ಒಂದು ಕಡೆ ಪೆಟ್ರೋಲ್ ರೇಟ್ ಇಳಿಕೆಯಾಗಿದೆ. ಸರ್ಕಾರ ವಾಹನ ಸವಾರರಿಗೆ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತೆ ರಿಲೀಫ್ ನೀಡಿದೆ. ಆದ್ರೆ, ಕರ್ಮಶಿಯಲ್ ಗ್ಯಾಸ್ ರೇಟ್ ಜಾಸ್ತಿ ಆಗಿದೆ. ತೈಲ ಬೆಲೆ ಇಳಿಕೆಯಾದ್ರೂ ಗ್ರಾಹಕರ ಜೇಬಿಗೆ ಹೋಟೆಲ್ ಹೊರೆಯಾಗ್ತಿವೆ. ಹೌದು, ಹೋಟೆಲ್ ಊಟದ ದರ ಇಂದಿನಿಂದ ಹೆಚ್ಚಳವಾಗುತ್ತಿದೆ. ಜೊತೆಗೆ ಆಟೋ ದರ ಕೂಡ ಹೆಚ್ಚಳ ಮಾಡಿ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.
ಎಲ್ಲಾ ತಿಂಡಿ ತಿನಿಸುಗಳ ಮೇಲಿನ ದರ ಹೆಚ್ಚಿಸಿದ ಹೋಟೆಲ್ ಉದ್ಯಮಿಗಳು!
ಶತಕದ ಗಡಿ ದಾಟಿದ ಪೆಟ್ರೋಲ್, ಡೀಸೆಲ್ ದರಕ್ಕೆ ಸರ್ಕಾರ ತಾತ್ಕಾಲಿಕವಾಗಿ ರಿಲೀಫ್ ಕೊಟ್ಟಿದೆ. ಆದರೆ, ಒಂದು ಕಡೆ ಪೆಟ್ರೋಲ್ ರೇಟ್ ಇಳಿಕೆಯಾಗಿದೆ ಅಂತ ಖುಷಿಯಲ್ಲಿದ್ದವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕರ್ಮಶಿಲ್ ಗ್ಯಾಸ್ ರೇಟ್ ದಿಢೀರನೆ ಗಗನ ಕುಸುಮವಾಗಿದೆ. ಹೋಟೆಲ್ ಬಾಡಿಗೆ, ಆಹಾರ ತಯಾರಿಸಲು ಬಳಸುವ ಎಲ್ಲ ಕಚ್ಚಾ ವಸ್ತುಗಳ ಕೈಗೆಟುಗದ ರೇಂಜ್ ಗೆ ಹೋಗಿ ತಲುಪಿವೆ. ಈ ಬೆನ್ನಲ್ಲೇ ಹೋಟೆಲ್ ಮಾಲೀಕರ ಸಂಘ ಗ್ರಾಹಕರ ದರ ಏರಿಕೆಯನ್ನು ಮಾಡಿ ಶಾಕ್ ಕೊಟ್ಟಿದೆ. ಇನ್ಮುಂದೆ ಹೋಟೆಲ್ಗಳಲ್ಲಿ ತಿನ್ನೋ ಮುನ್ನ ಕಿಸೆ ನೋಡ್ಕೊಂಡು, ಕಿಸೆ ಗಟ್ಟಿ ಇದ್ರಷ್ಟೇ ಹೋಟೆಲ್ಗಳಲ್ಲಿ ಹೊಟ್ಟೆ ತುಂಬಾ ಊಟ, ತಿಂಡಿ ಸಿಗುತ್ತೆ. ಇಲ್ಲವಾದ್ರೆ ಮನೆಯೂಟವೇ ಗಟ್ಟಿ. ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಎಲ್ಲಾ ತಿಂಡಿ ಪದಾರ್ಥಗಳ ಮೇಲಿನ ದರವನ್ನು ಹೆಚ್ಚಿಸಲಾಗಿದೆ.
ಹೋಟೆಲ್ ನಲ್ಲಿ ಊಟ, ತಿಂಡಿ ಬೆಲೆ ಏರಿಕೆಗೆ ಕಾರಣಗಳೇನು?
- ನಿರಂತರವಾಗಿ ಏರಿಕೆಯಾಗ್ತಿರುವ ಕರ್ಮಶಿಯಲ್ ಗ್ಯಾಸ್ ದರ
- ದಿನಸಿ ಸಾಮಾಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲು
- ಅಡುಗೆ ಎಣ್ಣೆಯ ಬೆಲೆಯೂ ದುಬಾರಿ
- ಕಳೆದ 2 ವರ್ಷಗಳಿಂದ ಯಾವುದೇ ಊಟ, ತಿಂಡಿ, ಟೀ, ಕಾಫಿ ದರ ಏರಿಕೆ ಆಗಿಲ್ಲ
- 1,794 ರೂ.ಗೆ ಸಿಗಬೇಕಿದ್ದ 19 ಕೆ.ಜಿ ತೂಕದ ವಾಣಿಜ್ಯ ಸಿಲೆಂಡರ್ ದರ 2 ಸಾವಿರ ಗಡಿದಾಟಿರುವುದು
ಯಾವ್ಯಾವ ತಿಂಡಿಯ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ?
- ಮಸಾಲೆ ದೋಸೆ 65 ರಿಂದ 75ರೂ.ಗೆ ಏರಿಕೆ
- ಇಡ್ಲಿ, ವಡೆ 35-40ರೂ. ಗೆ ಏರಿಕೆ
- ಕಾಫಿ, ಟಿ ಬೆಲೆ 15 ರಿಂದ 20ರೂ. ಗೆ ಏರಿಕೆ
- ಚೌಚೌ ಬಾತ್ 60 ರಿಂದ 70ರೂ. ಗೆ ಏರಿಕೆ
- ಸೌಥ್ ಇಂಡಿಯನ್ ಊಟ 85 ರಿಂದ 95ರೂ. ಗೆ ಏರಿಕೆ
- ರೈಸ್ ಬಾತ್ 40 ರಿಂದ 50ರೂ. ಗೆ ಹೆಚ್ಚಳ
- ರವಾ ಇಡ್ಲಿ 40 ರಿಂದ 45ರೂ. ಗೆ ಏರಿಕೆ
- ಅಕ್ಕಿ ರೊಟ್ಟಿ 45-50ರೂ. ಗೆ ಏರಿಕೆ
- ಪ್ರೈಡ್ ರೈಸ್ 100 ರಿಂದ 110ರೂ.ಗೆ ಕ್ಕೆ ಏರಿಕೆ
- ಗೋಬಿ ಮಂಚೂರಿ ಒಂದು ಪ್ಲೇಟಿಗೆ 100 ರಿಂದ 110ರೂ. ಗೆ ಕ್ಕೆ ಏರಿಕೆ
- ಪನ್ನೀರ್ ಮಂಚೂರಿ 110 ರಿಂದ 120ರೂ. ಗೆ ಹೆಚ್ಚಳ
- ಒಂದು ಪ್ಲೇಟ್ ಪೂರಿ 65 ರಿಂದ 70ರೂ. ಗೆ ಏರಿಕೆ
ಆಟೋ ದರ ಹೆಚ್ಚಿಸಿ ಆದೇಶ ಹೊರಡಿಸಿದ ಸಾರಿಗೆ ಪ್ರಾಧಿಕಾರ!
ಈ ಬಗ್ಗೆ ಪ್ರತಿಕ್ರಿಯಿಸಿದ ಜಯ ಶ್ರೀ ಎಂಬ ಗ್ರಾಹಕಿ, ಸಾಮಾನ್ಯವಾಗಿ ಎಲ್ಲಾ ವಸ್ತುಗಳ ಮೇಲಿನ ರೇಟ್ ಹೆಚ್ಚಳವಾದರೆ ಸಹಜವಾಗಿಯೇ ಹೋಟೆಲ್ ಸೇರಿದಂತೆ ಬಹುತೇಕ ಕ್ಷೇತ್ರದ ದರಗಳು ಏರಿಕೆಯಾಗುತ್ತವೆ. ಇದನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಾದರೆ ಸರ್ಕಾರ ತೈಲ ಹಾಗೂ ತೆರಿಗೆಯನ್ನು ಕಡಿತಗೊಳಿಸಬೇಕು ಎಂದರು. ಹೀಗೆ ಒಂದು ಕಡೆಯಿಂದ ಹೋಟೆಲ್ ದರ ಏರಿಕೆಯಾಗಿದ್ರೆ, ಇತ್ತ ಆಟೋ ದರ ಕೂಡ ಹಚ್ಚಳವಾಗಿದೆ. ಡಿಸೆಂಬರ್ ಒಂದರಿಂದ ಪರಿಷ್ಕರಿಸಲಾದ ಆಟೋ ದರ ಜಾರಿಯಾಗುತ್ತಿದೆ. ಸಾರಿಗೆ ಪ್ರಾಧಿಕಾರದಿಂದ ಆಟೋ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದ್ದು, 90 ದಿನಗಳ ಒಳಗಾಗಿ ಅಂದರೆ ಫೆಬ್ರವರಿ ಅಂತ್ಯದ ಒಳಗಾಗಿ ಮೀಟರ್ ಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಪರಿಷ್ಕೃತ ಆಟೋ ದರ :
- ಮೊದಲ 2 kmಗೆ 30 ರೂಪಾಯಿ ನಿಗದಿ
- ನಂತರದ ಪ್ರತಿ km ಗೆ 15 ರೂಪಾಯಿ
- ಮೊದಲ ಐದು ನಿಮಿಷ ಕಾಯುವಿಕೆ ಉಚಿತ
- ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.
- 20 kg ವರೆಗೆ ಲಗೇಜ್ ಸಾಗಣೆ ಉಚಿತ
- 21 kg ಇಂದ 50 kg ವರೆಗೆ 5 ರೂ. ದರ ನಿಗದಿ
- ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15)
ಒಟ್ನಲ್ಲಿ ಕೋವಿಡ್ ಸಂದರ್ಭದಲ್ಲಿ ಎಷ್ಟೋ ಹೋಟೆಲ್ ಗಳು ಮುಚ್ಚಿ ಹೋಗಿವೆ. ಕೆಲ ಹೋಟೆಲ್ ಗಳು ಆಸ್ಪತ್ರೆ, ಮಾಲ್ ಗಳಾಗಿ ಮಾರ್ಪಾಡಾಗಿವೆ. ಹೋಟೆಲ್ ಮಾಲೀಕರ ಸಂಕಷ್ಟಕ್ಕೆ ಸಿಲುಕಿಕೊಂಡಿರೋದು ಒಂದೆಡೆಯಾದ್ರೆ, ಗ್ರಾಹಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ಜೊತೆಗೆ ಆಟೋ ದರವನ್ನೂ ಹೆಚ್ಚಳ ಮಾಡಿರುವುದು ನಿಜಕ್ಕೂ ಸಾರ್ವಜನಿಕರನ್ನು ಕಂಗಾಲಾಗಿಸಿದೆ.