• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಚರಿತ್ರೆಯನ್ನು  ಆಪ್ತಗೊಳಿಸುವ ರಂಗಪ್ರಯತ್ನ-ಗೋರ್‌ಮಾಟಿ

ನಾ ದಿವಾಕರ by ನಾ ದಿವಾಕರ
July 9, 2024
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ವಿಶೇಷ, ಶೋಧ, ಸಿನಿಮಾ
0
ಚರಿತ್ರೆಯನ್ನು  ಆಪ್ತಗೊಳಿಸುವ ರಂಗಪ್ರಯತ್ನ-ಗೋರ್‌ಮಾಟಿ
Share on WhatsAppShare on FacebookShare on Telegram
—–ನಾ ದಿವಾಕರ—-
ಮಾನವೇತಿಹಾಸದ ನಿರ್ದಿಷ್ಟ ಸಾಮುದಾಯಿಕ ಹೆಜ್ಜೆಗಳನ್ನು ಸಮಕಾಲೀನಗೊಳಿಸುವ ವಿಶಿಷ್ಟ ಪ್ರಯತ್ನ
 
ಭಾರತದ ಶತಮಾನಗಳ ಚರಿತ್ರೆಯಲ್ಲಿ ಬುಡಕಟ್ಟು ಸಮುದಾಯಗಳು ಮತ್ತು ಅಲೆಮಾರಿ ಸಮೂಹಗಳ ಅಧ್ಯಾಯಗಳು ಭಾರತೀಯ ಸಂಸ್ಕೃತಿಯಷ್ಟೇ ವೈವಿಧ್ಯಮಯವಾಗಿದ್ದು ತಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ ನೆಲೆಗಳನ್ನೂ, ಸಾಮಾಜಿಕ ವ್ಯವಸ್ಥೆಗಳನ್ನೂ, ರಾಜಕೀಯ ಆರ್ಥಿಕತೆಯ ನೆಲೆಗಳನ್ನೂ ಸೃಷ್ಟಿಸಿಕೊಂಡು ಬಂದಿವೆ. ಸಮಾಜಶಾಸ್ತ್ರೀಯ ನೆಲೆಯಲ್ಲಿ ಈ ಜನಸಮುದಾಯಗಳ ಅಥವಾ ಸಾಮಾಜಿಕ ವರ್ಗಗಳ ಬಗ್ಗೆ ಅಗಾಧವಾದ ಅಧ್ಯಯನ-ಸಂಶೋಧನೆಗಳು ನಡೆದಿದ್ದು, ಇಂದಿಗೂ ದೇಶದ ಉದ್ದಗಲಕ್ಕೂ ಕಾಣಬಹುದಾದ ಗುಂಪುಗಳ ಬಗ್ಗೆ ವ್ಯಾಖ್ಯಾನಗಳು ನಡೆಯುತ್ತಲೇ ಇವೆ. ಆಧುನಿಕೀಕರಣಗೊಂಡ ನಾಗರಿಕ ಸಮಾಜವು ಇಂತಹ ಬಹುಪಾಲು ಜನಸಮೂಹಗಳನ್ನು ಹೊರಗಿಟ್ಟು ನೋಡುವ ಪರಿಪಾಠ ಬೆಳೆಸಿಕೊಂಡು ಬಂದಿರುವುದರಿಂದ, ಈ ಸಮಾಜಗಳು ವಿಶಿಷ್ಟವಾಗಿಯೂ ಕೆಲವೊಮ್ಮೆ ವಿಭಿನ್ನವಾಗಿಯೂ ಕಾಣತೊಡಗುತ್ತವೆ.
 
ಇಂತಹ ಒಂದು ಅಲೆಮಾರಿ ಸಮುದಾಯ ಎಂದರೆ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಕಾಣಬಹುದಾದ ಬಂಜಾರ/ಲಂಬಾಣಿ ಸಮಾಜ. ಮೂಲತಃ ಗೋರ್‌ ಎಂದು ಗುರುತಿಸಲ್ಪಡುವ ಈ ಸಮುದಾಯವು ತನ್ನನ್ನು ಗೋರ್‌ಮಾಟಿ ಎಂದೇ ಕರೆದುಕೊಳ್ಳುತ್ತದೆ. ಅಂದರೆ “ನಮ್ಮಜನ-ನಮ್ಮವರು” ಎಂಬ ಒಳಗೊಳ್ಳುವ (Inclusivity) ಅರ್ಥವನ್ನು ಸೂಸುತ್ತದೆ. 3000 ವರ್ಷಗಳ ಇತಿಹಾಸ ಇರುವ ಲಮನ್‌ ಸಮುದಾಯದೊಡನೆ ಸಂಪರ್ಕ ಕಲ್ಪಿಸಬಹುದಾದ ಈ ಸಮುದಾಯವನ್ನು ಕ್ರಿಶ 14ನೆ ಶತಮಾನದಿಂದ ಬಂಜಾರ ಎಂದೂ ಕರೆಯುವುದು ರೂಢಿಗತವಾಯಿತು ಎನ್ನುತ್ತಾರೆ ಪ್ರೊ. ಮೋತಿರಾಜ್‌ ರಾಥೋಡ್.‌ ಇತಿಹಾಸಕಾರ ಇರ್ಫಾನ್‌ ಹಬೀಬ್‌ ಅವರ ಪ್ರಕಾರ ಬಂಜಾರ ಪದದ ಮೂಲ ಸಂಸ್ಕೃತದ ವಣಿಜ, ವಣಿಕ, ಬಣಿಕ ಮುಂತಾದವುಗಳಲ್ಲಿ ಗುರುತಿಸಬಹುದು. ಮತ್ತೋರ್ವ ಇತಿಹಾಸಕಾರ ಬಿ.ಜಿ. ಹಲ್ಬಾರ್‌ ಅವರು ಬಂಜಾರ ಪದದ ಮೂಲವನ್ನು ಸಂಸ್ಕೃತದ ʼವನಚರʼ ಪದದಲ್ಲಿ ಕಾಣುತ್ತಾರೆ.  ಗೋರ್‌ ಬಂಜಾರ, ಬಲಾದಿಯಾ, ಗೋರ್‌, ಗೌರ್‌ ರಜಪೂತ್‌, ರಜಪೂತ್‌ ಬಂಜಾರ, ಲಡಾನಿಯಾ, ಲಬಾನಾ, ನಾಯಕ್‌, ಲಂಬಾಣಿ ಮೊದಲಾದ ಹೆಸರುಗಳಿಂದಲೂ ಈ ಸಮುದಾಯ ಗುರುತಿಸಲ್ಪಡುತ್ತದೆ.
 
ರಂಗದ ಮೇಲೆ ಚರಿತ್ರೆಯ ಹರವು
 
ಅಕಾಡೆಮಿಕ್‌ ಸಂಶೋಧನಾ ಗ್ರಂಥಗಳಲ್ಲಿ ಅಡಗಿದ್ದ, ಇತಿಹಾಸ ಬೋಧನೆಯ ಪ್ರವಚನಗಳಲ್ಲಿ ಹುದುಗಿಹೋಗಿದ್ದ, ಚರಿತ್ರೆಯ ಪುಟಗಳಲ್ಲಿ ಹಲವು ಭಾಷೆಗಳಲ್ಲಿ ದಾಖಲಾಗಿರುವ ʼಗೋರ್‌ಮಾಟಿ ʼ ಸಮುದಾಯ ನಮ್ಮ ಆಧುನಿಕ ಬದುಕಿನ ನಡುವೆ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿದ್ದರೂ, ʼನಮ್ಮ ಜನʼ ಎಂದು ಕರೆದುಕೊಳ್ಳುವ ಈ ಜನತೆಯನ್ನು ʼ ನಮ್ಮವರು ʼ ಎಂದು ಭಾವಿಸುವ ನಿಟ್ಟಿನಲ್ಲಿ ಶಿಷ್ಟ-ಕಲಿತ ಸಮಾಜ ಮುಂದೆ ಸಾಗಿಲ್ಲ ಎನ್ನುವುದು ಸುಡುವಾಸ್ತವ. ಆದರೆ ರಂಗಕರ್ಮಿ ಸಿ. ಬಸವಲಿಂಗಯ್ಯ (ಬಸು) ಈ ಸಮುದಾಯದ ಚಾರಿತ್ರಿಕ ನಡಿಗೆಯನ್ನು, ಅದರ ಒಳಹೊರಗುಗಳನ್ನು, ಅಲ್ಲಿನ ಶ್ರಮಿಕ ಪ್ರಪಂಚದ ಆಂತರಿಕ ತುಮುಲ-ತಲ್ಲಣ-ಆತಂಕ ಹಾಗೂ ನಿರೀಕ್ಷೆಗಳನ್ನು, ರಂಗ ವೇದಿಕೆಯ ಮೇಲೆ ತಂದಿಡುವ ಮೂಲಕ ಕರ್ನಾಟಕದ ಜನತೆಗೆ, ತಮ್ಮೊಳಗೇ ಇದ್ದೂ ತಮ್ಮವರಾಗಿರದ ಒಂದು ಜನಸಮುದಾಯವನ್ನು ಪರಿಚಯಿಸಿದ್ದಾರೆ. ಅದೇ ರಂಗಾಯಣ ರೆಪರ್ಟರಿ ಪ್ರಯೋಗಿಸಿದ ನಾಟಕ “ ಗೋರ್‌ಮಾಟಿ ”.
 
ಬಸು ಅವರ ನಿರ್ದೇಶನದ ʼಗೋರ್‌ಮಾಟಿʼ ಯನ್ನು ರಂಗ ಪ್ರಯೋಗ ಎಂದು ಸೀಮಿತಗೊಳಿಸುವುದೂ ತಪ್ಪಾಗುತ್ತದೆ. ಏಕೆಂದರೆ ಅಲ್ಲಿ ಕೇವಲ ರಂಗಕಲೆಯ ಕೌಶಲಗಳು ಮಾತ್ರ ಇಲ್ಲ ಅಥವಾ ಅಭಿನಯದ ಸುತ್ತಲಿನ ಕಲಾಭಿವ್ಯಕ್ತಿಗೆ ಇದು ಸೀಮಿತವಾಗಿಲ್ಲ. ಖ್ಯಾತ ಕವಿ ಗುಲ್ಜಾರ್‌ ಅವರ                              “ ಜನಮ್‌ ಕಾ ಬಂಜಾರಾ ಹ್ಞು ಬಂಧು ಜನಮ್‌ ಜನಮ್‌ ಬಂಜಾರಾ,,,,,” ( ಚಿತ್ರ ರಹಗೀರ್‌ -1969-ಗಾಯನ ಸಂಗೀತ ಹೇಮಂತ್‌ ಕುಮಾರ್)‌ ಎಂಬ ಹಾಡನ್ನು ಧ್ವನಿಸುತ್ತಲೇ ಭಾರತದ ಉದ್ದಗಲಕ್ಕೂ ಕಾಣಬಹುದಾದ ಒಂದು ನಿತ್ಯ ಸಂಚಾರಿ-ಅಲೆಮಾರಿ ಸಮುದಾಯದ ಪರಂಪರೆ, ಸಂಪ್ರದಾಯಗಳು, ಇತಿಹಾಸ ಹಾಗೂ ಸಮಕಾಲೀನ ಸ್ಥಿತಿಗತಿಗಳನ್ನು ವಿಹಂಗಮವಾಗಿ ಸಮಾಜದ ಮುಂದಿಡುವ ಒಂದು ಸೃಜನಶೀಲ ಪ್ರಯತ್ನ ʼಗೋರ್‌ಮಾಟಿʼ. ಶಿರಗಾನಹಳ್ಳಿ ಶಾಂತನಾಯ್ಕ ಅವರ ಅದೇ ಹೆಸರಿನ ಕಾದಂಬರಿ ಹಾಗೂ ಬಿ.ಟಿ. ಲಲಿತಾನಾಯಕ್‌ ಅವರ ʼ ತಾಂಡಾಯಣ ʼ ಮತ್ತು ʼ ಹಬ್ಬ ಮತ್ತು ಬಲಿ ʼ ಕತೆಗಳನ್ನು ರಂಗರೂಪಕ್ಕೆ ಅಳವಡಿಸಿರುವ ಬಸು ಅವರು ನಾಟಕದುದ್ದಕ್ಕೂ ಸಮಕಾಲೀನತೆಯನ್ನು ಬಿಂಬಿಸುತ್ತಲೇ ಪ್ರಯೋಗಿಸಿರುವುದು ʼ ಗೋರ್‌ಮಾಟಿ ʼಯ ವೈಶಿಷ್ಟ್ಯ.
 
ಭಾರತದ ಲಿಖಿತ-ಜನಪದ ಇತಿಹಾಸದ ಆದಿಯನ್ನು ನಮ್ಮ ಪುರಾಣ ಕಥನಗಳಲ್ಲೇ ಕಾಣುವ ಒಂದು ಬೌದ್ಧಿಕ ಪರಂಪರೆಗೆ ಆಧುನಿಕ ಭಾರತವೂ ಒಗ್ಗಿಹೋಗಿದೆ. ಹಾಗಾಗಿಯೇ ದಶಾವತಾರಗಳನ್ನೂ ಒಳಗೊಂಡಂತೆ ದೈವ-ದೈವತ್ವ ಮತ್ತು ದೇವಮಾನವ ಇವೆಲ್ಲವೂ ವರ್ತಮಾನ ಭಾರತೀಯ ಸಮಾಜದ ಪೂರ್ವೇತಿಹಾಸದ ಒಂದು ಭಾಗದಂತೆ ಕಾಣಲಾಗುತ್ತಿದೆ. ಇದರಲ್ಲಿ ಕಾಣಬಹುದಾದ ಒಂದು ವ್ಯತ್ಯಯ ಎಂದರೆ ವೇದ-ಪುರಾಣಗಳಲ್ಲಿ ಆಧುನಿಕ ಮಾನವ ಜಗತ್ತಿನ ಬೇರುಗಳನ್ನು ಹುಡುಕಿ, ಹೆಕ್ಕಿ ತೆಗೆದು ಮರುವ್ಯಾಖ್ಯಾನ ಮಾಡುವ ಭಾರತದ ಒಂದು ಮೇಲ್ಪದರದ ಬೌದ್ಧಿಕ ವಲಯ, ಇದೇ ಪುರಾತನ ತಳಪಾಯದ ಮೇಲೆ ನಿರ್ಮಿಸಲಾದ ಜನಪದೀಯ ನಂಬಿಕೆಗಳನ್ನು, ನೆಲಮೂಲ ಸಾಂಸ್ಕೃತಿಕ ಬೇರುಗಳನ್ನು ಅಲ್ಲಗಳೆಯುತ್ತಲೇ ಇರುತ್ತದೆ. ಈ ಬೇಲಿಗಳಿಂದಾಚೆಗೆ ಇತಿಹಾಸ-ಪುರಾಣ ಮತ್ತು ಐತಿಹ್ಯಗಳನ್ನು ಮರುಕಟ್ಟುವುದರ ಮೂಲಕವೇ ನಾವು ಇಂದಿನ ಬಹುಸಾಂಸ್ಕೃತಿಕ ಭಾರತದ ಅಡಿಪಾಯವನ್ನು ಶೋಧಿಸಲು ಸಾಧ್ಯ. ʼ ಗೋರ್‌ಮಾಟಿ ʼ ಅಂತಹ ಒಂದು ಸೃಜನಶೀಲ ರಂಗಪ್ರಯತ್ನ.
 
ಗೋರ್‌ಮಾಟಿಯ ಸಾಮಾಜಿಕ ಹಂದರ
 
ತಮ್ಮ ಪರಂಪರೆ ಮತ್ತು ಜನಜೀವನವನ್ನು ಪುರಾಣ-ಐತಿಹ್ಯಗಳಲ್ಲಿ ಗುರುತಿಸಿಕೊಳ್ಳುವ ಬಂಜಾರ ಸಮುದಾಯ ತನ್ನ ಆದಿಯನ್ನು ಮಹಾಭಾರತದ ಕೃಷ್ಣ ಅಥವಾ ಕನ್ನಯ್ಯನಲ್ಲಿ ಕಾಣುತ್ತದೆ. ಆಧುನಿಕ ಚರಿತ್ರೆಯ ಪುಟಗಳಲ್ಲಿ ಬಂಜಾರ ಸಮುದಾಯವು ವಿವಿಧ ಹೆಸರುಗಳಿಂದ ದಾಖಲಿಸಲ್ಪಟ್ಟಿದ್ದು ದೆಹಲಿಯ ಸುಲ್ತಾನರು, ಮೊಘಲರು, ಹೈದರಾಬಾದಿನ ನಿಜಾಮರು ಮತ್ತು ಬ್ರಿಟೀಷ್‌ ವಸಾಹತುಶಾಹಿಯ ಕಾಲಾವಧಿಗಳಲ್ಲಿ ತಮ್ಮ ಜೀವನೋಪಾಯದ ಮಾರ್ಗದಲ್ಲಿ ಹಲವು ಆಯಾಮಗಳ ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸುತ್ತಾರೆ. ವಿಪರ್ಯಾಸವೆಂದರೆ ಇಂದಿಗೂ ಸಹ ಈ ಸಮುದಾಯವು ಆಧುನಿಕ ನಾಗರಿಕ ಜಗತ್ತಿನೊಡನೆ ಸಂಪರ್ಕ ಸಾಧಿಸುವಾಗ ಹೊರಗಿನದಾಗಿಯೇ ಕಾಣಲ್ಪಡುತ್ತದೆ. ವಸಾಹತುಶಾಹಿಯು ಭಾರತಕ್ಕೆ ತಂದ ಕೈಗಾರಿಕಾ ಬಂಡವಾಳದ ಮಾರುಕಟ್ಟೆ ಮತ್ತು ಅದಕ್ಕೆ ಪೂರಕವಾದ ಶ್ರಮಶೋಷಣೆಯ ವಿಭಿನ್ನ ಮಜಲುಗಳು ಈ ಲಂಬಾಣಿ ಸಮುದಾಯಕ್ಕೂ ಮಾರಕವಾಗಿದ್ದು ಚಾರಿತ್ರಿಕ ಸತ್ಯ.
 
ಸಾಮಾಜಿಕವಾಗಿ ಭಾರತದ ಜಾತಿ ವ್ಯವಸ್ಥೆಯ ಕೆಳಸ್ತರದಲ್ಲಿ ಗುರುತಿಸಲ್ಪಡುತ್ತಿದ್ದ ಬಂಜಾರ ಸಮುದಾಯವು ತಮ್ಮದೇ ಆದ ವ್ಯಾಪಾರ ಜಗತ್ತನ್ನು ನಿರ್ಮಿಸಿಕೊಂಡಿದ್ದರೂ, ಅದನ್ನೂ ಸಹ ಶ್ರೇಣೀಕರಣಗೊಳಿಸಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಇತಿಹಾಸದ ಚೋದ್ಯ ಆದರೂ ವಾಸ್ತವ. ದನ ಎನ್ನುವ ಒಂದು ಪ್ರಾಣಿ ಪ್ರಭೇದವು ಪಶುಸಂಗೋಪನೆ-ಹೈನುಗಾರಿಕೆ-ಉತ್ಪಾದಕೀಯ ಚಟುವಟಿಕೆಯ ಜೀವನೋಪಾಯದ ಸಾಧನವಾಗಿದ್ದರೂ, ವರ್ತಮಾನ ಭಾರತದಲ್ಲಿ ಅದನ್ನು ʼ ಗೋವು ʼ ಎಂಬ ಶ್ರೇಣೀಕರಣಕ್ಕೊಳಪಡಿಸಿ ಪಾವಿತ್ರ್ಯತೆಯ ಸರಳುಗಳಲ್ಲಿ ಬಂಧಿಸಿ ಧಾರ್ಮಿಕ ಶ್ರೇಷ್ಠತೆಯನ್ನು ಕಲ್ಪಿಸಲಾಗಿದೆ. ಇಷ್ಟಾದರೂ ದನ ಸಾಕಾಣಿಕೆಯ ವೃತ್ತಿಯೇನೂ ವೈದಿಕಶಾಹಿಯ ಅಂಗಳದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಗ್ರಾಮೀಣ-ನಗರ ಭಾರತದ ಕೃಷಿಕ ಸಮುದಾಯ ಮತ್ತು ಪಾರಂಪರಿಕ ದನಗಾಹಿ ಸಮುದಾಯಗಳೇ ಇಂದಿಗೂ ಈ ಕಾಮಧೇನುವಿನ ಉತ್ಪನ್ನಗಳನ್ನು ವಿಶಾಲ ಮಾರುಕಟ್ಟೆಗೆ ಒದಗಿಸುತ್ತಾ ಬಂದಿದ್ದಾರೆ.
 
 ಬಂಜಾರರ ಇತಿಹಾಸವನ್ನು ಗಮನಿಸಿದಾಗ ಈ ಗೋಪಾಲಕ ಸಮಾಜವು ವಸಾಹತುಶಾಹಿಯ ಬಂಡವಾಳಶಾಹಿ ಆರ್ಥಿಕತೆಯ ತಾರತಮ್ಯಗಳಿಗೊಳಗಾಗಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು, ವಸ್ತುಶಃ ದೈಹಿಕ ದುಡಿಮೆಯತ್ತ ಸಾಗುವುದು ಕಾಣುತ್ತದೆ. ಮೂಲತಃ ಅರಣ್ಯ ಪ್ರದೇಶಗಳಿಂದಲೇ ಹೊರಹೊಮ್ಮಿದ ಈ ಸಮುದಾಯವು ತಮ್ಮ ವೃತ್ತಿ ಪಾಲನೆಯೊಂದಿಗೆ ಜೀವನೋಪಾಯ ಮಾರ್ಗವಾಗಿ ಹುಲ್ಲುಗಾವಲುಗಳನ್ನು ಬಳಸುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಸಮಾಜವು ಆಧುನಿಕತೆಗೆ ತೆರೆದುಕೊಂಡಷ್ಟೂ ತನ್ನ ನೆಲಮೂಲ ಜನಸಾಂಸ್ಕೃತಿಕ ನೆಲೆಗಳನ್ನು ಹೊರಗಿಟ್ಟು ನೋಡುವ ಒಂದು ಪ್ರವೃತ್ತಿಯೂ 19ನೆಯ ಶತಮಾನದಿಂದಲೇ ಆರಂಭವಾಗಿತ್ತು. ಈ ವಕ್ರದೃಷ್ಟಿಗೆ ಪೂರಕವಾಗಿ ಬೆಳೆದುಬಂದ ತಾತ್ವಿಕ ರಾಜಕೀಯ ನೆಲೆಗಳು ಹಾಗೂ ಸಮಾನಾಂತರವಾಗಿ ರೂಪುಗೊಂಡ ನಾಗರಿಕತೆಯ ಸಾಂಸ್ಕೃತಿಕ ಮೌಲ್ಯಗಳು ಬಂಜಾರಾಗಳಂತಹ ಅನೇಕ ತಳಸಮುದಾಯಗಳನ್ನು ಸಾಮಾಜಿಕ ಚೌಕಟ್ಟಿನ ಹೊರಗಿಟ್ಟು ನೋಡುವ ಒಂದು ಪರಂಪರೆಯನ್ನೂ ಸೃಷ್ಟಿಸಿತ್ತು.
 
ಈ ವ್ಯತ್ಯಯಗಳೇ ಬಂಜಾರಾ ಸಮುದಾಯವನ್ನು “ ಅಪರಾಧಿ ಜಾತಿ ” ಎಂದು ಕಾನೂನಾತ್ಮಕವಾಗಿ ಪರಿಭಾವಿಸುವ ವಸಾಹತು ನೀತಿಗಳಿಗೂ ಕಾರಣವಾಗಿದ್ದವು. ತಮ್ಮ ಮೂಲ ಸೆಲೆಯಿಂದ ಬೇರ್ಪಟ್ಟು, ಮೂಲ ನೆಲೆಯಿಂದ ಉಚ್ಛಾಟಿಸಲ್ಪಟ್ಟು ಇತ್ತ ನಗರವಾಸಿಗಳೂ ಆಗದೆ ಅತ್ತ ಆಧುನಿಕತೆಗೂ ತೆರೆದುಕೊಳ್ಳಳಾಗದೆ ತಮ್ಮ ಅಲೆಮಾರಿ ಬದುಕಿಗೆ ಅಗತ್ಯವಾದ ಜೀವನೋಪಾಯ ಮಾರ್ಗಗಳನ್ನು ಅರಸುತ್ತಾ ಬಂದ ಬಂಜಾರ ಸಮಾಜವು , ನಗರೀಕೃತ ಸಮಾಜದ ದೃಷ್ಟಿಯಲ್ಲಿ ʼ ಊರ ಹೊರಗಿರಬೇಕಾದ ʼ ಜನಸಮುದಾಯಗಳಾಗಿ ಕಾಣತೊಡಗಿದ್ದು ಆಧುನಿಕ ಭಾರತದ ವಿಕೃತಿಗಳಲ್ಲೊಂದು. ಈ ವಿಕೃತಿಗಳನ್ನೂ ದಾಟಿ ಮುನ್ನಡೆದ ಬಂಜಾರ ಸಮುದಾಯ ಕ್ರಮೇಣ ಗ್ರಾಮೀಣ ಭಾರತದ ಸುತ್ತಮುತ್ತಲಿನ ಬಂಜರು ಭೂಮಿಯನ್ನೇ ಕೃಷಿಯೋಗ್ಯವಾಗಿಸುವ ಮೂಲಕ ಸ್ವಂತ ಕೃಷಿಯಲ್ಲಿ ತೊಡಗಿದ್ದುದು ಅವರ ಶ್ರಮಶಕ್ತಿಯ ಕ್ಷಮತೆಗೆ ಸಾಕ್ಷಿ. ಆದರೆ ಭಾರತೀಯ ಸಮಾಜದ ಊಳಿಗಮಾನ್ಯ ಧೋರಣೆಗೆ ಬಲಿಯಾಗಬೇಕಾದ ಸಮುದಾಯವು ಕ್ರಮೇಣ ಭೂಮಾಲೀಕರ ಜೀತದಾಳುಗಳ ಮಟ್ಟಕ್ಕೆ ಕುಸಿಯಬೇಕಾಗಿದ್ದು ಇತಿಹಾಸದ ಮತ್ತೊಂದು ವಿಡಂಬನೆ.  ಈ ವರ್ಗ ಸಂಘರ್ಷದ ನೆಲೆಯಲ್ಲೇ ಸ್ವಾತಂತ್ರ್ಯಪೂರ್ವದ ತೆಲಂಗಾಣ ಸಶಸ್ತ್ರ ಹೋರಾಟವೂ ರೂಪುಗೊಂಡಿದ್ದು ಸಮಕಾಲೀನ ಭಾರತದ ಒಂದು ಪ್ರಮುಖ ಘಟ್ಟ.
 
ಸ್ವತಂತ್ರ ಭಾರತದಲ್ಲಿ ಗೋರ್‌ಮಾಟಿ
 
ವಸಾಹತೋತ್ತರ ಭಾರತದಲ್ಲಿ ತಮ್ಮದೇ ಆದ ಭೌತಿಕ ನೆಲೆ ಕಂಡುಕೊಂಡ ಬಂಜಾರ ಸಮುದಾಯ ತಮ್ಮ “ ಅಪರಾಧಿ ” ಪಟ್ಟವನ್ನು ಕಳಚಿಕೊಳ್ಳುವುದಷ್ಟೇ ಅಲ್ಲದೆ ತಮ್ಮ ಅಲೆಮಾರಿ ಲಕ್ಷಣಗಳನ್ನೂ ಕ್ರಮೇಣ ಕಳೆದುಕೊಳ್ಳುತ್ತಾ ತನ್ನದೇ ಆದ ಸಾಂಸ್ಕೃತಿಕ ಭೂಮಿಕೆಯನ್ನು ನಿರ್ಮಿಸಿಕೊಳ್ಳಲಾರಂಭಿಸಿತು. ಬ್ರಿಟೀಷ್‌ ವಸಾಹತುಶಾಹಿಯು ಒದಗಿಸಿದ ಶಿಕ್ಷಣ ಮತ್ತು ಸ್ವಾತಂತ್ರ್ಯಪೂರ್ವ ಭಾರತದ ಹಲವು ಸೈದ್ಧಾಂತಿಕ ಚಿಂತನಾ ವಾಹಿನಿಗಳು ಈ ಸಮುದಾಯದ ಜೀವನದಲ್ಲಿ ಬೀರಿದ ಪ್ರಭಾವ ಚಾರಿತ್ರಿಕವಾದದ್ದು. ಮುಖ್ಯವಾಹಿನಿ ಧರ್ಮ ಮತ್ತು ಸಂಸ್ಕೃತಿಯ ಛಾಯೆಯನ್ನೂ ಅನುಭವಿಸುತ್ತಲೇ ಈ ಸಮುದಾಯವು ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಗಳಿಸುವ ನಿಟ್ಟಿನಲ್ಲಿ ಸಾಕಷ್ಟು ಬೌದ್ಧಿಕ ಪ್ರಯತ್ನಗಳನ್ನೂ ಮಾಡಿದ್ದಿದೆ. 20ನೆಯ ಶತಮಾನದ ಕೆಲವು ಸುಧಾರಣವಾದಿ ದೊರೆಗಳು ತಮ್ಮ ಸಂಸ್ಥಾನಗಳಲ್ಲಿ ಬಂಜಾರ ಸಮುದಾಯಕ್ಕೆ ಒಂದು ಅಸ್ಮಿತೆಯನ್ನೊದಗಿಸಿದ್ದು ಚರಿತ್ರಾರ್ಹ ಸಂಗತಿ. ಮೈಸೂರಿನ ನಾಲ್ವಡಿ ಒಡೆಯರ್‌ ಸಹ ಅಂಥವರಲ್ಲೊಬ್ಬರು.
 
ನಗರ ಜೀವನಕ್ಕೆ ಹತ್ತಿರವಾಗುತ್ತಿರುವಂತೆಲ್ಲಾ ಆಧುನಿಕತೆ ಎನ್ನುವುದು ಜೀವನಶೈಲಿ ಮತ್ತು ಬದುಕಿನ ಸಾಂಸ್ಕೃತಿಕ ನೆಲೆಗಳನ್ನು ಪಲ್ಲಟಗೊಳಿಸುವುದು ಸಮಾಜಶಾಸ್ತ್ರೀಯ ವಿದ್ಯಮಾನವಾಗಿದ್ದು, ಬಂಜಾರ ಸಮುದಾಯವೂ ಇದಕ್ಕೆ ಹೊರತಾಗಲಿಲ್ಲ.  ತಮ್ಮ ಮೂಲ ಮಾತೃಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನೂ ಮರೆತ ಈ ಸಮುದಾಯ ಇಂದು ಮೇಲ್ಜಾತಿ ಸಂಸ್ಕೃತಿಯ ಹಲವು ಅವಗುಣಗಳನ್ನು ಅಳವಡಿಸಿಕೊಂಡಿರುವುದು ವಾಸ್ತವ. ಹಾಗಾಗಿ ವರದಕ್ಷಿಣೆ, ಮಹಿಳಾ ದೌರ್ಜನ್ಯ , ಅಕ್ರಮ ಮದ್ಯಸೇವನೆ ಮೊದಲಾದ ಹಲವು ಮೌಢ್ಯಗಳೂ ಈ ಸಮಾಜವನ್ನು ಆವರಿಸಿಕೊಂಡಿದೆ, ಇತರ ಜನಪದೀಯ ಸಂಸ್ಕೃತಿಗಳಂತೆಯೇ ಬಂಜಾರರಲ್ಲೂ “ ಸಂತ ಸೇವಾಲಾಲ ” ಪರಂಪರೆಯೊಂದು ಬೆಳೆದುಬಂದಿದ್ದು ಇಂದಿಗೂ ಈ ಸಮುದಾಯದ ಜನರು ಸಾಂಸ್ಕೃತಿಕವಾಗಿ ಇದರೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.
 
 ರಂಗದ ಮೇಲೆ ಗೋರ್‌ಮಾಟಿ
 
ಈ ಸುದೀರ್ಘ ಜನೇತಿಹಾಸವನ್ನು ಎಲ್ಲ ಆಯಾಮಗಳಿಂದಲೂ ರಂಗದ ಮೇಲೆ ಕಟ್ಟಿಕೊಡುವ ಪ್ರಯತ್ನವನ್ನು ಪರಿಕಲ್ಪನೆ-ಸಂಗೀತ-ನಿರ್ದೇಶನ ವಹಿಸಿರುವ ಸಿ. ಬಸವಲಿಂಗಯ್ಯ (ಬಸು) ಅವರು ಅತ್ಯಂತ ಪರಿಣಾಮಕಾರಿಯಾಗಿ, ಬದ್ಧತೆಯಿಂದ ಮಾಡಿದ್ದಾರೆ. ಬಸು ಅವರ ʼಗೋರ್‌ಮಾಟಿ ʼ ಇತಿಹಾಸ ಪುಸ್ತಕವನ್ನು ಪುಟಪುಟವಾಗಿ ತೆರೆದಿಡುವ ಮಾದರಿಯಲ್ಲಿ ರೂಪುಗೊಂಡಿರುವುದು ವಿಶೇಷ. ಪುರಾಣ ಮಿಥ್ಯೆಗಳ ಸನ್ನಿವೇಶಗಳಾಗಲೀ, ಚಾರಿತ್ರಿಕ ಪ್ರಸಂಗಗಳಾಗಲೀ ಅಥವಾ ಬಂಜಾರ ಸಮುದಾಯದ ಆಚರಣಾ ವಿಧಿವಿಧಾನಗಳ ನಿರೂಪಣೆಯಲ್ಲಾಗಲೀ ಗುರುತಿಸಬಹುದಾದ ಸಮಾನ ಎಳೆ ಎಂದರೆ ಗತ-ವರ್ತಮಾನವನ್ನು ನೋಡುವ ಬಗೆ. ರಂಗಾಯಣ ರೆಪರ್ಟರಿಯ ಹೊಸ ಕಲಾವಿದರ ದೊಡ್ಡ ತಂಡವನ್ನು ಕಟ್ಟಿಕೊಂಡು ರಂಗಪ್ರವೇಶ ಮಾಡಿರುವ ʼಗೋರ್‌ಮಾಟಿʼ ಪ್ರತಿಯೊಂದು ದೃಶ್ಯದಲ್ಲೂ ಪ್ರೇಕ್ಷಕರ ಆಸಕ್ತಿಯನ್ನು ಉದ್ಧೀಪನಗೊಳಿಸುತ್ತಾ, ಬಂಜಾರರ ಸಾಮಾಜಿಕ-ಸಾಂಸ್ಕೃತಿಕ ಹೆಜ್ಜೆಗುರುತುಗಳನ್ನು ಮತ್ತಷ್ಟು ತಿಳಿದುಕೊಳ್ಳುವ ಹಂಬಲ ಸೃಷ್ಟಿಸುವಂತಿದೆ. ಇದಕ್ಕೆ ಕಾರಣ ರಂಗಸಜ್ಜಿಕೆಯ ವೈವಿಧ್ಯಮಯ ರಂಗು, ವಸ್ತ್ರ ವಿನ್ಯಾಸ, ನೃತ್ಯ-ಸಂಗೀತ ಮತ್ತು ಎಲ್ಲ ಕಲಾವಿದರ ಭಾವಪೂರ್ಣ ಅಭಿನಯ.
 
ಒಂದು ಸಮುದಾಯ ಅಥವಾ ಸಮಾಜ ಚಾರಿತ್ರಿಕವಾಗಿ ಎಷ್ಟೇ ವಿಕೃತವಾಗಿ/ವಿಭಿನ್ನವಾಗಿ ದಾಖಲಿಸಲ್ಪಟ್ಟಿದ್ದರೂ, ಸಮಕಾಲೀನ ಸಂದರ್ಭದಲ್ಲಿ ಈ ಸಮಾಜದ ಚಾರಿತ್ರಿಕ ನಡೆಯನ್ನು ದಾಖಲಿಸುವಾಗ ಅದು ಈ ಹೊತ್ತಿನ ಸಮಾಜಕ್ಕೆ ಅಪ್ಯಾಯಮಾನವಾಗುವಂತಿರಬೇಕು. ಈ ರೀತಿಯ ಸೃಜನಶೀಲ ಪ್ರಯತ್ನಗಳನ್ನು ಶ್ಯಾಂಬೆನಗಲ್‌, ಮೃಣಾಲ್‌ ಸೆನ್‌, ಸತ್ಯಜಿತ್‌ ರೇ, ಅಡೂರ್‌ ಗೋಪಾಲಕೃಷ್ಣನ್‌ ಮೊದಲಾದವರು ಚಿತ್ರರಂಗದಲ್ಲಿ ಸಾಧಿಸಿ ತೋರಿದ್ದಾರೆ. ಭಾರತೀಯ ರಂಗಭೂಮಿಯ ಇತಿಹಾಸದಲ್ಲೂ ಇಂತಹ ಪ್ರಯತ್ನಗಳು ನಡೆದಿವೆ. ಇದರ ಒಂದು ನವೀನ ಆಯಾಮವನ್ನು ಬಸವಲಿಂಗಯ್ಯ (ಬಸು) ತಮ್ಮ ರಂಗಾಯಣ ರೆಪರ್ಟರಿಯೊಂದಿಗೆ ಕನ್ನಡ ರಂಗಪ್ರೇಮಿಗಳಿಗೆ ಪರಿಚಯಿಸಿದ್ದಾರೆ. ಈವತ್ತಿನ ಸಂದರ್ಭದಲ್ಲಿ ರಂಗಭೂಮಿಯ ಆದ್ಯತೆಗಳು ಚರಿತ್ರೆ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸುದಷ್ಟೇ ಅಲ್ಲದೆ, ಗತಕಾಲದೊಂದಿಗೆ ವರ್ತಮಾನದ ಅನುಸಂಧಾನಕ್ಕೆ ಅವಕಾಶ ಮಾಡಿಕೊಟ್ಟು, ಗತಕಾಲವನ್ನು ಸಮಕಾಲೀನಗೊಳಿಸುವುದು                                   ( Contemporarisation) ಸಹ ಅಷ್ಟೇ ಪ್ರಧಾನ ಆದ್ಯತೆಯಾಗಬೇಕಾಗುತ್ತದೆ.
 
ಈ ನಿಟ್ಟಿನಲ್ಲಿ ಬಸು ಖಂಡಿತವಾಗಿಯೂ ಗೆದ್ದಿದ್ದಾರೆ ಎನ್ನಬಹುದು. ಬಂಜಾರ ಸಮುದಾಯವನ್ನು ಜಾಗತಿಕ ನೆಲೆಯಲ್ಲಿ ಪ್ರತಿನಿಧಿಸುವ ಭರತನಾಟ್ಯ ಕಲಾವಿದೆ ವೆಂಕಟಲಕ್ಷ್ಮಿ, ಒಲಂಪಿಕ್‌ ತಾರೆ ಮಿಲ್ಕಾಸಿಂಗ್‌, ಪಾಕಿಸ್ತಾನದ ಗಾಯಕಿ ರೇಷ್ಮಾ ಅವರನ್ನು ಪರಿಚಯಿಸುವ ಮೂಲಕ ಭಾರತೀಯ ಸಮಾಜದಲ್ಲಿ ಈ ಸಮುದಾಯವು ಗಳಿಸಬಹುದಾದ ಔನ್ನತ್ಯವನ್ನು ಪ್ರತಿಪಾದಿಸಿದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ವಿಶ್ವ ಚಲನಚಿತ್ರ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಚಾರ್ಲಿ ಚಾಪ್ಲಿನ್‌ ಸಹ ಇದೇ ರೀತಿಯ ಅಲೆಮಾರಿ ಸಮಾಜದ ಶಿಶು ಎನ್ನುವುದನ್ನು ತೋರಿಸುತ್ತಲೇ, ಇಂದಿನ ರಾಜಕೀಯ ಸರ್ವಾಧಿಕಾರದ ವಾತಾವರಣದಲ್ಲಿ ಅತ್ಯವಶ್ಯವಾದ ಪ್ರಜಾಪ್ರಭುತ್ವದ ಆಶಯಗಳನ್ನು ಚಾಪ್ಲಿನನ ʼ ಗ್ರೇಟ್‌ ಡಿಕ್ಟೇಟರ್‌ ʼ ಚಿತ್ರದಲ್ಲಿ ಬರುವ ಆತನ ಭಾಷಣದ ಮೂಲಕ ರಂಗದ ಮೇಲೆ ತೋರಿಸಿ ನಾಟಕವನ್ನು ಕೊನೆ ಮಾಡುವ ಪರಿ ನಿಜಕ್ಕೂ ಶ್ಲಾಘನೀಯ. ಇದು ಇಡೀ ನಾಟಕವನ್ನು ಪ್ರೇಕ್ಷಕರ ಎದೆಯಲ್ಲಿ ನಾಟಿಸುವುದಷ್ಟೇ ಅಲ್ಲದೆ, ಬಹುವಿಸ್ತಾರದ ನಾಟಕದ ಕಥಾವಸ್ತುವನ್ನು ಸಮಕಾಲೀನಗೊಳಿಸುವ ಒಂದು ಪ್ರಾಮಾಣಿಕ ಪ್ರಯತ್ನವೂ ಆಗಿದೆ.
 
ರಂಗಾಯಣದ ನುರಿತ ಕಲಾವಿದರೇ ಆದ ಗೀತಾ ಮೊಂಟಡ್ಕ ಅವರ ರಂಗ ನಿರ್ವಹಣೆ, ಕೆ.ಆರ್.‌ ನಂದಿನಿ ಅವರ ಸಹ ನಿರ್ದೇಶನ, ಶಶಿಧರ ಅಡಪ ಅವರ ರಂಗವಿನ್ಯಾಸ, ಪ್ರಮೋದ್‌ ಶಿಗ್ಗಾಂವ್‌ ಮತ್ತು ಶಶಿಕಲಾ ಅವರ ವಸ್ತ್ರ ವಿನ್ಯಾಸ , ಕೃಷ್ಣಕುಮಾರ್‌ ನಾರ್ಣಕಜೆ ಅವರ ಬೆಳಕಿನ ವಿನ್ಯಾಸ  ಹೀಗೆ ನೇಪಥ್ಯದ ಎಲ್ಲ ಕ್ರಿಯೆಗಳನ್ನೂ ಕ್ರಿಯಾಶೀಲವಾಗಿ ಅಳವಡಿಸುವ ಮೂಲಕ ಇಡೀ ತಂಡವೇ ʼ ಗೋರ್‌ಮಾಟಿʼ ಯನ್ನು ಒಂದು ವಿಭಿನ್ನ-ವಿಶಿಷ್ಟ ರಂಗ ಪ್ರಯೋಗವನ್ನಾಗಿಸಿದೆ. ಒಂದು ಸಮುದಾಯದ ಚಾರಿತ್ರಿಕ ಹೆಜ್ಜೆಗಳನ್ನು ಪರಿಚಯಿಸುವುದರೊಂದಿಗೇ ಇಂದು ಇಂತಹುದೇ ಸಮಾಜಗಳು ಎದುರಿಸುತ್ತಿರುವ ನಾಗರಿಕತೆಯ-ಪ್ರಜಾಸತ್ತಾತ್ಮಕ ಮೌಲ್ಯಗಳ ಸವಾಲುಗಳನ್ನು, 140 ನಿಮಿಷಗಳ ಅವಧಿಯಲ್ಲಿ ತೆರೆದಿಡುವ ರಂಗಾಯಣ ರೆಪರ್ಟರಿಯ  ʼ ಗೋರ್‌ಮಾಟಿ ʼ ಸಮಸ್ತ ಕನ್ನಡಿಗರೂ ನೋಡಲೇಬೇಕಾದ ಒಂದು ಸಾಂಸ್ಕೃತಿಕ ಪ್ರಯತ್ನ. ಬಸು ಮತ್ತವರ ಸಹವರ್ತಿಗಳು ಮತ್ತು ರಂಗಾಯಣ ರೆಪರ್ಟರಿಯ ಸಮಸ್ತ ತಂಡದವರು ಅಭಿನಂದನಾರ್ಹರು.
 
( ಗೋರ್‌ಮಾಟಿ ನಾಟಕವು ಜುಲೈ 9ರಂದು ದಾವಣಗೆರೆಯಲ್ಲಿ, 10ರಂದು ಕೊಟ್ಟೂರು, 11ರಂದು ಹರಪನಹಳ್ಳಿಯಲ್ಲಿ, ತದನಂತರ 13-15-16ರಂದು ಬೆಂಗಳೂರಿನಲ್ಲಿ, 14ರಂದು ಕೋಲಾರದಲ್ಲಿ ಪ್ರದರ್ಶನಗೊಳ್ಳಲಿದೆ.)
-೦-೦-೦-೦-
ADVERTISEMENT
Previous Post

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆಯೇ ಪರಿಹಾರ: ಸಿ ಟಿ ರವಿ..

Next Post

ನಿಮ್ಮ ಕಾರಿಗೂ LED ಲೈಟ್ ಅಳವಡಿಸಿದ್ದೀರಾ ಆಗಿದ್ರೆ ಫೈನ್ ತಪ್ಪಿದ್ದಲ್ಲ

Related Posts

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
0

ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada season 12)ಈಗಾಗಲೇ ಎಂಬತ್ತು ದಿನಗಳನ್ನು ಪೂರೈಸಿದ್ದು, ಶತಕದ ದಿನದತ್ತ ಸಾಗುತ್ತಿದೆ. ಸದ್ಯ ಆಟ ಇಂಟ್ರಸ್ಟಿಂಗ್‌ ಆಗಿದ್ದು, ಈ...

Read moreDetails
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

December 19, 2025
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೆಗಾ ರೇಡ್‌‌.. ಸಿಕ್ಕಿದ್ದೇನು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೆಗಾ ರೇಡ್‌‌.. ಸಿಕ್ಕಿದ್ದೇನು?

December 19, 2025
Next Post

ನಿಮ್ಮ ಕಾರಿಗೂ LED ಲೈಟ್ ಅಳವಡಿಸಿದ್ದೀರಾ ಆಗಿದ್ರೆ ಫೈನ್ ತಪ್ಪಿದ್ದಲ್ಲ

Recent News

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ
Top Story

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

by ಪ್ರತಿಧ್ವನಿ
December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್
Top Story

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 19, 2025
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada