ಕ್ಲಾರೆನ್ಸ್ ಶಾಲೆಯಲ್ಲಿ ಒತ್ತಾಯ ಪೂರ್ವಕವಾಗಿ ಬೈಬಲ್ ಬೋಧಿಸಲಾಗುತ್ತಿದೆ ಎಂಬ ಆರೋಪ ಹಿಂದೂ ಪರ ಸಂಘಟನೆಗಳದ್ದು. ಈ ಮೂಲಕ ಈ ಬೈಬಲ್ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ. ಈ ಹಿನ್ನೆಲೆ ಕ್ಲಾರೆನ್ಸ್ ಹೈ ಸ್ಕೂಲ್ ಗೆ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ.
ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬಲವಂತವದ ಬೈಬಲ್ ಓದಿಸಲಾಗ್ತಿದೆ ಎಂದ ಹಿಂದೂ ಸಂಘಟನೆಗಳು.!!
ರಾಜ್ಯದಲ್ಲಿ ನಡೆದ ಹಲವು ವಿವಾದಗಳು ಹಲವು ಆಯಾಮಗಳನ್ನು ಪಡೆದು ಇದೀಗ ತೆರೆಮರೆಗೆ ಸರಿದಿದೆ. ಇನ್ನೇನು ಎಲ್ಲವೂ ಶಾಂತ ಎನ್ನುವ ಹೊತ್ತಲ್ಲೇ ಹಿಂದೂ ಪರ ಸಂಘಟನೆಗಳು ನಗರದ ಪಾಟರಿ ಟೌನ್ನಲ್ಲಿರುವ ಕ್ಲಾರೆನ್ಸ್ ಶಾಲೆಯಲ್ಲಿ ಬಲವಂತವಾಗಿ ಬೈಬಲ್ ಬೋಧಿಸಲಾಗುತ್ತಿದೆ ಎಂದ ಆರೋಪ ಮಾಡಿತ್ತು. ಇದಕ್ಕೆ ಆ ಶಾಲೆಯ ವೆಬ್ ಸೈಟ್ ನಲ್ಲಿರುವ ಬ್ರೌಶರ್ ಗಳ ಸ್ಕ್ರೀನ್ ಶಾರ್ಟ್ ಅನ್ನು ಪುರಾವೆಯಾಗಿ ನೀಡಿತ್ತು. ಇದೀಗ ಈ ಪ್ರಕರಣ ಮತ್ತೊಂದು ಹಂತ ತಲುಪಿದ್ದು, ಶಾಲೆಯಲ್ಲಿ ಬೈಬಲ್ ಓದು ಕಡ್ಡಾಯ ಪಠ್ಯವಾಗಿದೆ ಎಂದು ಗೊತ್ತಾಗಿದೆ.
ಕಾನೂನು ಹೋರಾಟಕ್ಕೆ ಮುಂದಾದ ಕ್ಲಾರೆನ್ಸ್ ಹೈ ಸ್ಕೂಲ್.!!
ಭಾನುವಾರ ರಜೆ ಇದ್ದ ಕಾರಣ, ಇಂದು ಈ ಬಗ್ಗೆ ಕ್ಲಾರೆನ್ಸ್ ಶಾಲೆಯ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಶಾಲೆಯಲ್ಲಿ ಬೈಬಲ್ ಓದು ಕಡ್ಡಾಯವೇ ಎಂಬ ಪ್ರಶ್ನೆಗೆ ಕಾನೂನು ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತವೆ ಎಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಿದ್ದಾರೆ. ಇನ್ನು ಹಿಂದೂ ಪರ ಸಂಘಟನೆಗಳು ಗಲಾಟೆ ಮಾಡುವ ಸಂದೇಹ ಉದ್ಭವವಾದ ಹಿನ್ನೆಲೆ ಶಾಲೆಗೆ ಬಿಗಿ ಪೊಲೀಸ್ ಭದ್ರತೆಯನ್ನೂ ನೀಡಲಾಗಿದೆ. ಕ್ಲಾರೆನ್ಸ್ ಶಾಲೆಯ ಮೂರು ಮುಖ್ಯ ಗೇಟ್ ಗಳಲ್ಲಿಯೂ ಖಾಕಿ ನಿಯೋಜನೆ ಮಾಡಿ, ಸ್ಥಳದಲ್ಲಿ ಒಂದು KSRP ತುಕಡಿಯನ್ನೂ ಹಾಕಲಾಗಿತ್ತು. ಇನ್ನು ಇದರ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಹಿಂದೂ ಜನ ಜಾಗೃತಿ ಸಂಘಟನೆಯ ಮುಖಂಡರಿಗೂ ಶಾಲೆ ಪ್ರವೇಶ ನಿರ್ಬಂಧಿಸಲಾಯಿತು. ಈ ವೇಳೆ ಮಾತನಾಡಿದ ಹಿಂದೂ ಜನ ಜಾಗೃತಿ ವೇದಿಕೆಯ ಮುಖಂಡ ಮೋಹನ್ ಗೌಡ, ಮಕ್ಕಳಿಗೆ ಬೈಬಲ್ ಓದು ಕಡ್ಡಾಯ ಮಾಡಿರುವುದು ಸಂವಿಧಾನದ ಕಲಂ 25ರ ಉಲ್ಲಂಘನೆ ಎಂದರು.
ಹಿಂದೂ ಪರ ಸಂಘಟನೆಗಳ ಆರೋಪದ ನಿಜಾಂಶ ತಿಳಿಯುವ ನಿಟ್ಟಿನಲ್ಲಿ ಅದೇ ಶಾಲೆಯ ವಿದ್ಯಾರ್ಥಿಯೊಬ್ಬರನ್ನು ಮಾತನಾಡಿಸುವ ಪ್ರಯತ್ನ ‘ಪ್ರತಿಧ್ವನಿ’ ಮಾಡಿತು. ಈ ವೇಳೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ಒಬ್ಬ ಕ್ಲಾರೆನ್ಸ್ ಶಾಲೆಯಲ್ಲಿ ಇತರೆ ವಿಷಯಗಳಂತೆಯೇ ಬೈಬಲ್ ಕೂಡ ಒಂದು ವಿಷಯ ಎಂದು ಹೇಳಿದರು. ಅಲ್ಲದೆ ವಾರ್ಷಿಕವಾಗಿ ಬೈಬಲ್ ವಿಷಯದ ಮೇಲೆಯೂ ಪರೀಕ್ಷೆ ನಡೆಯುತ್ತದೆ ಎಂದು ಹೇಳಿದರು. ಇದು ಈಗ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದೆ. ಈಗಾಗಲೇ ಸಾಲು ಸಾಲು ವಿವಾದಗಳು ನಡೆದು ಕೊಂಚ ತಣಿದಿರುವ ಹೊತ್ತಲ್ಲೇ ಕ್ಲಾರೆನ್ಸ್ ಶಾಲೆಯ ಬೈಬಲ್ ವಿವಾದ ಮತ್ತೊಂದು ಸುತ್ತಿನ ದಂಗಲ್ ಗೆ ಆದಿ ಹಾಡಿದೆ. ಈ ಬಗ್ಗೆ ಇನ್ನು ಕೂಡ ಕ್ಲಾರೆನ್ಸ್ ಶಾಲೆಯ ಆಡಳಿತ ಮಂಡಳಿ ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ ಕೂಡ ಶಾಲೆಯಲ್ಲಿ ಬೈಬಲ್ ಬೋಧನೆ ನಿಜವೇ ಆಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಯಾವ ನಿಲುವು ತಾಳಲಿದೆ ಎಂಬ ಪ್ರಶ್ನೆ ಸದ್ಯದ್ದು.