ಮಹಿಳೆಯರ ದಿನದಂದು ನಾರಿ ಶಕ್ತಿಗೆ ನನ್ನ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹಿಳೆಯರಿಗೆ ಶುಭಕೋರಿದ್ದಾರೆ.

ದೇಶ್ಯಾದ್ಯಂತ ಇಂದು ಮಹಿಳಾ ದಿನಾಚರಣೆ ಸಂಭ್ರಮ ಜೋರಾಗಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಹಿಳಾ ದಿನದಂದು ನಾರಿ ಶಕ್ತಿಗೆ ನನ್ನ ನಮನಗಳು. ನಮ್ಮ ಸರ್ಕಾರ ಯಾವಾಗಲೂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದ್ದು, ಇದರ ಪ್ರತಿಫಲ ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಎದ್ದುಕಾಣಿಸುತ್ತದೆ. ಮನ್ ಕಿ ಬಾತ್‌ನಲ್ಲಿ ಭರವಸೆ ನೀಡಿದ ಹಾಗೇ ಇಂದು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿರುವ ಮಹಿಳೆಯರಿಗೆ ಹಸ್ತಾಂತರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಶುಭಕೋರಿದ ರಾಷ್ಟ್ರಪತಿ ಮುರ್ಮು ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಇಂದು ನಾವೆಲ್ಲರು ಮಹಿಳೆಯರ ಸಾಧನೆ, ದೇಶಕ್ಕೆ, ಜಗತ್ತಿಗೆ ಮಹಿಳೆಯರ ಕೊಡುಗೆಗಳೇನು ಎನ್ನುವುದನ್ನು ಕೊಂಡಾಡುತ್ತೇವೆ. ಜೊತೆಗೆ ಮಹಿಳಾ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣದ ಉದ್ದೇಶಗಳನ್ನು ಬಲಪಡಿಸಬೇಕೆಂದು ನಾವೆಲ್ಲರು ಸಂಕಲ್ಪ ಮಾಡಿಕೊಳ್ಳುತ್ತೇವೆ.
ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಚೌಕಟ್ಟಿನ ಗಡಿಯನ್ನು ದಾಡಿ ಮುನ್ನೆಲೆಗೆ ಬರುತ್ತಿದ್ದಾರೆ. ಈ ಮಹಿಳಾ ದಿನದಂದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡೋಣ. ಯಾವುದೇ ಹಿಂಜರಿಕೆಯಿಲ್ಲದೆ ಲಿಂಗ ಸಮಾನ ಜಗತ್ತನ್ನು ಕಟ್ಟೋಣ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಶುಭಕೋರಿದ್ದು, ಮಹಿಳೆಯರು ನಮ್ಮ ಸಮಾಜದ ಬೆನ್ನೆಲುಬು. ಅವರ ಶಕ್ತಿ, ಧ್ವನಿ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ನಾನು ನಿಮ್ಮೊಂದಿಗೆ ಮತ್ತು ನಿಮ್ಮ ಪರವಾಗಿ ನಿಲ್ಲುತ್ತೇನೆ. ಪ್ರತಿಯೊಬ್ಬ ಮಹಿಳೆ ತನ್ನ ಹಣೆಬರಹವನ್ನು ಸ್ವತಃ ರೂಪಿಸಿಕೊಳ್ಳಲು, ಕನಸುಗಳ ಬೆನ್ನಟ್ಟಲು ಮತ್ತು ಉನ್ನತ ಸ್ಥಾನಕ್ಕೇರಿ, ಸ್ವತಂತ್ರಳಾಗುವವರೆಗೂ ಅವರ ಎಲ್ಲಾ ಏಳು-ಬೀಳುಗಳಲ್ಲಿ ನಾವು ಜೊತೆಯಾಗಿರುತ್ತೇವೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.