್ಲ ಎಂದು ಗೊತ್ತಿದ್ದೂ ಬಿಜೆಪಿ ಈ ಪೈಕಿ ಬಲಗೈ ಪೈಕಿಯ ಛಲವಾದಿ ನಾರಾಯಣಸ್ವಾಮಿಗೆ ಅವಕಾಶ ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಎಡಗೈ ಸಮುದಾಯ ತನ್ನನ್ನು ಬೆಂಬಲಿಸುತ್ತಿಲ್ಲ ಎನ್ನುವುದು ವಾಸ್ತವವಾದರೂ ಅವರ ವಿಶ್ವಾಸವನ್ನು ಗಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬೇಕಿದೆ.
2011ರ ಜನಗಣತಿ ಪ್ರಕಾರ ಕ್ರೈಸ್ತರು ರಾಜ್ಯದಲ್ಲಿ ಶೇಕಡಾ ಎರಡರಷ್ಟಿದ್ದಾರೆ. ಕ್ರೈಸ್ತ ನಾಯಕರು ಶೇಕಡಾ 4ರಷ್ಟು ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಡೀ ರಾಜ್ಯದಲ್ಲಿ ಕೆ.ಜೆ. ಜಾರ್ಜ್ ಅವರನ್ನು ಬಿಟ್ಟರೆ ಶಾಸಕ, ವಿಧಾನ ಪರಿಷತ್ ಸದಸ್ಯ, ಲೋಕಸಭಾ ಸದಸ್ಯ, ರಾಜ್ಯಸಭಾ ಸದಸ್ಯರಿಲ್ಲ. ಈಗ ತೆರವಾಗಿರುವ ಸ್ಥಾನ ಕ್ರೈಸ್ತ ಸಮುದಾಯದ ಆಸ್ಕರ್ ಫರ್ನಾಂಡೀಸ್ ಅವರದ್ದು. ಇದನ್ನು ಮನಗೊಂಡು ಕ್ರೈಸ್ತ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಬೇಕಾಗಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಸುದೀರ್ಘ ಅವಧಿಗೆ ಮುನ್ನಡೆಸಿದ ನಾಯಕಿ. ಆಗಾಗ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 30ರಷ್ಟು ಪ್ರಾತಿನಿಧ್ಯ ಕೊಡಬೇಕು ಎಂದು ಹೇಳುತ್ತಾರೆ. ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದ ಭವಿಷ್ಯದ ಭರವಸೆಯಾಗಿ ಕಾಣಲಾಗುತ್ತಿದೆ. ಅವರು ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 40ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಟ್ಟಿದ್ದರು. ಹಾಗಿದ್ದರೆ ಕರ್ನಾಟಕ ವಿಧಾನ ಪರಿಷತ್ ನಲ್ಲಿ ಮಹಿಳಾ ಪ್ರಾತಿನಿಧ್ಯ ಏಕಿಲ್ಲ? ಕಾಂಗ್ರೆಸ್ ಈಗ ಕಡೆಗಣನೆಗೆ ಒಳಗಾದವರನ್ನು ಪರಿಗಣನೆ ಮಾಡಬೇಕಿದೆ.