ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಾಗಿ ಧರಣಿನಿರತ ರೈತ ಸಂಘಟನೆಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಿವಾದಿತ ಮೂರು ಕೃಷಿ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಿ, ಆ ಬಗ್ಗೆ ಪರಿಶೀಲಿಸಲು ನಾಲ್ವರ ಸಮಿತಿ ರಚಿಸಿರುವುದು ಈಗ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ.
ಮೇಲ್ನೋಟಕ್ಕೆ ಅಸಂವಿಧಾನಿಕ ಎನಿಸದೇ ಇರುವ ಕಾಯ್ದೆ-ಕಾನೂನುಗಳನ್ನು ರದ್ದು ಮಾಡಲು ಅಥವಾ ತಡೆ ನೀಡಲು ನ್ಯಾಯಾಂಗಕ್ಕೆ ಅಧಿಕಾರವಿದೆ. ಆದರೆ, ಈ ವಿವಾದಿತ ಕಾಯ್ದೆಗಳ ವಿಷಯದಲ್ಲಿ ನ್ಯಾಯಾಲಯ ತನ್ನ ಆದೇಶದಲ್ಲಿ ಅಂತಹ ಯಾವುದೇ ಕಾರಣ ನೀಡಿಲ್ಲ. ಆದರೂ ತಡೆಯಾಜ್ಞೆ ನೀಡಿರುವುದು ಶಾಸಕಾಂಗದ ವ್ಯಾಪ್ತಿಯಲ್ಲಿ ನ್ಯಾಯಾಂಗ ಹಸ್ತಕ್ಷೇಪ ನಡೆಸಿದಂತಾಗಿದೆ ಎಂಬ ವಾದವೂ ಕೇಳಿಬಂದಿದೆ. ಜೊತೆಗೆ ನ್ಯಾಯಾಲಯ ನೇಮಿಸಿದ ಸಮಿತಿಯ ನಾಲ್ವರು ಸದಸ್ಯರ ಬಗ್ಗೆಯೂ, ಅವರೆಲ್ಲರೂ ಈ ಮೊದಲಿಂದಲೂ ವಿವಾದಿತ ಕಾಯ್ದೆಗಳ ಪರವಾಗಿ ಮತ್ತು ರೈತ ಹೋರಾಟದ ವಿರುದ್ಧವಾಗಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದವರು ಎಂಬುದೂ ಸೇರಿದಂತೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿವೆ. ಈ ನಡುವೆ ನ್ಯಾಯಾಲಯ ಸಮಿತಿ ರಚಿಸಿದ ಬೆನ್ನಲ್ಲೇ ಓರ್ವ ಸಮಿತಿ ಸದಸ್ಯರು ಸಮಿತಿಯ ಭಾಗವಾಗಲು ನಿರಾಕರಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಯ್ದೆಗಳ ವಿಷಯದಲ್ಲಿ ಸುಪ್ರೀಂಕೋರ್ಟಿನಲ್ಲಿ ಹೂಡಲಾಗಿದ್ದ ದಾವೆಗಳಲ್ಲಿ ರೈತ ಸಂಘಟನೆಗಳ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಹಾಗೂ ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷ ದುಶ್ಯಂತ್ ದವೆ ಅವರು ಕಾಯ್ದೆಗಳಿಗೆ ತಡೆಯಾಜ್ಞೆ ಮತ್ತು ಸಮಿತಿ ರಚನೆಯ ಸುಪ್ರೀಂಕೋರ್ಟ್ ನಿರ್ಧಾರ ಮತ್ತು ಪ್ರಕರಣದ ವಿಚಾರಣೆಯ ವಿಷಯದಲ್ಲಿ ಅದು ಪಾಲಿಸಿದ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ‘ದ ಟೆಲಿಗ್ರಾಫ್’ ಪತ್ರಿಕೆಗೆ ಬುಧವಾರ ನೀಡಿದ ಸಂದರ್ಶನದಲ್ಲಿ ದವೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ದೊಡ್ಡ ಮಟ್ಟದ ಸಾರ್ವಜನಿಕ ಚರ್ಚೆಗೆ ಚಾಲನೆ ನೀಡಿವೆ.
ಪ್ರಕರಣದ ವಿಚಾರಣೆ ಮತ್ತು ಆದೇಶದ ಪ್ರಕ್ರಿಯೆಯಲ್ಲೇ ಲೋಪವಾಗಿದೆ ಮತ್ತು ಈ ಹಿಂದೆ ಸಿಎಎ-ಎನ್ ಆರ್ ಸಿ ಮತ್ತು ಲವ್ ಜಿಹಾದ್ ನಂತಹ ಸಂವಿಧಾನಿಕ ಹಕ್ಕುಗಳ ಮೇಲೆ ಸವಾರಿ ಮಾಡುವ ಕಾಯ್ದೆಗಳ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಸುಪ್ರೀಂಕೋರ್ಟ್, ಈ ಮೂರು ಕಾಯ್ದೆಗಳ ವಿಷಯದಲ್ಲಿ ಯಾವ ಅರ್ಜಿದಾರರೂ ಕೇಳದೇ ಇದ್ದರೂ ಏಕಪಕ್ಷೀಯವಾಗಿ ತಡೆಯಾಜ್ಞೆ ಜಾರಿ ಮಾಡಿ ಸಮಿತಿ ನೇಮಕ ಮಾಡಿರುವುದು ಆ ತೀರ್ಮಾನದ ಉದ್ದೇಶ ಮತ್ತು ಗುರಿಯ ಕುರಿತು ಗಂಭೀರ ಪ್ರಶ್ನೆಗಳಿಗೆ ಎಡೆಮಾಡಿದೆ ಎಂದು ದವೆ ಹೇಳಿದ್ದಾರೆ.
ಈ ನಡುವೆ, ವಿವಾದಿತ ಕಾಯ್ದೆಗಳ ಕುರಿತ ಸುಪ್ರೀಂಕೋರ್ಟ್ ಆದೇಶ ಮತ್ತು ಕ್ರಮಗಳ ಕುರಿತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ದವೆ ಅವರು, ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ಅನಪೇಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾವು ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಮ್ಮ ರಾಜೀನಾಮೆ ಪತ್ರದ ಆರಂಭದಲ್ಲಿಯೇ ಉಲ್ಲೇಖಿಸಿರುವುದು ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಆತಂಕ ಮತ್ತು ಅನುಮಾನಗಳಿಗೆ ಇಂಬು ನೀಡುವಂತಿದೆ.
“ಮೂರು ಕಾಯ್ದೆಗಳ ವಿಷಯದಲ್ಲಿ ಸುಪ್ರೀಂಕೋರ್ಟ್ ನಿರ್ಧಾರ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸೋಮವಾರ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ರಿಜಿಸ್ಟ್ರಿಯಲ್ಲಿ ದಾಖಲೆಯಲ್ಲಿ ಪ್ರಕರಣದ ಕುರಿತು ಮಂಗಳವಾರ ಆದೇಶ ನೀಡಲಾಗುವುದು ಎಂದು ಹೇಳಲಾಗಿತ್ತು. ಆ ಹಿನ್ನೆಲೆಯಲ್ಲಿ ತಾವೂ ಸೇರಿದಂತೆ ರೈತ ಸಂಘಟನೆಗಳ ಪರ ವಕಾಲತು ವಹಿಸಿದ ಹಿರಿಯ ವಕೀಲರು ಮಂಗಳವಾರದ ಕಲಾಪಕ್ಕೆ ಹಾಜರಾಗಿರಲಿಲ್ಲ. ಆದರೆ, ತಮಗೆ ಯಾವುದೇ ಮಾಹಿತಿ ನೀಡದೆ, ತಮ್ಮ ಗೈರು ಹಾಜರಿಯ ಕುರಿತು ಯಾವ ಮಾಹಿತಿಯನ್ನೂ ಕೇಳದೆ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠ, ದಿಢೀರನೇ ತನ್ನ ನಿಗದಿತ ಕಾರ್ಯಸೂಚಿ ಬದಲಾಯಿಸಿಕೊಂಡು, ಆದೇಶದ ಬದಲು, ವಿಚಾರಣೆ ಮುಂದುವರಿಸಿತು. ಜೊತೆಗೆ ವಾದಿ-ಪ್ರತಿವಾದಿಗಳ ಅಭಿಪ್ರಾಯವನ್ನೇ ಕೇಳದೆ ವಿವಾದಿತ ಕಾಯ್ದೆಗಳ ಕುರಿತು ಅಧ್ಯಯನ ನಡೆಸಲು ನಾಲ್ವರ ಸಮಿತಿಯ ನೇಮಕವನ್ನೂ ಘೋಷಿಸಿತು. ಕಾಯ್ದೆಗಳನ್ನು ಈಗಾಗಲೇ ಸಂಸತ್ ಅಂಗೀಕರಿಸಿರುವಾಗ ಈ ಸಮಿತಿಯ ಕೆಲಸವೇನು? ಜೊತೆಗೆ ಕಾಯ್ದೆಯ ಕುರಿತು ಸರ್ಕಾರ ಮತ್ತು ರೈತರ ನಡುವಿನ ಎಂಟು ಸುತ್ತಿನ ಮಾತುಕತೆಗಳೇ ವಿಫಲವಾಗಿರುವಾಗ ಸಮಿತಿ ಯಾವ ಸಲಹೆಗಳನ್ನು, ಪರಿಹಾರಗಳನ್ನು ಮುಂದಿಡಲಿದೆ? ಈ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯದ ಈ ನಡೆ ಈವರೆಗಿನ ರೂಢಿ ಮತ್ತು ಸಂಪ್ರದಾಯವನ್ನು ಮೀರಿ, ದೇಶವನ್ನು ಕಾಡುತ್ತಿರುವ ಗಂಭೀರ ರಾಜಕೀಯ ವಿಷಯದಲ್ಲಿ ತಲೆ ಹಾಕಿದಂತಾಗಿದೆ” ಎಂದು ದವೆ ಹೇಳಿದ್ದಾರೆ.
“ಕಾನೂನು ಅಥವಾ ಕಾಯ್ದೆಯ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ತಡೆಯಾಜ್ಞೆ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ಆದರೆ, ಹಾಗೆ ಮಾಡಲು, ಅಂತಹ ಕಾನೂನು- ಕಾಯ್ದೆಗಳು ಮೇಲ್ನೋಟಕ್ಕೇ ಅಸಂವಿಧಾನಿಕ ಎಂದು ಕಂಡುಬರುವಂತಿರಬೇಕು. ಆದರೆ, ಈ ವಿವಾದಿತ ಕಾಯ್ದೆಗಳ ವಿಷಯದಲ್ಲಿ ಸುಪ್ರೀಂಕೋರ್ಟಿನ ಆದೇಶ ಅಂತಹ ಯಾವುದೇ ಅಂಶವನ್ನು ಪ್ರಸ್ತಾಪಿಸಿಲ್ಲ. ಬಹುಶಃ ನ್ಯಾಯಾಲಯ ರೈತರ ಸಂಕಷ್ಟವನ್ನು ನೋಡಿ, ಅವರ ಪರವಾಗಿ ಮಿಡಿದು ಇಂತಹ ಆದೇಶ ಮಾಡಿದ್ದರೆ, ಅದು ಒಳ್ಳೆಯದೇ. ಆದರೆ, ಇದೇ ನ್ಯಾಯಾಲಯ ಕಳೆದ 2019ರ ಡಿಸೆಂಬರ್-2020ರ ಜನವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ತಡೆಯಾಜ್ಞೆ ನೀಡಲು ಸಾರಾಸಗಟಾಗಿ ನಿರಾಕರಿಸಿತ್ತು. ಆ ಕಾಯ್ದೆ ವಿರೋಧಿ ಹೋರಾಟದಲ್ಲೂ ಹತ್ತಾರು ಅಮಾಯಕರ ಜೀವಬಲಿಯಾಗಿತ್ತು. ಅಪಾರ ಆಸ್ತಿಪಾಸ್ತಿ ನಷ್ಟವಾಗಿತ್ತು. ಆದರೂ ನ್ಯಾಯಾಲಯ ಆ ವಿಷಯದಲ್ಲಿ, ಈಗ ತೋರಿದ ಮಾನವೀಯತೆ ತೋರಿರಲಿಲ್ಲ. ಅಲ್ಲದೆ ಇತ್ತೀಚೆಗೆ ಉತ್ತರಪ್ರದೇಶ ಮತ್ತಿತರ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಮತ್ತು ಆ ಕಾರಣಕ್ಕಾಗಿ ಹಲವು ಹತ್ತಾರು ಅಮಾಯಕರು ಜೈಲು ಸೇರಿರುವ ಮೇಲ್ನೋಟಕ್ಕೇ ಅಸಂವಿಧಾನಿಕವೂ, ಮನುಷ್ಯ ವಿರೋಧಿಯೂ ಆದ ವಿವಾದಿತ ಲವ್ ಜಿಹಾದ್ ಕಾನೂನು ವಿಷಯದಲ್ಲಿಯೂ ನ್ಯಾಯಾಲಯದ ಮಾನವೀಯತೆ ಮಿಡಿಯಲಿಲ್ಲ. ಆದರೆ ಈ ಕೃಷಿ ಕಾಯ್ದೆಯ ವಿಷಯದಲ್ಲಿ ಮಾತ್ರ ನ್ಯಾಯಾಲಯ ಮಿಡಿಯುತ್ತಿರುವುದು ವಿಶೇಷ” ಎಂದು ದವೆ ಸಂದರ್ಶನದಲ್ಲಿ ಹೇಳಿದ್ದಾರೆ.
ಹಾಗೇ, ದೇಶದ ಸಂವಿಧಾನದ ಚೌಕಟ್ಟು ಮೀರುವ ಸಂದರ್ಭದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ನಡೆಗಳಿಗೆ ಕಡಿವಾಣ ಹಾಕುವ ಸಾರ್ವಭೌಮತೆ ಸುಪ್ರೀಂಕೋರ್ಟಿಗೆ ಇದೆ. ಹಾಗೇ ಸರ್ವೋಚ್ಛ ನ್ಯಾಯಾಲಯದ ಮೇಲೆ ತಮಗೆ ಅಪಾರ ಗೌರವವೂ ಇದೆ ಎಂದಿರುವ ದವೆ ಅವರು, “ಕೇಂದ್ರ ಸರ್ಕಾರ ನೂತನವಾಗಿ ನಿರ್ಮಾಣ ಮಾಡುತ್ತಿರುವ ಸೆಂಟ್ರಲ್ ವಿಸ್ತಾ ಯೋಜನೆಯ ಕುರಿತು ಹಲವು ಅನುಮಾನಗಳನ್ನು ಎತ್ತಿದ ಅರ್ಜಿಯೊಂದನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್, ಅದು ಸರ್ಕಾರದ ಆಡಳಿತ ನೀತಿಯ ಭಾಗವಾಗಿದ್ದು, ಅದರಲ್ಲಿ ತಾನು ತಲೆಹಾಕುವುದಿಲ್ಲ ಎಂದು ಹೇಳಿತ್ತು. ಆದರೆ, ಈಗ ಈ ಕೃಷಿ ಕಾಯ್ದೆಯ ವಿಷಯದಲ್ಲಿ ಅದರ ನಡೆ ಭಿನ್ನವಾಗಿದೆ. ಅಂದರೆ, ಸೆಂಟ್ರಲ್ ವಿಸ್ತಾ ಯೋಜನೆ ಆಡಳಿತ ನೀತಿಯ ಭಾಗವಾದರೆ, ಈ ಕಾಯ್ದೆಗಳ ರಚನೆ, ಜಾರಿ ಅಥವಾ ಅವುಗಳನ್ನು ರದ್ದುಮಾಡುವುದು ಆಡಳಿತಕ್ಕೆ ಸಂಬಂಧಿಸಿದ ವಿಷಯವಲ್ಲವೆ?” ಎಂದೂ ಪ್ರಶ್ನಿಸಿದ್ದಾರೆ.
“ಅಲ್ಲದೆ ಕಾಯ್ದೆಗಳ ಕುರಿತ ಸಮಿತಿಯ ವಿಷಯದಲ್ಲಿಯೂ ಸಾಕಷ್ಟು ಪ್ರಶ್ನೆಗಳಿವೆ. ಮುಖ್ಯವಾಗಿ ಇಂತಹ ವಿಷಯದಲ್ಲಿ ಸಮಿತಿ ರಚಿಸುವಾಗ ಅವರು ಯಾವುದೇ ಪರ ವಿರೋಧದ ನಿಲುವು ಹೊಂದಿರದ ಸ್ವಾಯತ್ತ ಮತ್ತು ಸ್ವತಂತ್ರ ನಿಲುವಿನ ವ್ಯಕ್ತಿಗಳಾಗಿರಬೇಕಾಗುತ್ತದೆ. ಆದರೆ, ಈ ಸಮಿತಿಯಲ್ಲಿರುವವರು ಈಗಾಗಲೇ ರೈತ ಹೋರಾಟದ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿದ್ಧಾರೆ ಮತ್ತು ಕೃಷಿ ಮಸೂದೆಗಳ ಪರ ನಿಲುವು ವ್ಯಕ್ತಪಡಿಸಿದ್ದಾರೆ. ಹೀಗೆ ಪೂರ್ವಾಗ್ರಹಪೀಡಿತರನ್ನು ಇಂತಹ ಗಂಭೀರ ವಿಷಯದ ಕುರಿತ ಸಮಿತಿಗೆ ನೇಮಕ ಮಾಡುವುದರ ಹಿಂದಿನ ಉದ್ದೇಶವೇನು? ಜೊತೆಗೆ ಇಂತಹ ನೇಮಕವನ್ನು ಯಾವುದೇ ಅಧೀನ ನ್ಯಾಯಾಲಯ ಅಥವಾ ಸರ್ಕಾರಗಳು ಮಾಡಿದ್ದರೆ, ಖಂಡಿತವಾಗಿಯೂ ಸುಪ್ರೀಂಕೋರ್ಟ್ ಅಂತಹ ನೇಮಕವನ್ನು ರದ್ದು ಮಾಡದೇ ಇರುತ್ತಿರಲಿಲ್ಲ. ಹಾಗಾಗಿ ನಿಜವಾಗಿಯೂ ನ್ಯಾಯಾಲಯಕ್ಕೆ ಈ ವಿವಾದವನ್ನು ಇತ್ಯರ್ಥಪಡಿಸುವ ಇರಾದೆ ಇದ್ದಿದ್ದರೆ ಸ್ವತಂತ್ರ ವ್ಯಕ್ತಿಗಳನ್ನು ಸಮಿತಿಗೆ ನೇಮಕ ಮಾಡಬೇಕಿತ್ತು” ಎಂದಿದ್ದಾರೆ.
“ಸೋಮವಾರ ಸಂಜೆ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ಮಂಗಳವಾರ ಆದೇಶ ನೀಡುವುದಾಗಿ ಹೇಳಿತ್ತು. ಅದರಂತೆ ಸುಪ್ರೀಂಕೋರ್ಟ್ ರಿಜಿಸ್ಟ್ರಿಯಲ್ಲಿ ಮಂಗಳವಾರಕ್ಕೆ ಆದೇಶ ಎಂದು ದಾಖಲಿಸಲಾಗಿತ್ತು. ಸಾಮಾನ್ಯವಾಗಿ ವಿಚಾರಣೆಗೆ ಮಾತ್ರ ಹಾಜರಾಗಿ ಆದೇಶದ ವೇಳೆ ಕಲಾಪಕ್ಕೆ ಹಾಜರಾಗದೇ ಇರುವುದು ಹಿರಿಯ ವಕೀಲರು ರೂಢಿಸಿಕೊಂಡ ಪದ್ಧತಿ. ಆ ಹಿನ್ನೆಲೆಯಲ್ಲಿ ಮಂಗಳವಾರ ತಾವೂ ಸೇರಿದಂತೆ ರೈತ ಸಂಘಟನೆ ಪರ ವಕಾಲತು ವಹಿಸಿದ್ದ ಹಿರಿಯ ವಕೀಲರು ಕಲಾಪಕ್ಕೆ ಗೈರಾಗಿದ್ದರು. ಆ ವೇಳೆ ಮುಖ್ಯನ್ಯಾಯಮೂರ್ತಿಗಳ ಪೀಠ, ಏಕಾಏಕಿ ವಿಚಾರಣೆ ಮುಂದುವರಿಸಿ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ವೇಳೆ ತಮ್ಮ ಆದೇಶದಲ್ಲಿ ರೈತ ಸಂಘಟನೆಗಳ ಪರ ವಕೀಲರಾದ ತಮ್ಮ ಗೈರು ಹಾಜರಿಯ ಬಗ್ಗೆ ಪ್ರಸ್ತಾಪಿಸಿದ್ದರೂ, ಯಾಕೆ ತಾವು ಕಲಾಪಕ್ಕೆ ಬಂದಿಲ್ಲ ಎಂಬ ಬಗ್ಗೆ ನ್ಯಾಯಪೀಠ ಕೇಳಿಲ್ಲ. ಮತ್ತು ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಮತ್ತು ಇತರರು ಕೂಡ ನಮ್ಮ ಗೈರು ಹಾಜರಿಯ ಬಗ್ಗೆ ಪೀಠದ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡಲಿಲ್ಲ. ನಮಗೆ ಮಂಗಳವಾರವೂ ವಿಚಾರಣೆ ಮುಂದುವರಿಯುವ ವಿಷಯ ಗೊತ್ತಿದ್ದರೆ ಖಂಡಿತಾ ನಾವು ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಆದರೆ, ನ್ಯಾಯಾಲಯದ ಇಂತಹ ನಡೆ ಖಂಡಿತವಾಗಿಯೂ ಒಪ್ಪಿತವಲ್ಲ” ಎಂದು ದವೆ ಹೇಳಿದ್ದಾರೆ.
ಒಟ್ಟಾರೆ ದವೆಯವರಂಥ ಹಿರಿಯ ವಕೀಲರೇ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬ್ಡೆಯರನ್ನೂ ಒಳಗೊಂಡ ಪೀಠದ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನ ಎತ್ತಿರುವುದು, ಮೂರು ವಿವಾದಿತ ಕಾಯ್ದೆಗಳು ಮತ್ತು ಆ ಕುರಿತ ರೈತರ ಹೋರಾಟದ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಮಾನಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಹಲವು ಆಮಾಯದ ಚರ್ಚೆಗಳಿಗೆ ಇನ್ನಷ್ಟು ಪುಷ್ಟಿ ನೀಡಿವೆ.