ಕನ್ನಡದ ಯಶಸ್ವಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇದೀಗ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಸೂರ್ಯ ಅವರೊಂದಿಗೆ ಪ್ಯಾನ್ ಇಂಡಿಯಾ ಚಿತ್ರ ಮಾಡುವ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದೆ. ‘ಹೊಂಬಾಳೆ ಫಿಲ್ಮ್ಸ್’ ಕೇವಲ ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾಗದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಸಂಸ್ಥೆ, ಈಗ ತಮಿಳು ಸ್ಟಾರ್ ಸೂರ್ಯ ಜೊತೆ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ.

‘ದಿ ನೆಕ್ಸ್ಟ್ ಚಾಪ್ಟರ್’ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ‘ಕಳೆದ ಮೂರು ದಶಕಗಳಿಂದ ಸತ್ಯಕ್ಕೆ ಹತ್ತಿರವಾದ ಪಾತ್ರಗಳು, ನೈಜ ಬದುಕಿನ ತೂಕವನ್ನು ಹೊತ್ತ ಕ್ಯಾರೆಕ್ಟರ್‌ಗಳು ಹಾಗೂ ಅದ್ಭುತ ಸಾಹಸಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿರುವ ಈ ತಲೆಮಾರಿನ ಅತ್ಯಂತ ನಿರ್ಭೀತ ನಟ ಸೂರ್ಯ ಅವರನ್ನು ನಮ್ಮ ಸಂಸ್ಥೆಗೆ ಹೆಮ್ಮೆಯಿಂದ ಸ್ವಾಗತಿಸುತ್ತಿದ್ದೇವೆ’ ಎಂದು ಹೊಂಬಾಳೆ ಬರೆದುಕೊಂಡಿದೆ.

ಈ ಬಿಗ್ ಬಜೆಟ್ ಸಿನಿಮಾಗೆ ಯಾರು ನಿರ್ದೇಶಕರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಮಾಡಿರುವ ಟ್ವೀಟ್‌ನಲ್ಲಿ ಖ್ಯಾತ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರನ್ನು ಟ್ಯಾಗ್ ಮಾಡಲಾಗಿದೆ. ಅಲ್ಲಿಗೆ ಈ ಚಿತ್ರಕ್ಕೆ ಅವರೇ ಕಥೆ ಬರೆದು ನಿರ್ದೇಶನ ಮಾಡುವುದು ಬಹುತೇಕ ಖಚಿತವಾಗಿದೆ. ಪೋಸ್ಟ್ ನಲ್ಲಿ ಸಾಯಿ ಅಭಯಂಕರ್ ಅವರನ್ನೂ ಟ್ಯಾಗ್ ಮಾಡಲಾಗಿದೆ. ಇತ್ತೀಚಿನ ಟ್ರೆಂಡಿಂಗ್ ಮ್ಯೂಸಿಕ್ ಸೆನ್ಸೇಷನ್ ಸಾಯಿ ಅಭಯಂಕರ್ ಸಂಗೀತ ಸಂಯೋಜನೆ ಮಾಡುವುದು ಪಕ್ಕಾ ಎನ್ನುವಂತಾಗಿದೆ. ಇನ್ನು, ಆ ಸಿನಿಮಾದ ನಾಯಕಿ ಯಾರು ಎಂಬ ಕುತೂಹಲಕ್ಕೂ ತೆರೆ ಬಿದ್ದಿದೆ. ಕಯಾದು ಲೋಹರ್ ಅವರು ನಾಯಕಿ ಇರಬಹುದೇ ಎಂಬ ಮಾಹಿತಿ ಕೂಡ ಸಿಕ್ಕಾಗಿದೆ.

ಅದೇನೆ ಇರಲಿ, ಹಲವು ಭಾಷೆಗಳಲ್ಲಿ ವೈವಿಧ್ಯಮಯ ಸಿನಿಮಾಗಳನ್ನು ನೀಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಈಗ ಸೂರ್ಯ ಜೊತೆ ಕೈ ಜೋಡಿಸಿದ್ದು ಫ್ಯಾನ್ಸ್ ಗೆ ಡಬಲ್ ಖುಷಿಯಾಗಿದೆ. ಈ ಕಾಂಬಿನೇಷನ್ ಭಾರತೀಯ ಚಿತ್ರರಂಗದಲ್ಲೇ ಕುತೂಹಲ ಹುಟ್ಟುಹಾಕಿರೋದು ನಿಜ.






