• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪ್ರಜಾಸತ್ತೆಯ ಆಶಯಗಳೂ ಧರ್ಮಗಳ ಪಾರಮ್ಯವೂ

ನಾ ದಿವಾಕರ by ನಾ ದಿವಾಕರ
September 12, 2024
in Top Story, ಕರ್ನಾಟಕ, ದೇಶ, ರಾಜಕೀಯ, ವಿಶೇಷ
0
ಪ್ರಜಾಸತ್ತೆಯ ಆಶಯಗಳೂ ಧರ್ಮಗಳ ಪಾರಮ್ಯವೂ
Share on WhatsAppShare on FacebookShare on Telegram

ADVERTISEMENT

——ನಾ .ದಿವಾಕರ—–

ಪ್ರಜಾಪ್ರಭುತ್ವ ಒಂದು ಸಾಮುದಾಯಿಕ ಜಂಗಮ – ಧರ್ಮ ಎನ್ನುವುದು ಸಾಂಸ್ಥಿಕವಾದ ಸ್ಥಾವರ

(ಕೃಪೆ : ಕೆಂಬಾವುಟ ವಾರಪತ್ರಿಕೆ ವಾರ್ಷಿಕ ವಿಶೇಷಾಂಕ 2024)

ವಸಾಹತುಶಾಹಿಯಿಂದ ವಿಮೋಚನೆ ಪಡೆದ ಭಾರತ ಪ್ರಧಾನವಾಗಿ ಆಯ್ಕೆ ಮಾಡಿಕೊಂಡ ಆಳ್ವಿಕೆಯ ಮಾದರಿ ಎಂದರೆ ಪ್ರಜಾಪ್ರಭುತ್ವ ಮತ್ತು ಗಣತಂತ್ರ ವ್ಯವಸ್ಥೆ. ಸ್ವಾತಂತ್ರ್ಯದ ಪೂರ್ವಸೂರಿಗಳಲ್ಲಿ ಅತಿ ಹೆಚ್ಚಿನವರಿಗೆ ಈ ಬಗ್ಗೆ ಯಾವುದೇ ತಕರಾರುಗಳಿರಲಿಲ್ಲ. ಹಿಟ್ಲರ-ಮುಸೋಲಿನಿ ಪ್ರಭಾವಕ್ಕೊಳಗಾಗಿ ಜನಾಂಗೀಯ ನೆಲೆಯಲ್ಲಿ ಹಿಂದೂ ರಾಷ್ಟ್ರದ ಪ್ರತಿಪಾದನೆ ಮಾಡಿದ್ದ ಬಲಪಂಥೀಯ ಚಿಂತಕರಲ್ಲಿ ಭಿನ್ನ ಆಲೋಚನೆ ಇದ್ದುದಾದರೂ, ದೇಶದ ಬಹುಪಾಲು ಜನತೆಯ ಆಶೋತ್ತರಗಳನ್ನು ಮೀರುವ ಕ್ಷಮತೆಯಾಗಲೀ, ದಾರ್ಷ್ಟ್ಯವಾಗಲೀ ಇರಲಿಲ್ಲ. ಹಾಗಾಗಿ ಸ್ವತಂತ್ರ ಭಾರತ ಅಪ್ಪಿಕೊಂಡ ಸಂಸದೀಯ ಪ್ರಜಾಸತ್ತೆ ಮತ್ತು ಗಣತಂತ್ರ ಮಾದರಿಯನ್ನು ಬಹುಮಟ್ಟಿಗೆ ಒಮ್ಮತದಿಂದಲೇ ಸ್ವೀಕರಿಸಲಾಗಿತ್ತು. ಆದರೆ ಈ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ಉಂಟಾಗದಂತೆ ದೇಶವನ್ನು ಜನರಿಂದಲೇ, ಜನಗಳಿಗಾಗಿ, ಜನರೇ ನಡೆಸುವ ಉದಾತ್ತ ಚಿಂತನೆಗೆ ಸಾಂವಿಧಾನಿಕ ನೆಲೆಯಲ್ಲಿ ಚಾಲನೆ ನೀಡಿದ ಶ್ರೇಯ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ.

 ಭಾರತದ ಸಂವಿಧಾನ ಪೀಠಿಕೆಯ “ ಭಾರತದ ಜನಗಳಾದ ನಾವು ” ಎಂಬ ಆರಂಭಿಕ ಪದಗಳೇ ಸ್ವಾತಂತ್ರ್ಯಪೂರ್ವ ಭಾರತದ ಆಶಯಗಳನ್ನೂ ವ್ಯಕ್ತಪಡಿಸುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಗಣತಂತ್ರದ ಪರಿಕಲ್ಪನೆ ಮತ್ತು ಪ್ರಜಾಪ್ರಭುತ್ವದ ಮೂಲ ಸೆಲೆಯನ್ನು ವೇದಕಾಲದಿಂದ ಹನ್ನೆರಡನೆ ಶತಮಾನದ ವಚನ ಚಳುವಳಿಯವರೆಗೂ ಗುರುತಿಸಲಾಗುವುದಾದರೂ, ಈ ಯಾವುದೇ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ತದ್ವಿರುದ್ಧವಾದ ಪಿತೃಪ್ರಧಾನತೆ ಮತ್ತು ಸಂಪತ್ತಿನ ಒಡೆತನ ಪ್ರಶ್ನೆಗೊಳಗಾಗಲಿಲ್ಲ. 12ನೆಯ ಶತಮಾನದ ವಚನ ಚಳುವಳಿಯವರೆಗೂ ಶ್ರೇಣೀಕೃತ ಜಾತಿ ವ್ಯವಸ್ಥೆಯೂ ಸಹ ಸಾಂಸ್ಥಿಕ ನೆಲೆಯಲ್ಲಿ, ಸಾಮುದಾಯಿಕ ಚೌಕಟ್ಟಿನೊಳಗೆ ಪ್ರಶ್ನೆಗೊಳಗಾಗಿರಲಿಲ್ಲ. ಜಾತಿ ಶ್ರೇಷ್ಠತೆ ಮತ್ತು ತತ್ಸಂಬಂಧಿತ ಮೇಲ್ಜಾತಿಯ ಪಾರಮ್ಯವನ್ನು ಪ್ರಶ್ನಿಸುವ ಮನೋಭಾವಕ್ಕೆ ಈ ಕಾಲಘಟ್ಟದಲ್ಲಿ ಚಾಲನೆ ದೊರೆತಿದ್ದರಿಂದಲೇ ಭಾರತದಲ್ಲಿ ಪ್ರಜಾಸತ್ತೆ ಎನ್ನುವುದು ತಳಮಟ್ಟದ ಸಮಾಜದಿಂದ ಮೂಡಬಹುದಾದ ಚಿಂತನಾಕ್ರಮವಾಗಿ ರೂಪುಗೊಂಡಿದ್ದು ಚಾರಿತ್ರಿಕ ಸತ್ಯ.

 ಸೆಕ್ಯುಲರಿಸಂ ಮತ್ತು ಪ್ರಜಾಪ್ರಭುತ್ವ

 ಸಾಂಸ್ಥಿಕ ಧರ್ಮ ಅಥವಾ ಮತವನ್ನು ಆಳ್ವಿಕೆಯ ನೆಲೆಯಿಂದ ದೂರ ಇರಿಸುವ ಮೂಲ ಸೈದ್ದಾಂತಿಕ ಚಿಂತನೆಗಳಿಂದ ದೂರ ಸರಿದ ಸ್ವತಂತ್ರ ಭಾರತ,  ಸೆಕ್ಯುಲರಿಸಂ ಎಂಬ ತಾತ್ವಿಕ ನೆಲೆಯನ್ನೇ ಅಪಭ್ರಂಶಗೊಳಿಸಿ “ಸರ್ವ ಧರ್ಮ ಸಮಭಾವ” ಅಥವಾ “ಮತ-ಧರ್ಮ ನಿರಪೇಕ್ಷತೆ”ಯ  ನೆಲೆಯಲ್ಲಿ ಮರುವ್ಯಾಖ್ಯಾನಕ್ಕೊಳಪಡಿಸಿರುವುದು ಚಾರಿತ್ರಿಕ ಚೋದ್ಯ ಹೌದಾದರೂ ಕಟುವಾಸ್ತವ.  ಹಾಗಾಗಿಯೇ ಧರ್ಮ ಅಥವಾ ಧಾರ್ಮಿಕತೆಯನ್ನು ಆಳ್ವಿಕೆಯಿಂದ ದೂರ ಇಡುವ ಬದಲು, ಎಲ್ಲ ಧರ್ಮಗಳಿಂದ ಸಮಾನ ಅಂತರ ಕಾಯ್ದುಕೊಳ್ಳುವ ಅಥವಾ ಎಲ್ಲವನ್ನೂ ಸಮಾನವಾಗಿ ಕಾಣುವ ಪದ್ಧತಿಯನ್ನು ಭಾರತೀಯ ಸೆಕ್ಯುಲರಿಸಂ ಅಳವಡಿಸಿಕೊಂಡಿದೆ. ಈ ಅಪಭ್ರಂಶದ ಆಧಾರದಲ್ಲೇ 77 ವರ್ಷಗಳನ್ನು ಪೂರೈಸಿರುವ ಭಾರತದ ಪ್ರಜಾಸತ್ತೆ ಯಾವುದೇ ಹಂತದಲ್ಲೂ ಸಾಂಸ್ಥಿಕ ಧರ್ಮದಿಂದ ವಿಮುಖವಾಗದೆಯೇ ನಡೆದುಕೊಂಡು ಬಂದಿರುವುದು ಮತ್ತೊಂದು ಕಟುವಾಸ್ತವ. ಆದರೆ ನೆಹರೂ ಯಗದಲ್ಲಿದ್ದಂತಹ ನಿರಪೇಕ್ಷತೆಯ ನೆಲೆಗಳು ಕಳೆದ ಎರಡು-ಮೂರು ದಶಕಗಳಲ್ಲಿ ಶಿಥಿಲವಾಗಿರುವುದರಿಂದ  ಈವತ್ತಿನ ಪ್ರಜಾಸತ್ತೆ ಧರ್ಮದ ಪರೋಕ್ಷ ಛಾಯೆಯಲ್ಲೇ ನಡೆಯುತ್ತಿರುವಂತೆ ಭಾಸವಾಗುತ್ತದೆ.

 ಈಗ ಭಾರತ 77 ವರ್ಷಗಳ ಪ್ರಜಾಸತ್ತೆ ಮತ್ತು ಗಣತಂತ್ರದ ಸವಿಯನ್ನು ಅನುಭವಿಸಿದೆ. ಆಳ್ವಿಕೆಯನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಅನುಕರಿಸುತ್ತಲೇ ತಮ್ಮ ಅಧಿಕಾರ ವಲಯವನ್ನು ವಿಸ್ತರಿಸಿಕೊಳ್ಳುವ ಅನಿವಾರ್ಯತೆಯನ್ನು ನಮ್ಮ ಸಂವಿಧಾನ ಸೃಷ್ಟಿಸಿದೆ. ತಳಮಟ್ಟದ ಸಾಮಾಜಿಕ ಆಶಯ ಮತ್ತು ಅಪೇಕ್ಷೆಗಳ ನೆಲೆಯಲ್ಲಿ ನೋಡಿದಾಗ, ಕಾಲಕಾಲಕ್ಕೆ ನಡೆಯುವ ಚುನಾವಣಾ ಪ್ರಕ್ರಿಯೆ ಈ ಅನುಕರಣೆಗೆ ಒಂದು ಅಧಿಕೃತತೆಯನ್ನು ಒದಗಿಸಿದ್ದು ಸಾಮಾನ್ಯ ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅಪಾರ ವಿಶ್ವಾಸವನ್ನು ಮೂಡಿಸಿದೆ. ಆದರೆ ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ತಳಸಮಾಜದ ಈ ವಿಶ್ವಾಸವನ್ನು ಅಲುಗಾಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನೆಹರೂ ಯುಗದ ಸೆಕ್ಯುಲರ್‌ ನೀತಿಗಳನ್ನು Pseudo ಅರ್ಥಾತ್‌ ನಕಲಿ ಎಂದು ಮೂದಲಿಸುತ್ತಲೇ ಹಿಂದುತ್ವ ರಾಜಕಾರಣವು ಇಂದು ಧಾರ್ಮಿಕ ಸಂಕೇತಗಳನ್ನು ಸಂಸತ್ತು-ರಾಷ್ಟ್ರಪತಿ ಭವನದವರೆಗೂ ತಂದು ನಿಲ್ಲಿಸಿದೆ.

ಈ ಸಂದಿಗ್ಧತೆಯ ನಡುವೆಯೇ ಪ್ರಜಾಸತ್ತೆಯಲ್ಲಿ ಧರ್ಮದ ಪ್ರವೇಶ ಮತ್ತು ಪರಿಣಾಮ ಕುರಿತು ಪರಾಮರ್ಶೆ ನಡೆಸಬೇಕಿದೆ. ಭಾರತೀಯ ಪ್ರಜಾಪ್ರಭುತ್ವದ ಮೂಲ ಸೆಲೆ ಮತ್ತು ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ನಮಗೆ ಕಾಣುವುದು ಸಾಂಸ್ಥಿಕ ಧರ್ಮಗಳು ಪೋಷಿಸುವಂತಹ ಪಿತೃಪ್ರಧಾನತೆ, ಯಜಮಾನಿಕೆ, ಏಕಸ್ವಾಮ್ಯತೆ ಮತ್ತು ಸ್ವಾಯತ್ತತಾ ವಿರೋಧಿ ಧೋರಣೆಗಳು. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯು ಈ ನೆಲದಲ್ಲಿ ಪ್ರಚಲಿತವಾಗಿರುವ ಎಲ್ಲ ಮತಗಳನ್ನೂ ಆವರಿಸಿರುವುದರಿಂದ, ಧರ್ಮ ಅಥವಾ ಧಾರ್ಮಿಕ ಅನುಸರಣೆಗಳು ಸಮಾಜದ ಎಲ್ಲ ಸ್ತರಗಳನ್ನೂ ಪ್ರಭಾವಿಸುತ್ತಲೇ ಬರುತ್ತದೆ. ಪ್ರಜಾಪ್ರಭುತ್ವವು ಬಯಸುವಂತಹ ಎಲ್ಲ ರೀತಿಯ ನಿರ್ದಿಷ್ಟ ಅಸ್ಮಿತೆಗಳಿಂತಲೂ ನಿರಪೇಕ್ಷವಾಗಿರುವ ಮೌಲ್ಯಗಳನ್ನು ಬಹುಶಃ ಯಾವುದೇ ರಾಜಕೀಯ ಪಕ್ಷವೂ ರೂಢಿಸಿಕೊಂಡಂತೆ ಕಾಣುವುದಿಲ್ಲ.

 ಪ್ರಾತಿನಿಧಿಕ ಪಕ್ಷಗಳಲ್ಲಿ ಪ್ರಜಾಸತ್ತೆ

 ಈ ನಿರಪೇಕ್ಷತೆ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಊರ್ಜಿತವಾಗಬೇಕಾದರೆ ರಾಜಕೀಯ ಪಕ್ಷಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಬೇರೂರಿರುವುದು ಅತ್ಯವಶ್ಯ. ಅಂದರೆ, ಒಂದು ದೇಶವನ್ನಾಳುವ ಪ್ರಜಾಸತ್ತೆ ಹೇಗೆ ಜನರ, ಜನರಿಂದ, ಜನರಿಗಾಗಿ ಇರಬೇಕಾಗುತ್ತದೆಯೋ ಹಾಗೆಯೇ ಈ ಆಳ್ವಿಕೆಯ ವಾರಸುದಾರರಾಗಲು ಬಯಸುವ ಪ್ರತಿಯೊಂದು ಪಕ್ಷವೂ ಆಂತರಿಕವಾಗಿ ಇದೇ ಔದಾತ್ಯವನ್ನು ಅಳವಡಿಸಿಕೊಂಡು, ಅನುಕರಿಸಬೇಕಾಗುತ್ತದೆ. ಇದು ಸಾಧ್ಯವಾದಲ್ಲಿ ಪಕ್ಷಗಳೊಳಗೆ ಆಂತರಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಿ, ತಳಮಟ್ಟದವರೆಗೂ ಜನದನಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಲು ಸಾಧ್ಯ. ದುರದೃಷ್ಟವಶಾತ್‌ ಭಾರತದ ಎಲ್ಲ ರಾಜಕೀಯ ಪಕ್ಷಗಳಲ್ಲೂ ತಳಸ್ತರದ ಮೇಲೆ ಯಜಮಾನಿಕೆ ಸ್ಥಾಪಿಸುವ ನಾಯಕತ್ವದ ಪರಿಕಲ್ಪನೆ ಪಾರಂಪರಿಕವಾಗಿ ರೂಢಿಗತವಾಗಿದೆ. ಹಾಗಾಗಿ ಪ್ರಜಾಪ್ರಭುತ್ವ ಮೂಲತಃ ಬಯಸುವ “ ಅಧಿಕಾರ ವ್ಯಾಪ್ತಿ ಕೆಳಸ್ತರದಿಂದ ಮೇಲ್‌ ಸ್ತರಕ್ಕೆ ಚಲಿಸುವಂತಹ ” ಉದಾತ್ತತೆ ಇಲ್ಲವಾಗಿದ್ದು “ ಮೇಲಿನಿಂದ ಆಳ್ವಿಕೆಯನ್ನು ಹೇರುವ ” ಸಂಕುಚಿತತೆ ಆವರಿಸಿದೆ.

 ಹಿಂದುತ್ವ ರಾಜಕಾರಣ ನೇರವಾಗಿ ಧರ್ಮ ಮತ್ತು ರಾಜಕಾರಣವನ್ನು ಸಮೀಕರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಅದರ ಪ್ರಭಾವ ಮತ್ತು ಪರಿಣಾಮಗಳನ್ನು ಕುರಿತು ನಿಷ್ಕರ್ಷೆ ಮಾಡುವ ಮುನ್ನ ಪ್ರಜಾಪ್ರಭುತ್ವವನ್ನು ಆದರಿಸುವ ಪಕ್ಷಗಳಲ್ಲಿ ಈ ಸಂಕುಚಿತತೆಯನ್ನು ಏಕೆ ತೊಡೆದುಹಾಕಲಾಗುತ್ತಿಲ್ಲ ಎಂದು ಯೋಚಿಸಬೇಕಿದೆ. ಭಾರತದಲ್ಲಿ ಧರ್ಮ ಅಥವಾ ಧಾರ್ಮಿಕ ಆಚರಣೆಗಳು ಜನಜೀವನದ ಒಂದು ಭಾಗವಾಗಿ ಕೆಲವೊಮ್ಮೆ ಸಾಂಸ್ಕೃತಿಕ ಆವರಣವನ್ನೂ ಆಕ್ರಮಿಸುತ್ತಿರುವುದರಿಂದ ಈ ಜನಸಮುದಾಯಗಳ ನಡುವಿನಿಂದಲೇ ರೂಪುಗೊಳ್ಳುವ ರಾಜಕೀಯ ಪಕ್ಷಗಳು ಇವುಗಳಿಗೆ ವಿಮುಖವಾಗುವುದು ಕಷ್ಟವಾಗುತ್ತದೆ.  ಹಾಗಾಗಿಯೇ ಹಿಂದುತ್ವದ ಪ್ರತಿಪಾದಕರಿಗೆ ಸಂಸ್ಕೃತಿ ಮತ್ತು ಧರ್ಮ ಎರಡನ್ನೂ ಸಮೀಕರಿಸಿ,  ಒಂದೇ ನೆಲೆಯಲ್ಲಿ ಪುನರ್‌ ವ್ಯಾಖ್ಯಾನ ಮಾಡುವುದು ಸುಲಭವಾಗುತ್ತಿದೆ. ಧರ್ಮ ಮತ್ತು ಸಂಸ್ಕೃತಿ ಇವೆರಡೂ ಭಿನ್ನ ಪರಿಕಲ್ಪನೆಗಳು, ಒಂದು ಸಾಂಸ್ಥಿಕವಾದರೆ ಮತ್ತೊಂದು ಸಾಮುದಾಯಿಕ ಎಂದು ಜನರಿಗೆ ತಿಳಿಯಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನೈತಿಕ ಜವಾಬ್ದಾರಿ ಹೊರಬೇಕಿದ್ದ ಎಡಪಕ್ಷಗಳು ಎರಡೂ ನೆಲೆಗಳಲ್ಲಿ ಕ್ರಿಯಾಶೀಲವಾಗಿರಲಿಲ್ಲ ಎನ್ನುವುದು ಒಪ್ಪಲೇಬೇಕಾದ ಸತ್ಯ.

 ಹಾಗಾಗಿ ಇಂದು ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಧರ್ಮ ಎನ್ನುವ ಪರಿಕಲ್ಪನೆ ಸಾಂಸ್ಥೀಕರಣಕ್ಕೊಳಗಾಗಿ ಆಳ್ವಿಕೆಯ ಆವರಣದಲ್ಲಿ ನೆಲೆಗೊಂಡಿದೆ. ಈ ಸಾಂಸ್ಥೀಕರಣಕ್ಕೊಳಗಾದ ಧರ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಧಿಕ್ಕರಿಸುತ್ತಲೇ ತನ್ನ ಪ್ರಾಚೀನತೆ ಮತ್ತು ಸಾಂಪ್ರದಾಯಿಕತೆಯನ್ನು ಸಮಾಜದ ಮೇಲೆ ಹೇರುತ್ತದೆ. ಇಸ್ಲಾಮಿಕ್‌ ದೇಶಗಳಲ್ಲಿ ಇದರ ಪ್ರಭಾವ ಮತ್ತು ಪರಿಣಾಮವನ್ನು ಗಮನಿಸುತ್ತಲೇ ಬಂದಿದ್ದೇವೆ. ಬಿಜೆಪಿ ಮತ್ತು ಆರೆಸ್ಸೆಸ್‌ ಈ ಸಾಂಸ್ಥೀಕರಣವನ್ನು ವ್ಯವಸ್ಥಿತವಾಗಿ ರೂಪಿಸುತ್ತಾ ಬಂದಿವೆ. ಈ ಸಾಂಸ್ಥೀಕೃತ ಧರ್ಮ ಮತ್ತು ಅಧಿಕಾರ ರಾಜಕಾರಣದ ಸಹಭಾಗಿತ್ವವನ್ನು ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬೂರ್ಷ್ವಾ ಪಕ್ಷಗಳಲ್ಲೂ ಕಾಣಬಹುದು. ಕಾಂಗ್ರೆಸ್‌ ಪಕ್ಷವನ್ನೂ ಒಳಗೊಂಡಂತೆ ಸೆಕ್ಯುಲರ್‌ ಎಂದು ಬೆನ್ನುತಟ್ಟಿಕೊಳ್ಳುವ ಯಾವ ಪಕ್ಷಗಳೂ ಸಹ ಸಾಂಸ್ಥಿಕ ಧರ್ಮಕೇಂದ್ರಗಳನ್ನು ಅಥವಾ ಅವುಗಳ ಸಾಮಾಜಿಕ ಪಾರಮ್ಯವನ್ನು ವಿರೋಧಿಸುತ್ತಿಲ್ಲ ಎನ್ನುವುದೂ ಕಟು ವಾಸ್ತವ.

ಸಾಂಸ್ಥಿಕ ಧರ್ಮದ ಪ್ರಭಾವಗಳು

 ತತ್ಪರಿಣಾಮವಾಗಿ ಸಾಂಸ್ಥಿಕ ಧರ್ಮಗಳ ಚೌಕಟ್ಟಿನೊಳಗೇ ನಡೆಯುವಂತಹ ಕಂದಾಚಾರಗಳು, ಅನುಸರಿಸುವಂತಹ ಮೌಢ್ಯಾಚರಣೆಗಳು, ಅನುಕರಿಸಲಾಗುವಂತಹ ಸಾಂಪ್ರದಾಯಿಕ ನಡವಳಿಕೆಗಳು ಮತ್ತು ಸ್ವೀಕೃತವಾಗುವಂತಹ ಮನುಜ ವಿರೋಧಿ ಧೋರಣೆಗಳು, ಇವೆಲ್ಲವೂ ಬಾಹ್ಯ ರಾಜಕಾರಣದ ಕಣ್ಣೆದುರಿನಲ್ಲೇ ನಡೆಯುತ್ತಿರುತ್ತವೆ. ತಮ್ಮ ತಮ್ಮ ಮತಕ್ಷೇತ್ರಗಳಿಗೆ ಅನುಗುಣವಾಗಿ ಅಥವಾ ಚುನಾವಣಾ ರಾಜಕಾರಣದ ಅನುಕೂಲತೆಗೆ ತಕ್ಕಂತೆ ಬೂರ್ಷ್ವಾ ಪಕ್ಷಗಳು ಧರ್ಮಗಳ ಬಗ್ಗೆಯೂ ತಮ್ಮ ನಿಲುವುಗಳನ್ನು ಪ್ರತಿಪಾದಿಸುತ್ತಿರುತ್ತವೆ. ಈ ವಿಕೃತ ಧೋರಣೆಯೇ ಹಲವಾರು ಸನ್ನಿವೇಶಗಳಲ್ಲಿ ಓಲೈಕೆ ರಾಜಕಾರಣ ಎಂಬ ವ್ಯಾಖ್ಯಾನಕ್ಕೂ ಒಳಗಾಗುತ್ತದೆ. ಸಾಂಸ್ಥಿಕ ಧರ್ಮಗಳನ್ನು ಅಥವಾ ಮತಾಚರಣೆಗಳನ್ನು ಸಾಪೇಕ್ಷ ನೆಲೆಯಲ್ಲಿ ನೋಡುವ ಮತ್ತು ವ್ಯಾಖ್ಯಾನಿಸುವ ಮೂಲಕ ಭಾರತೀಯ ಪ್ರಜಾಸತ್ತೆಯನ್ನು ಪ್ರತಿನಿಧಿಸುವ ಬೂರ್ಷ್ವಾ ಪಕ್ಷಗಳು ಧರ್ಮದ ರಾಜಕೀಯ ಪ್ರವೇಶಕ್ಕೆ ಮುಕ್ತ ಹಾದಿಯನ್ನು ನಿರ್ಮಿಸಿವೆ. ಸಂಸದೀಯ ವ್ಯವಸ್ಥೆಯಲ್ಲೇ ಅಧಿಕಾರಕ್ಕೆ ಬಂದಿರುವ ಎಡಪಕ್ಷಗಳು ಸಹ ಹಲವು ಸಂದರ್ಭಗಳಲ್ಲಿ ಈ ಸಾಪೇಕ್ಷ ದೃಷ್ಟಿಕೋನವನ್ನು ಅನುಸರಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇದರ ಪ್ರಧಾನ ಫಲಾನುಭವಿ ಬಿಜೆಪಿ ಅಥವಾ ಹಿಂದುತ್ವ ರಾಜಕಾರಣ ಎನ್ನಬಹುದು.

 ಸಾಂಸ್ಥಿಕ ಧರ್ಮ ಮತ್ತು ಪ್ರಜಾಸತ್ತೆಯ ರಾಜಕಾರಣ ಏಕೆ ಒಂದಾಗಿ ಸಾಗಕೂಡದು ? ಇದಕ್ಕೆ ಉತ್ತರವನ್ನು ಎಲ್ಲ ಧರ್ಮಗಳ ಸಾಂಸ್ಥಿಕ ಸ್ವರೂಪ ಮತ್ತು ಅವುಗಳ ತಾತ್ವಿಕ-ಸೈದ್ದಾಂತಿಕ ತಳಹದಿಯಲ್ಲೇ ಗುರುತಿಸಬಹುದು. ಇಸ್ಲಾಂ, ಹಿಂದೂ, ಕ್ರೈಸ್ತ, ಸಿಖ್‌, ಬೌದ್ಧ ಯಾವುದೇ ಧರ್ಮವಾದರೂ ಮೂಲತಃ ತನ್ನ ಉಳಿವಿಗಾಗಿ ತಾನೇ ನಿರ್ಮಿಸಿಕೊಂಡ ಸಾಂಸ್ಥಿಕ ಚೌಕಟ್ಟುಗಳನ್ನು, ತಳಪಾಯವನ್ನು ಹಾಗೂ ಸಾಮಾಜಿಕ ಪಾರಮ್ಯವನ್ನು ಸಂರಕ್ಷಿಸಲು ಅಪೇಕ್ಷಿಸುತ್ತವೆ. ಮತ ಅಥವಾ ಧರ್ಮದ ಮೂಲ ಸ್ವರೂಪವೇ ಯಜಮಾನಿಕೆ ಮತ್ತು ಅದರ ಸುತ್ತಲಿನ ತಾತ್ವಿಕತೆಗಳನ್ನು ಅವಲಂಬಿಸುತ್ತದೆ. ಬಹುಮುಖ್ಯವಾಗಿ ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆ ಇಲ್ಲಿ ಪ್ರಧಾನವಾಗಿ ಕಾಣುತ್ತದೆ. ಈ ಯಜಮಾನಿಕೆಯನ್ನು ಬಿಟ್ಟುಕೊಡದ ಮತಕೇಂದ್ರಗಳು ಅಥವಾ ಧರ್ಮದ ನೆಲೆಗಳು ಸಮಾಜದ ತಳಮಟ್ಟದವರೆಗೂ ವಿಸ್ತರಿಸಿದ್ದರೂ ಸಹ ಎಲ್ಲಿಯೂ ಸಹ ತನ್ನ ಪಾರಮ್ಯ ಸಡಿಲವಾಗದಂತೆ ಎಚ್ಚರ ವಹಿಸುತ್ತವೆ.

 ಡಾ. ಬಿ. ಆರ್‌ ಅಂಬೇಡ್ಕರ್‌ ಅನುಸರಿಸಿದ ನವಯಾನ ಬೌದ್ಧ ಧರ್ಮದಲ್ಲೂ ಸಹ  ಸಾಂಸ್ಥಿಕ ನೆಲೆಗಳಲ್ಲಿ ಮಹಿಳಾ ಪ್ರಾಧಾನ್ಯತೆ ಅಥವಾ ಸಮಾನ ಪ್ರಾತಿನಿಧ್ಯ ಕಾಣಲಾಗುವುದಿಲ್ಲ. ಪ್ರೊಟೆಸ್ಟೆಂಟ್‌ ಕ್ರೈಸ್ತರಲ್ಲಿ ಬಹಳ ಹಿಂದಿನಿಂದಲೂ  ಧಾರ್ಮಿಕವಾಗಿ ಮಹಿಳೆಯರಿಗೆ ಮುಂಚೂಣಿ ಸ್ಥಾನ/ಹುದ್ದೆಗಳನ್ನು ನೀಡುತ್ತಿದ್ದರೂ, ಕ್ಯಾಥೊಲಿಕ್‌ ಚರ್ಚ್‌ಗಳಲ್ಲಿ ಇತ್ತೀಚೆಗಷ್ಟೇ ಮಹಿಳೆಯರಿಗೆ ಚರ್ಚ್‌ಗಳಲ್ಲಿರುವ ಪೂಜಾವೇದಿಕೆಗಳಿಗೆ (Altar) ಪ್ರವೇಶವನ್ನು ನೀಡಲಾಗಿದೆ. ಆದರೆ ಇಲ್ಲಿಯೂ ಸಹ ಪುರುಷರ ನೆರಳಿನಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಪವಿತ್ರ ಸಾಮೂಹಿಕ ಪ್ರಾರ್ಥನೆ, ದೀಕ್ಷಾಸ್ನಾನ, ಮೊದಲ ಸಮರ್ಪಣೆ, ದೃಢೀಕರಣ, ಮದುವೆ ಮತ್ತು ಅಂತ್ಯಕ್ರಿಯೆ ಸೇರಿದಂತೆ ವಿವಿಧ ಸೇವೆಗಳಲ್ಲಿ ಪಾದ್ರಿಗೆ ಸಹಾಯ ಮಾಡಬಹುದೇ ಹೊರತು, ಸ್ವತಃ ಪಾದ್ರಿಗಳ ಅಥವಾ ಪೌರೋಹಿತ್ಯದ ಪಾತ್ರ ವಹಿಸಲು ಅವಕಾಶ ನೀಡುವುದಿಲ್ಲ. 14 ವರ್ಷಗಳಿಗೆ ಮೇಲ್ಪಟ್ಟವರಿಗೆ ಇಲ್ಲಿಯೂ ಪ್ರವೇಶ ಇರುವುದಿಲ್ಲ. ಬೌದ್ಧ ಭಿಕ್ಕುಗಳಲ್ಲೂ ಸಹ ಭಿಕ್ಷಾಟನೆ ಮಾಡುವವರು ಗೃಹಿಣಿಯರಿಂದ ಮಾತ್ರವೇ ಸ್ವೀಕರಿಸುತ್ತಾರೆ. ಸ್ತ್ರೀವಾದಿ ನೆಲೆಯಲ್ಲಿ ನೋಡಿದಾಗ ಎಲ್ಲ ಧರ್ಮಗಳ ಆಚರಣೆಗಳಲ್ಲೂ ಈ ಸಾಂಸ್ಥಿಕ ನಿರ್ಬಂಧಗಳು ಇನ್ನೂ ಗಟ್ಟಿಯಾಗಿರುವುದನ್ನು ಗಮನಿಸಬೇಕಿದೆ.

 ರಾಜಕೀಯ ಪಕ್ಷಗಳಲ್ಲಿ ತಾತ್ವಿಕ ಛಾಯೆ

 ಹಾಗಾಗಿಯೇ ಪ್ರಜಾಪ್ರಭುತ್ವವನ್ನೇ ಉಸಿರಾಡುವ ರಾಜಕೀಯ ಪಕ್ಷಗಳಲ್ಲೂ ಸಹ ಧರ್ಮಗಳು ಹೇರುವ ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಗಳು ಯಥಾಸ್ಥಿತಿಯಲ್ಲಿ ಉಳಿದುಕೊಂಡಿವೆ. ಎಡಪಕ್ಷಗಳನ್ನೂ ಸೇರಿದಂತೆ ಭಾರತದ ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಆಂತರಿಕ ನಿರ್ವಹಣೆಯ ಸ್ತರಗಳಲ್ಲಿ ಮಹಿಳಾ ಸಮಾನತೆಗೆ ಪ್ರಾಶಸ್ತ್ಯವನ್ನೇ ನೀಡದಿರುವುದು ಇದನ್ನೇ ಸೂಚಿಸುತ್ತದೆ. ಸಹಜವಾಗಿ ಗಂಡಾಳ್ವಿಕೆ ಮತ್ತು ಊಳಿಗಮಾನ್ಯ ಯಜಮಾನಿಕೆಯ ಧೋರಣೆಗಳು ಅಧಿಕಾರಸ್ತರಗಳನ್ನು ಆಕ್ರಮಿಸುತ್ತವೆ. ಇದೇ ಸೂತ್ರವನ್ನೇ ಪ್ರಜಾಸತ್ತಾತ್ಮಕ ಅಧಿಕಾರ ಕೇಂದ್ರಗಳಿಗೂ, ಸಾಂಸ್ಕೃತಿಕ ಸಂಸ್ಥೆಗಳಿಗೂ, ತಳಮಟ್ಟದ ಜನಸಂಘಟನೆಗಳಿಗೂ ವಿಸ್ತರಿಸಿ ನೋಡಿದಾಗ, ಪ್ರಜಾಪ್ರಭುತ್ವದ ಮೌಲ್ಯಗಳು ಎಲ್ಲಿಯೂ ನೆಲೆ ಕಂಡಿರುವುದನ್ನು ಗುರುತಿಸಲಾಗುವುದಿಲ್ಲ. ಎಡಪಕ್ಷಗಳ ಕಾರ್ಮಿಕ ಸಂಘಟನೆಗಳಲ್ಲಾಗಲೀ, ಸರ್ಕಾರಗಳೇ ರೂಪಿಸುವ ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳಲ್ಲಾಗಲೀ ಗಂಡಾಳ್ವಿಕೆಯ ಪಾರಮ್ಯವನ್ನು ಕೊನೆಗಾಳಿಸಲು ಸಾಧ್ಯವಾಗಿಲ್ಲ. ಈ ಸಾಂಪ್ರದಾಯಿಕ ಆಲೋಚನಾ ವಿಧಾನವೇ ದೇಶದ ಪ್ರಜಾಸತ್ತಾತ್ಮಕ ರಾಜಕಾರಣಕ್ಕೂ ವಿಸ್ತರಿಸುವುದರಿಂದಲೇ, ರಾಜಕೀಯ ಪಕ್ಷಗಳಲ್ಲೂ ಸಹ ಪುರುಷಾಧಿಪತ್ಯವೇ ರಾರಾಜಿಸುತ್ತದೆ. ಪಂಚಾಯತ್‌ ರಾಜ್‌ ಎಂಬ ಕ್ರಾಂತಿಕಾರಕ ಕಾಯ್ದೆ ಇಲ್ಲದೆ ಹೋಗಿದ್ದರೆ ಇಂದಿಗೂ ಸಹ ಭಾರತದ ಅಧಿಕಾರ ರಾಜಕಾರಣ ಮೇಲಿನಿಂದ ಕೆಳಗಿನವರೆಗೂ ಗಂಡಾಳ್ವಿಕೆಯ ಕೇಂದ್ರಗಳೇ ಆಗಿರುತ್ತಿದ್ದವೇನೋ ?

 ಭಾರತದ ಸಂದರ್ಭದಲ್ಲಿ ಈ ಪಾರಮ್ಯದ ನೆಲೆಗಳನ್ನು ಜಾತಿಶ್ರೇಣೀಕರಣ ಆಕ್ರಮಿಸುತ್ತದೆ. ಹಾಗಾಗಿಯೇ ಧರ್ಮಪರಿಪಾಲನೆ ಮಾಡುವ ಅಥವಾ ಧರ್ಮಸಂರಕ್ಷಣೆಗಾಗಿ ತಮ್ಮದೇ ಆದ ಸ್ಥಾವರಗಳನ್ನು ನಿರ್ಮಿಸಿಕೊಳ್ಳುವ ಎಲ್ಲ ಧರ್ಮಗಳಲ್ಲೂ ಮಹಿಳಾ ಪ್ರಾತಿನಿಧ್ಯ ಮತ್ತು ಪ್ರಧಾನತೆಯನ್ನು ಅಲ್ಲಗಳೆಯಲಾಗುತ್ತದೆ. ಧರ್ಮದ ಅನುಯಾಯಿಗಳನ್ನು ಕೇವಲ ಅನುಕರಿಸುವವರಾಗಿರಲು ಬಯಸುತ್ತವೆಯೇ ಹೊರತು ಪ್ರಶ್ನಿಸುವವರಾಗಲು ಬಿಡುವುದಿಲ್ಲ. ಗ್ರಾಂಥಿಕ ಧರ್ಮವ್ಯಾಖ್ಯಾನಗಳ ನೆಲೆಯಲ್ಲಿ ನಡೆಯವಂತಹ ಅನ್ಯಾಯಗಳು ಪ್ರಶ್ನಾತೀತವಾಗಿಬಿಡುತ್ತವೆ. ಈ ವ್ಯಾಖ್ಯಾನಗಳ ಸುತ್ತಲೂ ನೈತಿಕತೆಯ ಹೆಸರಿನಲ್ಲಿ ಅಥವಾ ಸಂಸ್ಕೃತಿಯ ನೆಪದಲ್ಲಿ ಜನಜೀವನಕ್ಕೆ ಅಗತ್ಯವಾದ ನಿರೂಪಣೆಗಳನ್ನು (Narratives) ರೂಪಿಸುವ ವಾರಸುದಾರ‍ ಶಕ್ತಿಗಳು ತಳಮಟ್ಟದಿಂದ ಮೇಲ್‌ಸ್ತರದವರೆಗೂ ವ್ಯಕ್ತವಾಗಬಹುದಾದ ಪ್ರತಿರೋಧಗಳನ್ನು ಒಂದೋ ಹದ್ದುಬಸ್ತಿನಲ್ಲಿಸುತ್ತವೆ ಇಲ್ಲವಾದರೆ ನಿಷ್ಕ್ರಿಯಗೊಳಿಸುತ್ತವೆ ಅಥವಾ ನಿರ್ಲಕ್ಷಿಸಿ ಅಂಥವರನ್ನು ಮೂಲೆಗುಂಪು ಮಾಡುತ್ತವೆ. ಒಂದು ಕ್ಷಣ ಕಣ್ಮುಚ್ಚಿ ಯೋಚಿಸಿದಾಗ, ಭಾರತದ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ಲಕ್ಷಣವನ್ನು ಗುರುತಿಸಬಹುದಲ್ಲವೇ ? ಧರ್ಮ ಅಥವಾ ಧಾರ್ಮಿಕತೆ ಹಿಂದುತ್ವ ರಾಜಕಾರಣದ ಮೂಲಕ ಭಾರತದ ರಾಜಕೀಯ ವಲಯವನ್ನು ಆಕ್ರಮಿಸಿಕೊಳ್ಳುವ ಮುನ್ನವೂ ಈ ಅಪಸವ್ಯವು ನಮ್ಮ ನಡುವೆ ಇತ್ತಲ್ಲವೇ ?

 ಪ್ರಜಾಸತ್ತೆಯ ಆಳ್ವಿಕೆಯಲ್ಲಿ ಧರ್ಮ

 ಈ ಹಿನ್ನೆಲೆಯಲ್ಲೇ ಸಂಸದೀಯ ಪ್ರಜಾಸತ್ತೆಯಲ್ಲಿ ಧರ್ಮದ ಪ್ರವೇಶವನ್ನು ಪರಾಮರ್ಶಿಸಬೇಕಾಗುತ್ತದೆ. ಹಿಂದುತ್ವ ರಾಜಕಾರಣವು ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ಈ ಸಾಂಸ್ಥಿಕ ಧರ್ಮದ ನೆಲೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನೇರ ಪ್ರವೇಶ ಪಡೆದಿವೆ. ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುವ ಸಂಘಪರಿವಾರ-ಬಿಜೆಪಿಯ ಮಹತ್ವಾಕಾಂಕ್ಷೆಗೆ 2024ರ ಚುನಾವಣೆಗಳು ತಾತ್ಕಾಲಿಕ ತಡೆಯೊಡ್ಡಿದ್ದರೂ, ಆಡಳಿತ ವ್ಯವಸ್ಥೆಯ ಎಲ್ಲ ಸ್ತರಗಳಲ್ಲೂ, ಎಲ್ಲ ಅಂಗಗಳಲ್ಲೂ ಹಿಂದೂ ಧಾರ್ಮಿಕ ಚಿಂತನೆಗಳು ವ್ಯವಸ್ಥಿತವಾಗಿ ಬೇರೂರಿರುವುದು ವಾಸ್ತವ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುವ, ಸೆಕ್ಯುಲರ್‌ ಎಂದು ಗುರುತಿಸಿಕೊಳ್ಳುವ ರಾಜಕೀಯ ವಲಯದಲ್ಲಿ ಎಲ್ಲ ಧರ್ಮಗಳು ಬೋಧಿಸುವ ಅಥವಾ ಹೇರುವ ಪ್ರಜಾತಂತ್ರ ವಿರೋಧಿ ನೆಲೆಗಳು ಇಂದಿಗೂ ಗಟ್ಟಿಯಾಗಿರುವುದರಿಂದಲೇ ಬಿಜೆಪಿ-ಸಂಘಪರಿವಾರಕ್ಕೆ ಹಿಂದೂ ಧರ್ಮದ ಚೌಕಟ್ಟಿನಲ್ಲಿ ತನ್ನ ರಾಜಕಾರಣವನ್ನು ಬೆಳೆಸಲು ಸಾಧ್ಯವಾಗಿದೆ. ಇದನ್ನು ಬಲವಾಗಿ ವಿರೋಧಿಸುವ ಧ್ವನಿಗಳು ಚುನಾವಣಾ ರಾಜಕಾರಣದಲ್ಲಿ ಅಥವಾ ಪ್ರಗತಿಪರ ಎನಿಸಿಕೊಳ್ಳುವ ಹೋರಾಟಗಳಲ್ಲಿ ಕೇಳಬಹುದೇ ಹೊರತು, ಪಕ್ಷ ರಾಜಕಾರಣದ ತಾತ್ವಿಕ ನೆಲೆಗಳಲ್ಲಿ, ಸೈದ್ಧಾಂತಿಕ ಚೌಕಟ್ಟಿನಲ್ಲಿ ಕೇಳಿಬರುತ್ತಿಲ್ಲ.

 1990-91ರ ಅನಂತರದ ನವ ಉದಾರವಾದ ಮತ್ತು ಜಾಗತೀಕರಣ ಪ್ರಕ್ರಿಯೆಯೊಡನೆ ಜೊತೆಜೊತೆಯಾಗೇ ನೆಲೆಗಾಣುತ್ತಿರುವ ಭಾರತದ ಸಾಂಸ್ಕೃತಿಕ ರಾಜಕಾರಣದಲ್ಲಿ ಬಿಜೆಪಿ ಪ್ರತಿಪಾದಿಸುವ ಹಿಂದೂ ಸಾಂಪ್ರದಾಯಿಕತೆ ಮತ್ತು ಧರ್ಮಾಚರಣೆಗಳು ಇಂದು ನಿರ್ಣಾಯಕ ಘಟ್ಟ ತಲುಪಿವೆ. ರಾಜಕೀಯವಾಗಿ ಇದನ್ನು ವಿರೋಧಿಸುವ ಇತರ ಸೆಕ್ಯುಲರ್‌ ಎನಿಸಿಕೊಳ್ಳುವ ಪಕ್ಷಗಳು ತಮ್ಮದೇ ಆದ ಅಧಿಕಾರ ವಲಯಗಳಲ್ಲಿ ಎಲ್ಲ ಧರ್ಮಗಳನ್ನೂ ಸಮಾನವಾಗಿ ದೂರವಿರಿಸುವುದರಲ್ಲಿ ವಿಫಲವಾಗಿವೆ. ಸಮಾನತೆ ಮತ್ತು ಸೋದರತ್ವದ ಉದಾತ್ತ ಆಲೋಚನೆಗಳನ್ನು ಜಾತಿ-ಸಾಮಾಜಿಕ ಅಂತಸ್ತು-ಲಿಂಗತ್ವ ಹಾಗೂ ವರ್ಗದ ನೆಲೆಗಳಲ್ಲಿ ಅಳವಡಿಸಬೇಕಾದರೆ ಎಲ್ಲ ಧರ್ಮಗಳಲ್ಲಿರುವ ಪ್ರಜಾತಂತ್ರ ವಿರೋಧಿ ಮೌಲ್ಯಗಳನ್ನು ಧಿಕ್ಕರಿಸಬೇಕಾಗುತ್ತದೆ. ಮೂಲತಃ ಮತ ಅಥವಾ ಧರ್ಮ ಎಂಬ ಪರಿಕಲ್ಪನೆಯಲ್ಲೇ ಅಪ್ರಜಾಸತ್ತಾತ್ಮಕ ಲಕ್ಷಣಗಳಿರುವುದನ್ನು ಗುರುತಿಸದೆ ಇರುವುದೂ ಸಹ ಈ ಬೆಳವಣಿಗೆಗೆ ಕಾರಣವಾಗಿದೆ. ಸೆಕ್ಯುಲರ್‌ ಪಾಳಯದ ರಾಜಕೀಯದಲ್ಲಿನ ಈ ದೌರ್ಬಲ್ಯವೇ ಹಿಂದುತ್ವ ರಾಜಕಾರಣ ಮೇಲುಗೈ ಸಾಧಿಸಲು ಕಾರಣವೂ ಆಗಿದೆ.

 ಭಾರತ ಮೂಲತಃ ಒಂದು ಸಂಸ್ಕೃತಿಗಳ ಒಕ್ಕೂಟ ರಾಷ್ಟ್ರವಾಗಿದ್ದು, ಹಿಮಾಲಯದಿಂದ ಕೇರಳದವರೆಗೆ ವ್ಯಾಪಿಸಿರುವ ಸಾವಿರಾರು ಸಾಂಸ್ಕೃತಿಕ ನೆಲೆಗಳಲ್ಲಿ ವಿಸ್ತರಿಸಿದೆ. ಪ್ರತಿ ಇನ್ನೂರು ಕಿಲೋಮೀಟರ್‌ಗೆ ಒಂದು ಸಂಸ್ಕೃತಿ, ಒಂದು ಭಾಷೆಯನ್ನು ಕಾಣಬಹುದಾದ ಭಾರತದ ಸಾಮಾಜಿಕ ಬದುಕು ಈ ವೈವಿಧ್ಯತೆಯಿಂದಲೇ ತನ್ನ ಅಂತಃಸತ್ವವನ್ನು ಉಳಿಸಿಕೊಂಡುಬಂದಿದೆ. ಭಾರತದ ಪ್ರಜಾಸತ್ತೆಯ ಬುನಾದಿಯೂ ಈ ಬಹುಸಾಂಸ್ಕೃತಿಕ ನೆಲೆಗಳೇ ಆಗಿದ್ದು, ಯಾವುದೇ ಧರ್ಮದ ಹೇರಿಕೆ ಇಲ್ಲಿ ತಳಮಟ್ಟದ ಪ್ರತಿರೋಧ ಎದುರಿಸುತ್ತದೆ. ಶತಮಾನಗಳ ಮುಸ್ಲಿಂ ದೊರೆಗಳ ಆಳ್ವಿಕೆಯಾಗಲೀ, ಎರಡು ಶತಮಾನಗಳ ಬ್ರಿಟೀಷ್‌ ವಸಾಹತುಶಾಹಿ ಆಳ್ವಿಕೆಯಾಗಲೀ ಈ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಸಮ್ಮಿಳಿತವಾದುವೇ ಹೊರತು, ತಮ್ಮದೇ ಆದ ಧಾರ್ಮಿಕ ಪಾರಮ್ಯವನ್ನು ಹೇರಲು ಸಾಧ್ಯವಾಗಿಲ್ಲ. ಇದು ಭಾರತದ ಪ್ರಜಾಸತ್ತಾತ್ಮಕ ಹರಹು ಮತ್ತಷ್ಟು ಗಟ್ಟಿಯಾಗಲು ನೆರವಾಗಿದೆ. ಇಂದಿಗೂ ಪ್ರತಿಯೊಬ್ಬ ಭಾರತೀಯ ವ್ಯಕ್ತಿ ತನ್ನನ್ನು ತಾನು ಬದುಕುವ ಸಾಂಸ್ಕೃತಿಕ ಚೌಕಟ್ಟಿನೊಳಗೇ ಗುರುತಿಸಿಕೊಳ್ಳುವುದನ್ನು ಕಾಣಬಹುದು.

 ಒಂದು ನೈಜ ಪ್ರಜಾಸತ್ತೆಯ ಕಡೆಗೆ

 ಇದನ್ನು ಅಲ್ಲಗಳೆದು ಒಂದು ನಿರ್ದಿಷ್ಟ ಧರ್ಮವನ್ನು ಹೇರುವ ಪ್ರಯತ್ನಗಳು ಇಲ್ಲಿ ವಿಫಲವಾಗುತ್ತಲೇ ಹೋಗುತ್ತವೆ. ಹಿಂದುತ್ವ ರಾಜಕಾರಣವೂ ಈ ಕಹಿ ಅನುಭವಕ್ಕೊಳಗಾಗಿದೆ. ಇದಕ್ಕೆ ಕಾರಣ ಭಾರತೀಯ ಸಮಾಜದಲ್ಲಿ Caste Ethos ಅಂದರೆ ಜಾತ್ಯಸ್ಥ ಸ್ವಭಾವ ಹೆಚ್ಚು ಪ್ರಭಾವಶಾಲಿಯಾಗಿವೆ. ಇದನ್ನು ಬೇಧಿಸಿ ಒಂದು ಏಕರೂಪತೆಯನ್ನು ಸಾಧಿಸುವ ಧರ್ಮ ಕೇಂದ್ರಿತ ರಾಜಕಾರಣವು ಒಂದು ಹಂತದವರೆಗೂ ಚಲಿಸಿ ಸ್ಥಗಿತವಾಗುತ್ತದೆ.  ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಸಂರಕ್ಷಿಸಲು ಇದು ಪ್ರಶಸ್ತವಾದ ಅವಕಾಶವಾಗುತ್ತದೆ. ಆದರೆ ಈ ಅವಕಾಶವನ್ನು ಬಳಸಿಕೊಳ್ಳಬೇಕಾದರೆ ಸೆಕ್ಯುಲರ್‌ ಎನಿಸಿಕೊಳ್ಳುವ ರಾಜಕೀಯ ಪಕ್ಷಗಳು ಎಲ್ಲ ಧರ್ಮಗಳ ಮೂಲಸ್ಥಾಯಿ ಆಗಿರುವಂತಹ ಪಿತೃಪ್ರಧಾನತೆ, ಊಳಿಗಮಾನ್ಯ ಧೋರಣೆ, ಗಂಡಾಳ್ವಿಕೆ ಮತ್ತು ಸಾಮಾಜಿಕ ತರತಮಗಳನ್ನು ಏಕಕಾಲಕ್ಕೆ ವಿರೋಧಿಸಿ, ತಳಮಟ್ಟದಿಂದಲೇ ಜನಸಾಮಾನ್ಯರಲ್ಲಿ ಪ್ರಜಾಸತ್ತಾತ್ಮಕ ಸ್ವಭಾವವನ್ನು (Democratic Ethos) ಬೆಳೆಸುವತ್ತ ಗಂಭೀರ ಆಲೋಚನೆ ಮಾಡಬೇಕಿದೆ. ಸೆಕ್ಯುಲರ್‌ ರಾಜಕಾರಣವು ಇಲ್ಲಿ ವಿಫಲವಾದಂತೆಲ್ಲಾ ಹಿಂದುತ್ವ ರಾಜಕಾರಣದ ಧರ್ಮಾಧಾರಿತ ರಾಜಕೀಯ ಯಶಸ್ಸು ಪಡೆಯುತ್ತಲೇ ಹೋಗುತ್ತದೆ.

 ಇದು ಭಾರತವನ್ನು ಮತ್ತೊಮ್ಮೆ ಪ್ರಾಚೀನತೆಯೆಡೆಗೆ ಕೊಂಡೊಯ್ಯುವ ಸಾಧ್ಯತೆಗಳಿವೆ. ಏಕೆಂದರೆ ಸಾಂಸ್ಥೀಕರಣಕ್ಕೊಳಗಾದ ಯಾವುದೇ ಧರ್ಮವೂ ತನ್ನ ತಾತ್ವಿಕ ಬುನಾದಿ ಸಡಿಲವಾಗುವುದನ್ನು ಸಹಿಸುವುದಿಲ್ಲ. ಅಲ್ಲಿರಬಹುದಾದ ತರತಮಗಳನ್ನು, ಕೊಂಚ ಸುಧಾರಣೆಗೊಳಪಡಿಸಬಹುದೇ ಹೊರತು, ಸಂಪೂರ್ಣವಾಗಿ ನಿರ್ಮೂಲ ಮಾಡಲಿಚ್ಚಿಸುವುದಿಲ್ಲ. ಹಾಗೆಯೇ ತನ್ನ ಸಾಂಸ್ಥಿಕ ಅಸ್ತಿತ್ವವನ್ನು ಅಲುಗಾಡಿಸುವ ಯಾವುದೇ ಆಧುನಿಕ ಚಿಂತನೆಗಳಿಗೂ ಅವಕಾಶ ನೀಡುವುದಿಲ್ಲ. ಮೂಲ ತಾತ್ವಿಕ ನೆಲೆಗಳಲ್ಲಿರುವ ನಂಬಿಕೆ, ವಿಶ್ವಾಸ, ಆಚರಣೆ ಮತ್ತು ಜೀವನಾದರ್ಶಗಳು ಶಿಥಿಲವಾಗುವುದನ್ನು ಸಹಿಸುವುದಿಲ್ಲ. ಹಿಂದೂ ಧರ್ಮವೂ ಇದಕ್ಕೆ ಹೊರತಲ್ಲ. ಈ ಕಾರಣಕ್ಕಾಗಿಯೇ ಪ್ರಜಾಸತ್ತೆಯಲ್ಲಿ ಧರ್ಮದ ಪ್ರವೇಶವನ್ನು ನಾವು ವಿರೋಧಿಸಬೇಕಿದೆ. ಆದರೆ ಇದು ಕೇವಲ ರಾಜಕೀಯ ವಿರೋಧವಷ್ಟೇ ಆದರೆ ಭಾರತದ ಬಹುಸಾಂಸ್ಕೃತಿಕ ಸ್ವಭಾವಗಳನ್ನು (Multi cultural Ethos) ಕಾಪಾಡಲಾಗುವುದಿಲ್ಲ.

 ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಪ್ರಜಾಸತ್ತಾತ್ಮಕ ಆಳ್ವಿಕೆಯನ್ನು ಹಾಗೂ ಸಂಸದೀಯ ಪ್ರಜಾಸತ್ತೆಯ ಬುನಾದಿಯನ್ನು ಈ ಅಪಾಯಗಳಿಂದ ರಕ್ಷಿಸಬೇಕಾದರೆ ಭಾರತೀಯ ಸಮಾಜವನ್ನು ಹೊಸ ಯುಗದೆಡೆಗೆ ಕರೆದೊಯ್ಯುವುದು ಅನಿವಾರ್ಯ. ಇಲ್ಲಿ ಸಾಂಸ್ಥೀಕರಣಕ್ಕೊಳಗಾದ ಯಾವುದೇ ಧರ್ಮದ ನೆರಳು ಬೀಳದಂತೆ ತಳಮಟ್ಟದವರೆಗಿನ ಜನಸಮುದಾಯಗಳನ್ನು ಸಮಾನತೆ, ಸೋದರತ್ವ ಮತ್ತು ಸಮನ್ವಯತೆಯತ್ತ ಕೊಂಡೊಯ್ಯಬೇಕಿದೆ. ಈ ದೃಷ್ಟಿಯಿಂದ ಭಾರತದ ಸಂಸದೀಯ ಪ್ರಜಾಸತ್ತೆಯನ್ನು ಪ್ರತಿನಿಧಿಸುವ ಪ್ರತಿಯೊಂದು ಪಕ್ಷವೂ, ಸಂಘಟನೆಯೂ, ಸಾಂಸ್ಕೃತಿಕ ಸಂಸ್ಥೆಯೂ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ವ್ಯಕ್ತಿಗತ ನೆಲೆಯಲ್ಲಿ ಸಾಮಾನ್ಯ ಮನುಷ್ಯರಿಗೆ ಧರ್ಮ ಎನ್ನುವುದು ತಾತ್ವಿಕವಾಗಿ ಅತ್ಯವಶ್ಯ ಎನಿಸಿದರೂ ಭಾರತದಂತಹ ಬಹುಸಾಂಸ್ಕೃತಿಕ ದೇಶದಲ್ಲಿ ಇದು ಆಳ್ವಿಕೆಯ ಮಾದರಿಯಾಗುವುದು ಅಪೇಕ್ಷಣೀಯವಲ್ಲ. ಸಂಸದೀಯ ಪ್ರಜಾಸತ್ತೆಯಲ್ಲಿ ಧರ್ಮದ ಪ್ರವೇಶದಿಂದಾಗುವ ಪರಿಣಾಮಗಳನ್ನು ಹಾಗೂ ಅದು ಪ್ರಭಾವಿಸುವ ಸಮಾಜವನ್ನೂ ಈ ದೃಷ್ಟಿಯಿಂದಲೇ ಅವಲೋಕಿಸಬೇಕಿದೆ.

 (ಈ ಲೇಖನದಲ್ಲಿ ಧರ್ಮ ಎನ್ನುವ ಪದವನ್ನು ಸಾಂಸ್ಥಿಕ Religion ಎಂಬ ಪದಕ್ಕೆ ಸಂವಾದಿಯಾಗಿ ಬಳಸಲಾಗಿದೆ)

Tags: Democracydemocracy or white supremacy ; christianity or white supremacyfreedom of expressiongospel of inclusioninstitute on religion & democracyinstitute on religion and democracypolitics of the gospelReligionreligion and politicsreligion in polandreligion of white supremacysupremacy clausesupreme court of the united states (court)the politics of cultural despairus democracywhite supremacy
Previous Post

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತಾಂದತೆ ಮಿತಿಮೀರಿದೆ – ಸಿ.ಟಿ.ರವಿ !

Next Post

ಕೋಸ್ಟಲ್‌ ಎನರ್ಜಿನ್‌ ಲಿಮಿಟೆಡ್‌ ದಿವಾಳಿ ಪ್ರಕ್ರಿಯೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್‌ ಆದೇಶ

Related Posts

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪ್ರದೋಶ್ ತಂದೆ ಸುಬ್ಬರಾವ್ ವಿಧಿವಶರಾಗಿದ್ದಾರೆ. ಹೀಗಾಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರದೋಶ್ ಗೆ ಕೋರ್ಟ್ ಅನುಮತಿ ನೀಡಿದೆ.ತಂದೆ ನಿಧನರಾದ...

Read moreDetails
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

October 23, 2025
Next Post
ಕೋಸ್ಟಲ್‌ ಎನರ್ಜಿನ್‌ ಲಿಮಿಟೆಡ್‌ ದಿವಾಳಿ ಪ್ರಕ್ರಿಯೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್‌ ಆದೇಶ

ಕೋಸ್ಟಲ್‌ ಎನರ್ಜಿನ್‌ ಲಿಮಿಟೆಡ್‌ ದಿವಾಳಿ ಪ್ರಕ್ರಿಯೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್‌ ಆದೇಶ

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada