ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ಸರ್ಕಾರವೂ ಅಧಿಕೃತವಾಗಿ ತಾಲಿಬಾನಿಗಳಿಗೆ ಶರಣಾಗಿದೆ. ಹೀಗಿರುವಾಗಲೇ ತಾಲಿಬಾನ್ ಸಹ ಸಂಸ್ಥಾಪಕ ಮತ್ತು ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಗನಿ ಬರಾದರ್ ಮುಂದಿನ ಅಫ್ಘಾನಿಸ್ತಾನದ ಅಧ್ಯಕ್ಷ ಎಂದು ಘೋಷಿಸಲಾಗಿದೆ.
ಹೀಗೆ ತಮ್ಮ ಆಕ್ರಮಣಕಾರಿ ನೀತಿ ಮುಂದುವರಿಸಿದ ತಾಲಿಬಾನಿಗಳು ಕೊನೆಗೂ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಡಿದೆ. ಇದರ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಫ್ಘಾನಿಸ್ತಾನ ಪ್ರಜೆಗಳು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲಿಬಾನ್ ಪಡೆಗಳು ನಮ್ಮ ದೇಶವನ್ನು ವಶಪಡಿಸಿಕೊಳ್ಳಲು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕಾರಣ ಎಂದು ಅಫ್ಘಾನಿಸ್ತಾನ ಪ್ರಜೆಗಳು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ.
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳಿಗೆ ಅಧ್ಯಕ್ಷ ಜೋ ಬೈಡನ್ ಸಹಾಯ ಮಾಡಿದ್ದಾರೆ. 20 ವರ್ಷಗಳ ಹಿಂದೆ ಅಮೆರಿಕಾ ನೇತೃತ್ವದ ಸೇನಾಪಡೆಗಳು ಮಟ್ಟ ಹಾಕಿದ್ದ ತಾಲಿಬಾನ್ಗಳು ಈಗ ಕಾಣಿಸಿಕೊಂಡಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದರೆ ಮತ್ತೆ ಸಾವಿರಾರು ಮಂದಿ ಒಸಾಮಾ ಬಿನ್ ಲಾಡೆನ್ಸ್, ಮುಲ್ಲಾ ಓಮರ್ಗಳು ಹುಟ್ಟಿಕೊಳ್ಳಲಿದ್ದಾರೆ ಎಂದು ಪ್ರತಿಭಟನಾನಿರತ ಅಫ್ಘಾನಿಸ್ತಾನ ಪ್ರಜಗಳು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 20 ವರ್ಷಗಳ ನಂತರ ಅಮೆರಿಕಾ ತನ್ನ ಸೇನೆಯನ್ನು ವಾಪಸ್ಸು ಕರೆಸಿಕೊಂಡ ಮೇಲೆಯೇ ತಾಲಿಬಾನ್ ಅಫ್ಘಾನಿಸ್ತಾನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದೆ. ಇದಕ್ಕೆ ಕಾರಣ ಜೋ ಬೈಡನ್. ತಾಲಿಬಾನ್ ಜೊತೆಗೆ ಒಳಒಪ್ಪಂದ ಮಾಡಿಕೊಂಡು ನಮಗೆ ಮೋಸ ಮಾಡಿದ ಜೋ ಬೈಡನ್ ಕೂಡಲೇ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಫ್ಘಾನಿಸ್ತಾನ ಪ್ರಜೆಗಳು ಒತ್ತಾಯಿಸಿದ್ದಾರೆ.
2020ರಲ್ಲೇ ದೋಹಾದಲ್ಲಿ ತಾಲಿಬಾನ್ ಜೊತೆಗೆ ನಡೆದ ಒಪ್ಪಂದದ ಪ್ರಕಾರ ಮೇ 2021ರೊಳಗೆ ಅಮೆರಿಕ ತನ್ನ ಎಲ್ಲಾ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಜೋ ಬೈಡನ್ ಅಧಿಕಾರಕ್ಕೆ ಬಂದಾಗ ಕೂಡಲೇ ತಾಲಿಬಾನ್ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ತನ್ನ ಸೇನೆಯನ್ನು ವಾಪಸ್ಸು ಕರೆದುಕೊಂಡಿದ್ದಾರೆ. ಆದ್ದರಿಂದಲೇ ತಾಲಿಬಾನ್ ನಮ್ಮ ದೇಶದ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ ಪ್ರತಿಭಟನಾಕಾರರು.
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನ್ಗಳ ವಶವಾಗುತ್ತಿದಂತೆ ದೇಶಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಿಮಾನ ನಿಲ್ದಾಣದಲ್ಲಿ ಫೈಟ್ ಹತ್ತಲು ಬಂದವರ ನಡುವೆ ನೂಕುನುಗ್ಗಲು ಸಂಭವಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಈ ನಡುವೆ ಕಾಬೂಲ್ ವಿಮಾನ ನಿಲ್ದಾಣವನ್ನು 6 ಸಾವಿರ ಅಮೆರಿಕನ್ ಟ್ರೂಪ್ ಸೈನಿಕರು ವಶಕ್ಕೆ ಪಡೆದುಕೊಂಡಿದೆ. ಬೇರೆ ಬೇರೆ ದೇಶಗಳ ನಿವಾಸಿಗಳನ್ನು ಅಫ್ಘಾನಿಸ್ತಾನದಿಂದ ಲಿಫ್ಟ್ ಮಾಡಲು ನೆರವು ನೀಡುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡಲಾಗದೆ ಅಮೆರಿಕ ಪಡೆಗಳು ಗುಂಡು ಹಾರಿಸಿ ಜನರನ್ನು ಚದುರಿಸಲು ಮುಂದಾಗಿದೆ. ಸದ್ಯದ ಮಾಹಿತಿ ಅನ್ವಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮೂವರು ಗುಂಡೇಟಿಗೆ ಬಲಿಯಾಗಿದ್ದಾರೆ.
ಎಲ್ಲಾ ಅಮೆರಿಕರನ್ನು ಅಫ್ಘಾನ್ನಿಂದ ಮುಂದಿನ ಮೂರರಿಂದ ನಾಲ್ಕು ದಿನಗಳಿಂದ ಕರೆತರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭದ್ರತೆಗಾಗಿ 6 ಸಾವಿರ ಸೈನಿಕರನ್ನು ನಿಯೋಜನೆ ಮಾಡಿದ್ದೇವೆ. ಅಮೆರಿಕ ಮಾತ್ರವಲ್ಲದೇ ಭಾರತ ಸೇರಿದಂತೆ ನ್ಯಾಟೋ ದೇಶಗಳು ಕೂಡ ತಮ್ಮ ದೇಶದ ಪ್ರಜೆಗಳನ್ನು ಅಫ್ಘಾನ್ನಿಂದ ಕರೆತರಲು ಟ್ರುಪ್ಗಳನ್ನು ಕಳುಹಿಸಿಕೊಡುತ್ತಿವೆ. ಇತ್ತ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಜೈಲಿನಲ್ಲಿ ಬಂಧಿಸಿಡಲಾಗಿದ್ದ ಉಗ್ರರು ಹಾಗೂ ಖೈದಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ತಾಲಿಬಾನ್ ಅಫ್ಘಾನಿಸ್ತಾನದ ಒಂದೊಂದೇ ಪ್ರದೇಶವನ್ನು ವಶಪಡಿಸಿಕೊಂಡು ಮಧ್ಯಂತರ ಸರ್ಕಾರ ರಚನೆಗೆ ಮುಂದಾಗಿದೆ. ಅಫ್ಘಾನ್ ಅಧ್ಯಕ್ಷ ಗನಿ ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರ ನಡೆಸಿ ದೇಶ ಬಿಟ್ಟಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕಾಬೂಲ್ನಲ್ಲಿ ರಕ್ತ ಹರಿಸುವುದಿಲ್ಲ ಎಂದಿದ್ದ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಗನಿ ಬರಾದರ್ ಈಗ ಅಫ್ಘಾನ್ ಅಧ್ಯಕ್ಷರಾಗಿದ್ದಾರೆ.