
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ ಎಸ್.ಎಂ ಕೃಷ್ಣ, 1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆಗೆ ಪದಾರ್ಪಣೆ ಮಾಡಿದ್ರು. ಸುಮಾರು 50 ವರ್ಷಗಳ ಕಾಲ ವಿವಿಧ ಹಂತಗಳಲ್ಲಿ ಆಡಳಿತ ನಿರ್ವಹಣೆ ಮಾಡಿದ್ದಾರೆ. ವಯಸ್ಸಿನ ಕಾರಣಕ್ಕೆ ಯುಪಿಎ-2 ಅವಧಿಯಲ್ಲಿ ಮಂತ್ರಿ ಸ್ಥಾನದಿಂದ ಕೈಬಿಡಲಾಗಿತ್ತು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಗಳ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದ ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಎಸ್.ಎಂ ಕೃಷ್ಣ ಕೂಡ ಒಬ್ಬರು.

ಕೇಂದ್ರ ಸರ್ಕಾರದಲ್ಲಿ ರಾಜ್ಯಖಾತೆ ಸಚಿವರಾಗಿ, ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವರಾಗಿ, ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ, ರಾಜ್ಯದ ಮುಖ್ಯಮಂತ್ರಿ ಆಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆಡಳಿತ ನಡೆಸಿದ ಎಲ್ಲಾ ಖಾತೆಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬೆಂಗಳೂರಿನ ಪೀಣ್ಯಾ ಕೈಗಾರಿಕಾ ಪ್ರದೇಶ ಸ್ಥಾಪನೆ, ಬೆಂಗಳೂರು ಐಟಿ ಹಬ್ ಆಗಿ ಬೆಳೆಸಲು ಆದ್ಯತೆ ನೀಡಿದ್ದು ಎಸ್.ಎಂ ಕೃಷ್ಣ ಅವರ ದೂರದೃಷ್ಟಿಗೆ ಸಾಕ್ಷಿ ಎನ್ನಬಹುದು.

ಉತ್ತಮ ಆಡಳಿತಗಾರ ಎನ್ನುವುದನ್ನು ಎಸ್.ಎಂ ಕೃಷ್ಣ ತನ್ನ ಆಡಳಿತಾವಧಿಯಲ್ಲಿ ಸಾಧಿಸಿ ತೋರಿಸಿದ್ರು. ಚತುರ ಮಾತುಗಾರನಾಗಿದ್ದ ಎಸ್.ಎಂ ಕೃಷ್ಣ, ಬಹುತೇಕ ಗ್ರಾಂಥಿಕ ಭಾಷೆಯನ್ನು ಬಳಸುತ್ತಿದ್ದ ಎಸ್.ಎಂ ಕೃಷ್ಣ, ಎಂದೂ ಎದುರಾಳಿಗಳ ವಿಚಾರದಲ್ಲಿ ಕೀಳು ಮಟ್ಟದ ಪದ ಪ್ರಯೋಗ ಮಾಡಿದವರಲ್ಲ. ರಾಜಕಾರಣದಲ್ಲಿ ಸ್ಪಷ್ಟ ನಿಲುವಿನ ದಿಟ್ಟ ರಾಜಕಾರಣಿ ಆಗಿದ್ದ ಎಸ್.ಎಂ ಕೃಷ್ಣ, ಟೆನ್ನಿಸ್ ಆಟದ ಜೊತೆ ಜೊತೆಗೆ ಸಂಗೀತ ಪ್ರೇಮಿಯಾಗಿದ್ದರು.
ಬೆಂಗಳೂರು ನಗರಕ್ಕೆ ಹೊಸ ಬ್ರ್ಯಾಂಡ್ ಇಮೇಜ್ ಕೊಡಿಸಿದ ಎಸ್.ಎಂ.ಕೃಷ್ಣ, ಭಾರತದ ‘ಸಿಲಿಕಾನ್ ಸಿಟಿ’ಯಾಗಿ ಬೆಂಗಳೂರು ಪರಿವರ್ತನೆ ಮಾಡಿದ ಹರಿಕಾರ ಎನ್ನಬಹುದು. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನ ಬೀಜ ಬಿತ್ತಿದ್ದ ಎಸ್.ಎಂ.ಕೃಷ್ಣ, ಹೈದ್ರಾಬಾದ್ ನಗರದ ಜೊತೆಗೆ ಐಟಿ-ಬಿಟಿಯಲ್ಲಿ ಪೈಪೋಟಿಗೆ ಇಳಿದ ಬೆಂಗಳೂರು, ಹೈದ್ರಾಬಾದನ್ನು ಹಿಂದಿಕ್ಕಿ ಐಟಿ-ಬಿಟಿ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ಏರಲು ಸಹಕಾರಿ ಆಗಿದ್ದರು. ಬೆಂಗಳೂರಿನ ಬೆಳವಣಿಗೆಗೆ ಹೊಸ ರೂಪವನ್ನು ನೀಡಿದ್ದ ಎಸ್.ಎಂ.ಕೃಷ್ಣ, ಐಟಿ ಪಾರ್ಕ್‌ಗಳ ಜೊತೆಗೆ ವಾರ್ಡ್‌ಗೊಂದು ಪಾರ್ಕ್‌ಗೂ ಆದ್ಯತೆ ನೀಡಿದ್ದರು. ವಿಕಾಸ ಸೌಧ, ಕೆಂಪೇಗೌಡ ಏರ್‌ಪೋರ್ಟ್, ನಮ್ಮ ಮೆಟ್ರೋ ನಿರ್ಮಾಣಕ್ಕೆ ಎಸ್.ಎಂ.ಕೃಷ್ಣ ಶ್ರಮ ಅತ್ಯಧಿಕ.
			
                                
                                
                                