
ಚುನಾವಣಾ ಬಾಂಡ್ ವಿಚಾರವಾಗಿ ವಿಪಕ್ಷಗಳು ಬಿಜೆಪಿಯನ್ನ ಹಾಗೂ ಪಿಎಂ ಮೋದಿಯನ್ನ ಸರಿಯಾಗಿಯೇ ಛೇಡಿಸಿವೆ. ವಿವಾದದ ಬಗ್ಗೆ ಇದೇ ಮೊದಲ ಬಾರಿಗೆ ಪಿಎಂ ಮೋದಿ ತುಟಿಬಿಚ್ಚಿದ್ದಾರೆ.ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಚುನಾವಣಾ ಬಾಂಡ್ ಯೋಜನೆಯ ಕುರಿತು ವಿರೋಧ ಪಕ್ಷಗಳು ಸುಳ್ಳು ಹರಡುತ್ತಿವೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದರ ಪ್ರಾಮಾಣಿಕ ಪ್ರತಿಫಲನ ಪ್ರತಿಫಲನವಾದಾಗ ಎಲ್ಲರೂ ವಿಷಾದಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ANI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಕಪ್ಪು ಹಣವನ್ನು ನಿಯಂತ್ರಿಸುವ ಗುರಿಯನ್ನು ಚುನಾವಣಾ ಬಾಂಡ್ ಯೋಜನೆ ಹೊಂದಿತ್ತು. ಆರೋಪಗಳನ್ನು ಹೊರಿಸಿ ಪರಾರಿಯಾಗುವುದನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡ ನಂತರ 16 ಸಂಸ್ಥೆಗಳು ನೀಡಿರುವ ದೇಣಿಗೆಯ ಪೈಕಿ ಶೇ. 37ರಷ್ಟು ಮಾತ್ರ ಬಿಜೆಪಿಗೆ ಬಂದಿದ್ದರೆ, ಉಳಿದ ಶೇ. 63ರಷ್ಟು ದೇಣಿಗೆ ಬಿಜೆಪಿಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳಿಗೆ ಹೋಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಚುನಾವಣಾ ಬಾಂಡ್ ಯೋಜನೆ ರದ್ದತಿಯಿಂದ ಚುನಾವಣೆಗಳು ಕಪ್ಪು ಹಣದತ್ತ ಹೊರಳಲಿದೆ. ಎಲ್ಲರೂ ಇದಕ್ಕಾಗಿ ವಿಷಾದಿಸಬೇಕಾಗುತ್ತದೆ. ಭವಿಷ್ಯದಲ್ಲಿ ಇದು ದೊಡ್ಡ ವಿಷಾದದ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.