ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಯಾವುದೇ ಪಕ್ಷದ ಮುಖಂಡರು ಭಾಗಿಯಾಗಿದ್ದರೂ ಕಾನೂನು ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹುಬ್ಬಳ್ಳಿಯ ಶಾಂತಿಗೆ ದಕ್ಕೆಯನ್ನುಂಟು ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸೋಮವಾರ ಬಿಜೆಪಿ ಪ್ರಮುಖರ ಸಭೆಯ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಯಾವುದೇ ಗಲಾಟೆ ಹಾಗೂ ಕೋಮುಗಲಭೆ ಇಲ್ಲದಿರುವ ಹುಬ್ಬಳ್ಳಿಯಲ್ಲಿ ಈಗ ಏಕಾಏಕಿ ಅಶಾಂತಿಯನ್ನು ಹುಟ್ಟು ಹಾಕಲಾಗಿದೆ. ಈ ಘಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷದ ಮುಖಂಡರು ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದ್ದೇನೆ. ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತದೆ ಎಂದರು.
ಹುಬ್ಬಳ್ಳಿಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ಕೆಲವರು ಹುನ್ನಾರ ನಡೆಸಿದ್ದಾರೆ. ಅವರು ಯಾರೇ ಇದ್ದರೂ ಕಾನೂನು ರೀತಿಯಲ್ಲಿ ಕ್ರಮಗಳನ್ನು ಜರುಗಿಸಬೇಕಿದೆ. ಅಲ್ಲದೇ ಹುಬ್ಬಳ್ಳಿ ಪೊಲೀಸರಿಂದ ಈಗ ಲಾ ಆ್ಯಂಡ್ ಆರ್ಡರ್ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮತ್ತಷ್ಟು ಬಿಜೆಪಿ ಪಕ್ಷವನ್ನು ಭದ್ರ ಪಡೆಸಲು ಸಭೆ ನಡೆಸಲಾಗಿದ್ದು,ಸಚಿವರ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆಯನ್ನು ಮಾಡಲಾಗುತ್ತಿದೆ. ಭಾರತೀಯ ಜನತಾ ಪಕ್ಷ ಸಂಘಟನಾತ್ಮಕ ರೀತಿಯಲ್ಲಿ ಕೆಲಸ ಮಾಡುತ್ತದೆ. ಸರ್ಕಾರ ಯಾವ ರೀತಿ ಕೆಲಸ ಮಾಡಬೇಕು ಆ ರೀತಿ ಮಾಡುತ್ತಿದೆ. ಬಿಜೆಪಿ ರಾಜಕೀಯ ಪಕ್ಷವಾಗಿ ಏನೆಲ್ಲಾ ಮಾಡಬೇಕು ಮಾಡುತ್ತದೆ ಎಂದರು.