ಆನೇಕಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದಿರುವ ಘಟನೆ ನಡೆದಿದೆ. ದಾರಿ ಬಿಡುವಂತೆ ಪದೇ ಪದೇ ಹಾರ್ನ್ ಮಾಡಿದಕ್ಕೆ ಚಾಕು ಇರಿಯಲಾಗಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿಲಲಿಗೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಿಲಲಿಯಲ್ಲಿ ಸುನೀಲ್ ಹಾಗೂ ಕಾರ್ತಿಕ್ ಎಂಬುವವರಿಗೆ ಚಾಕು ಇರಿಯಲಾಗಿದೆ. ಕಿತ್ತಗಾನಹಳ್ಳಿ ಗ್ರಾಮದ ಸುನೀಲ್ ಹಾಗೂ ಕಾರ್ತಿಕ್‌ಗೆ ಕಿಶೋರ್, ಶ್ರೀಧರ್, ವಾಲೆಮಂಜ, ಹೇಮಂತ್, ಮನೋಜ್, ತುಕಡಿ ಅಲಿಯಾಸ್ ವೆಂಕಟರಾಜು ಎಂಬುವವರಿಂದ ಹಲ್ಲೆ ಮಾಡಿ ಚಾಕು ಇರಿಯಲಾಗಿದೆ.

ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿದ್ದ ಟಿಟಿ ಚಾಲಕ ಕಿಶೋರ್ ಮುಂದೆ ಸಾಗುತ್ತಿದ್ದ ಲಾರಿಗೆ ದಾರಿ ಬಿಡುವಂತೆ ಪದೇ ಪದೇ ಹಾರ್ನ್ ಮಾಡಿದ್ದಾನೆ. ಈ ವೇಳೆ ಟಿಟಿ ಹಿಂದೆ ಬರುತ್ತಿದ್ದ ಬೈಕ್ ಸವಾರ ಅಂಕಿತ್ ಪ್ರಶ್ನೆ ಮಾಡಿದ್ದಾನೆ. ಟಿಟಿ ವಾಹನದಲ್ಲಿ ಶ್ರೀಧರ್ ಎಂಬಾತ ಅಂಕಿತ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಸುನೀಲ್, ಕಾರ್ತಿಕ್ ಎಂಬುವರಿಗೆ ಅಂಕಿತ್ ಮಾಹಿತಿ ನೀಡಿದ್ದಾನೆ. ಅಷ್ಟೊತ್ತಿಗೆ ತನ್ನ ಪಟಾಲಂ ಕರೆಸಿಕೊಂಡಿದ್ದ ಶ್ರೀಧರ್, ಸುನಿಲ್ ಹಾಗು ಕಾರ್ತಿಕ್ ಮೇಲೆ ದಾಳಿ ಮಾಡಿದ್ದಾರೆ.

ಪಾರ್ಟಿ ಮಾಡಿಕೊಂಡು ಮದ್ಯದ ಅಮಲಿನಲ್ಲಿದ್ದ ಕಿಶೋರ್ ಅಂಡ್ ಟೀಮ್ ಚಾಕು ಇರಿದು ದರ್ಪ ಮೆರೆದಿದೆ. ಸುನೀಲ್ ಹೊಟ್ಟೆ ಭಾಗಕ್ಕೆ ಹಾಗು ತೊಡೆ ಭಾಗಕ್ಕೆ ಚಾಕು ಇರಿಯಲಾಗಿದೆ. ಕಾರ್ತಿಕ್‌ಗೂ ಚಾಕು ಇರಿದು ಎಸ್ಕೇಪ್ ಆಗಿದೆ ಕಿಶೋರ್ ಅಂಡ್ ಗ್ಯಾಂಗ್. ಗಾಯಾಳುಗಳನ್ನು ನಾರಾಯಣ ಹೆಲ್ತ್ ಸಿಟಿಗೆ ಶಿಫ್ಟ್ ಮಾಡಲಾಗಿದೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೂ ಜಾಲ ಬೀಸಿದ್ದಾರೆ.