ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣ ಮಾಡಿರುವ, ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶನ ಮಾಡಿರುವ ʼಫಸ್ಟ್ ಸ್ಯಾಲರಿʼ ಫಸ್ಟ್ ಶೋ ಇತ್ತೀಚೆಗೆ ನಡೆಯಿತು. ಮೊದಲ ಪ್ರದರ್ಶನದಲ್ಲಿ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟಿ ಶೃತಿ ಹಾಗೂ ಗುರುಗಳಾದ ಕಮಲಾಕರ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಡಿ.ವಿ.ಸುಧೀಂದ್ರ ಅವರು ನನಗೆ ಬಹಳ ಆತ್ಮೀಯರು. ಅವರು ಕುಟುಂಬದವರು ಕೂಡ. ಈಗ ಆ ಕುಟುಂಬದ ಮೂರನೇ ಕುಡಿ ವೆಂಕಟೇಶ್ ಅವರ ಪುತ್ರ ಪವನ್ ವೆಂಕಟೇಶ್, ʼಫಸ್ಟ್ ಸ್ಯಾಲರಿʼ ಕಿರುಚಿತ್ರವನ್ನು ನಿರ್ದೇಶಿಸುವ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ. ಕಿರುಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಕಲಾವಿದರು ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ಹುಡುಗನಿಗೆ ಉತ್ತಮ ಅವಕಾಶಗಳು ಸಿಗಲಿ ಎಂದು ಹಾರೈಸಿದರು.

ನಾನು ಡಿ.ವಿ.ಸುಧೀಂದ್ರ ಅವರ ನಿರ್ಮಾಣದ ʼನಗುನಗುತಾ ನಲಿʼ ಚಿತ್ರದಲ್ಲಿ ಅಭಿನಯಿಸಿದ್ದೆ. ಇಂದು ಅವರ ಕುಟುಂಬದ ಮೂರನೇ ತಲೆಮಾರಿನ ಹುಡುಗ ಪವನ್ ಕಿರುಚಿತ್ರ ನಿರ್ಮಾಣ ಮಾಡಿದ್ದಾನೆ. ತಾಯಿ – ಮಗನ ಸೆಂಟಿಮೆಂಟ್ ಸನ್ನಿವೇಶಗಳು ಮನಸ್ಸಿಗೆ ಬಹಳ ಹತ್ತಿರವಾಯಿತು. ಕಣ್ಣಂಚಲಿ ನೀರು ತರಿಸಿತ್ತು ಎಂದು ತಿಳಿಸಿದ ನಟಿ ಶ್ರುತಿ ಅವರು ತಮ್ಮ ʼಫಸ್ಟ್ ಸ್ಯಾಲರಿʼ ಐನೂರು ರೂಪಾಯಿಗಳು ಎಂದು ನೆನಪಿಸಿಕೊಂಡರು.

ಸುಧೀಂದ್ರ ವೆಂಕಟೇಶ್ ಮಾತನಾಡಿ, ನಮ್ಮ ಚಿಕ್ಕಪ್ಪ ಡಿ.ವಿ.ಸುಧೀಂದ್ರ ಅವರು ಪಾಲುದಾರಿಕೆಯಲ್ಲಿ ಆರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಈಗ ನಾನು ಮೊದಲ ಬಾರಿಗೆ ಈ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ. ಮಗ ಪವನ್ ಹಾಗೂ ಸ್ನೇಹಿತರು ಒಂದೊಳ್ಳೆ ಕಿರುಚಿತ್ರ ಮಾಡುತ್ತಿದ್ದೇವೆ ಎಂದು ಹೇಳಿದಾಗ ನಾನು ಅವರ ಜೊತೆಗೆ ನಿಂತೆ. ಕಿರುಚಿತ್ರ ಅವರು ಹೇಳಿದ ಹಾಗೆ ಚೆನ್ನಾಗಿ ಮಾಡಿದ್ದಾರೆ. ಸಮಾರಂಭಕ್ಕೆ ಬಂದು ಪ್ರೋತ್ಸಾಹ ನೀಡಿ ಹಾರೈಸಿದ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರಿಗೆ, ನಟಿ ಶ್ರುತಿ ಅವರಿಗೆ, ಗುರುಗಳಿಗೆ ಹಾಗೂ ಇಡೀ ಮಾಧ್ಯಮದ ಬಳಗಕ್ಕೆ ಧನ್ಯವಾದ ಎಂದರು.

ನಿರ್ದೇಶಕ ಪವನ್ ವೆಂಕಟೇಶ್ ಮಾತನಾಡಿ, ʼಫಸ್ಟ್ ಸ್ಯಾಲರಿʼ ನನ್ನ ಗೆಳೆಯ ವಿಜಯ್ ಶಿವಕುಮಾರ್ ಅವರು ಬರೆದ ಕಥೆ. ಈ ಚಿತ್ರದಲ್ಲಿ ಅವರೇ ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ. ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ, ರಕ್ಷಿತ್ ಇದರಲ್ಲಿ ನಟಿಸಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ರಿಚರ್ಡ್ ಡ್ಯಾನಿಯಲ್ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಮನೋಜ್ ಕುಮಾರ್ ಮತ್ತು ರವಿ ಸಾಸನೂರು ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. ನಾನು ನಿರ್ದೇಶಕನಾಗುವ ಕನಸನ್ನು ನನ್ನ ತಂದೆ ಸುಧೀಂದ್ರ ವೆಂಕಟೇಶ್ ಅವರು ಈ ಕಿರುಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಈಡೇರಿಸಿದ್ದಾರೆ. ಹಿರಿಯರಾದ ರಾಕ್ ಲೈನ್ ವೆಂಕಟೇಶ್ ಅವರು, ನಟಿ ಶ್ರುತಿ ಅವರು ಹಾಗೂ ಗುರುಗಳಾದ ಕರುಣಾಕರ್ ಅವರು ಬಂದು ಹಾರೈಸಿದ್ದಾರೆ. ಆಗಮಿಸುದ ಗಣ್ಯರಿಗೆ ಹಾಗೂ ಮಾಧ್ಯಮದವರಿಗೆ ಅನಂತ ಧನ್ಯವಾದಗಳು ಎಂದು ಹೇಳಿದರು.

ನಾನು ಕಣ್ಣಾರೆ ಕಂಡ ಅನೇಕ ಸನ್ನಿವೇಶಗಳೇ ಈ ಕಥೆಗೆ ಸ್ಪೂರ್ತಿ ಎಂದು ಮಾತನಾಡಿದ ಕಥೆಗಾರ ಹಾಗೂ ನಟ ವಿಜಯ್ ಶಿವಕುಮಾರ್, ಈ ಕಥೆ ಕೇಳಿದ ಪವನ್ ವೆಂಕಟೇಶ್ ಕಥೆ ಚೆನ್ನಾಗಿದೆ ನಾನೇ ನಿರ್ದೇಶನ ಮಾಡುತ್ತೇನೆ ಎಂದರು. ಸುಧೀಂದ್ರ ವೆಂಕಟೇಶ್ ಅವರು ನಿರ್ಮಾಣ ಮಾಡಿದರು. ನಮ್ಮ ಈ ಮೊದಲ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು. ಕಿರುಚಿತ್ರದಲ್ಲಿ ನಟಿಸಿರುವ ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್ ಸಹ ನಿರ್ದೇಶಕರಾದ ಮನೋಜ್ ಕುಮಾರ್, ರವಿ ಸಾಸನೂರ್ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಮುಂತಾದವರು ʼಫಸ್ಟ್ ಸ್ಯಾಲರಿ ಬಗ್ಗೆ ಮಾತನಾಡಿದರು.












