ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಟಿಕ ಆಹಾರ ಪಡೆದುಕೊಳ್ಳುವ ಆದೇಶದ ವಿರುದ್ಧ ಗರಂ ಆದ ಸ್ವತಃ ಸ್ಪೀಕರ್ ಕಾಗೇರಿ, “ಗರ್ಭಿಣಿಯರು, ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಿಕೊಂಡು ಬರಬೇಕು ಎಂದರೆ ಹೇಗೆ? ಅದು ಸಾಧ್ಯ ಆಗುತ್ತಾ ಇಲ್ಲವೋ ಎಂಬುದು ಸಾಮಾನ್ಯ ಜ್ಞಾನಕ್ಕೂ ಬರುವುದಿಲ್ಲವೇ? ಎಂದು ಸಚಿವರಿಗೆ ಪ್ರಶ್ನಿಸಿದ್ದಾರೆ.
ವಿಧಾಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಶೃಂಗೇರಿ ಶಾಸಕ ರಾಜೇಗೌಡ, “ಸರ್ಕಾರದ ಈ ನಿಯಮದಿಂದಾಗಿ ಮಲೆನಾಡು ಭಾಗದ ಗರ್ಭಿಣಿಯರು, ಬಾಣಂತಿಯರು 2-3 ಕಿ.ಮೀ ಮೀಟರ್ ಊಟಕ್ಕಾಗಿ ಹೋಗಬೇಕಾಗುತ್ತದೆ. ಸರಿ ಇಲ್ಲದ ರಸ್ತೆಯಲ್ಲಿ ವಾಹನವೇರಿ ಗರ್ಭಿಣಿಯರು ನಿತ್ಯ ಊಟಕ್ಕಾಗಿ ಅಂಗನವಾಡಿ ಕೇಂದ್ರಕ್ಕೆ ಬರಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಳಪ್ಪ ಆಚಾರ್ ” ಪೌಷ್ಟಿಕ ಆಹಾರವನ್ನು ಮನೆಗೆ ನೀಡಲಾಗುತ್ತಿತ್ತು. ಆದರೆ ಗರ್ಭಿಣಿಯರಿಗೆ ಕೊಡುವ ಪೌಷ್ಟಿಕ ಆಹಾರ ಅವರಿಗೆ ಲಭ್ಯವಾಗಲ್ಲ, ಬದಲಾಗಿ ಮನೆಯಲ್ಲಿ ಇದ್ದವರು ಹಂಚಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ವರದಿ ಆಧಾರದಲ್ಲಿ 2017ರಲ್ಲಿ ನಿಯಮ ಬದಲಾವಣೆ ಮಾಡಲಾಗಿದೆ” ಎಂದು ಉತ್ತರಿಸಿದರು.
ಯಾವ ವರದಿ ಯಾವ ಕಾರಣಕ್ಕಾಗಿ ಕೊಟ್ಟಿದ್ದಾರೋ ಗೊತ್ತಿಲ್ಲ. ಬಾಣಂತಿಯರು ಹಾಸಿಗೆಯಿಂದ ಏಳಲು ಎಷ್ಟು ಸಮಯ ಬೇಕು ಎಂದು ಗೊತ್ತಿದೆ ನಮಗೆಲ್ಲಾ. ಅವರಿಗೆ ಅಂಗನವಾಡಿ ಬಂದು ಊಟ ಮಾಡಿ ಹೋಗಿ ಎಂದರೆ ಹೇಗೆ? ಅದು ಸಾಧ್ಯ ಆಗುತ್ತಾ ಇಲ್ಲವೋ ಎಂಬುದು ಸಾಮಾನ್ಯ ಜ್ಞಾನಕ್ಕೂ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.
ಈ ವರದಿಯನು ಸರಿ ಮಾಡಿ ಎಂದು ಸಚಿವ ಹಾಲಪ್ಪ ಆಚಾರ್ ಗೆ ಸೂಚನೆ ನೀಡಿದ ಸ್ಪೀಕರ್, ಕೇಂದ್ರದ ಗೈಡ್ ಲೈನ್ ಏನಾದರೂ ಇದ್ದರೆ ಅವರಿಗೆ ಬರೆಯಿರಿ. ಕೇಂದ್ರದಲ್ಲಿ ಕೂತುಕೊಂಡವರಿಗೆ ವ್ಯವಹಾರಿಕ ಜ್ಞಾನ ಇಲ್ಲವೇ? ಸೀರಿಯಸ್ಸಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಸೂಚನೆ ನೀಡಿದರು.