ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ನಡೆದ ಶೀತಲ ಸಮರಕ್ಕೆ ಬ್ರೇಕ್ ಹಾಕಿದ ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಉಪಾಹಾರ ಕೂಟ ಜೋರಾಗಿದೆ. ಈಗಾಗಲೇ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಮನೆಯಲ್ಲಿ ಉಪಾಹಾರ ಮುಗಿಸಿದ್ದು, ನಾಳೆ ಡಿ.ಕೆ ಶಿವಕುಮಾರ್ ತಮ್ಮ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ.

ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಸಿದ್ದು, ʼಇದು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರು ಸಹೋದರರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನೀವುಗಳು ಸದಾ ಗುಂಪು, ಗುಂಪು ಎಂದು ಬಿಂಬಿಸುತ್ತಿದ್ದೀರಿ. ನಮ್ಮಲ್ಲಿ ಯಾವುದೇ ಗುಂಪಿಲ್ಲ. ನಮ್ಮ ಜೊತೆ 140 ಶಾಸಕರಿದ್ದಾರೆ. ನಾವು ಹುಟ್ಟುವಾಗಲೂ ಒಬ್ಬರೇ, ಸಾಯುವಾಗಲೂ ಒಬ್ಬರೇ. ಪಕ್ಷದ ವಿಚಾರ ಬಂದಾಗ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಈ ಬಗ್ಗೆ ಚಿಂತೆ ಬೇಡʼ ಎಂದು ಹೇಳಿದರು.
ಇನ್ನು ಈ ವಾರ ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ʼನಾನು ಸರ್ವಪಕ್ಷ ಸಭೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತಿದ್ದೇನೆ. ಸಂಸತ್ ಅಧಿವೇಶನ ಆರಂಭವಾಗಿದ್ದು, ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಂಸದರಿಗೆ ಕೆಲವು ಜವಾಬ್ದಾರಿಗಳ ಬಗ್ಗೆ ಹೇಳಬೇಕಿದೆʼ ಎಂದರು.

ಬೆಂಗಳೂರಿನ ಇಂದಿನ ಅಭಿವೃದ್ಧಿಗೆ ಕಾರಣ ಕೆಂಗಲ್ ಹನುಮಂತಯ್ಯ
ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ʼಇಂದು ನಾವೆಲ್ಲರೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನು ಸ್ಮರಿಸುತ್ತಿದ್ದೇವೆ. ವಿಧಾನ ಸೌಧ ಕಟ್ಟಿದವರು ಕೆಂಗಲ್ ಹನುಮಂತಯ್ಯ ಅವರು, ವಿಕಾಸ ಸೌಧ ಕಟ್ಟಿದವರು ಎಸ್.ಎಂ ಕೃಷ್ಣ ಅವರು, ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡರು. ಇವೆಲ್ಲವೂ ಈ ನಾಯಕರು ಬಿಟ್ಟು ಹೋಗಿರುವ ಸಾಕ್ಷಿಗುಡ್ಡೆʼ ಎಂದರು.

ʼಅಂದಿನ ಕಾಲದಲ್ಲಿ ರಾಜಧಾನಿಯನ್ನಾಗಿ ಬೇರೆ ಪ್ರದೇಶವನ್ನು ಆಯ್ಕೆ ಮಾಡಿದ್ದರೆ, ಇಂದು ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನಲ್ಲಿರುವ ಹವಾಮಾನ ಕಂಡು ಇಡೀ ವಿಶ್ವದ ಜನ ಆಕರ್ಷಿತರಾಗುತ್ತಾರೆ. ಸಮುದ್ರದ ಪಕ್ಕದಲ್ಲಿನ ನಗರಗಳಿಗೆ ಆಗುತ್ತಿರುವ ಸಮಸ್ಯೆ ನೀವು ಗಮನಿಸಿದ್ದೀರಿ. ಬೆಂಗಳೂರು ದೇಶದಲ್ಲೇ ಅತ್ಯುತ್ತಮ ಸುರಕ್ಷಿತ ಪ್ರದೇಶ. ಇದಕ್ಕೆ ಮುನ್ನುಡಿ ಬರೆದವರು ಕೆಂಗಲ್ ಹನುಮಂತಯ್ಯನವರು. ನಮಗೆ ಅಧಿಕಾರ ಸಿಕ್ಕಾಗ ಇಂತಹ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕುʼ ಎಂದು ತಿಳಿಸಿದರು.











