ಯುದ್ಧೋನ್ಮಾದದ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಒಂದು ಮುನ್ನೆಚ್ಚರಿಕೆಯ ಮಾತುಗಳು
ಈ ವರ್ಷ ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯ 76 ನೇ ವರ್ಷದ ಸ್ಮರಣೆಯಲ್ಲಿ ಆ ಐತಿಹಾಸಿಕ ಘಟನೆಯಿಂದ ನಾವು ಕಲಿಯಬಹುದಾದ ಯಾವುದೇ ನೈತಿಕ ಪಾಠಗಳೇನು ?
ಅಮೆರಿಕದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಲಿಯಮ್ ಇಸ್ಡೇಲ್ ಅವರು 2015ರಲ್ಲಿ ಮಾಡಿದ ಉಪನ್ಯಾಸವೊಂದರ ಕನ್ನಡ ಭಾವಾನುವಾದ (ವೆಬ್ ಆಧಾರಿತ)
ಅನುವಾದ : ನಾ ದಿವಾಕರ
ಈ ವರ್ಷವು ಎರಡನೇ ಮಹಾಯುದ್ಧ ಮುಗಿದು 70 ವರ್ಷಗಳನ್ನು ಸೂಚಿಸುತ್ತದೆ. ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಲಾದ ಪರಮಾಣು ಬಾಂಬುಗಳಂತಹ ಅತ್ಯಂತ ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಯೊಂದಿಗೆ ಈ ಸಂಘರ್ಷವು ಕೊನೆಗೊಂಡಿತ್ತು. ಯುದ್ಧಗಳನ್ನು ಸ್ಮರಿಸುವುದರಿಂದ ಏನು ಪ್ರಯೋಜನ ಎಂದು ಕೇಳಲು ನಿಮಗೆ ಎಂದಾದರೂ ಅನಿಸಿದೆಯೇ? ಅವು ಆಸಕ್ತಿದಾಯಕವಾಗಿರುವುದರಿಂದ ನಾವು ಅವರನ್ನು ಸ್ಮರಿಸುತ್ತೇವೆಯೇ ಅಥವಾ ಇನ್ನೂ ಹೆಚ್ಚು ಪ್ರಮುಖ ಕಾರಣಗಳಿವೆಯೇ ?
ನೀವು ಎಂದಾದರೂ ಯುದ್ಧ ಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿದ್ದರೆ, ನಮ್ಮ ಜೀವನ ವಿಧಾನವನ್ನು ರಕ್ಷಿಸಲು ಹೋರಾಡಿದವರಿಗೆ ನಾವು ನೀಡಬೇಕಾದ ಕೃತಜ್ಞತೆಯ ಬಗ್ಗೆ ಭಾಷಣಕಾರರು ಮಾತನಾಡುವುದನ್ನು ನೀವು ಕೇಳಿರಬಹುದು. ಅಥವಾ ಕಳೆದುಹೋದ ಜೀವಗಳ ದುರಂತವನ್ನು ಪ್ರತಿಬಿಂಬಿಸುವ ಮೂಲಕ ಮತ್ತೊಮ್ಮೆ ಸಂಘರ್ಷಕ್ಕೆ ಧಾವಿಸುವ ಅಪಾಯಗಳನ್ನು ಬಿಂಬಿಸುವ ಭಾಷಣಗಳನ್ನು ಕೇಳಿರಬಹುದು. ಯುದ್ಧಗಳನ್ನು ನೆನಪಿಸಿಕೊಳ್ಳಲು ಅವು ಉತ್ತಮ ಕಾರಣಗಳಾಗಿವೆಯಾದರೂ ಅದಕ್ಕಿಂತಲೂ ಮುಖ್ಯವಾದ ಕೆಲವು ಸಂಗತಿಗಳಿವೆ.
ಸ್ಕಾಟ್‌ಲೆಂಡ್‌ನ ತತ್ವಜ್ಞಾನಿ ಡೇವಿಡ್ ಹ್ಯೂಮ್ “ ಇತಿಹಾಸವನ್ನು ಅಧ್ಯಯನ ಮಾಡಲು ಮುಖ್ಯ ಕಾರಣವೆಂದರೆ ಮಾನವ ಸ್ವಭಾವದ ಸ್ಥಿರ ಮತ್ತು ಸಾರ್ವತ್ರಿಕ ತತ್ವಗಳನ್ನು ಕಂಡುಹಿಡಿಯುವುದು ” ಎಂದು ಹೇಳುತ್ತಾರೆ. ಯುದ್ಧಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮಾನವ ಜೀವನದ ಬೇರೆ ಯಾವುದೇ ಕ್ಷೇತ್ರದಲ್ಲಿ ಆ ಪಾಠಗಳನ್ನು ಕಲಿಯುವುದು ಹೆಚ್ಚು ಮುಖ್ಯ ಎನಿಸುವುದಿಲ್ಲ.
ಯುದ್ಧಗಳನ್ನು ಅಧ್ಯಯನ ಮಾಡುವ ಮೂಲಕ ನಾವು ನಮ್ಮ ಬಗ್ಗೆ ಪಾಠಗಳನ್ನು ಕಲಿಯಬಹುದು. ನಾವು ಯುದ್ಧಗಳೊಳಗೆ ಹೇಗೆ ಪ್ರವೇಶಿಸುತ್ತೇವೆ, ಅವುಗಳ ವಿರುದ್ಧ ಏಕೆ ಹೋರಾಡುತ್ತೇವೆ ಹಾಗೂ ಇತರರ ಮೇಲೆ ನಡೆದ ಅಸಾಧಾರಣ ಮಟ್ಟದ ಕ್ರೌರ್ಯ ಮತ್ತು ವಿನಾಶವನ್ನು ಸಮರ್ಥಿಸಲು ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ನಾವು ಪಾಠಗಳನ್ನು ಕಲಿಯಲು ಸಾಧ್ಯವಿದೆ.
ಜಪಾನ್ ವಿರುದ್ಧ ಪೆಸಿಫಿಕ್‌ನಲ್ಲಿ ನಡೆದ ಯುದ್ಧದಿಂದ ಮತ್ತು ವಿಶೇಷವಾಗಿ ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯಿಂದ ನಮಗೆ ಬಹಿರಂಗಗೊಂಡ ಮಾನವ ಸ್ವಭಾವದ ಬಗ್ಗೆ ಪ್ರಮುಖವಾಗಿ ಮೂರು ಪಾಠಗಳನ್ನು ಕಲಿಯಬಹುದು.
ಮೊದಲನೆಯ ಪಾಠ : ಮಾನವರು ಬುಡಕಟ್ಟು ಜೀವಿಗಳು.
ಪ್ರೈಮಟಾಲಜಿಸ್ಟ್ ( ಪ್ರೈಮೇಟ್ಸ್‌ಗಳನ್ನು ಕುರಿತ ಪ್ರಾಣಿಶಾಸ್ತ್ರಜ್ಞ) ಫ್ರಾನ್ಸ್ ಡಿ ವಾಲ್ ಅವರು ಒಮ್ಮೆ ನ್ಯೂ ಗಿನಿಯಾದ ಎತ್ತರದ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದ ಬಗ್ಗೆ ಅಧ್ಯಯನ ಮಾಡುತ್ತಿದ್ದ ಜನಾಂಗ ಶಾಸ್ತ್ರಜ್ಞರಿಂದ ತಾವು ಕೇಳಿದ ಕಥೆಯನ್ನು ಹೇಳುತ್ತಾರೆ : “ ಒಂದು ದಿನ ಕೆಲವು ಸಂಶೋಧಕರು ಇಬ್ಬರು ಬುಡಕಟ್ಟು ಜನರಿಗೆ ವಿಮಾನ ಹಾರಾಟವನ್ನು ನೀಡಿದರು. ಅವರು ಒಪ್ಪಿದರು. ಆದರೆ ಹತ್ತುವ ಮೊದಲು ಅವರು “ ದಯವಿಟ್ಟು ಎರಡು ದೊಡ್ಡ ಕಲ್ಲುಗಳನ್ನು ವಿಮಾನದಲ್ಲಿ ತರಬಹುದೇ? ” ಎಂದು ವಿನಂತಿಸಿದ್ದರು. ಸಂಶೋಧಕರು ಏಕೆ ಎಂದು ಕೇಳಿದಾಗ, ಬುಡಕಟ್ಟು ಜನರು ಅದನ್ನು ತಮ್ಮ ಶತ್ರುಗಳ ಹಳ್ಳಿಯ ಮೇಲೆ ಎಸೆಯಲು ಬಯಸುತ್ತೇವೆ ಎಂದು ಹೇಳಿದರು. ”
ಈ ಕತೆಯನ್ನು ಹೇಳಿದ ಜನಾಂಗಶಾಸ್ತ್ರಜ್ಞರು ನವಶಿಲಾಯುಗದ ಮನುಷ್ಯನಿಂದ ಬಾಂಬ್ ದಾಳಿಯ ಆವಿಷ್ಕಾರಕ್ಕಾಗಿ ನಾವು ತಯಾರಾಗಿದ್ದೇವೆ ಎಂದು ಹೇಳಿದ್ದರು.
ಅಮೆರಿಕದ ವಾಯುಪಡೆಯವರು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಆ ನಿರ್ಣಾಯಕ ಕಾರ್ಯಾಚರಣೆಗಳನ್ನು ಹಾರಿಸಿದಾಗ ತಂತ್ರಜ್ಞಾನವು ತುಂಬಾ ವಿಭಿನ್ನವಾಗಿತ್ತು. ಆದರೆ ಮಾನವನ ಮನೋವಿಜ್ಞಾನವು ಅಷ್ಟೊಂದು ಬದಲಾಗಿಲ್ಲ. ಹಿಂಸೆಯನ್ನು ಹೇರಲು ನಮ್ಮ ಪೂರ್ವಜರನ್ನು ಪ್ರೇರೇಪಿಸಿದ ಅದೇ ರೀತಿಯ ಭಾವನೆಗಳು ನಮ್ಮನ್ನೂ ಪ್ರೇರೇಪಿಸಬಹುದು. ಹಾಗಾಗಿಯೇ ಐನ್‌ಸ್ಟೈನ್ “ಪರಮಾಣು ಶಸ್ತ್ರಾಸ್ತ್ರಗಳು ನಮ್ಮ ಆಲೋಚನಾ ವಿಧಾನಗಳನ್ನು ಹೊರತುಪಡಿಸಿ ಎಲ್ಲವನ್ನೂ ಬದಲಾಯಿಸಿವೆ.” ಎಂದು ಹೇಳುತ್ತಾರೆ.
ಜಪಾನ್‌ನೊಂದಿಗಿನ ಯುದ್ಧದ ಬುಡಕಟ್ಟು ಆಯಾಮವನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಬಹುಪಾಲು ಜನರು ಮಿಲಿಟರಿ ನಾಯಕರ ಮತ್ತು ನಾಗರಿಕರ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಫಲರಾಗಿರುವುದನ್ನು ಗಮನಿಸಬೇಕಾಗುತ್ತದೆ. ಇಡೀ ಜನಾಂಗಗಳನ್ನು ಮತ್ತು ರಾಷ್ಟ್ರಗಳನ್ನು ರಾಕ್ಷಸೀಕರಣಗೊಳಿಸಲಾಯಿತು. ಜಪಾನಿನ ಕಡೆಯಿಂದ ಕೆಲವರು ಸೂರ್ಯ ದೇವರ ವಂಶಸ್ಥರಾಗಿ ತಮ್ಮ ಜನಾಂಗೀಯ ಶ್ರೇಷ್ಠತೆಯನ್ನು ನಂಬಿದ್ದರು. ಅಂತಹ ದೃಷ್ಟಿಕೋನವು ಮಿತ್ರರಾಷ್ಟ್ರಗಳ ಯುದ್ಧ ಕೈದಿಗಳ ವಿರುದ್ಧದ ಕ್ರೌರ್ಯವನ್ನು ಸಮರ್ಥಿಸುವುದನ್ನು ಸುಲಭಗೊಳಿಸಿತು. ಮತ್ತು ಮಿತ್ರರಾಷ್ಟ್ರಗಳ ಕಡೆಯಿಂದ ಕೆಲವರು ಜಪಾನೀಯರ ಬಗ್ಗೆ ಅವರು ಮನುಷ್ಯ ಜಾತಿಗಿಂತಲೂ ಕೆಳಗಿನವರು ಎನ್ನುವಂತೆ ಮಾತನಾಡಿದರು. ಉದಾಹರಣೆಗೆ, ಆಸ್ಟ್ರೇಲಿಯಾದ ಜನರಲ್ ಸರ್ ಥಾಮಸ್ ಬ್ಯೂಲಿ “ ಜಪಾನೀಯರು ಮನುಷ್ಯ ಮತ್ತು ವಾನರದ ನಡುವಿನ ಸಂತತಿ ” ಎಂದು ಹೇಳಿದ್ದರು.
ಇದಕ್ಕೂ ಹಿರೋಷಿಮಾ ಮತ್ತು ನಾಗಸಾಕಿಗೂ ಏನು ಸಂಬಂಧ ? ಶತ್ರುವಿನ ಬಗ್ಗೆ ಇರಬಹುದಾದ ಬುಡಕಟ್ಟು ದ್ವೇಷವು ಕನಿಷ್ಠಪಕ್ಷ ಅವರ ಮೇಲೆ ದಾಳಿ ಮಾಡಬೇಕೇ ಎಂದು ನಿರ್ಧರಿಸುವಲ್ಲಿ ಎದುರಾಗುವ ಅವಶ್ಯಕ ಪ್ರಶ್ನೆಗಳನ್ನು ಬದಿಗಿರಿಸುತ್ತದೆ.
1945ರ ಆರಂಭದ ವೇಳೆಗೆ ಜಪಾನ್ ಸೋಲುವುದು ಖಚಿತವಾಗಿತ್ತು. ರಾಷ್ಟ್ರವು ನಾಶವಾಯಿತು. ನೌಕಾ ದಿಗ್ಬಂಧನದಿಂದ ಆರ್ಥಿಕತೆಯು ಕುಸಿದು ನೆಲಕಚ್ಚಿತ್ತು. ಸೋವಿಯತ್ ಸೈನ್ಯವು ಆಕ್ರಮಣ ಮಾಡಲು ಸಿದ್ಧವಾಗಿತ್ತು. ಇಂದು ಅನೇಕ ಇತಿಹಾಸಕಾರರು ಪರಮಾಣು ಬಾಂಬ್ ದಾಳಿ ಮಾಡದೆ ಹೋಗಿದ್ದರೂ ಆ ಸಮಯದಲ್ಲಿ ಜಪಾನ್ ಶರಣಾಗುತ್ತಿತ್ತು ಎಂದು ನಂಬುತ್ತಾರೆ.
ಪರಮಾಣು ಬಾಂಬ್‌ಗಳನ್ನು ಬಳಸಬೇಕೆ ಎಂದು ನಿರ್ಧರಿಸುವ ಸಂದರ್ಭದಲ್ಲಿ “ಸರ್ವಾನುಮತದ, ಸ್ವಪ್ರೇರಣೆಯ , ಪ್ರಶ್ನಾತೀತ ಒಪ್ಪಂದ” ಇದೆ ಎಂದು ಚರ್ಚಿಲ್ ಬರೆದಿದ್ದರು. ಟಾರ್ಗೆಟ್ ಕಮಿಟಿಯ ಒಬ್ಬ ಸದಸ್ಯನೂ ಅವುಗಳನ್ನು ಬಳಸುವುದರ ವಿರುದ್ಧ ನೈತಿಕತೆಯ ನೆಲೆಯಲ್ಲಿ ಪ್ರಶ್ನಿಸಲಿಲ್ಲ ಎಂದು ಇತಿಹಾಸಕಾರ ಪಾಲ್ ಹ್ಯಾಮ್ ಹೇಳುತ್ತಾರೆ. ಪರ್ಯಾಯ ಮಾರ್ಗಗಳನ್ನು ಅನುಸರಿಸಬಹುದಾದ ಯಾವುದೇ ನಿಜವಾದ ಸಲಹೆಗಳನ್ನೂ ನೀಡಲಿಲ್ಲ. ಯುದ್ಧ ಕಾರ್ಯದರ್ಶಿ ಹೆನ್ರಿ ಸ್ಟಿಮ್‌ಸನ್ ಒಂದು ಪ್ರಾತ್ಯಕ್ಷಿಕೆಯನ್ನು ಒದಗಿಸುವ ಸಾಧ್ಯತೆಯನ್ನು ಸೂಚಿಸಿದ್ದರೂ ಆ ಸಲಹೆಯನ್ನು ತ್ವರಿತವಾಗಿ ತಳ್ಳಿಹಾಕಲಾಯಿತು.
ಯುದ್ಧವನ್ನು ಅಧ್ಯಯನ ಮಾಡುವುದು ನಮ್ಮ ಆಲೋಚನೆಯೊಳಗಿನ ಬುಡಕಟ್ಟು ಆಯಾಮವನ್ನು ಬಹಿರಂಗಪಡಿಸುತ್ತದೆ. ಆ ಪ್ರವೃತ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಾವು ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ, ತನ್ಮೂಲಕ ಅನಗತ್ಯವಾಗಿ ಜೀವಹರಣ ಮಾಡುವುದನ್ನು ತಪ್ಪಿಸಬಹುದು.
ಎರಡನೇ ಪಾಠ: ದೂರದಿಂದ ಕೊಲ್ಲುವುದು ಸುಲಭ.
ಜಾರ್ಜ್ ಆರ್ವೆಲ್ ಒಮ್ಮೆ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಹೋರಾಡಿದ ಅನುಭವದ ಬಗ್ಗೆ ಬರೆದಿದ್ದಾರೆ. ನಾವು ಒಮ್ಮೆ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲುವುದನ್ನು ಹೇಗೆ ತಪ್ಪಿಸಿದೆವು ಎಂಬುದರ ಬಗ್ಗೆ ಅವರು ಒಂದು ಕಥೆಯನ್ನು ಹೇಳಿದ್ದರು. “ ಅರೆಬರೆ ಉಡುಪು ಧರಿಸಿ, ತನ್ನ ಪ್ಯಾಂಟನ್ನು ಎರಡೂ ಕೈಗಳಿಂದ ಹಿಡಿದುಕೊಂಡು ಓಡುತ್ತಿರುವ ವ್ಯಕ್ತಿಯನ್ನು ನಾನು ನೋಡಿದೆ. ನಾನು ಫ್ಯಾಸಿಸ್ಟರ ಮೇಲೆ ಗುಂಡು ಹಾರಿಸಲು ಇಲ್ಲಿಗೆ ಬಂದಿದ್ದೆ. ಆದರೆ ಪ್ಯಾಂಟ್ ಹಿಡಿದಿರುವ ವ್ಯಕ್ತಿ ಫ್ಯಾಸಿಸ್ಟ್ ಅಲ್ಲ ಅವನು ನಮ್ಮಂತೆಯೇ ಸಹಜೀವಿ ಎಂದು ತಿಳಿಯಿತು ಹಾಗಾಗಿ ಅವನ ಮೇಲೆ ಗುಂಡು ಹಾರಿಸಲು ಮನಸ್ಸಾಗಲಿಲ್ಲ” ಆರ್ವೆಲ್ ದೃಷ್ಟಿಯಲ್ಲಿ ಆ ಸಣ್ಣ ನಿರೂಪಣೆಯೇ ಶತ್ರುವನ್ನು ಮಾನವೀಯಗೊಳಿಸಿತ್ತು.
ಆದರೆ 20,000 ಅಡಿ ಎತ್ತರದಲ್ಲಿ, ನಿಮ್ಮ ಶತ್ರುವನ್ನು ಮಾನವೀಯಗೊಳಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲ. ಜನರ ಮೇಲೆ ಬಾಂಬ್ ದಾಳಿ ನಡೆಸುವುದಕ್ಕೂ ಒಬ್ಬೊಬ್ಬರಾಗಿ ಪಿಸ್ತೂಲ್ ನಿಂದ ಗುಂಡು ಹಾರಿಸುವುದಕ್ಕೂ ಯಾವುದೇ ನೈತಿಕ ವ್ಯತ್ಯಾಸ ಕಂಡುಬರುವುದಿಲ್ಲ. ಆದರೆ ಇದು ವಿಭಿನ್ನವಾಗಿ ಕಾಣುವುದೇಕೆಂದರೆ ನೀವು ಅವರನ್ನು ನೋಡಲು ಸಾಧ್ಯವಿಲ್ಲ. ಯಾವುದೇ ಒಬ್ಬ ನಿರ್ದಿಷ್ಟ ಮಹಿಳೆ ಅಥವಾ ನಿರ್ದಿಷ್ಟ ಮಗು ಸಾಯಬೇಕೆಂದು ನೀವು ಬಯಸುವುದಿಲ್ಲ.
ಮನೋವೈಜ್ಞಾನಿಕ ಅಂಶವೆಂದರೆ, ನಾವು ನೋಡದ ಮತ್ತು ಗುರುತಿಸಲು ಸಾಧ್ಯವಾಗದ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ಸಾವಿಗೆ ಕಾರಣವಾಗುವ ಆಧುನಿಕ ಯುದ್ಧವು ಉಂಟುಮಾಡುವ ಆಘಾತಕ್ಕಿಂತಲೂ, ಗುರುತಿಸಬಹುದಾದ ವ್ಯಕ್ತಿಗಳ ವಿರುದ್ಧದ ದುಷ್ಕೃತ್ಯದ-ಭೀಭತ್ಸ ಕಥೆಗಳು ನಮಗೆ ಹೆಚ್ಚು ಆಘಾತಕಾರಿಯಾಗಿ ಕಾಣುತ್ತವೆ.. ಅದು ನಮ್ಮನ್ನು ಚಿಂತೆಗೀಡಲೇಬೇಕು ಏಕೆಂದರೆ ನಮ್ಮನ್ನು ಹೆಚ್ಚು ಆಘಾತಗೊಳಿಸುವ ಸಂಗತಿಗಳನ್ನು ನೈತಿಕವಾಗಿ ಅತ್ಯಂತ ಭಯಾನಕವಾದ ಘಟನೆಗಳಿಗೆ ಬದಲಿಯಾಗಿ ಕಾಣಲಾಗುವುದಿಲ್ಲ.
ಆ ಆಘಾತಕಾರಿ ಅಂಕಿಅಂಶಗಳನ್ನು ಮಾನವೀಯಗೊಳಿಸುವುದರಲ್ಲಿಯೇ ಇತಿಹಾಸದ ಮೌಲ್ಯವು ಅಡಗಿದೆ. ಅಲ್ಲಿನ ಸಂತ್ರಸ್ತರ ಕಥೆಗಳನ್ನು ಹೇಳುವ ಮೂಲಕ, ಅವರ ದುಃಖ-ಯಾತನೆ ವೇದನೆಯನ್ನು ತೋರಿಸುವ ಮೂಲಕ ಮತ್ತು ಒಟ್ಟಾರೆಯಾಗಿ ಅವುಗಳನ್ನು ಮರೆಯುವ ನಮ್ಮ ಪ್ರವೃತ್ತಿಯನ್ನು ನೆನಪಿಸುವ ಮೂಲಕ ಈ ಮಾನವೀಯಗೊಳಿಸುವ ಪ್ರಕ್ರಿಯೆ ವ್ಯಕ್ತವಾಗುತ್ತದೆ.
ಮುಂದುವರೆಯುತ್ತದೆ,,,,,