ಹೋಟೆಲ್ ಗೆ ಹೋದರೆ ಬೈಯ್ಕೊಂಡು ತಿನ್ನಬೇಕು. ಗೋಣಿಚೀಲದಲ್ಲಿ ಹಣ ತಂದರೂ ಒಂದೊತ್ತಿನ ಊಟಕ್ಕೂ ಯೋಚನೆ ಮಾಡೋ ಸ್ಥಿತಿ. ಜೇಬು ತುಂಬಿಕೊಂಡು ಹೊರಗೆ ಹೋದರೆ ಮರಳಿ ಬರುವಾಗ ಖಾಲಿ ಖಾಲಿ!
ಇದು ಇವತ್ತಿನ ಭಾರತದಲ್ಲಿನ ಬಹುತೇಕರ ಸ್ಥಿತಿ. ಯಾವುದೇ ಬೆಲೆ ಕೇಳಿದರೂ ಆಶ್ಚರ್ಯ, ಆಘಾತ. ಇವತ್ತು ಕೇಳಿದ ಬೆಲೆ ನಾಳೆಗೆ ದುಪ್ಪಟ್ಟು. ರೇಟು ಕೇಳೋಕೆ ಭಯ. ಕೆಜಿ ಲೆಕ್ಕದಲ್ಲಿ ಸಿಗುತ್ತಿದ್ದ ತರಕಾರಿ, ಬೇಳೆ-ಬೆಲೆ ಅದೇ ರೇಟಿಗೆ ೧೦೦ ಗ್ರಾಂ, ೨೦೦ ಗ್ರಾಂ ಅಂತಾರೆ. ಉಸ್ಸಾಪ್ಪ, ದುಬಾರಿ ದುನಿಯಾ ಬೇಸಿಗೆ ಕಾಲದ ಬಿಸಿಲಿಗಿಂತ ಹೆಚ್ಚು!
ಹೌದು, ದೇಶಾದ್ಯಂತ ಪೆಟ್ರೋಲ್, ಡೀಸೆಲ್, ತರಕಾರಿಗಳು, ಎಣ್ಣೆ, ಹಾಲು ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ವೇಗವಾಗಿ ಏರುತ್ತಿವೆ. ದಿನದಿಂದ ದಿನಕ್ಕೆ ಬೆಲೆ ಏರಿಕೆ ರಾಕೆಟ್ ವೇಗದಲ್ಲಿ ಗಗನಕ್ಕೆ ಏರುತ್ತಿರುವುದನ್ನು ನೋಡಿ. ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಉಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಕಚ್ಚಾತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಪಂಚ ರಾಜ್ಯಗಳ ಚುನಾವಣೆಯ ಬಳಿಕ ದೇಶದ ಸರ್ಕಾರಿ ತೈಲ ಕಂಪನಿಗಳು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ದಿನ ಪರಿಷ್ಕರಣೆ ವೇಳೆ ಏರಿಕೆ ಮಾಡುತ್ತಿದೆ. ದೇಶದಲ್ಲಿ 15 ದಿನಗಳಲ್ಲಿ 13 ಬಾರಿ ಇಂಧನ ದರವನ್ನು ಏರಿಕೆ ಮಾಡಲಾಗಿದೆ. ಇಂದು ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ.
ತರಕಾರಿ, ಅಕ್ಕಿ ಬೆಲೆ ಏರಿಕೆ
ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಎಎನ್‌ಐ ವರದಿಯ ಪ್ರಕಾರ ಟೊಮ್ಯಾಟೊ, ಕುಂಬಳಕಾಯಿ, ಮೆಣಸಿನಕಾಯಿ, ಮೂಲಂಗಿ ಮತ್ತು ಸೋರೆಕಾಯಿ ಬೆಲೆಗಳು ವೇಗವಾಗಿ ಏರಿದೆ. ತರಕಾರಿ ಮಾರಾಟಗಾರರು ಮತ್ತು ವ್ಯಾಪಾರಿಗಳು ತರಕಾರಿ ಬೆಲೆಯಲ್ಲಿ ಈ ಹಠಾತ್ ಹೆಚ್ಚಳದ ಹಿಂದಿನ ಪ್ರಮುಖ ಕಾರಣ ಬಗ್ಗೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಳಿ, ಅಡುಗೆ ಎಣ್ಣೆ ಮತ್ತು ಬ್ರಾಂಡೆಡ್ ಬಾಸ್ಮತಿ ಅಕ್ಕಿಯ ಬೇಡಿಕೆಯ ಮೇಲೂ ಬೆಲೆ ಏರಿಕೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಬಾಸ್ಮತಿ ಅಕ್ಕಿಯ ಜಾಗತಿಕ ಬೆಲೆ ಏರಿಕೆಯಾಗಿದ್ದು ಜೊತೆಗೆ ಪ್ರಾದೇಶಿಕ ತಳಿಗಳ ಅಕ್ಕಿಯ ದರಗಳು ಏರಿಕೆಯಾಗಿವೆ.
ಖಾದ್ಯ ತೈಲ
ದೇಶೀಯ ಬೇಡಿಕೆಯ ಶೇಕಡಾ 60 ರಷ್ಟು ಪೂರೈಸಲು ಖಾದ್ಯ ತೈಲದ ಆಮದಿನ ಮೇಲೆ ಅವಲಂಬಿತವಾಗಿದೆ. ಜಾಗತಿಕ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಕಳೆದೆರಡು ತಿಂಗಳುಗಳಲ್ಲಿ ವಿವಿಧ ರೀತಿಯ ಅಡುಗೆ ಎಣ್ಣೆಗಳ ಪೂರೈಕೆ ಸಾಧ್ಯವಾಗದೇ ಖಾದ್ಯ ತೈಲದ ಬೆಲೆ ಏರಿಕೆ ಕಂಡಿದೆ. ಪಿಟಿಐ ವರದಿಯ ಪ್ರಕಾರ, ಸರ್ಕಾರದ ಹಲವಾರು ಕ್ರಮಗಳ ಹೊರತಾಗಿಯೂ ಬೆಲೆಗಳು ಏರಿಕೆ ಕಂಡಿವೆ.
ಸೂರ್ಯಕಾಂತಿ ಎಣ್ಣೆಯ ಸರಾಸರಿ ಬೆಲೆ ಈ ವರ್ಷದ ಜನವರಿ 1 ರಂದು ಕೆಜಿಗೆ 161.71 ರೂ.ಗೆ ಹೋಲಿಸಿದರೆ ಏಪ್ರಿಲ್ 4 ರಂದು ಕೆಜಿಗೆ 184.58 ರೂ.ಗೆ ಏರಿದೆ. ಅದೇ ರೀತಿ, ಸೋಯಾಬೀನ್ ಎಣ್ಣೆಯ ಸರಾಸರಿ ಬೆಲೆ ಕೆಜಿಗೆ 148.59 ರೂ.ನಿಂದ 162.13 ರೂ.ಗೆ ಏರಿಕೆಯಾಗಿದೆ, ತಾಳೆ ಎಣ್ಣೆಯು ಪ್ರತಿ ಕೆಜಿಗೆ 128.28 ರೂ.ಗಳಿಂದ 151.59 ರೂ.ಗೆ ಏರಿಕೆಯಾಗಿದೆ. ಸಾಸಿವೆ ಎಣ್ಣೆಯು ಪ್ರತಿ ಕೆಜಿಗೆ 2.78 ರೂಗಳಿಂ 188.54 ರೂ.ಗೆ ಏರಿಕೆಯಾಗಿದೆ.
ಪೆಟ್ರೋಲ್, ಡೀಸೆಲ್, ಎಲ್ಪಿಜಿ ಗ್ಯಾಸ್ ಬೆಲೆ ಹೆಚ್ಚಳ!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಪ್ರತಿ ಲೀಟರ್‌ಗೆ 80-85 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಕಳೆದ 15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 9.20 ರೂ. ಏರಿಕೆಯಾಗಿದೆ.
ಮಾರ್ಚ್ 22 ರಂದು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಹಾಲು ದರ ಹೆಚ್ಚಳ!
ಈಗಾಗಲೇ ಅಮುಲ್, ಪರಾಗ್ ಮತ್ತು ಇತರರು ಬ್ರ್ಯಾಂಡ್ಗಳು ಹಾಲಿನ ಬೆಲೆಯನ್ನು ಹೆಚ್ಚಿಸಿದ್ದಾರೆ.
ಹಣದುಬ್ಬರ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಮುಂಬರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳ ಮೇಲಿನ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಹಣದುಬ್ಬರದ ಮೇಲಿನ ತನ್ನ ಮುಂಚಿನ ಮುನ್ಸೂಚನೆಯನ್ನು ಆರ್‌ಬಿಐ ಮಾರ್ಪಡಿಸಬಹುದು ಎಂದು ಹಣಕಾಸು ತಜ್ಞರು ಅಂದಾಜಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗಿನಿಂದ, ಜಾಗತಿಕವಾಗಿ ಹೆಚ್ಚಿರುವ ತೈಲ ಬೆಲೆಗಳು ಗ್ರಾಹಕರ ಮೇಲೆ ಬೀರಿರುವ ಪ್ರಭಾವವನ್ನು ಆರ್‌ಬಿಐ ಮನಗಂಡಿದೆ ಎಂದು ಹೇಳಲಾಗುತ್ತಿದೆ.
RBI ಗವರ್ನರ್ ನೇತೃತ್ವದ ದರ ನಿಗದಿ ಸಮಿತಿ — ಹಣಕಾಸು ನೀತಿ ಸಮಿತಿ (MPC) — 2022-23 ಹಣಕಾಸು ವರ್ಷದ ಮೊದಲ ಸಭೆಯನ್ನು ಏಪ್ರಿಲ್ 6 ರಿಂದ 8 ರವರೆಗೆ ನಡೆಸಲಿದೆ. ಫಲಿತಾಂಶವನ್ನು ಏಪ್ರಿಲ್ 8 ರಂದು ಪ್ರಕಟಿಸುತ್ತದೆ.
ICRA ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಅವರು ಏಪ್ರಿಲ್ 2022 ರ ನೀತಿ ಪರಾಮರ್ಶೆಯಲ್ಲಿ, MPC ತನ್ನ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಮುನ್ಸೂಚನೆಯನ್ನು ಪರಿಷ್ಕರಿಸುವ ನಿರೀಕ್ಷೆಯಿದೆ ಎಂದು ಹೇಳಿದರು.