ರಾಜ್ಯದಲ್ಲಿ ಬಹುಮತದ ಸರ್ಕಾರ ರಚನೆ ಮಾಡುವಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಯಶಸ್ವಿಯಾಗಿದೆ. ಸಿದ್ದರಾಮಯ್ಯ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಮುಹೂರ್ತ ಕೂಡಿ ಬಂದಿದೆ. ಸರಳ ಬಹುಮತ 113 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಗೆ 136ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ನೀಡುವ ಮೂಲಕ ಯಾವುದೇ ರಾಜಕೀಯ ಲೆಕ್ಕಾಚಾರಗಳೆಗೆ ಕನ್ನಡಿಗರು ಆಸ್ಪದ ನೀಡಿಲ್ಲ ಎನ್ನುವುದು ಈ ಚುನಾವಣೆಯ ವಿಶೇಷ. ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಧೂಳು ಎಬ್ಬಿಸಿದೆ. ಕರಾವಳಿ ಭಾಗವನ್ನು ಹೊರತುಪಡಿಸಿ ಉಳಿದ ಕಡೆ ಕಾಂಗ್ರೆಸ್ ಭರ್ಜರಿ ಜನ ಕಂಡಿದ್ದು, ಭಾರೀ ಬಹುಮತ ಪಡೆಯಲು ಸಾಧ್ಯವಾಗಿದೆ.
ಗಳಗಳನೆ ಕಣ್ಣೀರಿಟ್ಟ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದೆ ಎನ್ನುವಾಗಲೇ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಂತೋಷದಲ್ಲಿ ಆನಂದಭಾಷ್ಪ ಸುರಿಸಿದ್ರು. ಈ ಜಯ ರಾಮನಗರ ಜಿಲ್ಲೆಯ ಜನರ ಜಯ. ನನ್ನನ್ನು ರಾಜ್ಯದಲ್ಲಿ ಅತಿ ಹೆಚ್ಚಿನ ಜಯದಿಂದ ಗೆಲ್ಲಿಸಿದ್ದಾರೆ. ಇಕ್ಬಾಲ್ ಹುಸೈನ, ಬಾಲಕೃಷ್ಣ ಅವರನ್ನು ಗೆಲ್ಲಿಸಿದ್ದಿರಿ. ಇದು ರಾಜ್ಯಕ್ಕೆ ಅಲ್ಲ, ರಾಷ್ಟ್ರಕ್ಕೆ ಕೊಟ್ಟ ಸಂದೇಶ ಎಂದಿರುವ ಡಿ.ಕೆ ಶಿವಕುಮಾರ್. ನುಡಿದಿದ್ದೇವೆ, ನುಡಿದಂತೆ ನಡೆಯುತ್ತೇವೆ. ಶಾಂತಿಯುತವಾಗಿರಬೇಕು. ದೌರ್ಜನ್ಯ ಬೇಡ. ಅಭಿವೃದ್ಧಿ ಮಾಡಬೇಕಿದೆ. ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಬಂದಿದೆ. ನನಗೆ ಕೊಡಬಾರದ ಕಷ್ಟವನ್ನು ಕೊಟ್ಟಿದ್ದರು. ಆದರೆ ಕರ್ನಾಟಕದ ಜನರು ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ. ಇದೇ ವೇಳೆ ಜೈಲು ವಾಸವನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ.
ನಾಯಕರನ್ನು ಬಿಟ್ಟುಕೊಟ್ಟು ಕೆಟ್ಟ ಕಮಲ ಪಾಳಯ..!

ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಸೋಲುಂಡಿದ್ದಾರೆ. ಆದರೆ ಅಥಣಿಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಭರ್ಜರಿ ಜಯ ಕಂಡಿದ್ದಾರೆ. ಸೋಲು ಅನುಭವಿಸಿದರೂ ಸಂತಸ ವ್ಯಕ್ತಪಡಿಸಿರುವ ಜಗದೀಶ್ ಶೆಟ್ಟರ್, ನಾನು ಫೈಟ್ ಮಾಡಿರೋದು ಅಭಿಮಾನ ಇದೆ. ಇವತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಏನಾಗಿದೆ..? 120 ಇದ್ದವರು 60 ಸ್ಥಾನಕ್ಕೆ ಇಳಿದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅವಸಾನದತ್ತ ಹೊರಟಿದೆ. ಜಗದೀಶ್ ಶೆಟ್ಟರ್ ಸೋಲಿಸೋ ಒಂದು ಕಾರಣಕ್ಕೆ ಹೋಗಿ ಇದೀಗ ಇಡೀ ರಾಜ್ಯದಲ್ಲಿ ಸೋತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿರುವ ಜಗದೀಶ್ ಶೆಟ್ಟರ್, ಗುಜರಾತ್ ಪ್ರಯೋಗ ಇಲ್ಲಿ ಮಾಡಿದ್ರು, ಯಾಕೆ ಆಗಲಿಲ್ಲ..? ಲಿಂಗಾಯತ ಕಡೆಗಣನೆ ಆಗಿರೋದು ಬಿಜೆಪಿ ಸೋಲಿಗೆ ಕಾರಣ. ಜೊತೆಗೆ ಬಿಜೆಪಿ ಮಾಡಿದ್ದ ಕರೆಪ್ಷನ್, ಕಾನೂನು ಸುವ್ಯವಸ್ಥೆ ವಿಫಲ ಬಿಜೆಪಿ ಸೋಲಿಗೆ ಕಾರಣ. ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲಾಯ್ತು. ಐಟಿ ರೇಡ್ ಭಯ, ಒತ್ತಡ ತಂತ್ರ ಹಾಕೋ ಕೆಲಸ ಮಾಡಿದ್ರು. ಹೀಗಾಗಿ ಸೋಲಾಗಿದೆ ಎಂದಿದ್ದಾರೆ ಶೆಟ್ಟರ್.
ಒಗ್ಗಟ್ಟು ಪ್ರದರ್ಶನವೇ ಕಾಂಗ್ರೆಸ್ನ ಈ ಗೆಲುವಿಗೆ ಕಾರಣ..!

ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿತ್ತು. ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಬಂದು ಹೋದ ಕಡೆಗಳಲ್ಲಿ ಭರ್ಜರಿಯಾಗಿ ಘೋಷಣೆ ಕೂಗಿಸಿಕೊಳ್ತಿದ್ರು. ಆದರೆ ಮೊಳಕೆಯಲ್ಲೇ ಚಿವುಟಿ ಹಾಕುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಹೈಕಮಾಂಡ್, ಚುನಾವಣೆ ಮುಗಿಯುವ ತನಕ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ನಡೆಸಬಾರದು ಅನ್ನೋ ಸಂದೇಶ ರವಾನೆ ಮಾಡಿತ್ತು. ಅದನ್ನು ಯಥಾವತ್ತಾಗಿ ಪಾಲನೆ ಮಾಡಿದ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್, ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಿದರು. ಪ್ರವಾಸದ ವೇಳೆಯೂ ಇಬ್ಬರು ನಾಯಕರನ್ನು ಭಿನ್ನತೆ ಹುಡುಕುವ ಪ್ರಯತ್ನವನ್ನು ಮಾಧ್ಯಮಗಳು ಹಾಗು ವಿರೋಧ ಪಕ್ಷದವರು ಹುಡಿಕಿದರೂ ಯಶಸ್ಸು ಸಿಕ್ಕಿಲ್ಲ. ಚುನಾವಣೆಗೆ ಒಂದು ದಿನ ಇರುವಂತೆ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಆತ್ಮೀಯವಾಗಿ ಮಾತನಾಡಿ ಮನದ ಮಾತು ಹೆಸರಲ್ಲಿ ಬಿಡುಗಡೆ ಮಾಡಿದ್ದ ವೀಡಿಯೋ, ಕಾಂಗ್ರೆಸ್ ಒಗ್ಗಟ್ಟಿನ ಗೆಲ್ಲುವಲ್ಲಿ ಪರಿಣಾಮಕಾರಿ ಆಗಿದೆ ಎನ್ನಬಹುದು.