ಐದು ವರ್ಷಗಳ ಹಿಂದೆ ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದ್ದ ಹೊನ್ನಾವರ ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಸಾವು ಎಂದು ಉಲ್ಲೇಖಿಸಲಾಗಿದೆ. ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವಂಬರ್ 16 ಕ್ಕೆ ತೀರ್ಪು ಕಾಯ್ದಿರಿಸಲಾಗಿದೆ.
2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಎಂಟರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಯುವಕನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಆರೋಪಿಸಿತ್ತು. ಮೃತ ಮೇಸ್ತಾನನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಅಲ್ಲದೆ, ಆಗಿನ ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಈ ಪ್ರಕರಣದ ಮೂಲಕ ಇಕ್ಕಟ್ಟಿಗೆ ಸಿಲುಕಿಸಿತ್ತು.
ಪರೇಶ್ ಮೆಸ್ತಾ ಸಾವು ಮುಂದಿಟ್ಟು ಬಿಜೆಪಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿತ್ತು. ಆಗಿನ ಗೃಹ ಮಂತ್ರಿ ರಾಮಲಿಂಗ ರೆಡ್ಡಿ ಈ ಪ್ರಕರಣವನ್ನು CBI ತನಿಖೆಗೆ ಒಪ್ಪಿಸಿ ವಿಸ್ತೃತ ವಿಚಾರಣೆಗೆ ಕೇಳಿತ್ತು. ಅದಾಗಿಯೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಕನ್ನಡ, ಉಡುಪಿ, ದಕ, ಶಿವಮೊಗ್ಗ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿತ್ತು. ಪರಿಣಾಮ ಅಲ್ಲಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪ್ರಕರಣವು ರಾಜಕೀಯ ಕಾವು ಪಡೆಯುತ್ತಿದ್ದಂತೆ ಪ್ರಕರಣವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಬಳಿಕ ಈ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನೂ ಬಂಧಿಸಲಾಗಿತ್ತು. ಇದೀಗ ಈ ಬಗ್ಗೆ ವಿವರವಾದ ತನಿಖೆ ನಡೆಸಿದ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಇದೀಗ ಈ ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಆಕಸ್ಮಿಕವಾಗಿದ್ದು, ಇದು ಹತ್ಯೆಯಲ್ಲ ಎಂದು ಹೇಳಿದೆ.
ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಸಂಸದ ಅನಂತ ಕುಮಾರ್ ಹೆಗ್ಡೆ ಸೇರಿದಂತೆ ಹಲವರು ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅವರ ನೇತೃತ್ವದ ಅಂದಿನ ರಾಜ್ಯ ಸರಕಾರದ ವಿರುದ್ಧ ಭಾರೀ ಪ್ರತಿಭಟನೆಗಳಿಗೆ ಮುಂದಾಳತ್ವವನ್ನು ವಹಿಸಿದ್ದರು. ಬಳಿಕ ನಡೆದ ಗಲಭೆ ವೇಳೆ ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಪೊಲೀಸರು ಗಾಯಗೊಂಡಿದ್ದರು ಹಾಗೂ ಪೊಲೀಸರ ವಾಹನಗಳು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿದ್ದವು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಹಿಂದೂ ಕಾರ್ಯರ್ತರ ಹತ್ಯೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಪರೇಶ್ ಮೇಸ್ತಾ ಹೆಸರನ್ನು ಪಟ್ಟಿಯಲ್ಲಿ ಸೇರಿಸುತ್ತಿತ್ತು. ಈ ನಡುವೆ ಸಿಬಿಐ ಈಗ ಬಿ ರಿಪೋರ್ಟ್ ಸಲ್ಲಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಟ್ ಟಾಪಿಕ್ ಆಗಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನ ಈ ಬಾರಿ ಕಾಂಗ್ರೆಸ್ ಬಳಸಿಕೊಳ್ಳಲಾರಂಭಿಸಿದ್ದು, ಐದು ವರ್ಷ ಕಳೆದರೂ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ ಎಂಬುದನ್ನು ಕೆದಕಲಾರಂಭಿಸಿತ್ತು.
ಇದೀಗ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದರಿಂದ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದ್ದು, ಬಿಜೆಪಿಗೆ ಮುಜುಗರ ತಂದಿಟ್ಟಿದೆ.
ಬಿಜೆಪಿ ನಾಯಕರ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ: ಸಿದ್ದರಾಮಯ್ಯ
ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. @BJP4Karnataka ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.