ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆ ಚರ್ಚೆ ಮುಂದುವರಿದಿದೆ. ರಾಜ್ಯ ರಾಜಧಾನಿಯಿಂದ ರಾಷ್ಟ್ರ ರಾಜಧಾನಿಗೆ, ಅಲ್ಲಿಂದ ಮತ್ತೆ ರಾಜ್ಯ ರಾಜಧಾನಿಗೆ.. ಹೀಗೆ ರಾಜಧಾನಿಯಿಂದ ರಾಜಧಾನಿಗೆ ಜಿಗಿಯುತ್ತಲೇ ಇರುವ ಈ ಸರ್ಕಸ್, ಯಡಿಯೂರಪ್ಪ ಪುತ್ರದ್ವಯರ ದೆಹಲಿ ಭೇಟಿಯ ಬಳಿಕ ಮತ್ತಷ್ಟು ವದಂತಿಗಳಿಗೆ, ಊಹಾಪೋಹಗಳಿಗೆ ಈಡಾಗಿದೆ.
ಹಾಗೆ ನೋಡಿದರೆ, ನಾಯಕತ್ವ ಬದಲಾವಣೆಯ ಪ್ರಯತ್ನಗಳು ಬಿ ಎಸ್ ಯಡಿಯೂರಪ್ಪ ಎರಡು ವರ್ಷದ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಿಂದಲೇ ಆರಂಭವಾಗಿವೆ ಮತ್ತು ಹಂಗಾಮಿನಿಂದ ಹಂಗಾಮಿಗೆ ಪ್ರಬಲವಾಗುತ್ತಲೇ ಇವೆ ಎಂಬುದು ತಳ್ಳಿಹಾಕಲಾಗದ ವಾಸ್ತವ. ಆರ್ ಎಸ್ ಎಸ್ ಸೇರಿದಂತೆ ಸಂಘಪರಿವಾರ ಮತ್ತು ಸ್ವತಃ ದೆಹಲಿಯ ವರಿಷ್ಠರ ಪರೋಕ್ಷ ಆಶೀರ್ವಾದದಿಂದಲೇ ನಾಯಕತ್ವ ಬದಲಾವಣೆಯ ಯತ್ನಗಳು ನಿರಂತರವಾಗಿದ್ದರೂ, ಯಡಿಯೂರಪ್ಪ ಅಂತಹ ಎಲ್ಲವನ್ನು ಹಿಮ್ಮೆಟ್ಟಿಸಿ ಅಧಿಕಾರ ಕಾಯ್ದುಕೊಂಡಿದ್ದಾರೆ ಎಂಬುದು ಕೂಡ ಅಷ್ಟೇ ನಿಜ.
ಒಂದು ಕಡೆ, ಸಿಎಂ ಸ್ಥಾನದಿಂದ ತಮ್ಮನ್ನು ಕೆಳಗಿಳಿಸುವ ತಮ್ಮದೇ ಪಕ್ಷದ ಪ್ರಭಾವಿ ನಾಯಕರ ಯತ್ನಗಳು, ಮತ್ತೊಂದು ಕಡೆ ಪ್ರವಾಹ, ಕರೋನಾದಂತಹ ಭೀಕರ ಸವಾಲುಗಳ ನಡುವೆಯೂ ಯಡಿಯೂರಪ್ಪ ಪ್ರತಿಕ್ಷಣವೂ ಸವಾಲುಗಳ ನಡುವೆಯೇ ಜುಲೈ 26ಕ್ಕೆ ಎರಡು ವರ್ಷದ ಆಡಳಿತ ಪೂರೈಸಲಿದ್ದಾರೆ. ನಿರಂತರ ಭಿನ್ನಮತೀಯ ಚಟುವಟಿಕೆ, ವಿರೋಧಿ ಬಣದ ಇನ್ನಿಲ್ಲದ ಪ್ರಯತ್ನಗಳು, ಜೊತೆಗೆ ಪ್ರವಾಹ, ಕರೋನಾದಂತಹ ಹಿಂದೆಂದೂ ಕಂಡುಕೇಳರಿಯದ ಸವಾಲುಗಳನ್ನು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ತಮ್ಮ ಇಳಿವಯಸ್ಸಿನಲ್ಲೂ ನಿಭಾಯಿಸಿದ ರೀತಿ(ಕರೋನಾ ವಿಷಯದಲ್ಲಿ ಎಷ್ಟರಮಟ್ಟಿಗೆ ಸಫಲರಾದರು ಎಂಬುದು ಬೇರೆ ಪ್ರಶ್ನೆ) ವಿಶೇಷವೇ.
ಆದರೆ, ಈ ಭಿನ್ನಮತ, ಬಂಡಾಯ ಮತ್ತು ನಾಯಕತ್ವ ಬದಲಾವಣೆಯ ನಿರಂತರ ಕೂಗು ಕೇವಲ ಯಡಿಯೂರಪ್ಪ ಮತ್ತು ಪುತ್ರ ಬಿ ವೈ ವಿಜಯೇಂದ್ರ ಸೇರಿದಂತೆ ಅವರ ಆಪ್ತ ಬಳಗದ ಪ್ರತಿತಂತ್ರ, ಚಾಣಾಕ್ಷತೆಯನ್ನಷ್ಟೇ ಪರೀಕ್ಷೆಗೊಡ್ಡಲಿಲ್ಲ, ಬದಲಾಗಿ ದೇಶದಲ್ಲೇ ಅತ್ಯಂತ ಪ್ರಭಾವಿಗಳು, ಪ್ರಶ್ನಾತೀತರು ಎನ್ನಲಾಗುತ್ತಿದ್ದ ಬಿಜೆಪಿಯ ಬಲಿಷ್ಠ ವರಿಷ್ಠರ ಪ್ರತಿಷ್ಠೆಯನ್ನು ಸವಾಲಿಗೊಡ್ಡಿದೆ ಎಂಬುದು ಕೂಡ ನಿಜ. ಏಕೆಂದರೆ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿ ಸಂಘಪರಿವಾರದ ಹಿನ್ನೆಲೆಯ ವ್ಯಕ್ತಿಯೊಬ್ಬರ ಕೈಗೆ ಅಧಿಕಾರದ ಚುಕ್ಕಾಣಿ ಕೊಡಬೇಕು ಎಂಬ ಪ್ರಯತ್ನಗಳು ಇಂದು ನಿನ್ನೆಯದೇನಲ್ಲ. ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವ ಹೊತ್ತಿಗೇ ಅಂತಹದ್ದೊಂದು ಲೆಕ್ಕಾಚಾರ, ಯಡಿಯೂರಪ್ಪ ವಿರೋಧಿ ಬಣದ ಸೂತ್ರಧಾರ ಎನಿಸಿಕೊಂಡಿರುವ ಸಂಘಪರಿವಾರದ ನಾಯಕ ಬಿ ಎಲ್ ಸಂತೋಷ್ ಅವರದ್ದಾಗಿತ್ತು ಎಂಬ ಮಾತುಗಳು ಅಂದಿನಿಂದಲೂ ಕೇಳಿಬರುತ್ತಲೇ ಇವೆ.
ಹಾಗಾಗಿ, ಸಾಲು ಸಾಲು ನಾಯಕರ ಬಹಿರಂಗ ಹೇಳಿಕೆಯ ಮೂಲಕ ಇದೀಗ ವ್ಯಾಪಕ ಚರ್ಚೆಗೊಳಗಾಗಿದ್ದರೂ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಚ್ ವಿಶ್ವನಾಥ್, ಅರವಿಂದ್ ಬೆಲ್ಲದ್ ಮತ್ತು ಇದೀಗ ಸಚಿವ ಸಿ ಪಿ ಯೋಗೇಶ್ವರ್ ಅವರುಗಳು ದನಿ ಎತ್ತುವ ಮುನ್ನವೂ, ನಾಯಕತ್ವ ಬದಲಾವಣೆಯ ವಿಷಯ ಎಂಬುದು ಬಿಜೆಪಿಯ ಒಂದು ಬಣದ ಆದ್ಯತೆಯ ಅಜೆಂಡಾವಾಗಿತ್ತು. ಪ್ರಹ್ಲಾದ್ ಜೋಷಿ, ಕೆ ಎಸ್ ಈಶ್ವರಪ್ಪ, ಬಿ ಎಲ್ ಸಂತೋಷ್, ಸಿ ಟಿ ರವಿ, ವಿ ಸುನೀಲ್ ಕುಮಾರ್, ಸೇರಿದಂತೆ ಹಲವು ನಾಯಕರು ಅಂತಹ ಪ್ರಯತ್ನಗಳ ಹಿಂದೆ ಪರೋಕ್ಷ, ಪ್ರತ್ಯಕ್ಷ ಮಾರ್ಗದರ್ಶಕರಾಗಿದ್ದರು ಎಂಬುದು ಕೂಡ ಗುಟ್ಟೇನಲ್ಲ.

ಹಾಗಿರುವಾಗ, ಅತ್ತ ಸಂಘಪರಿವಾರದ ಬೆಂಬಲವೂ ಇದೆ ಎನ್ನಲಾಗುವ ಅಂತಹ ಪ್ರಬಲ ಲಾಬಿಯ ನಿರಂತರ ಯತ್ನಗಳಿಗೂ ಫಲ ಸಿಕ್ಕಿಲ್ಲ; ಇತ್ತ ಭಿನ್ನಮತೀಯ ಚಟುವಟಿಕೆಗಳಿಗೂ ಕಡಿವಾಣ ಹಾಕದೆ ನಿರಂತರ ಎರಡು ವರ್ಷಗಳಿಂದ ಬಿಕ್ಕಟ್ಟನ್ನು ಜೀವಂತವಿಡಲಾಗಿದೆ. ಹಾಗಾದರೆ, ಯಡಿಯೂರಪ್ಪ ನಾಯಕತ್ವ ಬದಲಾವಣೆ ಪರ ಮತ್ತು ವಿರುದ್ಧದ ಈ ಹಗ್ಗಜಗ್ಗಾಟದಿಂದ ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿದಿರುವ ಮತ್ತು ಈ ಮೂಲಕ ಇತರೆ ದಕ್ಷಿಣ ರಾಜ್ಯಗಳಿಗೆ ಪಕ್ಷದ ಪ್ರಭಾವ ವಿಸ್ತರಿಸಿ ಅಧಿಕಾರ ಹಿಡಿಯುವ ಪಕ್ಷದ ವರ್ಚಸ್ಸು ಮತ್ತು ಉದ್ದೇಶಕ್ಕೆ ಪೆಟ್ಟು ಬೀಳುತ್ತಿದೆ ಎಂಬ ಅರಿವಿದ್ದೂ ವರಿಷ್ಠರು ಯಾಕೆ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ? ಎಂಬ ಪ್ರಶ್ನೆ ಕಾಡುತ್ತದೆ.
ಏಕೆಂದರೆ; ಈಗಾಗಲೇ ಕೇಂದ್ರದಲ್ಲಿ ಎಲ್ ಕೆ ಅಡ್ವಾಣಿ, ಮರುಳಿಮನೋಹರ ಜೋಷಿ, ಯಶವಂತ ಸಿನ್ಹಾ, ಜಸ್ವಂತ್ ಸಿಂಗ್ ಮತ್ತಿತರ ಹಿರಿಯ ನಾಯಕರ ವಿಷಯದಲ್ಲಿ ಮತ್ತು ಗುಜರಾತ್, ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶದಂತಹ ರಾಜ್ಯ ಮುಖಂಡರ ವಿಷಯದಲ್ಲಿ ಪಾಲಿಸಿದ 75 ವರ್ಷದ ವಯೋಮಿತಿಯ ಷರತ್ತನ್ನಾಗಲೀ, ಕುಟುಂಬ ರಾಜಕಾರಣದ ಮಾನದಂಡವನ್ನಾಗಲೀ ಕರ್ನಾಟಕದ ವಿಷಯದಲ್ಲಿ, ಅದರಲ್ಲೂ ಬಿ ಎಸ್ ಯಡಿಯೂರಪ್ಪ ವಿಷಯದಲ್ಲಿ ಅನ್ವಯಿಸಲಾಗದೆ ಹಿಂಜರಿದ ಬಿಜೆಪಿ ವರಿಷ್ಠರು, ಅವರ ವಿರುದ್ಧ ಪಕ್ಷದ ಒಳಗೇ ದೊಡ್ಡ ಮಟ್ಟದ ಬಂಡಾಯ, ನಾಯಕತ್ವ ಬದಲಾವಣೆಯ ಪ್ರಯತ್ನಗಳ ವಿಷಯದಲ್ಲಿಯೂ ಸೋಲು ಕಂಡರೇ ಎನ್ನುವುದು ಈಗ ಚರ್ಚೆಯಾಗುತ್ತಿರುವ ಸಂಗತಿ. ಮುಖ್ಯವಾಗಿ ಕಳೆದ ಒಂದೂವರೆ ತಿಂಗಳಿನಿಂದ ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಸರ್ಕಸ್ ಎಂಬುದು ಜನರಿಗೆ ರೇಜಿಗೆ ಹುಟ್ಟಿಸುವ ಮಟ್ಟಿಗೆ ಬೆಳೆದುನಿಂತಿದೆ. ನಾಯಕತ್ವ ಬದಲಾವಣೆಯ ಚಟುವಟಿಕೆಗಳು ಕರೋನಾ ಸಂಕಷ್ಟದ ನಡುವೆ ಜನರಿಗೆ ಅಸಹ್ಯ ಹುಟ್ಟಿಸಿವೆ. ನಗೆಪಾಟಲಿನ ಸಂಗತಿಯಾಗಿವೆ.
ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ದೆಹಲಿ ವರಿಷ್ಠರು ಕನಿಷ್ಟ ಈ ಹೊತ್ತಿಗಾಗಲೇ ಒಂದು ದಿಟ್ಟ ನಿರ್ಧಾರ ಪ್ರಕಟಿಸುವ ಮೂಲಕ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಒಂದು ಸಂದೇಶ ರವಾನಿಸಬೇಕಿತ್ತು. ಸಾವಿರಾರು ಕೋಟಿ ರೂ. ಭ್ರಷ್ಟಾಚಾರ, ಆಡಳಿತದಲ್ಲಿ ಕುಟುಂಬದವರ ಹಸ್ತಕ್ಷೇಪದಂತಹ ಗಂಭೀರ ಆರೋಪಗಳನ್ನು ಮುಂದಿಟ್ಟು, ಯಡಿಯೂರಪ್ಪ ಆಡಳಿತ ವೈಖರಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಪೆಟ್ಟು ಕೊಡಲಿದೆ ಎಂಬ ವಾದ ಮುಂದಿಟ್ಟು ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿರುವ ಭಿನ್ನರ ಮಾತಿಗೆ ಬೆಲೆ ಕೊಟ್ಟು ನಾಯಕತ್ವ ಬದಲಾವಣೆ ಮಾಡಬೇಕಿತ್ತು. ಇಲ್ಲವೇ, ಪಕ್ಷ ಮತ್ತು ವರಿಷ್ಠರು ಒಪ್ಪಿಕೊಂಡ ನಾಯಕತ್ವದ ವಿರುದ್ದ ಕನಿಷ್ಟ ನಿರಂತರ ಬಹಿರಂಗ ಹೇಳಿಕೆ ನೀಡುತ್ತಿರುವ, ವರಿಷ್ಠರ ಎಚ್ಚರಿಕೆಯ ಬಳಿಕವೂ ಮಾಧ್ಯಮಗಳ ಮುಂದೆ ಆ ವಿಷಯ ಪ್ರಸ್ತಾಪಿಸುತ್ತಿರುವ ಭಿನ್ನಮತೀಯ ಮುಖಂಡರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿತ್ತು.
ಆದರೆ, ಬಿಜೆಪಿ ವರಿಷ್ಠರು ಈ ಎರಡೂ ವಿಷಯದಲ್ಲಿ ಮೌನಕ್ಕೆ ಶರಣಾಗಿರುವುದರ ಹಿಂದಿನ ಮರ್ಮವೇನು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಹಾಗೆ ನೋಡಿದರೆ, ಯಡಿಯೂರಪ್ಪ ವಿಷಯದಲ್ಲಿ ಹೀಗೆ ಸ್ವತಃ ಬಿಜೆಪಿ ಹೈಕಮಾಂಡೇ ಹಿಂದೆ ಸರಿಯುತ್ತಿರುವುದು ಇದೇ ಮೊದಲೇನಲ್ಲ. 2008-13ರ ಅವಧಿಯಲ್ಲಿ ಕೂಡ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳಲ್ಲೇ ಆರಂಭವಾಗಿದ್ದ ಭಿನ್ನಮತ ಮತ್ತು ನಾಯಕತ್ವ ಬದಲಾವಣೆಯ ಕೂಗಿನ ವಿಷಯದಲ್ಲಿ ಆಗಿನ ಪಕ್ಷದ ಹೈಕಮಾಂಡ್ ನಿಷ್ಕ್ರಿಯತೆಯೇ ‘ಕರ್ ನಾಟಕ’ದಂತಹ ನಿತ್ಯ ರಾಜಕೀಯ ನಾಟಕಕ್ಕೆ ಕಾರಣವಾಗಿತ್ತು. ರಾಜ್ಯದ ಬಿಜೆಪಿ ಬಣಗಳ ರೆಸಾರ್ಟ್ ರಾಜಕಾರಣ, ದಿನಕ್ಕೊಂದು ಸರ್ಕಸ್, ಇಡೀ ದೇಶದಲ್ಲಿ ನಗೆಪಾಟಲಿನ ಸಂಗತಿಯಾಗಿತ್ತು.
ಆದರೆ, ಬಹುತೇಕ ದಶಕದ ಹಿಂದಿನ ಭಾರತೀಯ ಜನತಾ ಪಕ್ಷಕ್ಕೂ, ಕಳೆದ ಏಳು ವರ್ಷಗಳ ಬಿಜೆಪಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹಾಗೇ ಅಂದಿನ ಹೈಕಮಾಂಡ್ ಮತ್ತು ಇಂದಿನ ವರಿಷ್ಠರ ನಡುವೆಯೂ ಹೋಲಿಸಲಾಗದ ಮಟ್ಟಿನ ವ್ಯತ್ಯಾಸಗಳಿವೆ. ಉತ್ತರಭಾರತದ ರಾಜ್ಯಗಳ ವಿಷಯದಲ್ಲಿ ಮತ್ತು ಪಕ್ಷದ ಕೇಂದ್ರೀಯ ವ್ಯವಸ್ಥೆಯ ವಿಷಯದಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿ ಪ್ರಶ್ನಾತೀತರು ಎಂಬ ವರ್ಸಸ್ಸು ಇದೆ. ಈ ವರಿಷ್ಠರ ಜೋಡಿಯ ಬಗ್ಗೆ ಭಾರತೀಯ ರಾಜಕಾರಣದ ಚಾಣಾಕ್ಷ, ಪಕ್ಷದ ಯಾವ ನಾಯಕರೂ ಎದುರು ನಿಂತು ಮಾತನಾಡಲು ನಡುಗುವ ಬಲಿಷ್ಠ ವ್ಯಕ್ತಿತ್ವ ಎಂಬ ಮಾತುಗಳಿವೆ. ಕೇವಲ ಪಕ್ಷವನ್ನಷ್ಟೇ ಅಲ್ಲ; ಭಾರತೀಯ ರಾಜಕಾರಣವನ್ನೇ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಪ್ರಭಾವಿ ಜೋಡಿ ಎಂಬ ಬಹುಪರಾಕ್ ಗಳೂ ಇವೆ.
ಇಂತಹ ಮಹಾನ್ ವರ್ಚಸ್ಸಿ ಹೈಕಮಾಂಡ್, ಕರ್ನಾಟಕದ ವಿಷಯದಲ್ಲಿ ಸ್ವತಃ ಪಕ್ಷದ ಸಿದ್ಧಾಂತನಿಷ್ಠರು, ಸಂಘಪರಿವಾರದ ಆಪ್ತರೂ ಆದ ನಾಯಕರೇ ಸಿಎಂ ವಿರುದ್ಧ ತಿಂಗಳುಗಳಿಂದ ಒಂದಿಲ್ಲೊಂದು ಗಂಭೀರ ದೂರು ಹೊತ್ತು ದಾಖಲೆಗಳನ್ನು ಹಿಡಿದು ಬಂದು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದರೂ ಯಾಕೆ ತಮ್ಮ ಪ್ರಭಾವ ತೋರುತ್ತಿಲ್ಲ? ಅಥವಾ ರಾಜ್ಯ ಉಸ್ತುವಾರಿಯ ಎಚ್ಚರಿಕೆಯ ಬಳಿಕವೂ ಬಹಿರಂಗ ಹೇಳಿಕೆ ಮುಂದುವರಿಸುವ ಮೂಲಕ ಸ್ವತಃ ತಮ್ಮ ಮಾತಿಗೆ ಬೆಲೆ ಇಲ್ಲದಂತೆ ಮಾಡುತ್ತಿರುವ ಭಿನ್ನರ ವಿರುದ್ಧವಾದರೂ ಕ್ರಮ ಕೈಗೊಳ್ಳುತ್ತಿಲ್ಲವಲ್ಲ ಯಾಕೆ? ಏನಿದರ ಮರ್ಮ?.
ಅಂದರೆ; ಪಕ್ಷದ ಕೇಂದ್ರದ ಮಟ್ಟದಲ್ಲಿ ಮತ್ತು ಬಹುತೇಕ ಉತ್ತರಭಾರತದ ಪಕ್ಷದ ಘಟಕಗಳ ವಿಷಯದಲ್ಲಿ ತೋರುವ ಛಾತಿಯನ್ನು ಕರ್ನಾಟಕದ ವಿಷಯದಲ್ಲಿ ತೋರಲು ಹೈಕಮಾಂಡ್ ಹಿಂಜರಿಯುತ್ತಿದೆ ಎಂದೇ ಅರ್ಥವಲ್ಲವೆ? ಹಾಗಾದರೆ, ಯಡಿಯೂರಪ್ಪ ಅವರಿಗೆ ಇರುವ ಜಾತಿಬಲ, ಹಣಬಲ, ವರ್ಚಸ್ಸಿನ ಬಲ ಮತ್ತು ಅವರ ತಂತ್ರಗಾರಿಕೆಗಳ ಮುಂದೆ, ದಶಕಗಳ ಹಿಂದೆ ಸೋತು ಶರಣಾಗಿದ್ದ ಅಂದಿನ ಬಿಜೆಪಿಯ ಹೈಕಮಾಂಡಿಗೂ ಇಂದಿನ ಹೈಕಮಾಂಡಿಗೂ ವ್ಯತ್ಯಾಸವೇನು? ಭಾರೀ ಶಕ್ತಿಶಾಲಿ ಹೈಕಮಾಂಡ್ ಎಂಬ ಬಿಜೆಪಿಯ ವರಿಷ್ಠರ ಜೋಡಿಯ ಈವರೆಗಿನ ವರ್ಚಸ್ಸಿಗೆ ಮತ್ತೆ ಕರ್ನಾಟಕದ ನಾಯಕತ್ವವೇ ತಿರುಮಂತ್ರವಾಯಿತೆ? ಜಾತಿ ಬಲ ಮತ್ತು ಹಣ ಬಲದ ಜೊತೆಗೆ, ತಳಮಟ್ಟದ ಹೋರಾಟದ ಮೂಲಕ ಬೆಳೆದುಬಂದ ಜನನಾಯಕನೊಬ್ಬನ ಮುಂದೆ ಕೇವಲ ತಂತ್ರಗಾರಿಕೆ ಮತ್ತು ದರ್ಪದ ಮೇಲೆ ವರ್ಚಸ್ಸು ಕಟ್ಟಿಕೊಂಡ ವರಿಷ್ಠರು ಅಸಹಾಯಕರಾಗಿಹೋದರೆ? ಎಂಬ ಹಲವು ಪ್ರಶ್ನೆಗಳನ್ನು ಸದ್ಯದ ಬಿಜೆಪಿಯ ಬಿಕ್ಕಟ್ಟು ಮುಂದುಮಾಡಿದೆ.
ಒಟ್ಟಾರೆ, ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಬಣದ ಕೈ ಮೇಲಾಗುವುದೋ ಅಥವಾ ನಾಯಕತ್ವ ಉಳಿಸಿಕೊಂಡು ಅವಧಿ ಪೂರ್ಣಗೊಳಿಸಬೇಕು ಎಂಬ ಸಿಎಂ ಯಡಿಯೂರಪ್ಪ ಬಳಗದ ಕೈ ಮೇಲಾಗುವುದೋ ಎಂಬುದು ಕಾದುನೋಡಬೇಕಾದ ಸಂಗತಿ. ಆದರೆ, ಈ ನಾಯಕತ್ವ ಬದಲಾವಣೆಯ ವಿಷಯದಲ್ಲಿ ನಿರಂತರವಾಗಿ ಹೀಗೆ ‘ಕಾದುನೋಡುವ’ ಸ್ಥಿತಿಯನ್ನೇ ಚಾಲ್ತಿಯಲ್ಲಿಟ್ಟಿರುವ ಬಿಜೆಪಿ ಹೈಕಮಾಂಡ್, ‘ರಾಜಾಹುಲಿ’ ಯಡಿಯೂರಪ್ಪ ಎದುರು ತಾನೆಷ್ಟು ದುರ್ಬಲ ಎಂಬುದನ್ನು ಜಗಜ್ಜಾಹೀರುಗೊಳಿಸುತ್ತಿದೆ! ಅಲ್ಲವೆ?









