ಪಂಜಾಬ್‌ನಲ್ಲಿ ನಡೆದ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ವಿಜಯ ದಾಖಲಿಸಿದೆ. ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (SAD) ಹಿಂದೆಂದೂ ಕಾಣದ ಸೋಲನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಏಳು ಮುನಿಸಿಪಾಲ್ ಕಾರ್ಪೊರೇಷನ್‌ಗಳಲ್ಲಿ ಆರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮೊಗಾ, ಹೋಶಿಯಾರ್‌ಪುರ್, ಕಪುರ್ತಲ, ಅಬೋಹರ್, ಪಠಾಣ್‌ಕೋಟ್ ಹಾಗೂ ಬಟಿಂಡಾ ಕಾರ್ಪೊರೇಶನ್‌ಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಭಟಿಂಡಾ ಕಾರ್ಪೊರೇಷನ್ ಕಳೆದ 53 ವರ್ಷಗಳಿಂದ ಶಿರೋಮಣಿ ಅಕಾಲಿದಳದ ಹಿಡಿತದಲ್ಲಿ ಇದ್ದಂತಹ ಕ್ಷೇತ್ರವಾಗಿತ್ತು. ಎನ್‌ಡಿಎ ಸರ್ಕಾರದಲ್ಲಿ ಇದ್ದಂತಹ ಏಕೈಕ ಎಸ್‌ಎಡಿ ಮಂತ್ರಿ ಹರ್‌ಸಿಮ್ರತ್ ಕೌರ್ ಬಾದಲ್ ಅವರ ಲೋಕಸಭಾ ಕ್ಷೇತ್ರ ಇದಾಗಿದೆ.

ಕೃಷಿ ಕಾನೂನುಗಳನ್ನು ವಿರೋಧಿಸಿ ಎಸ್‌ಎಡಿ ಬಿಜೆಪಿ ಜೊತೆಗೆ ಮೈತ್ರಿ ಕಡಿದುಕೊಂಡಿದ್ದರೂ, ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿಫಲವಾಗಿದೆ. ಈ ಚುನಾವಣೆಯನ್ನು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯೆಂದೇ ಕರೆಯಲಾಗಿದೆ.

ಇಲ್ಲಿಯವರೆಗೆ ಎಸ್‌ಎಡಿಯೊಂದಿಗೆ ತನ್ನ ಮತ ಬ್ಯಾಂಕ್ ಅನ್ನು ಹಂಚಿಕೊಳ್ಳುತ್ತಿದ್ದ ಬಿಜೆಪಿ ಮಾತ್ರ ಪಾತಾಳಕ್ಕೆ ಕುಸಿದಿದೆ. ಎಸ್‌ಎಡಿಯ ಮತಗಳನ್ನು ಪಡೆದು ಬೀಗುತ್ತಿದ್ದ ಬಿಜೆಪಿ ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿತ್ತು. ಆದರೆ, ಇತರ ರಾಜ್ಯಗಳಂತೆ ಪಂಜಾಬ್‌ನಲ್ಲಿ ಮತ ಬ್ಯಾಂಕ್ ವಿಸ್ತರಣೆ ಅಸಾಧ್ಯ ಎಂಬ ಸತ್ಯವನ್ನು ಬಿಜೆಪಿಗೆ ಮತದಾರರು ಅರಿವು ಮಾಡಿಕೊಟ್ಟಿದ್ದಾರೆ.
ಈಗ ಆರು ಮುನಿಸಿಪಾಲ್ ಕಾರ್ಪೊರೇಷನ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಉಳಿದ ಒಂದು ಕಾರ್ಪೊರೇಷನ್‌ನ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುವುದು. ಈ ಕಾರ್ಪೊರೇಷನ್‌ನ ಎರಡು ಬೂತ್‌ಗಳಲ್ಲಿ ಇಂದು ಮರುಮತದಾನ ನಡೆಯುತ್ತಿದೆ.