ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಗುರು ಮತ್ತು ಮಾನಸ ಗುರು ಆಗಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ನಮ್ಮನ್ನ ಅಗಲಿದ್ದಾರೆ. ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು, ಇದು ಕೆವಿ ರಾಜು ಅವರ ಸ್ಟೈಲ್ ಆಗಿತ್ತು. ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು.
ಕೆವಿ ರಾಜು ಅವರು ಅನೇಕ ಅದ್ಬುತ ಚಿತ್ರಗಳನ್ನು ಕೊಟ್ಟಿದ್ದರೂ ಬಹುತೇಕರು ಅವರನ್ನು ಗುರುತಿಸೋದು ಅವರ ಹುಲಿಯಾ ಚಿತ್ರದಿಂದಲೇ. ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸೋ ಕಾಲ್ಡ್ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂತಹ ಚಿತ್ರಗಳ ಸಾಲಿನಲ್ಲಿ ಕೇಳಿಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ ಹುಲಿಯಾ.
ಕೆ ವಿ ರಾಜು ಅವರ ಅಗಲಿಕೆಯ ಸಮಯದಲ್ಲಿ ಈ ಚಿತ್ರವನ್ನು ಅರ್ಥೈಸಿಕೊಳ್ಳುವುದರ ಮೂಲಕ ಅವರಿಗೊಂದು ಭಾವಪೂರ್ಣ ಅಂತಿಮ ನಮನ ಸಲ್ಲಿಸುವುದು ನಮ್ಮ ಉದ್ದೇಶ.
ಕೆವಿ ರಾಜು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು, ಹೊಸ ರೀತಿಯ ಅನುಭವ ಕೊಡುವ ಸಿನಿಮಾಗಳನ್ನು ಮಾಡಿದ ನಿರ್ದೇಶಕರ ಹೆಸರು. ಇಂದ್ರಜಿತ್, ಯುದ್ಧಕಾಂಡ, ಸಂಗ್ರಾಮ, ಕದನ, ನಂ.1, ಬೆಳ್ಳಿ ಮೋಡಗಳು, ನವಭಾರತ, ಯುದ್ಧ, ಓ ಗಂಡಸರೇ ನೀವೆಷ್ಟು ಒಳ್ಳೆಯವರು ಮುಂತಾದ ಹಲವು ವಿಭಿನ್ನ ಚಿತ್ರಗಳನ್ನು ನೀಡಿದವರು ರಾಜು. ಅಷ್ಟೇ ಅಲ್ಲ ತಮ್ಮ ನಿಷ್ಠುರ ವರ್ತನೆಗೂ ರಾಜು ಹೆಸರುವಾಸಿಯಾಗಿದ್ದರು, ಅಮಿತಾಬ್ ಬಚ್ಚನ್ ಅವರ ಹಿಂದಿ ಸಿನಿಮಾ ನಿರ್ದೇಶಿಸುವಾಗ ಎರಡು ಗಂಟೆ ತಡವಾಗಿ ಬಂದ ಅಮಿತಾಬ್ ಅವರನ್ನು ನೋಡಿ ಅವರ ಸಹಾಯಕ ಓಡಿ ಬಂದು ಸಾಹೇಬ್ ಆಗಯೇ, ಸಾಹೇಬ್ ಆಗಯೇ ಅಂದಿದ್ದಕ್ಕೆ, ಯಾವನೋ ಅದು ಸಾಹೇಬ್, ಇಲ್ಲಿ ನಿರ್ದೇಶಕ ನಾನು. ಇಲ್ಲಿ ನಾನೇ ಸಾಹೇಬ್. ಹೋಗಿ ನಿನ್ನ ನಿನ್ನ ಸಾಹೇಬರಿಗೆ ಪ್ಯಾಕ್ ಅಪ್ ಆಯ್ತು ಅಂತ ಹೇಳು ಅಂದಿದ್ರಂತೆ ಕೆವಿ ರಾಜು.
ಹುಲಿಯಾ ಚಿತ್ರದ ವಿಷಯಕ್ಕೆ ಬಂದರೆ, ಕೆವಿ ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ಆ ಚಿತ್ರದ ಖದರ್ರೇ ಹಾಗೆ. ಇಂದಿಗೂ ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯವಾದ ಜಾಗ ಇದೆ. ಈ ಚಿತ್ರದ ಕಥೆಯನ್ನು ನೋಡಿದರೆ ಅದು ಈಗ ಪರಭಾಷೆಯ ಚಿತ್ರರಂಗದವರು ಮಾಡುತ್ತಿರೋ ಕಥೆಗಳನ್ನ ರಾಜು ಅಂದೇ ಮಾಡಿದ್ದರು ಅನಿಸಿದರೆ ತಪ್ಪಿಲ್ಲ. ಯಾಕಂದ್ರೆ ಇತ್ತೀಚೆಗೆ ತಮಿಳಿನಲ್ಲಿ ಬಂದ ಧನುಷ್ ಅಭಿನಯದ ಅಸುರನ್ ಚಿತ್ರ ಹೆಚ್ಚು ಕಮ್ಮಿ ಹುಲಿಯಾ ಚಿತ್ರದ ಧಾಟಿಯಲ್ಲೇ ಇತ್ತು. ಶೋಷಿತರ ಮೇಲೆ ನಡೆಯುವ ದೌರ್ಜನ್ಯದ ಕಥೆ ಹುಲಿಯಾ ಚಿತ್ರದ್ದು. ಒಂದೇ ವ್ಯತ್ಯಾಸ ಅಂದ್ರೆ ಕೆವಿ ರಾಜು ಈ ಚಿತ್ರವನ್ನು ಅತಿ ರಿಯಲಿಸ್ಟಿಕ್ ಆಗಿ ತೋರಿಸಿದ್ದರು.
ಬಡವರು ತಿರುಗಿ ಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿಕೊಳ್ಳೋದೆಲ್ಲಾ ನಿಜಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆವಿ ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು. ದೇವರಾಜ್ ಮತ್ತು ಅರ್ಚನಾ ಅವರ ಕುಟುಂಬ ಮೇಲ್ವರ್ಗದವರ ತುಳಿತಕ್ಕೆ ಸಿಕ್ಕು ನಾಶವಾಗುವ ಕಥೆ ಇಲ್ಲಿತ್ತು. ದೇವರಾಜ್ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿಬಂದಿತ್ತು. ಅದರಲ್ಲೂ ನಟ ವಿಷ್ಣುವರ್ಧನ್ ಈ ಚಿತ್ರದಲ್ಲಿ ದೇವರಾಜ್ ಅವರು ರಸ್ತೆಯಲ್ಲಿ ನಿಂತು ಅಭಿನಯಿಸಿದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ, ಅಲ್ರೀ, ಪಬ್ಲಿಕ್ ಪ್ಲೇಸ್ ನಲ್ಲಿ ನಿಂತುಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪರ್ಫಾರ್ಮೆನ್ಸ್ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ ಎಂದು ದೇವರಾಜ್ ಅಭಿನಯಕ್ಕೆ ಕ್ರೆಡಿಟ್ ಕೊಟ್ಟಿದ್ದರು.
ಈ ಚಿತ್ರದ ವಿಶೇಷ ಅಂದ್ರೆ ಚಿತ್ರ ಬಿಡುಗಡೆ ಆದಾಗ ಈ ಚಿತ್ರವನ್ನು ನೋಡದೇ ಉದಾಸೀನ ಮಾಡಿದ ಎಲ್ಲರೂ ಮುಂದೆ ಇನ್ಯಾವಾಗಲೋ ಈ ಚಿತ್ರವನ್ನು ಟಿವಿಯಲ್ಲಿ ನೋಡಿ ಅಯ್ಯೋ ಎಂಥ ಅದ್ಭುತ ಸಿನಿಮಾ ಎಂದು ಉದ್ಗಾರ ತೆಗೆದರು. ಇಂದಿಗೂ ಕೂಡ ಹುಲಿಯಾ ಒಂದು ಕೆಟ್ಟ ಚಿತ್ರ ಎಂದು ಹೇಳುವ ಯಾರೂ ನಿಮಗೆ ಸಿಗುವುದಿಲ್ಲ. ಆದರೆ ಸಿನಿಮಾ ಬಿಡುಗಡೆ ಆದಾಗ ಮಾತ್ರ ಅದನ್ನು ಯಾರೂ ನೋಡಲಿಲ್ಲ ಅನ್ನೋದು ಮಾತ್ರ ಸತ್ಯ. ಹಾಗಂತ ಹುಲಿಯಾ ಒಂದು ಅದ್ಭುತ ಚಿತ್ರ ಅನ್ನೋ ಸತ್ಯ ಮಾತ್ರ ಇಂದಿಗೂ ಹಾಗೇ ಉಳಿದಿದೆ. ಆದರೆ ಇಲ್ಲಿ ಕಾಡೋ ಪ್ರಶ್ನೆ ಅಂದ್ರೆ ಅಂದು ಅಂತಹ ವಿಭಿನ್ನ ಚಿತ್ರ ಬಂದಾಗ ಅದನ್ನು ಗೆಲ್ಲಿಸದ ಕನ್ನಡ ಪ್ರೇಕ್ಷಕ ಇಂದು, ಪರಭಾಷೆಯ ಚಿತ್ರಗಳನ್ನು ನೋಡಿ ನಮ್ಮಲ್ಯಾಕೆ ಇಂಥ ಚಿತ್ರಗಳು ಬರ್ತಾ ಇಲ್ಲ ಅಂತ ಕೇಳ್ತಾ ಇದ್ದಾನೆ.
ಒಂದು ವಿಭಿನ್ನ ಚಿತ್ರ ಮಾಡಲು ಮನಸ್ಸು ಮಾಡಿ ನಿರ್ಮಾಪಕರನ್ನು ಒಪ್ಪಿಸಿ ಹುಲಿಯಾದಂಥ ನಮ್ಮ ಚಿತ್ರರಂಗದಲ್ಲಿ ಮೈಲುಗಲ್ಲು ಎನಿಸಿಕೊಳ್ಳುವ ಸಿನಿಮಾ ಮಾಡಿದ ಕೆವಿ ರಾಜು ಅವರಿಗೆ ನಿರ್ಮಾಪಕರ ಕಡೆಯಿಂದ ಸಿಕ್ಕಿದ್ದು, ನನ್ನ ದುಡ್ಡು ಹಾಳು ಮಾಡಿದ್ರಿ ಅನ್ನುವ ನಿಂದನೆ ಮಾತ್ರ. ಆಗ ಸಿನಿಮಾವನ್ನು ನೋಡದ ಪ್ರೇಕ್ಷರು ಈಗ ಹುಲಿಯಾ ಅದ್ಭುತ ಚಿತ್ರ ಎಂದು ಕೊಂಡಾಡುತ್ತಾರೆ. ಆದರೆ ಅದರಿಂದ ಲಾಭ ಏನಿದೆ. ಕೆವಿ ರಾಜು ಅವರು ಯಾರ ಮಾತನ್ನೂ ಕೇಳಲ್ಲ. ಚಿತ್ರದಲ್ಲಿ ಸ್ಯಾಡ್ ಎಲಿಮೆಂಟ್ಸ್ ಜಾಸ್ತಿ ಆಯ್ತು ಅಂದ್ರೆ ಕಟ್ ಮಾಡಲಿಲ್ಲ. ಕ್ಲೈಮ್ಯಾಕ್ಸ್ ಪಾಸಿಟಿವ್ ಆಗಿ ಮಾಡಿ, ಹುಲಿಯಾ ಅಂತ ಹೆಸರಿಟ್ಟು ನಾಯಕನನ್ನು ಕೊನೆಯಲ್ಲಿ ನಾಯಿ ಥರ ಬೀದಿ ಬದಿ ಹೆಣ ಮಾಡಿದ್ರೆ ಪ್ರೇಕ್ಷಕರಿಗೆ ಇಷ್ಟ ಆಗಲ್ಲ ಅಂತ ನಿರ್ಮಾಪಕರು ದೂರು ಹೇಳಿದ್ದೇನೋ ನಿಜ. ಆದರೆ ಕೆವಿ ರಾಜು ತಮ್ಮ ಮೇಲೆ ಇಟ್ಟುಕೊಂಡಿದ್ದ ನಂಬಿಕೆ ಅದು. ಕಥೆಯನ್ನು ಬದಲಾಯಿಸಿ ಅಂದಾಗ, ಅದ್ ಹೆಂಗೆ ಬದಲಾಯಿಸೋಕಾಗುತ್ತೆ, ಆ ಕತೆ ಇರೋದೇ ಹಾಗೆ ಎಂದು ತಾವೇ ಬರೆದ ಕಥೆ ಬಗ್ಗೆ ಹೇಳಿದವರು ರಾಜು. ಯಾಕಂದ್ರೆ ಅವರಿರೋದೇ ಹಾಗೆ. ಆದರೆ ಹಾಗಿದ್ದ ಕೆವಿ ರಾಜು ಅವರ ನಂಬಿಕೆಯನ್ನು ನಮ್ಮ ಪ್ರೇಕ್ಷಕರು ಉಳಿಸಿಕೊಳ್ಳಲಿಲ್ಲ.
ಆದರೆ ಒಂದು ವಿಶೇಷದ ಸಂಗತಿ ಅಂದ್ರೆ, ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಯಿತು, ನನಗೆ ಲಾಸ್ ಆಯಿತು, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ಕೆವಿ ರಾಜು ಕೇಳಲಿಲ್ಲ, ಅನ್ನೋ ಚಿತ್ರದ ನಿರ್ಮಾಪಕ ಗೋವಿಂದು ಅವರನ್ನು ಯಾರಾದ್ರೂ, ನಿಮ್ಮ ಹೆಸರೇನು ಅಂತ ಕೇಳಿದ್ರೆ, ‘ಗೋವಿಂದು, ಹುಲಿಯಾ ಗೋವಿಂದು’ ಅಂತಾರೆ. ಅದು ಆ ಚಿತ್ರದ ತಾಕತ್ತು. ಕೆವಿ ರಾಜು ಅವರ ತಾಕತ್ತು.