ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳ ಬಿಜೆಪಿಯ ಅನೈತಿಕ ಸರಕಾರದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ನಡೆದ ಅರಾಜಕತೆಯನ್ನು ನಾವೆಲ್ಲ ಕಣ್ಣಾರೆ ನೋಡಿದ್ದೇವೆ. ಜನರು ಬಿಜೆಪಿಗೆ ಏಪ್ರಿಲ್-ಮೇˌ ೨೦೨೩ ರ ಚುನಾವಣೆಯಲ್ಲಿ ತಕ್ಕ ಪಾಠವನ್ನೆ ಕಲಿಸಿದ್ದಾರೆ. ಆದರೆ ಸಂಘಿ ಗ್ಯಾಂಗ್ ರಾಜ್ಯದ ಬೊಕ್ಕಸವನ್ನು ಅನೇಕ ಬಗೆಯಲ್ಲಿ ಖಾಲಿ ಮಾಡಿದೆ. ಸರಕಾಕವು ಅಕ್ರಮವಾಗಿ ಸಂಘಿ ಗ್ಯಾಂಗಿಗೆ ಕನಿಷ್ಠ ೧೦೦೦ ಎಕರೆಯಷ್ಟು ಸರಕಾರಿ ಭೂಮಿಯನ್ನು ಬಹುತೇಕ ಪುಕ್ಕಟ್ಟೆ ಹಂಚಿದೆ. ಇದೆಲ್ಲದಕ್ಕೂ ಅಪಾಯಕಾರಿ ಸಂಗತಿ ಎಂದರೆ ರಾಜ್ಯದ ಗೃಹ ಇಲಾಖೆಯಲ್ಲಿ ಸಂಘಿ ಮನಸ್ಥಿತಿಯ ಸಿಬ್ಬಂದಿಯನ್ನು ತುರುಕಿದ್ದು. ಇಂದಿನ ಸರಕಾರ ಉಚಿತ ಯೋಜನೆಗಳನ್ನೇನೊ ಯಶಸ್ವಿಯಾಗಿ ಜಾರಿಗೊಳಿಸಿದೆ. ಆದರೆ ಸರಕಾರದ ಪ್ರಥಮ ಆದ್ಯತೆಯಾಗಬೇಕಾದದ್ದು ಗೃಹ ಇಲಾಖೆಯಲ್ಲಿ ಸಂಘಿ ಮನಸ್ಥಿತಿಯ ಅಧಿಕಾರಿಗಳನ್ನು ಸ್ವಚ್ಛಗೊಳಿಸುವುದು. ಆದರೆ ದುರಾದೃಷ್ಟಕ್ಕೆ ಈ ಮೊದಲಿನ ಹಾಗು ಇಂದಿನ ಕಾಂಗ್ರೆಸ್ ಆಡಳಿತಕ್ಕೆ ಒಬ್ಬ ನಿಸ್ಕ್ರೀಯ ಗೃಹ ಮಂತ್ರಿ ದಕ್ಕಿದ್ದು.
ಮುಖ್ಯ ಮಂತ್ರಿ ಪದವಿಯೊಂದಿಗೆ ಹಣಕಾಸು ಸಚಿವರಾಗಿರುವ ಸಿದ್ಧರಾಮಯ್ಯ ಹಣಕಾಸು ಯೋಜನೆಗಳ ವ್ಯವಸ್ಥಿತ ಅನುಷ್ಠಾನದಲ್ಲಿ ಬಿಗಿ ಹಿಡಿತವನ್ನು ಪ್ರದರ್ಶಿಸಿಸುತ್ತಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ಒಬ್ಬ ಜವಾಬ್ದಾರಿಯುವ ಮುಖ್ಯಮಂತ್ರಿಯಾಗಿ ಮೌಢ್ಯಗಳ ಆಚರಣೆಗೆ ತಿಲಾಂಜಲಿ ಇಟ್ಟು ˌವೈಚಾರಿಕ ಮತ್ತು ವೈಜ್ಞಾನಿಕವಾಗಿ ನಡೆದುಕೊಳ್ಳುತ್ತಿರುವುದು ಮೆಚ್ಚುವ ವಿಷಯವಾಗಿದೆ. ಸಿದ್ಧರಾಮಯ್ಯನವರು ಹಲವಾರು ಬಾರಿ ಚಾಮರಾಜ ನಗರಕ್ಕೆ ನೀಡಿರುವ ಭೇಟಿˌ ಉಡುಪಿ ಮಠಕ್ಕೆ ಭೇಟಿ ನೀಡದೆ ಇರುವ ನಿಲುವುಗಳು ಯಥಾಸ್ಥಿತಿವಾದಿಗಳ ಬಗ್ಗೆ ಅವರಿಗಿರುವ ದೃಢ ನಿಲುವನ್ನು ತೋರಿಸುತ್ತವೆ. ಈ ಸಂಪುಟದಲ್ಲಿ ಆರ್ ವಿ ದೇಶಪಾಂಡೆ ಸಚಿವನಾಗಿರದೆ ಇರುವುದು ಕೂಡ ನೆಮ್ಮದಿಯ ಸಂಗತಿ. ಆದರೆˌ ಮೌಢ್ಯಗಳ ಮೂರ್ತಿಯಂತಿರುವ ಡಿ ಕೆ ಶಿವಕುಮಾರ ಮಾತ್ರ ಈ ಸಂಪುಟಕ್ಕೆ ಬಹುದೊಡ್ಡ ಕಪ್ಪುಚುಕ್ಕೆ. ಈತನ ಮತ್ತು ಕೇಂದ್ರದ ಕೆಲವು ನಾಯಕರು ಈ ಬಾರಿ ಸಿದ್ಧರಾಮಯ್ಯನವರೆ ದೊಡ್ಡ ಅಡಚಣೆಯಾಗಿದ್ದಂತೂ ಸತ್ಯ.
ದುರಂತದ ಸಂಗತಿ ಎಂದರೆ ಕಳೆದ ಬಾರಿ ಮತ್ತು ಈ ಬಾರಿಯ ಸಿದ್ಧರಾಮಯ್ಯ ಆಡಳಿತಕ್ಕೆ ಒಬ್ಬ ದಕ್ಷ ಗೃಹ ಮಂತ್ರಿ ಸಿಗಲೇಯಿಲ್ಲ. ಕಳೆದ ಬಾರಿ ಕೆ ಜೆ ಜಾರ್ಜ್ ಗೃಹ ಮಂತ್ರಿ ಇರುವವರೆಗೆ ಇಲಾಖೆಯು ಸದಾ ಒಂದಿಲ್ಲೊಂದು ವಿವಾದಗಳಿಗೆ ಈಡಾಗುವಂತಾಯಿತು. ಇಲಾಖೆಯ ಜವಾಬ್ದಾರಿಯು ಅಲ್ಪಸಂಖ್ಯಾತರೊಬ್ಬರು ನಿಭಾಯಿಸುವುದು ಕಂಡರಾಗದ ಬಲಪಂಥೀಯ ಶಕ್ತಿಗಳು ಇಲ್ಲದ ಗೊಂದಲˌ ವಿವಾದಗಳು ಹುಟ್ಟಿಸಿದ್ದು ನಿಜ. ಆದರೆ ತನ್ನ ದಕ್ಷತನದಿಂದ ಆ ಎಲ್ಲ ಗೊಂದಲಗಳಿಗೆ ತೆರೆ ಎಳೆದು ತನ್ನ ಕಾರ್ಯಕ್ಷಮತೆಯನ್ನು ತೋರಿಸುವಲ್ಲಿ ಜಾರ್ಜ್ ಸಂಪೂರ್ಣ ವಿಫಲವಾದರು. ಇಲಾಖೆಯಲ್ಲಿ ಪಲಪಂಥೀಯ ಮನಸ್ಥಿತಿಯ ಅಧಿಕಾರಿಗಳು ಸೇರಿಕೊಂಡು ಅವಾಂತರಗಳು ಸೃಷ್ಠಿಸುತ್ತಿರುವ ಆರೋಪ ಮೊದಲಿನಂದ ಇದೆ. ಆದರೆ ಗೃಹ ಮಂತ್ರಿಯಾದವನು ಆ ಇಲಾಖೆಯನ್ನು ದಕ್ಷವಾಗಿ ನಿಭಾಯಿಸಬೇಕಾದ ಅಗತ್ಯವಿದೆ. ಅಂದು ಡಿ ಕೆ ರವಿ ಸಾವಿನ ಪ್ರಕರಣವನ್ನು ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಮಾದ್ಯಮಗಳು ವಿವಾದಗೊಳಿಸಿದವು. ಇಲಾಖೆಯನ್ನು ದಕ್ಷವಾಗಿ ಟೀಕಿಸುವವರ ಬಾಯಿ ಮುಚ್ಚಿಸಬೇಕಾಗಿದ್ದ ಜಾರ್ಜ್ ತಮ್ಮ ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾದರು.
ಡಿ ಕೆ ರವಿ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆಯ ಬಳಿಕೆ ಗೃಹ ಇಲಾಖೆಗೆ ವಕ್ಕರಿಸಿದ್ದು ಜಾರ್ಜ್ ಗಿಂತ ಸೋಮಾರಿ ಹಾಗು ಅದಕ್ಷನಾಗಿರುವ ಡಾ. ಜಿ ಪರಮೇಶ್ವರ. ೨೦೧೩ ರ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಸುಮಾರು ಎರಡು ವರ್ಷಗಳಿಂದ ಮಂತ್ರಿಯಾಗಲು ಇಲ್ಲದ ತಂತ್ರಗಳು ಮಾಡಿ ಗೃಹಮಂತ್ರಿಯಾದ ಪರಮೇಶ್ವರ ತಮ್ಮ ರಾಜಕೀಯ ಗುರು ಕೃಷ್ಣರಂತೆ ಕೇವಲ ನಾಜೂಕಯ್ಯನಂತೆ ಉಳಿದರೆ ಹೊರತು ಇಲಾಖೆಯನ್ನು ಹಳಿಯ ಮೇಲೆ ತರುವ ಪ್ರಯತ್ನ ಮಾಡಲೇಯಿಲ್ಲ. ಅವರು ಅಂದು ಮಂತ್ರಿಯಾಗಿ ಮಾಡಿದ ಮಹಾ ಕಾರ್ಯವೆಂದರೆ ಕೆಪಿಸಿಸಿ ಅಧ್ಯಕ್ಷ ಗಾದಿ ಉಳಿಸಿಕೊಳ್ಳುವ ಕಸರತ್ತು ಮತ್ತು ಉಡುಪಿ ಮಠಕ್ಕೆ ಭೇಟಿಕೊಟ್ಟಿದ್ದು. ಡಾ. ಎಂ ಎಂ ಕಲಬುರಗಿ ಮತ್ತು ಗೌರಿ ಲಂಕೇಶರ ಹತ್ಯೆಗಳು ಪರಮೇಶ್ವರ ಅವಧಿಯಲ್ಲಿನ ಎರಡು ಮಹತ್ವದ ಪ್ರಕರಣಗಳು. ಡಾ. ಪರಮೇಶ್ವರ ಕಲಬುರಗಿ ಹತ್ಯೆಯ ಹಂತಕರನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲರಾದರು. ಅವರ ಅಧಿಕಾರದ ಕೊನೆಗಾಲದಲ್ಲಿ ಗೌರಿ ಲಂಕೇಶ ಹತ್ಯೆ ನಡೆದುಹೋಯಿತು.
ಆಗ ಅವರು ಪಕ್ಷದ ಅಧ್ಯಕ್ಷ ಗಾದಿಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರು. ಅವರ ಅಧಿಕಾರದುದ್ದಕ್ಕೂ ಕರಾವಳಿಯಲ್ಲಿನ ಬಲಪಂಥೀಯ ಭಯೋತ್ಪಾದಕರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ˌ ಅಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಗೊಳಿಸಿˌ ಮತ್ತು ಸಮಾಜಘಾತುಕ ಶಕ್ತಿಗಳಿಗೆ ಪಾಠ ಕಲಿಸುವಲ್ಲಿ ಸಂಪೂರ್ಣ ವಿಫಲರಾದರು. ಇಲಾಖೆಯೊಳಗಿನ ಸಮಸ್ಯೆಗಳನ್ನೂ ಸಹ ಡಾ. ಪರಮೇಶ್ವರ ಸರಿಯಾಗಿ ನಿಭಾಯಿಸಲಿಲ್ಲ. ಆನಂತರ ಬಂದ ರಾಮಲಿಂಗಾ ರೆಡ್ಡಿಯವರ ಅಧಿಕಾರದ ಅವಧಿ ಕೇವಲ ಆರೇಳು ತಿಂಗಳುಗಳು ಮಾತ್ರ ಉಳಿದಿತ್ತು. ಇಲಾಖೆಯ ಎದುರಿಗೆ ಅಂದು ಇದ್ದದ್ದು ಎರಡು ಮಹತ್ವದ ಹತ್ಯೆಗಳಿಗೆ ಸಂಬಂಧಿಸಿದ ಹಂತಕರ ಬಂಧನವನˌ ಕರಾವಳಿಯಲ್ಲಿನ ಸಮಾಜಘಾತುಕ ಶಕ್ತಿಗಳ ಪುಂಡಾಟಿಕೆˌ ಇಲಾಖೆಯೊಳಗಿನ ಪೋಲೀಸರ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯವಾಗಿತ್ತು. ಆಗ ಚುನಾವಣೆಯ ಸಮಯವಾದ್ದರಿಂದ ಚುರುಕಾಗಿದ್ದ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಿ ಕಾನೂನು ಮತ್ತು ಸುವ್ಯಸ್ಥೆಯನ್ನು ಕಾಪಾಡುವುದು ಮುಖ್ಯವಾಗಿತ್ತು.
ರೆಡ್ಡಿಯವರು ವೃದು ಸ್ವಭಾವದವರಾಗಿದ್ದು ಇಲಾಖೆಯನ್ನು ನಿಷ್ಠುರವಾಗಿ ನಡೆಸಬಲ್ಲರೆ ಎಂಬ ಅನುಮಾನ ಎಲ್ಲರಲ್ಲಿ ಆಗ ಮನೆಮಾಡಿತ್ತು. ಆದರೆ ಜನರ ಮನಸ್ಸಿನಲ್ಲಿನ ಅನುಮಾನವನ್ನು ಹುಸಿಗೊಳಿಸಿ ರೆಡ್ಡಿಯವರು ಡಾ. ಕಲಬುರಗಿ ಮತ್ತು ಗೌರಿ ಹಂತಕರನ್ನು ಬಂಧಿಸಿಸುವಲ್ಲಿ ಹಾಗು ಇಲಾಖೆಯಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಹುಡುಕಿಕೊಳ್ಳುವಲ್ಲಿ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಆದರೆ ಈಗ ಸಿದ್ಧರಾಮಯ್ಯನವರ ಎರಡನೇ ಅವಧಿಯ ಆಡಳಿತದಲ್ಲೂ ಮತ್ತೆ ಗೃಹ ಇಲಾಖೆಗೆ ಗರಬಡಿದಿದೆ. ಡಾ. ಪರಮೇಶ್ವರಂತಹ ಅದಕ್ಷ ವ್ಯಕ್ತಿಯ ಪಾಲಿಗೆ ಈ ಸಲವೂ ಗೃಹ ಇಲಾಖೆ ಹೋಗಿದೆ. ಇದು ಕೇವಲ ಸಿದ್ದರಾಮಯ್ಯನವರ ದುರಾದೃಷ್ಟ ಮಾತ್ರ ಆಗಿರದೆ ಆ ಇಲಾಖೆ ಹಾಗು ಒಟ್ಟಾರೆ ನಾಡಿನ ಜನರ ದುರಾದೃಷ್ಟ ಎನ್ನುವಂತಾಗಿದೆ. ಕಾಂಗ್ರೆಸ್ ಪಕ್ಷದೆದುರಿಗೆ ಪ್ರಿಯಾಂಕ ಖರ್ಗೆˌ ಬಿ ಕೆ ಹರಿಪ್ರಸಾದ್ ಮತ್ತು ಸತೀಶ್ ಜಾರಕಿಹೊಳಿಯಂತಹ ಸೈದ್ಧಾಂತಿಕವಾಗಿ ಗಟ್ಟಿಗ ಹಾಗು ದಕ್ಷ ವ್ಯಕ್ತಿಗಳನ್ನು ಗೃಹ ಖಾತೆಯ ಸಚಿವರನ್ನಾಗಿಸುವ ಅವಕಾಶವಿತ್ತು.
ಆದರೆ ಪಕ್ಷ ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲಿಲ್ಲ. ಬೇಕೆನ್ನಿಸಿದರೆ ಡಾ. ಪರಮೇಶ್ವರ್ ಅವರನ್ನು ಉಪ ಮುಖ್ಯಂತ್ರಿ ಮಾಡಿ ಖಾತೆ ರಹಿತ ಮಂತ್ರಿಯಾಗಿ ಉಳಿಸಿಕೊಂಡಿದ್ದರೆ ರಾಜ್ಷಕ್ಕೆ ಎಷ್ಟೋ ಅನುಕೂಲವಾಗುತ್ತಿತ್ತು. ಬಿಜೆಪಿ ಹಾಗು ಸಂಘಿ ಮನಸ್ಥಿತಿಯ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಯನ್ನು ಹತೋಟಿಯಲ್ಲಿಟ್ಟು ಇಲಾಖೆಯನ್ನು ತಕ್ಕಮಟ್ಟಿಗೆ ಸ್ವಚ್ಛಗೊಳಿಸುವ ಸುವರ್ಣ ಅವಕಾಶವನ್ನು ಕಾಂಗ್ರೆಸ್ ಪಕ್ಷ ಈ ಅವಧಿಯಲ್ಲೂ ಕಳೆದುಕೊಂಡಿತು ಎನ್ನದೆ ವಿಧಿಯಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿಸುವುದೂ ಇಲ್ಲ ಹಾಗು ತನಗೆ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದೂ ಇಲ್ಲ. ಇದೇ ಆ ಪಕ್ಷಕ್ಕಿರುವ ಮಿತಿ.
ಡಾ. ಜೆ ಎಸ್ ಪಾಟೀಲ.