
ದೇಶದ 76ನೇ ಗಣರಾಜ್ಯೋತ್ಸವ ಆಚರಣೆಗೆ ರಾಜಧಾನಿಯಲ್ಲಿ ಸಕಲ ತಯಾರಿ ನಡೆದಿದ್ದು, ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪಥ ಸಂಚಲನಕ್ಕೆ ಭಾರೀ ಬಂದೋಬಸ್ತ್ ಮಾಡಲಾಗಿದೆ. ಈ ಬಾರಿ ಒಟ್ಟು 38 ತುಕಡಿಗಳು ಪಥ ಸಂಚಲನದಲ್ಲಿ ಭಾಗಿಯಾಗಲಿದ್ದು, ರಾಜ್ಯ ಪೊಲೀಸ್, ಕೇರಳ ಪೊಲೀಸ್, ಸ್ಕೌಟ್ಸ್ ಗೈಡ್ಸ್, ಬ್ಯಾಂಡ್, ವಿದ್ಯಾರ್ಥಿಗಳ ತಂಡ ಸೇರಿ ಒಟ್ಟು 1,150 ಜನರು ಭಾಗಿಯಾಗಲಿದ್ದಾರೆ.
ಗಣರಾಜ್ಯೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿಕೊಂಡಿದೆ. ಮೈದಾನದ ಸುತ್ತ ಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದು, 8 ಮಂದಿ ಡಿಸಿಪಿ, 17 ಎಸಿಪಿ, 44 ಇನ್‌ಸ್ಪೆಕ್ಟರ್, 114 ಪಿಎಸ್‌ಐ, 58 ಎಎಸ್ಐ, 80 ಮಹಿಳಾ ಸಿಬ್ಬಂದಿ, 30 ಜನ ಕ್ಯಾಮೆರಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಗಣರಾಜ್ಯೋತ್ಸವ ಬಂದೋಬಸ್ತ್‌ಗೆ 10 KSRP ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡ ತಯಾರಿದ್ದು, ಮೈದಾನದ ಸುತ್ತ 103 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕಲರ್ ಕೋಡ್‌ಗಳ ಮೂಲಕ ಪಾಸ್ ವಿತರಿಸಿದ್ದು, ಪ್ರವೇಶದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಮಾಡಲಾಗಿದೆ.

ಇನ್ನು ಇಂದು ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ಗಣರಾಜ್ಯೋತ್ಸವದ ದಿನ ಸಂಚಾರ ನಿರ್ಬಂಧ ಮಾಡಲಾಗಿದೆ. ಜನವರಿ 26 ರಂದು ಬೆಳಗ್ಗೆ 8.30 ರಿಂದ 10.30 ರವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಓ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್ ತನಕ ಹಾಗೂ ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆಗೂ ನಿಷೇಧ ಇರಲಿದೆ.







