“ವಿಧಾನಸೌಧದ ಮೂರನೇ ಮಹಡಿಯನ್ನು ಏರಲು ಮೆಟ್ಟಿಲಾಗಿ ನನ್ನನ್ನು ಬಳಸಿಕೊಳ್ಳಿ. ಮುಂದಿನ ಮುಖ್ಯಮಂತ್ರಿಯಾಗಲು ನನಗೆ ಅವಸರವಿದೆ ಎಂದು ನಾನೆಂದೂ ಹೇಳಿಲ್ಲ. ಮುಖ್ಯಮಂತ್ರಿ ಕುರಿತ ಹೇಳಿಕೆಗಳ ವಿಷಯದಲ್ಲಿ ಪಕ್ಷದ ಹೈಕಮಾಂಡ್ ಏನು ಹೇಳಬೇಕೋ ಅದನ್ನು ಹೇಳಿದೆ. ಆದರೂ ಕೆಲವರು ಅಂತಹ ಹೇಳಿಕೆ ಮುಂದುವರಿಸಿದ್ಧಾರೆ. ಶಾಸಕರ ಅಂತಹ ಹೇಳಿಕೆಗಳನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಅವರು ನೋಡಿಕೊಳ್ಳದೇ ಇದ್ದರೆ, ಆ ಬಗ್ಗೆ ಗಮನಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ”
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಈ ಹೇಳಿಕೆ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಭುಗಿಲೆದ್ದಿರುವ ಮುಖ್ಯಮಂತ್ರಿ ಸ್ಥಾನದ ಪೈಪೋಟಿಯ ಬಗ್ಗೆ ಸಾಕಷ್ಟು ಹೇಳುತ್ತದೆ. ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ, ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟ ಇದೀಗ ಮಧ್ಯಂತರ ಚುನಾವಣೆಯ ನಿರೀಕ್ಷೆಯಲ್ಲಿ ಕ್ಲೈಮ್ಯಾಕ್ಸ್ ಗೆ ತಲುಪಿದೆ ಎಂಬುದನ್ನೂ ಈ ಹೇಳಿಕೆ ಹೇಳದೇ ಇರದು. ಏಕೆಂದರೆ, ಡಿ ಕೆ ಶಿವಕುಮಾರ್ ಅವರು ಈ ಹೇಳಿಕೆ ನೀಡಿರುವುದು ದೆಹಲಿಗೆ ಹೋಗಿ ಪಕ್ಷದ ಹೈಕಮಾಂಡ್ ಭೇಟಿ ಮಾಡಿ ಬಂದ ಬಳಿಕ! ಅದರಲ್ಲೂ ಪಕ್ಷದ ಸಂಘಟನೆಯನ್ನು ತಮ್ಮ ಕೈಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದೇ ಹೇಳಲಾಗುತ್ತಿರುವ ಪಕ್ಷದ ಜಿಲ್ಲಾ ಮತ್ತು ಬ್ಲಾಕ್ ಪದಾಧಿಕಾರಿಗಳ ಬದಲಾವಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದ ಬಳಿಕ!

ಹಾಗಾಗಿ, ಈ ಹೇಳಿಕೆ ಸಹಜವಾಗೇ ವ್ಯಂಗ್ಯ, ಧಮಕಿ ಸೇರಿದಂತೆ ಹಲವು ಅರ್ಥಗಳನ್ನು ಏಕಕಾಲಕ್ಕೆ ಹೊರಡಿಸುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಒಂದು ಅವಕಾಶವೆಂಬುದು ಕಾಂಗ್ರೆಸ್ಸಿನಲ್ಲಿ ಬಹುತೇಕ ಸಂಪ್ರದಾಯ. ಆ ಹಿನ್ನೆಲೆಯಲ್ಲಿ ಕಳೆದ ಬಾರಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಾಕಷ್ಟು ತೆರೆಮರೆಯ ಹಗಜಗ್ಗಾಟ ನಡೆದಿತ್ತು. ಹೇಗಾದರೂ ಮಾಡಿ, ಡಿ ಕೆ ಶಿವಕುಮಾರ್ ಸೇರಿದಂತೆ ತಮ್ಮ ಬಣದವವರಲ್ಲದವರು ಆ ಸ್ಥಾನಕ್ಕೆ ಬರದಂತೆ ತಡೆಯಬೇಕು ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ಅವರನ್ನೇ ಮುಂದುವರಿಸಲು ಯತ್ನಿಸಿದ್ದರು. ಅದೂ ಸಾಧ್ಯವಿಲ್ಲ ಎನಿಸಿದಾದ ಡಾ ಎಂ ಬಿ ಪಾಟೀಲ್ ಮತ್ತಿತರ ತಮ್ಮ ಆಪ್ತ ಬಳಗದವರನ್ನೇ ಕೆಪಿಸಿಸಿ ಕುರ್ಚಿಯಲ್ಲಿ ಕೂರಿಸಲು ಯತ್ನಿಸಿದ್ದರು. ಕೊನೆಗೇ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ಲೆಕ್ಕಾಚಾರದ ಪ್ರಕಾರ, ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿರುವುದರಿಂದ ಸಹಜವಾಗೇ ಮೂಲ ಕಾಂಗ್ರೆಸ್ಸಿಗರ ಪೈಕಿ ಪಕ್ಷ ಸಂಘಟನೆಗೆ ಬೇಕಾದ ಪ್ರಭಾವ ಮತ್ತು ‘ಬಲ’ದ ಮಾನದಂಡದ ಮೇಲೆ ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರನ್ನು ನೇಮಕ ಮಾಡಿತ್ತು.
ಆದರೆ, ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾದರೂ, ಡಿ ಕೆ ಶಿವಕುಮಾರ್ ಅವರಿಗೆ ಪಕ್ಷದ ತಳಮಟ್ಟದಿಂದ ಮೇಲಿನವರೆಗೆ ಹಿಡಿತ ಸಾಧಿಸಲು ಅಗತ್ಯ ಸಮಯಾವಕಾಶ ಮತ್ತು ರಾಜ್ಯ ಪ್ರವಾಸದ ಅವಕಾಶಕ್ಕೆ ಕೋವಿಡ್ ದೊಡ್ಡ ಅಡ್ಡಗಾಲಾಗಿತ್ತು. ಹಾಗಾಗಿ, ಪಕ್ಷದ ಚುಕ್ಕಾಣಿ ಹಿಡಿದರೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಈಗಲೂ ಸಿದ್ದರಾಮಯ್ಯ ಮಾತೇ ನಡೆಯುವಂತಹ ಇರುಸುಮುರಿಸಿನ ಪರಿಸ್ಥಿತಿ ಮುಂದುವರಿದಿತ್ತು.
ಇದೀಗ ಕರೋನಾ ಲಾಕ್ ಡೌನ್ ಅಂತ್ಯ ಸಮೀಪಿಸುವ ಹೊತ್ತಿಗೆ ಆಡಳಿತದ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಗೊಂದಲ ತಾರಕಕ್ಕೇರಿದೆ. ಒಂದು ಹಂತದಲ್ಲಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿಲ್ಲ. ಹಾಗೊಂದು ವೇಳೆ ಅವರ ಪಕ್ಷದ ವರಿಷ್ಠರು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದುಕೊಂಡರೆ, ಬಿಜೆಪಿಯಿಂದ ಹೊರಹೋಗಿ ಮತ್ತೆ ಪ್ರಾದೇಶಿಕ ಪಕ್ಷ ಕಟ್ಟಲು ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿಗಳು ಜೋರಾಗಿದ್ದವು. ಆ ಹಿನ್ನೆಲೆಯಲ್ಲಿ ಮಧ್ಯಂತರ ಚುನಾವಣೆಯ ಸಾಧ್ಯತೆಯನ್ನೂ ಊಹಿಸಿದ ಡಿ ಕೆ ಶಿವಕುಮಾರ್ ಅವರು ಪಕ್ಷದ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಆಯಕಟ್ಟಿನ ಸ್ಥಾನಗಳಲ್ಲಿ ತಮ್ಮವರನ್ನೇ ಕೂರಿಸುವ ಮೂಲಕ ಇಡೀ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ನಾಳೆ ಸಂದರ್ಭ ಬಂದಾಗ ವಿಧಾನಸಭಾ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಸಿಎಂ ಕುರ್ಚಿ ಏರಲು ಬೇಕಾದ ಜನಬಲದವರೆಗೆ ಎಲ್ಲಕ್ಕೂ ವ್ಯವಸ್ಥೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ತಂತ್ರಗಾರಿಕೆ ಆರಂಭಿಸಿದ್ದರು.

ಡಿ ಕೆ ಶಿವಕುಮಾರ್ ಅವರ ಈ ತಂತ್ರ ಅಂತಿಮವಾಗಿ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಕಿತ್ತುಕೊಳ್ಳಲಿದೆ ಎಂಬ ಸೂಕ್ಷ್ಮ ಅರಿತ ಸಿದ್ದರಾಮಯ್ಯ, ತಮ್ಮ ಬೆಂಬಲಿಗರ ಮೂಲಕ ಮುಂದಿನ ಸಿಎಂ ತಾವೇ ಎಂಬ ಹೇಳಿಕೆಗಳನ್ನು ತೇಲಿಬಿಟ್ಟು, ಪಕ್ಷದ ಸಂಘಟನೆ ಮಟ್ಟದಲ್ಲಿ ಏನೇ ಸರ್ಕಸ್ ಮಾಡಿದರೂ ಅಂತಿಮವಾಗಿ ಪಕ್ಷದ ಶಾಸಕರು ಮತ್ತು ರಾಜ್ಯದ ಜನತೆ ಈಗಲೂ ತಮ್ಮ ಹೆಸರನ್ನೇ ಸಿಎಂ ಸ್ಥಾನಕ್ಕೆ ಸೂಚಿಸುತ್ತಾರೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
ಆದರೆ, ಈ ವಿಷಯದಲ್ಲಿ ಪಕ್ಕಾ ಯೋಜನೆ ತಯಾರಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷರು, ಇತ್ತ ಸಿದ್ದರಾಮಯ್ಯ ಬಣದವರು ಮುಂದಿನ ಸಿಎಂ ಭಜನೆ ಮಾಡುತ್ತಿರುವಾಗಲೇ ದೆಹಲಿಗೆ ಹಾರಿ, ಜಿಲ್ಲಾ ಮಟ್ಟದ ಬ್ಲಾಕ್ ಮಟ್ಟದ ಪದಾಧಿಕಾರಿಗಳ ಬದಲಾವಣೆಗೆ ಗ್ರೀನ್ ಸಿಗ್ನಲ್ ಪಡೆದು ಬಂದಿದ್ಧಾರೆ. ಬಂದವರೇ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ವಿರುದ್ಧ ಪರೋಕ್ಷ ಗುಟುರು ಹಾಕಿದ್ದಾರೆ. ಆದರೆ, ಹೈಕಮಾಂಡ್ ಗ್ರೀನ್ ಸಿಗ್ನಲ್ ಬಲದ ಮೇಲೆ ಮುನ್ನುಗ್ಗುತ್ತಿರುವ ಡಿ ಕೆ ಶಿವಕುಮಾರ್ ಅವರಿಗೆ ಬ್ರೇಕ್ ಹಾಕಲು ಈಗಾಗಲೇ ಸಿದ್ದರಾಮಯ್ಯ ಪ್ರತಿತಂತ್ರ ಹೆಣೆದಿದ್ದು, ಪಕ್ಷದ ಜಿಲ್ಲಾ ಮಟ್ಟದ ತಾಲೂಕು ಅಧ್ಯಕ್ಷರ ದಿಢೀರ್ ಬದಲಾವಣೆಯ ಯೋಜನೆಗೆ ತಮ್ಮದೇ ಕಾರಣಗಳನ್ನು ಕೊಟ್ಟು ತಡೆಯೊಡ್ಡಲು ಸಿದ್ದರಾಮಯ್ಯ ಸದ್ಯದಲ್ಲೇ ದೆಹಲಿಗೆ ಹಾರಲಿದ್ದಾರೆ. ಅಲ್ಲಿ ಹೈಕಮಾಂಡ್ ಜೊತೆ ಪದಾಧಿಕಾರಿಗಳ ಬದಲಾವಣೆಯ ಸಾಧಕ-ಬಾಧಕ ಕುರಿತು ಚರ್ಚಿಸಿ, ಅಂತಹ ದಿಢೀರ್ ಕ್ರಮ ಪಕ್ಷದ ಸಂಘಟನೆಯ ಮೇಲೆ ಬೀರುವ ಪರಿಣಾಮಗಳನ್ನು ವಿವರಿಸಿ, ಸಾಧ್ಯವಾದಷ್ಟು ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಮನವೊಲಿಸಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಬಿಜೆಪಿಯ ನಾಯಕತ್ವ ಬದಲಾವಣೆಯ ಬಿಕ್ಕಟ್ಟು ತಣ್ಣಗಾಗುತ್ತಿದ್ದಂತೆ ಇತ್ತ ಕಾಂಗ್ರೆಸ್ಸಿನಲ್ಲಿ ಇಷ್ಟು ದಿನ ಬೂದಿಮುಚ್ಚಿದ ಕೆಂಡದಂತಿದ್ದ ಇಬ್ಬರು ನಾಯಕರ ನಡುವಿನ ಸಿಎಂ ಕುರ್ಚಿಯ ಹಣಾಹಣಿ ಮತ್ತೆ ಕಾವೇರಿದೆ. ಭವಿಷ್ಯದ ಕುರ್ಚಿಗಾಗಿನ ಈ ಮದಗಜಗಳ ಕಾದಾಟದಲ್ಲಿ ಯಾವ ನಾಯಕರ ಕೈ ಮೇಲಾಗುವುದೋ ಕಾದುನೋಡಬೇಕಿದೆ. ಆದರೆ, ಸದ್ಯಕ್ಕಂತೂ ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರು ನಜ್ಜುಗುಜ್ಜಾಗುವ ಸಾಧ್ಯತೆಯಂತೂ ಇದ್ದೇ ಇದೆ.












