ಇಂದಿನ ಒಕ್ಕೂಟದ ಗೃಹ ಮಂತ್ರಿ ಅಮಿತ್ ಷಾˌ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಬಿಜೆಪಿ ಅಧ್ಯಕ್ಷರಾಗಿ ಮತ್ತು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿದ್ದು ನಮಗೆಲ್ಲರಿಗೆ ಗೊತ್ತಿರುವ ಸಂಗತಿ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅಮಿತ್ ಷಾ ಪುತ್ರ ಜಯ್ ಷಾರ ಕೆಲವು ವ್ಯವಹಾರಗಳು ನಾಟಕೀಯ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದು ಕಾಕತಾಳಿಯವಂತೂ ಅಲ್ಲ. ಜಯ್ ಷಾ ವ್ಯವಹಾರಗಳ ಅಭಿವೃದ್ಧಿಯ ಪ್ರಮುಖ ಸಂಗತಿಗಳು ಈ ರೀತಿಯಾಗಿವೆ:
▪️ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ನಂತರದ ವರ್ಷದಲ್ಲಿ ಷಾ ಅವರ ಪುತ್ರನ ಒಡೆತನದ ಕಂಪನಿಯ ವಹಿವಾಟು ೧೬,೦೦೦ ಪಟ್ಟು ಹೆಚ್ಚಾಗಿತ್ತು.
▪️ಅಮಿತ್ ಶಾ ಅವರ ಮಗನ ಒಡೆತನದ ಕಂಪನಿಯ ಆದಾಯವು ಒಂದೇ ವರ್ಷದಲ್ಲಿ ಕೇವಲ ೫೦,೦೦೦ ರೂ.ಗಳಿಂದ ೮೦ˌ೦೦,೦೦,೦೦೦ ರೂ.ಗೆ ಏರಿಕೆಯಾಗಿತ್ತು.
▪️ಅವರ ವ್ಯವಹಾರವು ಮುಖ್ಯವಾಗಿ ಷೇರು ವ್ಯಾಪಾರವಾಗಿದ್ದು, ಪಿಎಸ್‌ಯು ಸಾಲದೊಂದಿಗೆ ಆರಭಗೊಂಡು ಅದು ಈಗ ವಿಂಡ್‌ಮಿಲ್ ಉತ್ಪಾದನೆಯತ್ತ ತಿರುಗಿದೆ.
ಅಮಿತ್ ಷಾ ಅವರ ಮಗನ ಆಸ್ತಿ ಬಹುಗುಣಗೊಂಡದ್ದು ಆತನ ಪ್ರಾಮಾಣಿಕತೆ ಮತ್ತು ಕಾನೂನು ಬದ್ಧ ವ್ಯವಹಾರಗಳಿಂದˌ ಆ ಕುರಿತು ಯಾವುದೇ ವರದಿ ಮಾಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುವ ಹಕ್ಕನ್ನು ಅವರು ಕಾಯ್ದಿರಿಸುತ್ತಾರೆ ಎಂದು ಜಯ್ ಷಾ ಪರ ವಕೀಲರು “ದಿ ವೈರ್” ವೆಬ್ ಜರ್ನಲ್ಗೆ ೨೦೧೬-೧೭ ರಲ್ಲಿ ಎಚ್ಚರಿಕೆ ನೀಡಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮತ್ತು ಅಮಿತ್ ಯಾ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಏರಿದ ನಂತರದ ವರ್ಷದಲ್ಲಿ ಅಮಿತ್ ಷಾ ಪುತ್ರ ಜಯ್ ಅಮಿತ್ ಭಾಯ್ ಷಾ ಒಡೆತನದ ಕಂಪನಿಯ ವಹಿವಾಟು ೧೬,೦೦೦ ಪಟ್ಟು ಹೆಚ್ಚಾಗಿತ್ತು.
ಕಂಪನಿಯ ಬ್ಯಾಲೆನ್ಸ್ ಶೀಟ್‌ಗಳು ಮತ್ತು ಸೂಕ್ತ ಮೂಲಗಳಿಂದ ಪಡೆದ ವಾರ್ಷಿಕ ವರದಿಗಳು ಮಾರ್ಚ್ ೨೦೧೩ ಮತ್ತು ೨೦೧೪ ರ ಹಣಕಾಸು ವರ್ಷಗಳ ಅಂತ್ಯಕ್ಕೆ ಷಾ ಅವರ ಟೆಂಪಲ್ ಎಂಟರ್‌ಪ್ರೈಸ್ ಪ್ರೈವೇಟ್ ಲಿಮಿಟೆಡ್ ಅತ್ಯಲ್ಪ ಹಣಕಾಸು ಚಟುವಟಿಕೆಯಲ್ಲಿ ತೊಡಗಿತ್ತು ಮತ್ತು ಕ್ರಮವಾಗಿ ರೂ. ೬,೨೩೦ ಮತ್ತು ರೂ. ೧,೭೨೪ ರಷ್ಟು ನಷ್ಟವನ್ನು ದಾಖಲಿಸಿತ್ತು ಎಂದು ಅಂದು ದಿ ವೈರ್ ಪತ್ರಿಕೆ ಬಹಿರಂಗಗೊಳಿಸಿತ್ತು. ೨೦೧೪-೧೫ ರಲ್ಲಿ ಮತ್ತು ೨೦೧೫-೧೬ ರಲ್ಲಿ ರೂ. ೮೦.೫ ಕೋಟಿ ವಹಿವಾಟಿಗೆ ಜಿಗಿಯುವ ಮೊದಲು ಅದು ಕೇವಲ ರೂ. ೫೦,೦೦೦ ಆದಾಯದ ಮೇಲೆ ರೂ. ೧೮,೭೨೮ ಲಾಭವನ್ನು ತೋರಿಸಿತ್ತು.
ಟೆಂಪಲ್ ಎಂಟರ್‌ಪ್ರೈಸ್‌ನ ಆದಾಯದಲ್ಲಿ ಆಶ್ಚರ್ಯಕರವಾದ ಏರಿಕೆ ಕಂಡುಬಂದಿದ್ದು, ಸಂಸ್ಥೆಯು ರಾಜ್ಯಸಭಾ ಸಂಸದ ಮತ್ತು ರಿಲೈಯನ್ಸ್ ಕಂಪನಿಯ ಉನ್ನತ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಪರಿಮಲ್ ನಾಥ್ವಾನಿ ಅವರ ಅಳಿಯ ರಾಜೇಶ್ ಖಂಡ್ವಾಲಾ ಅವರ ಒಡೆತನದ ಹಣಕಾಸು ಸೇವಾ ಸಂಸ್ಥೆಯಿಂದ ೧೫.೭೮ ಕೋಟಿ ರೂ. ಗಳ ಜಾಮೀನು ರಹಿತ ಸಾಲವನ್ನು ಪಡೆದ ನಂತರ ಎನ್ನುವುದು ಗಮನಾರ್ಹ ಎನ್ನುತ್ತವೆ ದಿ ವೈರ್ ವರದಿಗಳು. ಅದಾದ ಒಂದು ವರ್ಷದ ನಂತರ, ಅಕ್ಟೋಬರ್ ೨೦೧೬ ರಲ್ಲಿ, ಆದಾಗ್ಯೂ, ಜಯ್ ಷಾ ಅವರ ಕಂಪನಿಯು ತನ್ನ ವ್ಯವಹಾರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಅದರ ನಿರ್ದೇಶಕರ ವರದಿಯ ಪ್ರಕಾರ ಕಂಪನಿಯ ನಿವ್ವಳ ಮೌಲ್ಯವು “ಸಂಪೂರ್ಣವಾಗಿ ಕುಸಿದಿದೆ” ಎಂದು ಘೋಷಿಸಿತ್ತು. ಏಕೆಂದರೆ ಅದು ಆ ವರ್ಷ ಮತ್ತು ಅದರ ಹಿಂದಿನ ವರ್ಷಗಳಲ್ಲಿ ೧.೪ ಕೋಟಿ ರೂ. ನಷ್ಟ ಅನುಭವಿಸಿತ್ತು ಎಂದು ಹೇಳಲಾಗಿತ್ತು.
ಕಂಪನಿ ಘೋಷಿಸಿದ ವರದಿಗಳ ಆಧಾರದಲ್ಲಿ ಟೆಂಪಲ್ ಎಂಟರ್‌ಪ್ರೈಸ್ ಮತ್ತು ಅವರ ಇತರ ವ್ಯಾಪಾರ ಉದ್ಯಮಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ವಿವರಗಳನ್ನು ಕೋರಿ ಅಂದು ದಿ ವೈರ್ ಪತ್ರಿಕೆ ಜಯ್ ಷಾಗೆ ಒಂದು ಪ್ರಶ್ನಾವಳಿಯನ್ನು ಕಳುಹಿಸಿತ್ತು. ಅದಕ್ಕೆ ಅವರು ತಾವು ಪ್ರವಾಸದಲ್ಲಿರುವುದರಿಂದ ತಕ್ಷಣಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಆದಾಗ್ಯೂ ಮಾರನೇ ದಿನ, ಷಾ ಅವರ ವಕೀಲ ಮಾಣಿಕ್ ಡೋಗ್ರಾ ಅವರು “ಯಾವುದೇ ತಪ್ಪು ಅಥವಾ ಸತ್ಯವಲ್ಲದ ವರದಿಗಳು ಪ್ರಕಟಿಸಿದರೆ ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಎಂದು ದಿ ವೈರ್ ಪತ್ರಿಕೆಗೆ ಎಚ್ಚರಿಸಿದ್ದರೆಂದು ಅಂದು ದಿ ವೈರ್ ಪತ್ರಿಕೆ ಹೇಳಿಕೊಂಡಿತ್ತು.
ಕಂಪನಿಯ ಅಘೋಷಿತ ವರದಿಗಳು ಆದಾಯˌ ಖರ್ಚು ಮತ್ತು ಸಾಲಗಳ ಕುರಿತು ಹೆಚ್ಚಿನ ಸ್ಪಷ್ಟತೆ ತೋರಿಸುತ್ತಿಲ್ಲ. ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ರಾಜಕಾರಣಿಗಳು ಮತ್ತವರ ಸಂಬಂಧಿಕರ ವ್ಯಾಪಾರ ವ್ಯವಹಾರಗಳು ಸಾರ್ವಜನಿಕರ ಪರಿಶೀಲನೆಗೆ ಒಳಗಾಗುವುದು ಸಾಮಾನ್ಯ ˌ ಅದರಲ್ಲೂ ವಿಶೇಷವಾಗಿ ರಾಜಕೀಯ ಚಕ್ರದ ಏರಿಳಿತಗಳ ಪ್ರಕಾರ ರಾಜಕಾರಣಿಗಳ ಅದೃಷ್ಟದಲ್ಲಿ ಹಠಾತ್ ಬದಲಾವಣೆಯ ಸಂದರ್ಭಗಳಲ್ಲಿ ಸಾರ್ವಜನಿಕರ ಕುತೂಹಲ ಹೆಚ್ಚುವುದು ಸಾಮಾನ್ಯ. ಉದಾಹರಣೆಗೆ, ಯುಪಿಎ-II ಅವಧಿಯಲ್ಲಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಸಾಲಗಳ ಆಧಾರದ ಮೇಲೆ ತಮ್ಮ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಹೇಗೆ ಬೆಳೆಸಿದರು ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಕಾಂಗ್ರೆಸ್ ಪಕ್ಷವು ಮೂರು ವರ್ಷಗಳು ತೆಗೆದುಕೊಂಡಿತ್ತು. ರಿಯಲ್ ಎಸ್ಟೇಟ್ ದೈತ್ಯ DLF ಕಂಪನಿಯಿಂದ ಜಾಮೀನು ರಹಿತ ಮುಂಗಡ ಮತ್ತು ಸಾಲವನ್ನು ವಾದ್ರಾ ಪಡೆದಿದ್ದರು. ಅಂದು ವಾದ್ರಾ ಅವರ ವ್ಯವಹಾರಗಳ ಕುರಿತು ಇದೇ ಬಿಜೆಪಿ ತೀವ್ರವಾಗಿ ಟೀಕೆಗಳನ್ನು ನಡೆಸಿದ್ದರ ಬಗ್ಗೆ ದಿ ವೈರ್ ಪತ್ರಿಕೆ ಸ್ಮರಿಸಿಕೊಂಡಿದೆ.
ಜಯ್ ಷಾ ಅವರು ಸಲ್ಲಿಸಿದ ವರದಿಗಳಿಂದ ಪಡೆದ ಮಾಹಿತಿಯನ್ನು ಅವರ ವಕೀಲರು ವಿವಾದವಾಗಿಸದಿದ್ದರೂ ಸಾರ್ವಜನಿಕರ ಗಮನಕ್ಕೆ ಮತ್ತು ಪರೀಕ್ಷೆಗೆ ಸಕ್ರಿಯಗೊಳಿಸಲು ಕಂಪನಿಗಳು ಆರ್‌ಒಸಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಿದ ವ್ಯವಹಾರಿಕ ಮಾಹಿತಿಗಳು ಕಂಪನಿಯ ಒಡೆಯರಾದ ಷಾ ಅವರು ದಿ ವೈರ್ ಪತ್ರಿಕೆಯೊಂದಿಗೆ ಹಂಚಿಕೊಂಡರೆ ಸಂತೋಷವೆಂದು ಪತ್ರಿಕೆ ಅಭಿಪ್ರಾಯ ಪಟ್ಟಿತ್ತು. ಟೆಂಪಲ್ ಎಂಟರ್‌ಪ್ರೈಸ್ ಅನ್ನು ೨೦೦೪ ರಲ್ಲಿ ಜಯ್ ಷಾ ಮತ್ತು ಜಿತೇಂದ್ರ ಷಾ ಅವರು ಅದರ ನಿರ್ದೇಶಕರಾಗಿ ಆರಂಭಿಸಿದ್ದರು. ಅಂದಿನ ಬಿಜೆಪಿ ಅದ್ಯಕ್ಷ ಅಮಿತ್ ಷಾ ಪತ್ನಿ ಸೋನಾಲ್ ಷಾ ಕೂಡ ಕಂಪನಿಯಲ್ಲಿ ಪಾಲು ಹೊಂದಿದ್ದರು.
೨೦೧೩-೧೪ ರಲ್ಲಿ ಟೆಂಪಲ್ ಎಂಟರ್‌ಪ್ರೈಸ್ ಯಾವುದೇ ಸ್ಥಿರ ಸ್ವತ್ತುಗಳನ್ನು ಹೊಂದಿರಲಿಲ್ಲ ಮತ್ತು ಯಾವುದೇ ದಾಸ್ತಾನು ಅಥವಾ ಸ್ಟಾಕ್ ಅನ್ನು ಹೊಂದಿರಲಿಲ್ಲ ಹಾಗು ರೂ. ೫,೭೯೬ ಆದಾಯ ತೆರಿಗೆ ಮರುಪಾವತಿಯೂ ಮಾಡಿತ್ತು. ಆರ್ಥಿಕ ವರ್ಷ ೨೦೧೪-೧೫ ರಲ್ಲಿ, ೫೦,೦೦೦ ರೂ. ಆದಾಯವನ್ನು ತೋರಿಸಿತ್ತು. ಆದಾಗ್ಯೂ, ೨೦೧೫-೧೬ ರಲ್ಲಿ, ಸಂಸ್ಥೆಯ ಆದಾಯವು ೮೦.೫ ಕೋಟಿ ರೂ. ಗೆ ಏರಿತ್ತು. ಇದು ಶೇಕಡಾ ೧೬ ಪಟ್ಟು ಬೆಳವಣಿಗೆಯಾಗಿತ್ತು. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಮೀಸಲು ನಿಧಿ ಮತ್ತು ಹೆಚ್ಚುವರಿ ಆಧಾಯವು ೧೯ ಲಕ್ಷದಿಂದ ೮೦.೨ ಲಕ್ಷಕ್ಕೆ ಋಣಾತ್ಮಕವಾಗಿತ್ತು. ವ್ಯಾಪಾರ ಪಾವತಿಗಳು ೨.೬೫ ಕೋಟಿ ರೂ.ಗಳಷ್ಟಾಗಿದ್ದು ಅದರ ಹಿಂದಿನ ವರ್ಷ ೫ˌ೬೧೮ ರೂ. ಆಗಿತ್ತು. ಕಂಪನಿಯ ಒಟ್ಟು ಆಸ್ತಿ ಕೇವಲ ೨ ಲಕ್ಷ ರೂ. ಮಾತ್ರ ತೋರಿಸಲಾಗಿತ್ತು. ಸಂಸ್ಥೆಯು ಹಿಂದಿನ ವರ್ಷ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿರಲಿಲ್ಲ. ಅಲ್ಪಾವಧಿ ಸಾಲ ಮತ್ತು ಮುಂಗಡಗಳು ೪.೧೪ ಕೋಟಿ ರೂ.ಗಳಾಗಿದ್ದು, ಅದರ ಹಿಂದಿನ ವರ್ಷ ಅದು ೧೦,೦೦ ರೂ. ಆಗಿತ್ತು. ಹಿಂದಿನ ವರ್ಷ ಸಂಸ್ಥೆಯ ದಾಖಲಾತಿಗಳ ಪ್ರಕಾರ ದಾಸ್ತಾನುಗಳು ಶೂನ್ಯದಿಂದ ೯ ಕೋಟಿ ರೂ. ಗೆ ಏರಿಕೆಯಾಗಿತ್ತು ಎಂದು ದಿ ವೈರ್ ವರದಿ ಮಾಡಿತ್ತು.
ಜಯ್ ಷಾ ಆದಾಯದಲ್ಲಿ ಆದ ಭಾರೀ ಹೆಚ್ಚಳವು “ಉತ್ಪನ್ನಗಳ ಮಾರಾಟ” ದಿಂದ ಬಂದದ್ದು ಎಂದು ಫೈಲಿಂಗ್‌ಗಳಲ್ಲಿ ವಿವರಿಸಲಾಗಿತ್ತು. ಇದು ಹಿಂದಿನ ವರ್ಷ ಶೂನ್ಯದಿಂದ ೫೧ ಕೋಟಿ ರೂಪಾಯಿ ವಿದೇಶಿ ಗಳಿಕೆಯನ್ನು ಒಳಗೊಂಡಿತ್ತು. ಸಲ್ಲಿಕೆಯಾದ ಆ ಫೈಲಿಂಗ್‌ಗಳು KIFS ಫೈನಾನ್ಶಿಯಲ್ ಸರ್ವಿಸಸ್ ಎಂಬ ಲಿಸ್ಟೆಡ್ ಘಟಕದಿಂದ ೧೫.೭೮ ಕೋಟಿ ರೂ.ಗಳ ಜಾಮೀನು ರಹಿತ ಸಾಲ ಪಡೆದದ್ದುನ್ನು ಬಹಿರಂಗಪಡಿಸಿದ್ದವು. ಸಾಲ ನೀಡಿದ ಅದೇ ಆರ್ಥಿಕ ವರ್ಷದಲ್ಲಿ ಕೆಐಎಫ್‌ಎಸ್ ಹಣಕಾಸು ಸೇವೆಗಳ ಆದಾಯವೇ ಕೇವಲ ೭ ಕೋಟಿ ರೂ. ಆಗಿತ್ತು. KIFS ಹಣಕಾಸು ಸೇವೆಗಳ ವಾರ್ಷಿಕ ವರದಿಯಲ್ಲಿ ಟೆಂಪಲ್ ಎಂಟರ್‌ಪ್ರೈಸ್‌ಗೆ ನೀಡಲಾದ ರೂ ೧೫.೭೮ ಕೋಟಿ ಜಾಮೀನು ರಹಿತ ಸಾಲದ ಕುರಿತು ಏನನ್ನು ಪ್ರತಿಬಿಂಬಿಸಿರಲಿಲ್ಲ ಎಂದು ದಿ ವೈರ್ ವರದಿ ಮಾಡಿತ್ತು.
KIFS ಫೈನಾನ್ಶಿಯಲ್ ಸರ್ವೀಸಸ್‌ನ ಪ್ರವರ್ತಕರಾದ ರಾಜೇಶ್ ಖಂಡ್ವಾಲಾ ಅವರು ಷಾ ಅವರ ಕಂಪನಿಗಳೊಂದಿಗೆ ತಮ್ಮ ಸಂಸ್ಥೆ ಹೊಂದಿರುವ ವ್ಯವಹಾರಗಳ ಬಗ್ಗೆ ಸ್ಪಷ್ಟೀಕರಣವನ್ನು ಕೋರಿ ಕಳುಹಿಸಲಾದ ದಿ ವೈರ್‌ನ ಪ್ರಶ್ನಾವಳಿಗೆ ಪ್ರತಿಕ್ರಿಯಿಸಲು ಮೊದಲು ಒಪ್ಪಿಕೊಂಡು ಆನಂತರ ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲವೆಂದು ದಿ ವೈರ್ ವರದಿ ಮಾಡಿತ್ತು.
ಖಾಂಡ್ವಾಲಾ ಅವರು ತಮ್ಮ ಮಗಳನ್ನು ಪರಿಮಳಾ ನಾಥ್ವಾನಿಯವರ ಮಗನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅಹಮದಾಬಾದ್ ಮೂಲದ ನಥ್ವಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಗುಜರಾತ್ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದು ವ್ಯಾಪಾರ ಮತ್ತು ರಾಜಕೀಯ ಎರಡನ್ನೂ ಸಂಭಾಳಿಸುತ್ತಿದ್ದರು. ಅವರು ಸಂಸತ್ತಿನಲ್ಲಿ ಮೇಲ್ಮನೆಯ ಸ್ವತಂತ್ರ ಸದಸ್ಯರಾಗಿದ್ದು ˌ 2014 ರಲ್ಲಿ ರಾಜ್ಯಸಭೆಗೆ ಜಾರ್ಖಂಡಿನಿಂದ ಮರು ಆಯ್ಕೆಯಾದ ಅವರನ್ನು ಬಿಜೆಪಿ ಬೆಂಬಲಿಸಿತ್ತು. ಖಂಡ್ವಾಲಾ ಸಂಸ್ಥೆಯಿಂದ ಟೆಂಪಲ್ ಎಂಟರ್‌ಪ್ರೈಸ್‌ಗೆ ಜಾಮೀನು ರಹಿತ ಸಾಲವನ್ನು ಸುಗಮಗೊಳಿಸುವಲ್ಲಿ ನಾಥವಾನಿಯವರಾಗಲಿ ಅಥವಾ ರಿಲಯನ್ಸ್ ಕಂಪನಿಯಾಗಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಅಮಿತ್ ಶಾ ಅವರ ಆಪ್ತ ಮೂಲವು ದಿ ವೈರ್ ವರದಿಗಾರರಿಗೆ ತಿಳಿಸಿತ್ತು. ಅವರ ಕಡೆಯಿಂದ, ಜಯ್ ಶಾ ಅವರ ವಕೀಲರು ದಿ ವೈರ್‌ಗೆ ಕೊಟ್ಟ ತಮ್ಮ ಲಿಖಿತ ಪ್ರತಿಕ್ರಿಯೆಯಲ್ಲಿ ಖಂಡ್ವಾಲಾ ಅವರು ಷಾ ಕುಟುಂಬದ ಹಳೆಯ ಸ್ನೇಹಿತರಾಗಿದ್ದಾರೆಂದು ಹೇಳಿದ್ದರ ಕುರಿತು ದಿ ವೈರ್ ವರದಿ ಮಾಡಿತ್ತು.
KIFS ನ ಪ್ರವರ್ತಕರಾದ ರಾಜೇಶ್ ಖಂಡ್ವಾಲಾ ಅವರು ಕಳೆದ ಹಲವಾರು ವರ್ಷಗಳಿಂದ ಜಯ್ ಷಾ ಕುಟುಂಬಕ್ಕೆ ಷೇರ್ ಬ್ರೋಕರ್ ಆಗಿದ್ದರಂತೆ. ಈ NBFC ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಜಯ್ ಷಾ ಮತ್ತು ಜಿತೇಂದ್ರ ಷಾ ಅವರ ಇತರ ವ್ಯವಹಾರಗಳಿಗೆ ನಿಯಮಿತವಾಗಿ ಸಾಲವನ್ನು ಒದಗಿಸುತ್ತಿದೆಯಂತೆ. ಸುಮಾರು ೪ ವರ್ಷಗಳ ಹಿಂದೆ ನಾಥ್ವಾನಿ ಅವರ ಮಗನನ್ನು ಖಂಡ್ವಾಲಾ ಅವರ ಮಗಳೊಂದಿಗೆ ವಿವಾಹವಾಗುವ ಮೊದಲು ಜಯ್ ಷಾ ರಾಜೇಶ್ ಖಂಡ್ವಾಲಾ ಅವರೊಂದಿಗೆ ಕುಟುಂಬ ಸಂಬಂಧವನ್ನು ಹೊಂದಿದ್ದರೆಂದು ಷಾ ಅವರ ವಕೀಲರ ಹೇಳಿಕೆಯು ಸ್ಪಷ್ಟ ಪಡಿಸಿರುವ ಬಗ್ಗೆ ದಿ ವೈರ್ ವರದಿ ಮಾಡಿತ್ತು.
ಒಟ್ಟಾರೆಯಾಗಿ ಮೋದಿ ಪ್ರಧಾನಿಯಾಗಿ ಆಯ್ಕೆಯಾದ ಮೇಲೆ ಬಿಜೆಪಿಯ ನಾಯಕರು ಮತ್ತು ಗುಜರಾತ್ ಮೂಲದ ಬಿಜೆಪಿ ಆಪ್ತ ಉದ್ಯಮಿಗಳ ವ್ಯವಹಾರಗಳಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡು ಬರುತ್ತಿರುವುದು ಆಶ್ಟರ್ಯದ ಸಂಗತಿಯಂತೂ ಹೌದು. ಇಡೀ ದೇಶದ ಆರ್ಥಿಕತೆ ತಳಪಾಯ ಕಾಣುತ್ತಿರುವ ಈ ದುರ್ಗಮ ಸಂದರ್ಭದಲ್ಲಿ ಕೇವಲ ಬಿಜೆಪಿ ನಾಯಕರು ಮತ್ತು ಅವರ ಆಪ್ತ ಉದ್ಯಮಿಗಳ ಆರ್ಥಿಕತೆ ಏರುಮುಖವಾಗುತ್ತಿರುವುದರ ಹಿಂದಿನ ಗುಟ್ಟು ಜಾಗತಿಕ ಆರ್ಥಿಕ ತಜ್ಞರು ಮಾತ್ರ ಹೇಳಬಲ್ಲರೆನ್ನುವಷ್ಟು ಜಟಿಲವೇನಲ್ಲ ಎನ್ನಬಹುದಾಗಿದೆ.