ಬೆಂಗಳೂರಿನಾದ್ಯಂತ ಸುಮಾರು 15,000 ಕಾರ್ಮಿಕರನ್ನು ಎನ್‌ಜಿಒ ಅಕ್ರಮ ದತ್ತಾಂಶ ಸಂಗ್ರಹ ಅಭಿಯಾನಕ್ಕೆ ನಿಯೋಜಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಈಗ ಅಂದಾಜಿಸಿದ್ದಾರೆ
ಬೆಂಗಳೂರಿನಲ್ಲಿ ಮತದಾರರ ಜಾಗೃತಿ ಅಭಿಯಾನದ ನೆಪದಲ್ಲಿ ಸಾರ್ವಜನಿಕರಿಂದ ಸೂಕ್ಷ್ಮ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವ ಎನ್‌ಜಿಒ ಚಿಲುಮೆ ಟ್ರಸ್ಟ್ ಬಗ್ಗೆ ಪ್ರತಿಧ್ವನಿ ಮತ್ತು TNM ಪತ್ರಕರ್ತರ ತಂಡವು ತನಿಖಾ ವರದಿಯನ್ನು ಮಾಡಿ ಎರಡು ವಾರಗಳು ಕಳೆದಿವೆ. ಅಂದಿನಿಂದ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ, ಆರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ, ಎನ್‌ಜಿಒ ಸಂಸ್ಥಾಪಕರನ್ನು ಬಂಧಿಸಲಾಗಿದೆ. ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಗೆ ವಿರೋಧ ಪಕ್ಷ ಇದನ್ನೇ ಪ್ರಮುಖ ವಿಷಯವಾಗಿ ಗಮನಹರಿಸಲು ಸಜ್ಜಾಗುತ್ತಿದೆ.
ನಮ್ಮ ತನಿಖೆಯ ದಾರಿಯು ಸರಳವಾಗಿತ್ತು, ಪ್ರತಿ ಕ್ಷೇತ್ರ ಭೇಟಿ ಮಾಡಿದಾಗಲೂ ನಮ್ಮ ತಂಡಕ್ಕೆ ಹಗರಣದ ಹೊಸ ಹೊಸ ಪದೆರಗಳು ತೆರದುಕೊಳ್ಳುತ್ತಿತ್ತು. ನಮ್ಮ ತನಿಖಾ ವರದಿಯ ಪರಿಣಾಮವನ್ನು ನಾವು ಊಹಿಸಿದ್ದೆವೆಯಾದರೂ, ಅಧಿಕೃತ ತನಿಖೆ ಪ್ರಾರಂಭವಾಗುವವರೆಗೂ ಇಡೀ ಕಾರ್ಯಾಚರಣೆಯು ಎಷ್ಟು ಬೃಹತ್ ಪ್ರಮಾಣದಲ್ಲಿತ್ತು ಎಂಬುದರ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಬೆಂಗಳೂರಿನಾದ್ಯಂತ ಸುಮಾರು 15,000 ಕಾರ್ಮಿಕರನ್ನು ಎನ್‌ಜಿಒ ಅಕ್ರಮ ದತ್ತಾಂಶ ಸಂಗ್ರಹ ಅಭಿಯಾನಕ್ಕೆ ನಿಯೋಜಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಈಗ ಅಂದಾಜಿಸಿದ್ದಾರೆ.
ಅವರ ಕಾರ್ಯಾಚರಣೆಯ ಪ್ರಮಾಣ ಮತ್ತು ಅವರು ಪಡೆದಿದ್ದ ಬೆಂಬಲವನ್ನು ಗಮನಿಸಿದರೆ, ಹಗರಣದ ಕಿಂಗ್‌ಪಿನ್ ರವಿಕುಮಾರ್ ಕೃಷ್ಣಪ್ಪರಿಗೆ, ನಮ್ಮ ತನಿಖಾ ವರದಿ ಬಹಿರಂಗಗೊಳ್ಳುವವರೆಗೂ ಇದು ತನಗೆ ಇಷ್ಟೊಂದು ಪ್ರಮಾಣದ ದೊಡಕಾಗಿರಬಹುದು ಎಂದು ಅಂದಾಜಿಸಿರಲಿಲ್ಲ.ಹಾಗಾಗಿಯೇ ಕೃಷ್ಣಪ್ಪ ಇನ್ನೂ ತನ್ನ ಅಪಾರ ಅಕ್ರಮ ಕಾರ್ಯಾಚರಣೆಯನ್ನು ನಡೆಸುತ್ತಿದ್ದ. ರವಿಕುಮಾರ್ ಕೃಷ್ಣಪ್ಪ ಮಾಡಿದ ಒಂದೇ ಒಂದು ದೊಡ್ಡ ತಪ್ಪು ಎಂದರೆ ತನ್ನ ಬಳಿ ದುಡಿದವರನ್ನು ಕೆಟ್ಟದಾಗಿ ನಡೆಸಿಕೊಂಡಿರುವುದು. ಅದೇ ಕಾರಣಕ್ಕೆ ಆತನ ಕೆಲಸಗಾರರು ನಮಗೆ ಆತನನ್ನು, ಆತನ ಕಾರ್ಯಾಚರಣೆ ಕುರಿತು ಬಹಿರಂಗಪಡಿಸಲು ಬೇಕಾದ ಪುರಾವೆಗಳು ಸಿಗುವಂತೆ ಮಾಡಲು ಮುಖ್ಯ ಕಾರಣವಾಯಿತು.
ಮೊದಲ ಸುಳಿವು
ಹಲವಾರು ತಿಂಗಳುಗಳ ಕೆಲಸ ಮಾಡಿದ ನಂತರವೂ ಚಿಲುಮೆಯಿಂದ ಸಂಬಳ ಪಡೆಯದ ಅತೃಪ್ತ ಕೆಲಸಗಾರರಿಂದ ಆಗಸ್ಟ್ ಅಂತ್ಯದಲ್ಲಿ ದೊರೆತ ಸುಳಿವು ಆಧರಿಸಿ ನಾವು ನಮ್ಮ ತನಿಖೆಯನ್ನು ಪ್ರಾರಂಭಿಸಿದೆವು. ಇಡೀ ಹಗರಣವು ಹೇಗೆ ಕೆಲಸ ಮಾಡಿದೆ ಎಂಬುದನ್ನು ಅವರು ಬಹಿರಂಗಪಡಿಸಿದರು. ಆದರೆ ನಮಗೆ ಬಹಳ ಕಡಿಮೆ ಪುರಾವೆಗಳು ಸಿಕ್ಕಿತ್ತು. ಬೆಂಗಳೂರು ಮಹಾನಗರ ಪಾಲಿಕೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಮತದಾರರ ಜಾಗೃತಿ ಅಭಿಯಾನ ನಡೆಸಲು ಚಿಲುಮೆ ಅನುಮತಿ ನೀಡುವ ಆದೇಶ, ಮಾಹಿತಿ ಸಂಗ್ರಹಣೆಗಾಗಿ ಕೆಲಸಗಾರರನ್ನು ಕೋರಿ NGO ನೀಡಿದ ಜಾಹೀರಾತು ಮತ್ತು ಬೂತ್ ಮಟ್ಟದ ಅಧಿಕಾರಿಗಳ (BLO) ನಕಲಿ ಗುರುತಿನ ಚೀಟಿಯ ಮೊದಲಾದವಷ್ಟೇ ನಮ್ಮ ಬಳಿ ಇದ್ದವು.
ಹೆಚ್ಚಿನ ಪುರಾವೆ ಸಂಗ್ರಹಿಸಲು ನಾವು ಹೆಚ್ಚಿನ ಡೇಟಾ ಸಂಗ್ರಾಹಕರೊಂದಿಗೆ ಮಾತನಾಡಬೇಕು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು, ಹೆಚ್ಚಿನ ಐಡಿ ಕಾರ್ಡ್‌ಗಳನ್ನು ನೋಡಬೇಕು, ಹೇಗಾದರೂ ಅಕ್ರಮ ಸಮೀಕ್ಷೆ ನಡೆಸಿದ ಪ್ರದೇಶಗಳನ್ನು ಮರುಪರಿಶೀಲಿಸಬೇಕು ಮತ್ತು ಮತದಾರರೊಂದಿಗೆ ಮಾತನಾಡಬೇಕಿತ್ತು. ಮಹದೇವಪುರ ಕ್ಷೇತ್ರದಲ್ಲಿ ಅತಿ ದೊಡ್ಡ ಕಾರ್ಯಾಚರಣೆ ನಡೆದಿದೆ ಎಂದು ಕೆಲಸಗಾರರು ಹೇಳುತ್ತಿದ್ದರು. ಯಾವುದೇ ಹೆಚ್ಚಿನ ಮಾರ್ಗದರ್ಶನಗಳು ಅಥವಾ ಸಂಪರ್ಕಗಳನ್ನು ಒದಗಿಸಲು ಅವರು ತುಂಬಾ ಹೆದರುತ್ತಿದ್ದರು. ಚಿಲುಮೆ ಹಿಂದೆ ಪ್ರಬಲ ರಾಜಕಾರಣಿಗಳಿದ್ದಾರೆ ಎನ್ನುವುದು ಅವರ ಆತಂಕಕ್ಕೆ ಕಾರಣವಾಗಿತ್ತು. .
ಮಹದೇವಪುರದಲ್ಲಿ ಏನಾಯಿತು ಎಂದು ತಿಳಿಯಲು ನಮ್ಮ ಆರಂಭಿಕ ಪ್ರಯತ್ನಗಳು ವಿಫಲವಾದವು. ಇದು ತುಂಬಾ ವಿಶಾಲವಾದ ಪ್ರದೇಶವಾಗಿತ್ತು ಮತ್ತು ಎಲ್ಲಿಂದ ಪ್ರಾರಂಭಿಸಬೇಕು ಎಂದು ನಮಗೆ ತಿಳಿದಿರಲಿಲ್ಲ. ತನಿಖೆಗಾಗಿ ನಾವು ಸಿಕ್ಕ ಸಿಕ್ಕ ಮನೆಯ ಬಾಗಿಲುಗಳನ್ನು ತಟ್ಟುವಂತೆ ಇರಲಿಲ್ಲ.
ನಂತರ ನಮ್ಮ ತಂಡವು ರವಿಕುಮಾರ್ ಕೃಷ್ಣಪ್ಪ ಅವರ ಹಿನ್ನೆಲೆ ಪರಿಶೀಲನೆ ನಡೆಸಿತು ಮತ್ತು ಅವರ ಕೆಲಸದ ವಿವರವನ್ನು ಪತ್ತೆಹಚ್ಚಿತು. ಎನ್‌ಜಿಒ ಜೊತೆಗೆ, ಅವರು ಚಿಲುಮೆ ಎಂಟರ್‌ಪ್ರೈಸಸ್ ಪ್ರೈ.ಲಿ ಎಂಬ ಚುನಾವಣಾ ನಿರ್ವಹಣಾ ಕಂಪನಿಯನ್ನು ಸಹ ನಡೆಸುತ್ತಿದ್ದರು. ಅದು ಡಿಜಿಟಲ್ ಸಮೀಕ್ಷಾ ಎಂಬ ಮೊಬೈಲ್ ಅಪ್ಲಿಕೇಶನ್ ಮತದಾರರ ಡೇಟಾವನ್ನು ಸಂಗ್ರಹಿಸುತ್ತಿತ್ತು. ಅದರ ವೆಬ್‌ಸೈಟ್ ಪ್ರಕಾರ, ಸಂಸದರು, ಶಾಸಕರು ಮತ್ತು ರಾಜಕೀಯ ಪಕ್ಷಗಳು ಅದರ ಸೇವೆಗಳನ್ನು ಪಡೆಯುತ್ತಿತ್ತು.
ಇದು ಸಂಪೂರ್ಣ ಚುನಾವಣಾ ಪ್ರಕ್ರಿಯೆಗೆ ಅಪಾಯವನ್ನುಂಟುಮಾಡುವ ಹಿತಾಸಕ್ತಿ ಸಂಘರ್ಷವಾಗಿದೆ, ಅಲ್ಲದೆ, ಬಿಬಿಎಂಪಿಯು ಎನ್‌ಜಿಒಗೆ ಅನುಮತಿ ನೀಡಿದ್ದ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ ಸಾವಿರಾರು ಮತದಾರರ ಖಾಸಗಿ ದತ್ತಾಂಶಗಳ ಕಳ್ಳತನವನ್ನು ಒಳಗೊಂಡಿರುವ ದೊಡ್ಡ ಹಗರಣದ ಪುರಾವೆ ನಮ್ಮ ಬಳಿ ಇನ್ನೂ ಇರಲಿಲ್ಲ. ನಮ್ಮ ಅನ್ವೇಷಣೆಯ ಉದ್ದಕ್ಕೂ, ರಾಜ್ಯ ಚುನಾವಣಾ ಆಯೋಗ (SEC) ಮತ್ತು BBMP ಯ ಅಧಿಕಾರಿಗಳು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎನ್ನುವುದು ಅನಿಸಿತು.
ನಾವು ಸೆಪ್ಟೆಂಬರ್ 20 ರಂದು ಬಿಬಿಎಂಪಿ ಕೇಂದ್ರ ಕಚೇರಿಗೆ ನಮ್ಮ ಮೊದಲ ಭೇಟಿ ನೀಡಿದ್ದೇವೆ, ಅಲ್ಲಿ ನಾವು ಚುನಾವಣಾ ವಿಭಾಗದ ಅಧಿಕಾರಿಗಳ ಗುಂಪನ್ನು ಭೇಟಿ ಮಾಡಿದ್ದೇವೆ ಮತ್ತು ನಾಗರಿಕರಿಂದ ಡೇಟಾವನ್ನು ಸಂಗ್ರಹಿಸಲು ಚಿಲುಮೆಯೊಂದಿಗೆ ಸಹಿ ಮಾಡಿರುವ ಯಾವುದೇ ಒಪ್ಪಂದದ ಬಗ್ಗೆ ಅವರಿಗೆ ತಿಳಿದಿದೆಯೇ ಎಂದು ಕೇಳಿದೆವು. ಚಿಲುಮೆ ಬಗ್ಗೆ ಅಥವಾ ಅದಕ್ಕೆ ನೀಡಿರುವ ಅನುಮಿಯ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಅವರನ್ನು ಸಂಪರ್ಕಿಸಲು ಅವರು ನಮ್ಮ ಬಳಿ ಹೇಳಿದರು.
ಬಿಬಿಎಂಪಿಯ ಚುನಾವಣಾ ತಹಶೀಲ್ದಾರ್ ಕಚೇರಿಯಲ್ಲಿ ನಾವು ಭೇಟಿಯಾದ ಗುಂಪಿನ ವ್ಯಕ್ತಿಯೊಬ್ಬ, ನಮ್ಮ ತಂಡದ ವರದಿಗಾರ್ತಿಯನ್ನು ಕಟ್ಟಡದಿಂದ ಹೊರಗೆ ಹಿಂಬಾಲಿಸಿದ್ದು, ಚಿಲುಮೆಯ ಬಗ್ಗೆ ಆಕೆಗೆ (ನಮ್ಮ ವರದಿಗಾರ್ತಿಗೆ) ಏನು ಬೇಕು ಎಂದು ತಿಳಿದುಕೊಳ್ಳಲು ಬಳಿಗೆ ಬಂದರು. ಆತ ತನ್ನನ್ನು ಮಾರುತಿ ಎಂದು ಗುರುತಿಸಿಕೊಂಡಿದ್ದು, ಚಿಲುಮೆಗಾಗಿ ಕೆಲಸ ಮಾಡಿರುವ ಬಗ್ಗೆ ಹೇಳಿದ್ದಾನೆ. ಅಧಿಕಾರಿಗಳಿಗಿಂತ ಹೆಚ್ಚಿನ ವಿಷಯಗಳು ಅವರಿಗೆ ತಿಳಿದಿತ್ತು. ಮಾರುತಿ ಈಗ ಎನ್‌ಜಿಒದ ಇತರ ಉನ್ನತ ಕಾರ್ಯನಿರ್ವಾಹಕರೊಂದಿಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ನಮ್ಮೊಂದಿಗಿನ ಸಂವಾದದಲ್ಲಿ, ಮಾರುತಿ ಅತ್ಯಂತ ಆತ್ಮವಿಶ್ವಾಸದಿಂದ ಇದ್ದರು, ಚಿಲುಮೆ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು. ಅವರ ಎಲ್ಲಾ ಮಾಹಿತಿ ಸಂಗ್ರಹಣೆ ಚಟುವಟಿಕೆಯನ್ನು ಪಾರದರ್ಶಕವಾಗಿ ಮತ್ತು ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಮಾರುತಿ ಅವರೊಂದಿಗಿನ ಭೇಟಿಯ ನಂತರ, ನಾವು ಮಹದೇವಪುರ ಇಆರ್‌ಒ ಬಳಿಗೆ ಹೋದೆವು ಆದರೆ ನಮ್ಮ ಪ್ರಶ್ನೆಗಳನ್ನು ಚುನಾವಣಾ ಆಯೋಗದಲ್ಲಿ ಕೇಳುವಂತೆ ಅವರು ಹೇಳಿದರು.
ನಂತರದ ತಿಂಗಳಿನಲ್ಲಿ, ನಾವು ಬಿಬಿಎಂಪಿ ಮತ್ತು ಎಸ್‌ಇಸಿಯ ವಿವಿಧ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡಿದ್ದೇವೆ ಮತ್ತು ಹಲವಾರು ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಅಕ್ರಮ ಸಮೀಕ್ಷೆಯ ಕುರಿತು ನಮಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲವಾದರೂ, ಅಕ್ಟೋಬರ್ ಆರಂಭದ ವೇಳೆಗೆ ನಾವು ಪ್ರಮುಖ ಲೀಡ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ.
ಗೋಲ್ಡನ್ ಲೀಡ್
ತನ್ನ ಸಿಬ್ಬಂದಿಗಳಿಗೆ ವೇತನ ನೀಡದಿರುವ ಕುರಿತು ಮ್ಯಾನ್ ಪವರ್ ಏಜೆನ್ಸಿಯೊಂದು ಚಿಲುಮೆ ವಿರುದ್ಧ ದೂರು ದಾಖಲಿಸಿತ್ತು. ಆ ಸಮಯದಲ್ಲಿ, ಯಾರು ದೂರು ದಾಖಲಿಸಿದ್ದಾರೆ, ಯಾರು ಸ್ವೀಕರಿಸಿದ್ದಾರೆ ಎಂಬುದು ನಮಗೆ ತಿಳಿದಿರಲಿಲ್ಲ. ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಂತಿಮವಾಗಿ ಬಹಿರಂಗಪಡಿಸುವವರೆಗೂ ನಾವು ಬಿಬಿಎಂಪಿ ಮತ್ತು ಎಸ್‌ಇಸಿಯ ಅಧಿಕಾರಿಗಳ ಹಿಂದೆ ಹಲವು ಬಾರಿ ಅಲೆದಾಡಿದ್ದೇವೆ.
ಈ ಮಾಹಿತಿಯೊಂದಿಗೆ ಸಜ್ಜಾದ ನಾವು ನಾವು SEC ಯ ಕುಂದುಕೊರತೆ ನಿವಾರಣಾ ಅಧಿಕಾರಿ ಕೋಟೇಶ್ ಅವರನ್ನು ಸಂಪರ್ಕಿಸಿ ದೂರಿನ ಬಗ್ಗೆ ಕೇಳಿದೆವು. ಚಿಲುಮೆಯ ಚಟುವಟಿಕೆಗಳ ಬಗ್ಗೆ ಎಸ್‌ಇಸಿಗೆ ತಿಳಿದಿದೆ ಮತ್ತು ಇದು “ಆಂತರಿಕ ವಿಷಯ” ಎಂದು ತನಿಖೆಯಲ್ಲಿದೆ ಎಂದು ಅವರು ಹೇಳಿದರು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತರೊಂದಿಗೆ ಮಾತನಾಡುವಂತೆ ತಿಳಿಸಿದರು.
ಅಕ್ಟೋಬರ್ 31ರಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಚಿಲುಮೆ ವಿರುದ್ಧದ ದೂರಿನ ಬಗ್ಗೆ ಕೇಳಿದ್ದೆವು. ರವಿಕುಮಾರ್ ಕೃಷ್ಣಪ್ಪ ಅವರ ಹಿತಾಸಕ್ತಿ ಸಂಘರ್ಷ ಮತ್ತು ಅಕ್ರಮ ದತ್ತಾಂಶ ಸಂಗ್ರಹದ ಹಕ್ಕುಗಳ ಬಗ್ಗೆಯೂ ನಾವು ಅವರನ್ನು ಕೇಳಿದ್ದೇವೆ. ಸಭೆಯಲ್ಲಿ ಉಪಸ್ಥಿತರಿದ್ದ ವಿಶೇಷ ಆಯುಕ್ತ ಎಸ್.ರಂಗಪ್ಪ ಅವರಿಗೆ ಬಿಬಿಎಂಪಿ ಮುಖ್ಯಸ್ಥರು ನಮ್ಮ ಪ್ರಶ್ನೆಗಳನ್ನು ವರ್ಗಾಯಿಸಿದರು.
ಚಿಲುಮೆಯ ಕಾರ್ಯಾಚರಣೆಯನ್ನು ಮಹದೇವಪುರದಿಂದ ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳಿಗೆ ವಿಸ್ತರಿಸುವ ಆಗಸ್ಟ್ 20 ರ ಆದೇಶಕ್ಕೆ ಸಹಿ ಹಾಕಿದ್ದು ತುಷಾರ್ ಗಿರಿನಾಥ್ ಎಂದು ನಮಗೆ ಈಗ ತಿಳಿದಿದೆ. ಆದರೆ ನಮ್ಮ ಸಭೆಯ ದಿನದಂದು ಅವರು ಎನ್‌ಜಿಒಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕಾಗಿ ರಂಗಪ್ಪ ಅವರ ಬಳಿಗೆ ಗಿರಿನಾಥ್ ಪ್ರಶ್ನೆಯನ್ನು ತಿರುಗಿಸಿದ್ದರು. “ನಾವು ಯಾರಿಗಾದರೂ ಮತದಾರರ ಜಾಗೃತಿ ಕೆಲಸವನ್ನು ಹೇಗೆ ನೀಡಬಹುದು? ಅವರು ಈ ಸೇವೆಯನ್ನು ಉಚಿತವಾಗಿ ಹೇಗೆ ಒದಗಿಸಬಹುದು? ಅವರು ಯಾರು, ಅವರು ಹೇಗೆ ಅನುಮತಿ ಪಡೆದರು? ಅವರ ಅನುಮತಿಯನ್ನು ರದ್ದು ಮಾಡಿ” ಎಂದು ರಂಗಪ್ಪರ ಬಳಿ ಗಿರಿನಾಥ್ ಹೇಳಿದರು. ಅಲ್ಲದೆ ಎನ್ ಜಿಒ ವಿರುದ್ಧದ ದೂರಿನ ಪ್ರತಿಯನ್ನು ನಮಗೆ ನೀಡುವಂತೆ ರಂಗಪ್ಪ ಅವರಿಗೆ ಸೂಚಿಸಿದರು. ಮೂರು ದಿನಗಳ ಕಾಲ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಿದ ನಂತರ, ಅಂತಿಮವಾಗಿ ನವೆಂಬರ್ 2 ರಂದು ದೂರಿನ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು.
ಸಮೀಕ್ಷೆ ಕಾರ್ಯಕ್ಕೆ ಚಿಲುಮೆಗೆ ಕೆಲಸಗಾರರನ್ನು ಪೂರೈಸಿದ ಸಮನ್ವಯ ಟ್ರಸ್ಟ್ ಎಂಬ ಗ್ರಾಮೀಣಾಭಿವೃದ್ಧಿ ಎನ್‌ಜಿಒ ಚಿಲುಮೆ ವಿರುದ್ಧ ದೂರು ದಾಖಲಿಸಿದೆ. ಪಾವತಿಸದ ವೇತನದ ಜೊತೆಗೆ, ದತ್ತಾಂಶ ಸಂಗ್ರಹದ ಬಗ್ಗೆಯೂ ದೂರಿನಲ್ಲಿ ಮಾತನಾಡಿದ್ದಾರೆ ಮತ್ತು ಇದು ಕಾನೂನುಬದ್ಧವಾಗಿದೆಯೇ ಎಂದು ತಿಳಿದುಕೊಳ್ಳಲು ದೂರಿನಲ್ಲಿ ಕೋರಿತ್ತು. ಹಲವು ವಾರಗಳ ಪ್ರಯತ್ನದಲ್ಲಿ ನಮಗೆ ದೊರೆತ ಮೊದಲ ಮುನ್ನಡೆ ಇದು. ನಾವು ದೂರುದಾರರನ್ನು ಭೇಟಿಯಾಗಲೇಬೇಕೆಂದು ಮರುದಿನ ಬೆಳಿಗ್ಗೆ, ನಾವು ಸಮನ್ವಯ ಕಛೇರಿಗೆ ಭೇಟಿ ನೀಡಲು ತಯಾರಿ ನಡೆಸುತ್ತಿದ್ದಾಗ, ನಮ್ಮ ಹಿರಿಯ ಸಂಪಾದಕರಲ್ಲಿ ಒಬ್ಬರಿಗೆ ಶ್ರೀನಿವಾಸ್ ಉಚ್ಚಿಲ್ ಎಂಬ ವ್ಯಕ್ತಿ ಫೋನ್ ಕರೆ ಮಾಡಿದರು, ಅವರು ಪ್ರಬಲ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆಂದು ಹೇಳಿಕೊಂಡರು. ನಾವು ರೆಕಾರ್ಡ್ ಮಾಡಿದ ಕರೆಯಲ್ಲಿ, ಬಿಬಿಎಂಪಿ ವಿಶೇಷ ಆಯುಕ್ತ ಎಸ್.ರಂಗಪ್ಪ ಅವರು ನಮ್ಮ ಪತ್ರಕರ್ತರ ಫೋನ್ ನಂಬರ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಶ್ರೀನಿವಾಸ್ ತಾನು ಸಾಮಾಜಿಕ ಕಾರ್ಯಕರ್ತ ಹಾಗೂ ಬಲಪಂಥೀಯ ಮಾಧ್ಯಮ ಸಂಸ್ಥೆಯೊಂದಿಗೆ ಸಂಬಂಧ ಇರುವ ವ್ಯಕ್ತಿ ಎಂದು ಹೇಳಿದರು. ಅವರು “ಹರಿ ಓಂ” ಎಂಬ ಶುಭಾಶಯದೊಂದಿಗೆ ಮಾತನಾಡಲು ಪ್ರಾರಂಭಿಸಿದರು.
ಶ್ರೀನಿವಾಸ್ ಅವರು ತನಿಖಾ ವರದಿಯನ್ನು ಮುಂದುವರಿಸದಂತೆ ನಮ್ಮನ್ನು ತಡೆದರು, ಅಲ್ಲದೆ, ಎನ್‌ಜಿಒಗೆ ನೀಡಲಾದ ಅನುಮತಿಯನ್ನು ರದ್ದುಗೊಳಿಸಲು ಹಿರಿಯ ಸಚಿವರು ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಪ್ರತಿಪಾದಿಸಿದರು. ಲಂಚದ ಸುಳಿವು ನೀಡಿ, ಅವರು ನಮ್ಮ ಮತ್ತು ಚಿಲುಮೆ ಮ್ಯಾನೇಜ್‌ಮೆಂಟ್ ನಡುವೆ ರಾಜಿ ಮಾಡಿಕೊಳ್ಳಲು ಪ್ರಸ್ತಾಪಿಸಿದರು ಮತ್ತು ಆ ದಿನದ ನಂತರ ಸರ್ಕಾರದ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಭೇಟಿಗೆ ನಮ್ಮನ್ನು ಆಹ್ವಾನಿಸಿದರು.
ಅನಿರೀಕ್ಷಿತ ಸಭೆ ಮತ್ತು ಪ್ರಮುಖ ಸಾಕ್ಷಿಯ ಮೊದಲ ತುಣುಕು
ಬಾಲಬ್ರೂಯಿ ಬದಲಿಗೆ, ನಾವು ನವೆಂಬರ್ 3 ರಂದು ಸಮನ್ವಯ ಟ್ರಸ್ಟ್‌ನ ಕಚೇರಿಗೆ ಭೇಟಿ ನೀಡಿದೆವು. ಟ್ರಸ್ಟ್‌ನ ಮುಖ್ಯಸ್ಥೆ ಸುಮಂಗಲಾ ಅವರು ಚಿಲುಮೆ ಮತದಾರರಿಂದ ಡೇಟಾವನ್ನು ಸಂಗ್ರಹಿಸುತ್ತಿದ್ದಾರೆ ಎಂದು ತೋರಿಸಲು ಮೊದಲ ವಸ್ತು ಸಾಕ್ಷ್ಯವನ್ನು ಕಂಡುಹಿಡಿಯಲು ನಮಗೆ ಸಹಾಯ ಮಾಡಿದರು. ಅವರು ನಮಗೆ ಮಹದೇವಪುರದ ನೆರೆಹೊರೆಗಳ ನಕ್ಷೆಗಳ ನಕಲು ಪ್ರತಿಗಳನ್ನು ನೀಡಿದರು, ಅದರಲ್ಲಿ ಸರ್ವೇಯರ್‌ಗಳು ಪ್ರತಿಯೊಂದು ಆಸ್ತಿಯ ಬಗ್ಗೆ ಮಾಹಿತಿಯನ್ನು ಗುರುತಿಸಿದ್ದರು. ಇದು ಸಂಪೂರ್ಣವಾಗಿ ಹೊಸ ಮಾಹಿತಿಯಾಗಿತ್ತು. ಇಲ್ಲಿಯವರೆಗೆ, ಮತದಾರರ ಸಮೀಕ್ಷೆ ಮತ್ತು ಡೇಟಾವನ್ನು ಅಪ್‌ಲೋಡ್ ಮಾಡಿದ ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್ ಬಗ್ಗೆ ಮಾತ್ರ ನಮಗೆ ತಿಳಿದಿತ್ತು.
ನಾವು ಸಮನ್ವಯ ಕಛೇರಿಯಿಂದ ಹೊರಡಲಿರುವಾಗಲೇ, ನಾವು ಯಾರ ಅಕ್ರಮ ಚಟುವಟಿಕೆಗಳನ್ನು ಬಯಲಿಗೆಳೆಯಲು ಪ್ರಯತ್ನಿಸುತ್ತಿದ್ದೇವೋ ಆ ವ್ಯಕ್ತಿಯನ್ನು ಅನಿರೀಕ್ಷಿತವಾಗಿ ಭೇಟಿಯಾದೆವು. ರವಿಕುಮಾರ್ ಕೃಷ್ಣಪ್ಪ ತನ್ನ ಸಹಾಯಕ ಧರ್ಮೇಶ್ ಜೊತೆಗೆ ಸಮನ್ವಯ ಕಚೇರಿಗೆ ಬಂದಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ದೂರನ್ನು ಹಿಂಪಡೆಯುವಂತೆ ಸುಮಂಗಲಾ ಅವರಿಗೆ ಮನವರಿಕೆ ಮಾಡಿಕೊಡಲು ಅಲ್ಲಿದ್ದರು.
ಹೊರಡಬೇಕೋ ಇರಬೇಕೋ ತಿಳಿಯದೆ ಅವರ ಮಧ್ಯೆ ಕುಳಿತಿದ್ದಾಗ ರವಿಕುಮಾರ್ ಮತ್ತು ಧರ್ಮೇಶ್ ಅವರು ಸುಮಂಗಲಾ ಅವರ ಬಳಿ ಮನವಿ ಮಾಡುತ್ತಾ ತಮ್ಮ ರಾಜಕೀಯ ಸಂಬಂಧಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ರವಿಕುಮಾರ್ ಅವರು ನಮ್ಮ ಪತ್ರಕರ್ತರೊಬ್ಬರನ್ನು ಗುರುತಿಸಿದಾಗ ಆತ ಎಷ್ಟು ಸಂಪರ್ಕ ಹೊಂದಿದ್ದಾರೆ ಎಂಬುದರ ಸುಳಿವು ನಮಗೆ ಸಿಕ್ಕಿತು.
ಅವರು ಹಿಂದೆಂದೂ ಭೇಟಿಯಾಗಿರಲಿಲ್ಲ. ಈ ತನಿಖಾ ಯೋಜನೆಗಾಗಿ ವರದಿ ಮಾಡುವ ಸಂದರ್ಭದಲ್ಲಿ ನಮ್ಮ ವರದಿಗಾರರು ತಮ್ಮ ಪೂರ್ಣ ಹೆಸರನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ, ಹಾಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ವರದಿಗಾರರನ್ನು ಪತ್ತೆ ಹಚ್ಚಿರುವುದೂ ಅಸಾಧ್ಯ. ತನಿಖೆಗಾಗಿ ನಾವು ಸಂಪರ್ಕಿಸಿದ ಅಧಿಕಾರಿಗಳು ಯಾರೋ ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ತೋರಿಸಿರಬೇಕು, ಅಲ್ಲಿಂದ ವರದಿಗಾರರನ್ನು ರವಿಕುಮಾರ್ ಪತ್ತೆ ಹಚ್ಚಿರಬೇಕು ಎಂದು ನಮಗೆ ಅನಿಸಿತು.
ಮಾತುಕತೆಯ ಒಂದು ಹಂತದಲ್ಲಿ ರವಿಕುಮಾರ್, 2014ರ ಚುನಾವಣೆಯ ಪೂರ್ವದಲ್ಲಿ ಇಂತಹದ್ದೇ ಸರ್ವೆ ಕಾರ್ಯಕ್ಕೆ ನನ್ನನ್ನು ಬಂಧಿಸಲಾಗಿದೆ ಎಂದು ಹೇಳಿದ ರವಿಕುಮಾರ್, ತಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಕಾರಣಕ್ಕೆ ಬಿಡುಗಡೆಯಾಗಿದ್ದೆ ಎಂದು ಬಡಾಯಿ ಕೊಚ್ಚಿಕೊಂಡರು. ಮತದಾರರ ಡೇಟಾವನ್ನು ಸಂಗ್ರಹಿಸುವುದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಎಂದು ಅವರು ನಮಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.
ಸಮನ್ವಯದಿಂದ ಚಿಲುಮೆಗಾಗಿ ನೇಮಕಗೊಂಡಿದ್ದ ಕ್ಷೇತ್ರಕಾರ್ಯಕರ್ತರೊಬ್ಬರನ್ನು ಸಂಪರ್ಕಿಸಿದೆವು. ಅವರು ಕಾರ್ಮಿಕರ ಭೀಕರ ಸ್ಥಿತಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದರು ಮತ್ತು ಅತಿಥಿಗಳ ವಸತಿ ಸೌಕರ್ಯಗಳಿಗೆ ಸಾಮರ್ಥ್ಯವನ್ನು ಮೀರಿ ಅವರನ್ನು ಹೇಗೆ ತುಂಬಲಾಯಿತು ಎಂಬುದನ್ನು ವಿವರಿಸಿದರು. ತೀವ್ರವಾಗಿ ಕೆಲಸ ಮಾಡಿದ ನಂತರ ಅನೇಕರಿಗೆ ಸಂಬಳ ನೀಡಲಾಗಿಲ್ಲ ಎಂದು ಅವರು ಹೇಳಿದರು. ಹೂಡಿಯ ಒಂದು ಪ್ರದೇಶಕ್ಕೆ ಅವರು ನಮಗೆ ನಿರ್ದೇಶನಗಳನ್ನು ನೀಡಿದರು, ಅಲ್ಲಿ ಅವರು ಹಲವಾರು ಪಿಜಿ ವಸತಿಗೃಹಗಳಲ್ಲಿ ಚಿಲುಮೆ ಕೆಲಸಗಾರರಿದ್ದಾರೆ ಎಂದು ಹೇಳಿದರು. “ಸರ್ವೆ ಜನರು ಎಲ್ಲಿ ಉಳಿದುಕೊಂಡಿದ್ದಾರೆ ಎಂದು ಯಾರನ್ನಾದರೂ ಕೇಳಿ ಮತ್ತು ಅವರು ನಿಮಗೆ ತಿಳಿಸುತ್ತಾರೆ” ಎಂದು ಅವರು ಹೇಳಿದರು.
ಕ್ಷೇತ್ರಕಾರ್ಯಕರ್ತರ ಸಾಕ್ಷ್ಯವು ನಿರ್ಣಾಯಕವಾಗಿದ್ದರೂ, ಅವರು ನೀಡಿದ ನಕಲಿ BLO ID-ಕಾರ್ಡ್‌ಗಳಂತಹ ನಾವು ಬಳಸಬಹುದಾದ ಯಾವುದೇ ಗಟ್ಟಿಯಾದ ಸಾಕ್ಷ್ಯವನ್ನು ನಮಗೆ ಒದಗಿಸಲು ಸಾಧ್ಯವಾಗಲಿಲ್ಲ. ಚಿಲುಮೆಯಿಂದ ನಿಯೋಜಿಸಲಾದ ತಂಡಗಳಿಂದ ನಕ್ಷೆಗಳನ್ನು ಭರ್ತಿ ಮಾಡಲಾಗಿದೆ ಎಂಬುದನ್ನು ನಾವು ಹೇಗೆ ಸಾಬೀತುಪಡಿಸುತ್ತೇವೆ ಎಂದು ನಮಗೆ ಖಚಿತವಾಗಿರಲಿಲ್ಲ.
ಮುಂದುವರೆಯುತ್ತದೆ….