ಭವಿಷ್ಯದ ದಿನಗಳ ಆರ್ಥಿಕ ಆಗುಹೋಗುಗಳ ದಿಕ್ಸೂಚಿ ಎನ್ನಲಾಗುವ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ್ದಾರೆ.
ಬಹುಶಃ ಇತಿಹಾಸದಲ್ಲೇ ಎರಡನೇ ಬಾರಿಗೆ (ಮೊದಲ ಬಾರಿ 2014ರಲ್ಲಿ ಮೋದಿಯವರ ಆಡಳಿತದಲ್ಲಿಯೇ!) ಮುಖ್ಯ ಆರ್ಥಿಕ ಸಲಹೆಗಾರರ ಗೈರು ಹಾಜರಿಯಲ್ಲಿ ತಯಾರಾದ ಆರ್ಥಿಕ ಸಮೀಕ್ಷೆ ದೇಶದ ಜಿಡಿಪಿ ಬೆಳವಣಿಗೆ ದರವನ್ನು ಶೇ. 8ರಿಂದ 8.5ರಷ್ಟಕ್ಕೆ ಅಂದಾಜಿಸಿದೆ. ಈ ಬೆಳವಣಿಗೆ ದರ ಪ್ರಸ್ತುತ ವರ್ಷದ ಬೆಳವಣಿಗೆ ದರ(ಶೇ.9.2)ಕ್ಕಿಂತ ಕಡಿಮೆ ಎಂಬುದು ಗಮನಾರ್ಹ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ರಾಷ್ಟ್ರೀಯ ಬ್ಯಾಂಕುಗಳ ನಗದು ಹಿಂತೆಗೆತ, ಸರಕು ಬೇಡಿಕೆ ಮತ್ತು ಸರಬರಾಜು ಸರಪಳಿಯಲ್ಲಿನ ವ್ಯತ್ಯಯಯಿಂದಾಗಿ ಏರುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯ ಕುರಿತು ಸಮೀಕ್ಷೆ ಆತಂಕವನ್ನೂ ವ್ಯಕ್ತಪಡಿಸಿದೆ.
ಆ ಹಿನ್ನೆಲೆಯಲ್ಲಿ ಬಜೆಟ್ ನಲ್ಲಿ ವಿತ್ತ ಸಚಿವರು ಆರ್ಥಿಕ ಸಮೀಕ್ಷೆಯ ಆತಂಕ ಮತ್ತು ನಿರೀಕ್ಷೆಗಳ ಕುರಿತು ಯಾವ ಪ್ರತಿಕ್ರಿಯೆಗಳನ್ನು, ಯಾವ ಮುಂಜಾಗ್ರತಾ ಕ್ರಮಗಳನ್ನು ಮತ್ತು ಯಾವ ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ ಎಂಬ ಕುತೂಹಲ ಇದೆ.
ಆದರೆ, ಮುಖ್ಯ ಆರ್ಥಿಕ ಸಲಹೆಗಾರರಂಥ ತಜ್ಞರ ಮಾರ್ಗದರ್ಶನವಿಲ್ಲದೆ, ಸಲಹೆಸೂಚನೆಗಳಿಲ್ಲದೆ, ವಿಶ್ಲೇಷಣೆ ಇಲ್ಲದೆ ಈ ಬಾರಿಯ ಆರ್ಥಿಕ ಸಮೀಕ್ಷೆ ಸೊರಗಿದೆ. ಅದು ಕೇವಲ ಸರ್ಕಾರದ ಘೋಷಣೆಗಳ ದಾಖಲಾತಿಯಂತಿದೆ. ಸಮೀಕ್ಷೆಯಲ್ಲಿ ನಮೂದಿಸಿರುವ ಅಂಕಿಅಂಶಗಳಿಗೂ ಅದರ ವಿಶ್ಲೇಷಣೆ ಮತ್ತು ವಿವರಗಳಿಗೂ ತಾಳೆಯಾಗುತ್ತಿಲ್ಲ. ಅಂಕಿಅಂಶಗಳು ಹೇಳುತ್ತಿರುವ ವಾಸ್ತವಿಕ ಸಂಗತಿಗಳಿಗೂ ಸಮೀಕ್ಷೆಯ ವಿಶ್ಲೇಷಣೆ ಮತ್ತು ಅಂದಾಜು ವಿವರಗಳಿಗೂ ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಹಾಗೆ ನೋಡಿದರೆ, ಕೇವಲ ಆರ್ಥಿಕ ಸಮೀಕ್ಷೆ ಮಾತ್ರವಲ್ಲದೆ, ಸ್ವತಃ ಬಜೆಟ್ ವಿಷಯದಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಇಂತಹದ್ದೇ ಮಾತುಗಳು ಕೇಳಿಬರುತ್ತಿವೆ. ಬಜೆಟ್ಟಿನ ಅಂಕಿಅಂಶಗಳಿಗೂ ಘೋಷಣೆಗಳಿಗೂ ತಾಳೆಯಾಗದೆ ಸ್ವತಃ ವಿತ್ತ ಸಚಿವರೇ ಮುಜಗರಕ್ಕೀಡಾಗಿ, ಸಂಸತ್ತಿನಲ್ಲಿ ಮತ್ತೆ ಮತ್ತೆ ಸ್ಪಷ್ಟನೆ ನೀಡುವ, ತಿದ್ದುಪಡಿ ಹೇಳಿಕೆ ನೀಡುವ ಪ್ರಸಂಗಗಳು ಕಳೆದ ಆರೇಳು ವರ್ಷಗಳಲ್ಲಿ ಹಲವು ಬಾರಿ ಮರುಕಳಿಸಿವೆ. ಆರ್ಥಿಕ ಸಮೀಕ್ಷೆ, ಬಜೆಟ್, ಆತ್ಮನಿರ್ಭರ ಭಾರತದಂತಹ ವಿಶೇಷ ಪ್ಯಾಕೇಜ್, ಜಿಎಸ್ ಟಿ ಜಾರಿ, ನೋಟು ರದ್ದತಿ, .. ಹೀಗೆ ಆರ್ಥಿಕತೆಗೆ ಸಂಬಂಧಿಸಿದ ಪ್ರತಿ ನೀತಿ- ನಿಲುವಿನಲ್ಲೂ ಮೋದಿಯವರ ಸರ್ಕಾರದ ದ್ವಂದ್ವ, ಗೊಂದಲ, ಯೂಟರ್ನ್, ಸುಳ್ಳು, ದಿಕ್ಕುತಪ್ಪಿಸುವ ತಂತ್ರಗಳು ಮತ್ತೆ ಮತ್ತೆ ಜನರ ಮುಂದೆ ಅನಾವರಣಗೊಳ್ಳುತ್ತಲೇ ಇವೆ. ಎಷ್ಟೋ ಬಾರಿ ನೋಟು ರದ್ದತಿ, ಜಿಎಸ್ ಟಿಯಂತಹ ಸರ್ಕಾರದ ಇಂತಹ ನಡೆಗಳು ದೇಶದ ಜನರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದ್ದರೆ, ಆತ್ಮನಿರ್ಭರ ಭಾರತದಂತಹ ಊಹಿಸಲಸಾಧ್ಯ ಮೊತ್ತದ ಪ್ಯಾಕೇಜುಗಳು ನಗೆಪಾಟಲಿಗೀಡಾಗಿವೆ.
ಅಂದರೆ; ಆರ್ಥಿಕತೆಯ ವಿಷಯದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು, ಯಾವುದೇ ನೀತಿ-ನಿಲುವುಗಳನ್ನು ಕೈಗೊಳ್ಳಲು ಬೇಕಾದ ತಳಮಟ್ಟದ ವಾಸ್ತವಿಕತೆಯ ಅರಿವು ಮತ್ತು ಅದೇ ಹೊತ್ತಿಗೆ ಸವಾಲುಗಳನ್ನು ವಿಶ್ಲೇಷಿಸಿ ಅದಕ್ಕೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಬೇಕಾದ ಅಕಾಡೆಮಿಕ್ ಪರಿಣತಿಗಳ ಕೊರತೆ ಮೋದಿ ಸರ್ಕಾರವನ್ನು ಬಾಧಿಸುತ್ತಿದೆ. ಇಂತಹ ದ್ವಂದ್ವ ಮತ್ತು ಗೊಂದಲಗಳ ಮೂಲ ಇರುವುದೇ ಸ್ವತಃ ಮೋದಿಯವರು ಮತ್ತು ಅವರ ಆಡಳಿತದ ಆಂಟಿ ಇಂಟೆಲೆಕ್ಚುವಲ್ ಧೋರಣೆಯಲ್ಲಿ. ಬುದ್ದಿವಂತರನ್ನು, ಬುದ್ಧಿಜೀವಿಗಳನ್ನು ಲೇವಡಿ ಮಾಡುವ, ತಜ್ಞರನ್ನು ಅವಹೇಳನ ಮಾಡುವ, ವಿಷಯ ಪರಿಣಿತರನ್ನು ಅವಮಾನಿಸುವ ಪರಿಪಾಠವನ್ನು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸಾರ್ವಜನಿಕ ಧೋರಣೆಯಾಗಿ ಬದಲಾಯಿಸಿದ್ದೇ ಪ್ರಧಾನಿ ಮೋದಿಯವರು!
ಹಾಗಾಗಿ ಅಮರ್ತ್ಯಸೇನ್, ರಘುರಾಂ ರಾಜನ್, ಜೀನ್ ಡ್ರಜ್, ಕೌಶಿಕ್ ಬಸು ಅವರಂಥ ಘಟಾನುಘಟಿ ಆರ್ಥಿಕ ತಜ್ಞರುಗಳಿದ್ದರೂ ಮೋದಿಯವರ ಆಡಳಿತ ಅಂತಹವರ ಸಲಹೆ-ಮಾರ್ಗದರ್ಶನ ಪಡೆಯಲು ಸಿದ್ಧವಿಲ್ಲ. ಸ್ವತಃ ತಾನೇ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದ ಅರವಿಂದ್ ಪನಗಾರಿಯಾ, ಅರವಿಂದ್ ಸುಬ್ರಹ್ಮಣ್ಯಂ, ಊರ್ಜಿತ್ ಪಟೇಲ್ ರಂಥವರ ಸಲಹೆಗಳನ್ನು ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆ ಪೈಕಿ ಕೆಲವರಂತೂ ಸರ್ಕಾರದ ಬೌದ್ಧಿಕ ವಿರೋಧಿ ಧೋರಣೆಯ ಕಾರಣಕ್ಕಾಗಿಯೇ ಉನ್ನತ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರನಡೆದರು.
ಕೇವಲ ಆಡಳಿತ ಸಲಹೆಗಾರರ ವಿಷಯದಲ್ಲಿ ಮಾತ್ರವಲ್ಲ; ಮೋದಿಯವರ ಬೌದ್ದಿಕ ವಿರೋಧಿ ಧೋರಣೆ ಸ್ವತಃ ಬಿಜೆಪಿಯ ನಾಯಕರ ವಿಷಯದಲ್ಲಿಯೂ ಢಾಳಾಗಿ ರಾಚುತ್ತದೆ. ಸ್ವತಃ ಬಿಜೆಪಿಯ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಮಹತ್ವದ ಖಾತೆಗಳ ಹೊಣೆಗಾರಿಕೆ ಹೊತ್ತು ಉತ್ತಮ ರೀತಿಯಲ್ಲಿ ಕೊಟ್ಟ ಖಾತೆಗಳನ್ನು ನಿಭಾಯಿಸಿದ ಯಶವಂತ್ ಸಿನ್ಹಾ, ಸುಬ್ರಮಣಿಯನ್ ಸ್ವಾಮಿ, ಜಸ್ವಂತ್ ಸಿಂಗ್ ರಂಥವರನ್ನು ಕೂಡ ಮೋದಿಯವರ ಬುದ್ಧಿವಂತರ ವಿರೋಧಿ ನಡೆ ಮೂಲೆಗುಂಪು ಮಾಡಿತು. ಹಾಗೆ ನೋಡಿದರೆ, 2014ರಲ್ಲಿ ಪ್ರಧಾನಿಯಾಗಿ ಸರ್ಕಾರ ರಚಿಸಿದಾಗ ಮನಮೋಹನ್ ಸಿಂಗ್ ಅವರ ಅವಧಿಯ ಆರ್ಥಿಕ ಸುಧಾರಣೆಗಳು ಹಳಿ ತಪ್ಪದಂತೆ ಆರ್ಥಿಕತೆಯ ವೇಗ ಕಾಯ್ದುಕೊಳ್ಳಲು ಆಗಿನ ಅರುಣ್ ಜೇಟ್ಲಿಗಿಂತ ಸುಬ್ರಮಣಿಯನ್ ಸ್ವಾಮಿ ಉತ್ತಮ ಆಯ್ಕೆಯಾಗಿದ್ದರು. ಆದರೆ, ಸ್ವಾಮಿಯವರ ಬೌದ್ಧಿಕತೆಯ ಬಗೆಗಿನ ಭಯ ಮತ್ತು ಅಲರ್ಜಿಯೇ ಅವರನ್ನು ಸಂಪುಟದಿಂದಲೇ ಹೊರಗಿಟ್ಟಿತು!
ಹಾಗೆ ನೋಡಿದರೆ ಹತ್ತಾರು ಪಕ್ಷಗಳ ಮೈತ್ರಿ ಸರ್ಕಾರದ ಹೊಣೆ ಹೊತ್ತಿದ್ದರೂ ವಾಜಪೇಯಿ ಅವರ ಸಂಪುಟ ದೇಶದ ಅತ್ಯುತ್ತಮ ಸಂಪುಟಗಳಲ್ಲಿ ಒಂದಾಗಿತ್ತು. ಅರುಣ್ ಶೌರಿ, ಅರುಣ್ ಜೇಟ್ಲಿ, ರಾಮ್ ಜೇಠ್ಮಲಾನಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಅವರಂಥ ಬಿಜೆಪಿಯ ಬೌದ್ಧಿಕ ಸ್ಪಷ್ಟತೆ ಮತ್ತು ದೇಶದ ಕುರಿತ ತಳಮಟ್ಟದ ಅರಿವು ಹೊಂದಿದ್ದ ನಾಯಕರ ಜೊತೆಗೆ, ಜಾರ್ಜ್ ಫರ್ನಾಂಡೀಸ್, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಶರದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್, ರಾಮಕೃಷ್ಣ ಹೆಗಡೆ ಯವರಂಥ ಜನಪರ ಕಾಳಜಿಯ ನಾಯಕರನ್ನೂ ಆ ಸಂಪುಟಗಳು ಒಳಗೊಂಡಿದ್ದವು. ಬಿಜೆಪಿಯೇತರವಾದ ಎನ್ ಡಿಎಯ ಮಿತ್ರಪಕ್ಷಗಳ ಅಂಥ ನಾಯಕರನ್ನು ಸಂಪುಟಕ್ಕೆ ಆಯ್ದುಕೊಳ್ಳುವಾಗ ವಾಜಪೇಯಿ ಅವರಿಗೆ ಯಾವ ಬೌದ್ಧಿಕ ಕೀಳರಿಮೆಯಾಗಲೀ, ಭೀತಿಯಾಗಲೀ ಇರಲಿಲ್ಲ. ಹಾಗಾಗಿಯೇ ಅತ್ಯಂತ ವೈವಿಧ್ಯಮಯ ಸೈದ್ಧಾಂತಿಕ ಮತ್ತು ರಾಜಕೀಯ ಹಿನ್ನೆಲೆಯ ಪ್ರತಿಭಾವಂತರು ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು ಮತ್ತು ಆ ಕಾರಣಕ್ಕಾಗಿಯೇ ಆ ಅವಧಿಯಲ್ಲಿ ಬಿಜೆಪಿಯ ಹಿಂದುತ್ವವನ್ನು ಬದಿಗೊತ್ತಿಯೂ ಹಲವು ಜನಪರ ಸಾಧನೆಗಳು ಆಗಿದ್ದವು.
ಆದರೆ, ಮೋದಿಯವರ ದೊಡ್ಡ ಮಿತಿ ಇರುವುದು ಪ್ರತಿಭೆ ಅಥವಾ ಬೌದ್ಧಿಕತೆಯ ಬಗೆಗಿನ ಕೀಳರಿಮೆ ಮತ್ತು ಭೀತಿಯಲ್ಲಿ. ಹಾಗಾಗಿಯೇ ತಮ್ಮದೇ ಪಕ್ಷದಲ್ಲಿನ ಪ್ರತಿಭಾವಂತರನ್ನು ಕೂಡ ಅವರ ವ್ಯವಸ್ಥಿತವಾಗಿ ಸಂಪುಟದಿಂದ ಸರ್ಕಾರದಿಂದ ದೂರವಿಟ್ಟರು. ಜೊತೆಗೆ, ಮೋದಿ ಮತ್ತು ಅಮಿತ್ ಶಾ ಜೋಡಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯಲ್ಲಿ ಮಾಡಿದ ಬದಲಾವಣೆ ಕೂಡ ರಾಜಕಾರಣಕ್ಕೆ ದೇಶದ ಜನರ ನಾಡಿಮಿಡಿತ ತಿಳಿದಿರಬೇಕು, ದೇಶದ ಸಂವಿಧಾನ, ಕಾನೂನು ವ್ಯವಸ್ಥೆಯ ಅರಿವಿರಬೇಕು. ದೇಶದ ಆರ್ಥಿಕತೆ, ಕೃಷಿಯ ಸಾಮಾನ್ಯ ಜ್ಞಾನವಾದರೂ ಇರಬೇಕು ಎಂಬ ಹಿಂದಿನ ರೂಢಿಗತ ಸಂಗತಿಗಳನ್ನು ತಲೆಕೆಳಗು ಮಾಡಿತು. ಧರ್ಮ ಮತ್ತು ದೇಶದ ಹೆಸರಿನಲ್ಲಿ ಜನರ ನಡುವೆ ದ್ವೇಷ ಬಿತ್ತಿ, ಕಾಂಗ್ರೆಸ್ ಮತ್ತು ನೆಹರು ಮೇಲೆ ಗೂಬೆ ಕೂರಿಸಿ ಎಲ್ಲವನ್ನು ನಿಭಾಯಿಸಬಹುದು ಎಂಬುದನ್ನು ಮೋದಿ-ಶಾ ಜೋಡಿ ಸಾಬೀತು ಮಾಡಿ ತೋರಿಸಿತು. ಹಾಗಾಗಿ ದೇಶದ ಜನರ ಕುರಿತು ಕಾಳಜಿ, ಅರಿವು ಮತ್ತು ಬೌಧ್ಧಿಕ ಜಾಣ್ಮೆಗಳ ಜಾಗದಲ್ಲಿ ದ್ವೇಷ ಭಾಷಣ ಕಲೆ, ಕಟ್ಟುಕತೆಗಳ ಹೆಣೆಯುವ ಚಾಣಾಕ್ಷತನ, ಸುಳ್ಳು ವದಂತಿಗಳನ್ನು ಹಬ್ಬಿಸುವ ಜನರನ್ನು ದಿಕ್ಕುತಪ್ಪಿಸುವ ನಯವಂಚಕತನಗಳೇ ರಾಜಕಾರಣದ ಹೊಸ ಅರ್ಹತೆಗಳಾದವು.
ರಾಜಕೀಯ ಆಯ್ಕೆಯ ಹಂತದಲ್ಲೇ ಮಾನದಂಡಗಳು ಬದಲಾದ ಪರಿಣಾಮವಾಗಿ ಸಂಪುಟದಲ್ಲಿಯೂ ಅದೇ ಮಾನದಂಡಗಳು ಅನಾಯಾಸವಾಗಿ ಅನ್ವಯವಾಗುವುದು ಅನಿವಾರ್ಯವಾಯಿತು. ಹಾಗಾಗಿ ಇಡೀ ಸಂಪುಟದಲ್ಲಿ ಹುಡುಕಿದರೂ ಒಬ್ಬ ಪ್ರತಿಭಾವಂತ ಮತ್ತು ಅದೇ ಹೊತ್ತಿಗೆ ನೈಜ ಜನಪರ ಕಾಳಜಿಯ ಮುಖ ಕಾಣಿಸದ ಬೌದ್ಧಿಕ ದಾರಿದ್ರಯ ಸಂಪುಟವನ್ನು ಆಳತೊಡಗಿತು. ಹಾಗಾಗಿಯೇ ಆತ್ಮನಿರ್ಭರ ಭಾರತ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ರೈತರ ಆದಾಯ 2022ಕ್ಕೆ ದ್ವಿಗುಣ, ವಿಶ್ವಗುರು ಭಾರತ, ಮುಂತಾದ ಆಕರ್ಷಕ ಘೋಷಣೆಗಳು ಪುಂಖಾನುಪುಂಖವಾಗಿ ಹರಿದುಬರುತ್ತವೆ. ಆದರೆ, ವಾಸ್ತವದಲ್ಲಿ ದೇಶದ ಜನ ಬರ್ಬರ ಆಡಳಿತದಲ್ಲಿ ಬೇಯುತ್ತಿದ್ದಾರೆ, ಸಬ್ ಕಾ ಸಾಥ್ ಸಬ್ ಕಾ ವಿನಾಶದ ಆತಂಕದಲ್ಲಿದ್ದಾರೆ ಮತ್ತು ರೈತರ ಆದಾಯ ಅಧೋಗತಿಗಿಳಿದಿದೆ!
ಪೆಟ್ರೋಲ್- ಡೀಸೆಲ್ ಇಂಧನ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗದ ಮತ್ತು ಆ ಬೆಲೆ ಏರಿಕೆಯ ಪರಿಣಾಮಗಳು ದೇಶದ ಆರ್ಥಿಕತೆಯನ್ನು ಅನಿಯಂತ್ರಿಕ ಹಣದುಬ್ಬರದ ರೋಡ್ ರೋಲರ್ ಅಡಿ ಅಪ್ಪಚ್ಚಿ ಮಾಡುತ್ತಿರುವುದನ್ನು ಗ್ರಹಿಸಲಾರದ ಸಂವೇದನಾಹೀನ ಅರ್ಥಸಚಿವೆ ಮತ್ತೊಂದು ಬಜೆಟ್ ಮಂಡಿಸುತ್ತಿದ್ದಾರೆ ಮತ್ತು ತಮ್ಮ ಅಜ್ಞಾನ ಮತ್ತು ದೌರ್ಬಲ್ಯವನ್ನು ಕೂಡ ಸಮರ್ಥಿಸಿಕೊಳ್ಳುವ ಠೇಂಕಾರ ಮೆರೆಯುತ್ತಿದ್ದಾರೆ!
ಇದು ನಿಜವಾಗಿಯೂ ವಾಜಪೇಯಿ ಮತ್ತು ಮೋದಿ ನಡುವಿನ ವ್ಯತ್ಯಾಸವಷ್ಟೇ ಅಲ್ಲ, ‘ಮೇರಾ ಭಾರತ್ ಮಹಾನ್’ ಕನಸಿನ ಅಂದಿನ ಬಿಜೆಪಿ ಮತ್ತು ‘ವಿಶ್ವಗುರು’ ಎಂಬ ಹಗಲುಗನಸಿನ ಇಂದಿನ ಬಿಜೆಪಿ ನಡುವಿನ ಪರಕು ಕೂಡ! ಇದಿಷ್ಟು ಅರ್ಥವಾದರೆ ದೇಶ ಬಂದು ನಿಂತಿರುವುದು ಎಂಥ ಪ್ರಪಾತದ ಅಂಚಿಗೆ ಎಂಬುದು ಅರಿವಾಗದೇ ಇರದು!