
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ರಾಜಕಾರಣಕ್ಕೆ ಬರುವ ಮೊದಲು ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದವರು. ರಾಜಕಾರಣಕ್ಕೆ ಬರುವ ಮುನ್ನವೇ ತಮ್ಮ ಛಾಪು ಒತ್ತಿದ್ದ ಮಹಾನ್ ಮೇಧಾವಿ. ಭಾರತದ ಆರ್ಥಿಕತೆಯಲ್ಲಿ ಸಲಹೆ ಸೂಚನೆ ಕೊಡುತ್ತಿದ್ದರು. ಅದೇ ಕಾರಣಕ್ಕೆ ಮನಮೋಹನ್ ಸಿಂಗ್ ಅವರನ್ನು ಆರ್ಬಿಐ ಗೌರ್ನರ್ ಆಗಿ ನೇಮಕ ಮಾಡಲಾಯ್ತು. ಅಲ್ಲಿಂದ ಮುಂದೆ ಭಾರತದ ಅರ್ಥಶಾಸ್ತ್ರಜ್ಞರಾಗಿ, ಆರ್ಥಿಕ ಸುಧಾರಕ ಕೆಲಸ ಮಾಡಿದರು. ಮೊದಲ ಬಾರಿಗೆ 1991ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಕೂಡಲೇ ಪಿವಿ ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.
ಆ ನಂತರ ವಾಜಪೇಯಿ ಸರ್ಕಾರದಲ್ಲಿ ಮನಮೋಹನ್ ಸಿಂಗ್ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನಿಬಾಯಿಸಿದ್ರು. ಆ ನಂತರ 2004ರಲ್ಲಿ ದೇಶದ 13ನೇ ಪ್ರಧಾನಮಂತ್ರಿಯಾಗಿ ಆಯ್ಕೆ ಆದ ಬಳಿಕ ಪ್ರಧಾನಿಯಾಗಿ ಸುದೀರ್ಘ 10 ವರ್ಷಗಳ ಸೇವೆ ಸಲ್ಲಿಸಿದ್ದಾರೆ. 2004-2014ರವರೆಗೆ ದೇಶದ ಪ್ರಧಾನಿಯಾಗಿದ್ದ ಸಿಂಗ್, ನೆಹರೂ ಬಳಿಕ ಪ್ರಧಾನಿಯಾಗಿ 2ನೇ ಬಾರಿ ಆಯ್ಕೆಯಾದ ಖ್ಯಾತಿ ಪಡೆದರು.

ಆಕ್ಸ್ಫರ್ಡ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿರುವ ಮನಮೋಹನ್ ಸಿಂಗ್, 1966-69ರವರೆಗೆ ವಿಶ್ವಸಂಸ್ಥೆಯಲ್ಲೂ ಸೇವೆ ಸಲ್ಲಿಸಿದ್ದಾರೆ. 1970 ರಿಂದ 1980 ರಲ್ಲಿ ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಸಿಂಗ್, 1972 ರಲ್ಲಿ ಭಾರತ ಸರ್ಕಾರ ಆರ್ಥಿಕ ಸಲಹೆಗಾರ, 1982-85ರ ಅವಧಿಯಲ್ಲಿ ಆರ್ಬಿಐ ಗವರ್ನರ್, 1985-87 ರಲ್ಲಿ ಯೋಜನಾ ಆಯೋಗದ ಅಧ್ಯಕ್ಷ, 1987-1990 ಸ್ವಿಟ್ಜರ್ಲ್ಯಾಂಡ್ನ ಸೌತ್ ಕಮಿಷನ್ನ ಸೆಕ್ರೆಟರಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಪಂಜಾಬ್ ಮೂಲದ ಮನಮೋಹನ್ ಸಿಂಗ್, ರಾಜ್ಯಸಭೆಗೆ ಅಸ್ಸಾಂನಿಂದ ನಿರಂತರ ಆಯ್ಕೆ ಆಗುತ್ತಿದ್ದರು ಎನ್ನುವುದು ಮತ್ತೊಂದು ವಿಶೇಷ. 1991 ರಿಂದ 2024ರವರೆಗೂ ರಾಜ್ಯಸಭೆ ಸದಸ್ಯರಾಗಿದ್ದ ಸಿಂಗ್, 1991ರಲ್ಲಿ ಪಿ.ವಿ ನರಸಿಂಹರಾವ್ ಸಂಪುಟ ಸೇರ್ಪಡೆ ಆಗಿ, ಹಣಕಾಸು ಸಚಿವರಾಗಿ ಕೆಲಸ ಮಾಡಿದರು. ದೇಶದ ಹಣಕಾಸು ವ್ಯವಸ್ಥೆ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡ ಮನಮೋಹನ್ ಸಿಂಗ್, ಅರ್ಥ ವ್ಯವಸ್ಥೆ ಸುಸ್ಥಿರವಾಗಲು ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡರು. ಆರ್ಥಿಕ ದುಸ್ಥಿತಿಯನ್ನು ಸರಿದಾರಿಗೆ ತರಲು ಸಿಂಗ್ ಸುಧಾರಣಾ ಕ್ರಮಗಳು ಕಾರಣಕರ್ತರಾದರು. ಭಾರತದ ಅರ್ಥ ವ್ಯವಸ್ಥೆ ಮೇಲೆತ್ತಿದ ಬಳಿಕ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕ್ಷೇತ್ರದಲ್ಲೂ ಖ್ಯಾತಿ ಪಡೆದರು.

ವಿಶ್ವಮಟ್ಟದಲ್ಲಿ ಆರ್ಥಿಕ ತಜ್ಞರಾಗಿ ಬೆಳೆದ ಮನಮೋಹನ್ ಸಿಂಗ್, 1996ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸೋಲುಂಡು 1998ರಲ್ಲಿ ರಾಜ್ಯಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ನೇಮಕ ಆದರು. 2004ರಲ್ಲಿ ಪ್ರಧಾನಿಯಾದ ಮೊದಲ ಅವಧಿಯಲ್ಲೇ ಹಲವು ಸುಧಾರಣೆ ಕ್ರಮ ತೆಗೆದುಕೊಂಡ ಸಿಂಗ್, ಗ್ರಾಮೀಣ ಆರೋಗ್ಯ ಮಿಶನ್, ಆಧಾರ್ ಕಾರ್ಡ್, ನರೇಗಾ ಕೂಲಿಕಾಳು ಯೋಜನೆ, ಮಾಹಿತಿ ಹಕ್ಕು ಕಾಯ್ದೆ ಜಾರಿ ಮಾಡಿದರು. ಯುಪಿಎ-1 ಅವಧಿಯಲ್ಲಿ ಇಡೀ ವಿಶ್ವದ ಆರ್ಥಿಕತೆ ಪಾತಾಳಕ್ಕೆ ಬಿದ್ದಾಗಲೂ ಭಾರತದ ಅರ್ಥ ವ್ಯವಸ್ಥೆ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಂಡ ಖ್ಯಾತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.

2009ರಲ್ಲಿ ಯುಪಿಎ-2 ಅವಧಿಯಲ್ಲೂ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಆಯ್ಕೆಯಾದರು. ಶಿಕ್ಷಣ ಹಕ್ಕು ಕಾಯ್ದೆ, ಸರ್ವ ಶಿಕ್ಷಣ ಅಭಿಯಾನ, ದೇಶಾದ್ಯಂತ 8 ಐಐಟಿಗಳ ಸ್ಥಾಪನೆ ಮಾಡುವ ಮೂಲಕ ಖ್ಯಾತಿ ಪಡೆದರು. ಆದರೆ ಸರ್ಕಾರದಲ್ಲಿ ಇತರೆ ಸಚಿವರು ನಡೆಸಿದ ಅಕ್ರಮಗಳಿಂದ ಅಪಖ್ಯಾತಿಗೂ ಗುರಿಯಾಗಿ ಅಧಿಕಾರ ಕಳೆದುಕೊಳ್ಳಬೇಕಾಯ್ತು. ಎಂದಿಗೂ ಯಾರೊಂದಿಗೂ ಹೆಚ್ಚು ಮಾತನಾಡದ ಮನಮೋಹನ್ ಸಿಂಗ್ ಆಡಳಿತದಲ್ಲಿ ಸೂಕ್ಷ್ಮ ಮತಿಗಳಾಗಿದ್ದರು. ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಿದ್ದರು. ಆದರೆ ರಾಜಕಾರಣಿಯಾಗಿ ತಂತ್ರಗಾರಿಕೆ ಮಾಡುವುದು ಗೊತ್ತಿಲ್ಲದ ಕಾರಣಕ್ಕೆ ಎಂದೂ ಲೋಕಸಭೆಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ ಅನ್ನೋದು ಬೇಸರದ ಸಂಗತಿ.














