ಈ ದೇಶದ ಶೂದ್ರ ಸಮುದಾಯ ಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿತ್ತು. ಬ್ರಿಟೀಷರು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದ ನಂತರ ಕರ್ನಾಟಕದಲ್ಲಿ ಲಿಂಗಾಯತರು ಒಳಗೊಂಡಂತೆ ಶೂದ್ರ ಸಮುದಾಯಕ್ಕೆ ಶಿಕ್ಷಣ ದೊರಕಿಸಿಕೊಟ್ಟಿದ್ದು ಲಿಂಗಾಯತ ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳು. ಈ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲಾಗದ ಹಿಂದುತ್ವವಾದಿ ಅಕ್ಷರ ವಂಚಕ ಸಂತತಿ ಲಿಂಗಾಯತ ಮಠ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ತೀವ್ರ ದೇಷವನ್ನು ಕಾರುತ್ತಲೆ ಬಂದಿದೆ. ೨೦೧೭ ರಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಹೋರಾಟ ಅಭೂತಪೂರ್ವ ಯಶಸ್ಸು ಕಂಡದ್ದನ್ನು ನೋಡಿ ಕಂಗಾಲಾಗಿದ್ದು ಕೂಡ ಇದೇ ಹಿಂದುತ್ವವಾದಿಗಳು. ಆ ಕ್ಷಣದಿಂದ ಲಿಂಗಾಯತ ರಾಜಕಾರಣಿಗಳುˌ ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮುಗಿಸಿಹಾಕಲು ಹಿಂದುತ್ವವಾದಿ ಸಂಘಟನೆ ಗುಪ್ತ ಕಾರ್ಯತಂತ್ರ ರೂಪಿಸಲಾರಂಭಿಸಿತು. ಅದರ ಮೊಲದ ಫಲಿತಾಂಶವೆ ಇತ್ತೀಚಿನ ಬೆಳವಣಿಗೆಗಳು ಎನ್ನಲಾಗುತ್ತಿದೆ.
ಕಳೆದ ಎರಡು ಮೂರು ವರ್ಷಗಳಲ್ಲಿ ಹಿಂದುತ್ವವಾದಿ ಬೆಂಬಲಿತ ಪಕ್ಷದಲ್ಲಿ ಗುರುತಿಸಿಕೊಂಡಿರುವ ಲಿಂಗಾಯತ ರಾಜಕಾರಣಿಗಳನ್ನು ಹಂತಹಂತವಾಗಿ ಮೂಲೆಗುಂಪು ಮಾಡುತ್ತ ಹಿಂದುತ್ವದ ಅಪಾಯಕಾರಿ ಯೋಜನೆಗಳನ್ನು ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಅನುಷ್ಟಾನಕ್ಕೆ ತರುತ್ತಿರುವ ಸಂಗತಿ ಗುಟ್ಟಿನದೇನಲ್ಲ. ಆದರೆ ಹಿಂದುತ್ವದ ಯೋಜನೆಗಳ ಅನುಷ್ಟಾನಕ್ಕೆ ಬಹುದೊಡ್ಡ ಅಡಚಣೆ ಎಂದರೆ ಲಿಂಗಾಯತ ಧರ್ಮದ ಉದಾರವಾದಿ ಮತ್ತು ಜೀವನ್ಮುಖಿ ಚಿಂತನೆಗಳುˌ ಶ್ರೀಮಂತ ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳು. ಆದ್ದರಿಂದ ಲಿಂಗಾಯತ ಸಮುದಾಯದ ಈ ಶಕ್ತಿಮೂಲಗಳನ್ನು ಮೊದಲು ನಾಶಗೊಳಿಸಲು ಒಂದು ವ್ಯವಸ್ಥಿತ ಕಾರ್ಯಯೋಜನೆ ಹಿಂದುತ್ವವಾದಿಗಳು ರೂಪಿಸಿದ್ದಾರೆ ಎನ್ನುವುದಕ್ಕೆ ಕಳೆದ ೩-೪ ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಅನೇಕ ಬೆಳವಣಿಗೆಗಳು ಸಾಕ್ಷಿಯಾಗಿವೆ.
ಕಳೆದೆರಡು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಹಳೆಯ ಮತ್ತು ಪ್ರಸಿದ್ಧ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿರುವ ಲಿಂಗಾಯತ ಪದ ತೆಗೆದು ಅದರ ಜಾಗದಲ್ಲಿ ಹಿಂದೂ ವೀರಶೈವ ಎಂಬ ಪದ ಸೇರಿಸಬೇಕೆಂದು ಸಂಸ್ಥೆಯ ಮುಖ್ಯಸ್ಥರಿಗೆ ಹಿಂದುತ್ವವಾದಿ ಸಂಘಟನೆ ಒತ್ತಾಯಿಸಿತ್ತು ಎನ್ನುವ ಸಂಗತಿ ಲಿಂಗಾಯತ ಸಮುದಾಯದಲ್ಲಿ ಚರ್ಚೆಯಾಗಿತ್ತು. ಹಾಗೆ ಮಾಡಿದರೆ ಮಾತ್ರ ಅವರಿಗೆ ರಾಜಕೀಯ ಸ್ಥಾನಮಾನಗಳು ಕೊಡುವುದಾಗಿ ಆ ಸಂಘಟನೆ ತಾಕೀತು ಮಾಡಿತ್ತು ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಹಿಂದ್ವುತ್ವವಾದಿಗಳ ಈ ಒತ್ತಡಕ್ಕೆ ಸಂಸ್ಥೆಯ ಮುಖ್ಯಸ್ಥರು ಸಕಾರಾತ್ಮವಾಗಿ ಸ್ಪಂದಿಸಲಿಲ್ಲದ ಕಾರಣ ಅವರಿಗೆ ರಾಜಕೀಯ ಸ್ಥಾನಮಾನಗಳನ್ನು ನಿಕಾರರಿಸಿದ್ದು ಆ ಸುದ್ದಿಯ ಸತ್ಯಾಸತ್ಯತೆಯನ್ನು ಪುಷ್ಟಿಕರಿಸುವಂತಿದೆ. ಇದಕ್ಕೆ ಪೂರಕವೆನ್ನುವಂತೆ ಹಿಂದುತ್ವವಾದಿ ಪಕ್ಷದ ಮತ್ತೊಬ್ಬ ರಾಜಕಾರಣಿ ತಾನು ಮುನ್ನಡೆಸುವ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವೀರಶೈವ ಎಂಬ ಶಬ್ಧ ಸೇರಿಸಿದ ಘಟನೆ ನಡೆದುಹೋಗಿದೆ. ಒಟ್ಟಾರೆ ಹಿಂದುತ್ವವಾದಿಗಳು ಲಿಂಗಾಯತ ಶಿಕ್ಷಣ ಸಂಸ್ಥೆಗಳ ಮೇಲೆ ಕೆಂಗಣ್ಣು ಬೀರಿದ್ದಾರೆ ಎನ್ನುವ ಸುದ್ದಿಯನ್ನು ಈ ಎಲ್ಲ ಘಟನೆಗಳು ದೃಢೀಕರಿಸುತ್ತವೆ.
೨೦೧೭ ರಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಬೇಕೆಂಬ ಎಂಟು ದಶಕಗಳ ಹಳೆಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಲಿಂಗಾಯತ ಸಂಘಟನೆಗಳುˌ ಮಠಾಧೀಶರುˌ ಮತ್ತು ರಾಜಕಾರಣಿಗಳ ನೇತೃತ್ವದಲ್ಲಿ ಲಿಂಗಾಯತ ಸಮುದಾಯ ದೊಡ್ಡ ಮಟ್ಟದ ಹೋರಾಟ ಆರಂಭಿತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಂದಿನ ಸರಕಾರ ತಜ್ಞರ ಸಮಿತಿಯ ಆಧಾರದ ಮೇಲೆ ಸಂಪುಟದಲ್ಲಿ ಒಪ್ಪಿಗೆ ನೀಡಿ ಒಕ್ಕೂಟ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರಿಂದ ಕೆರಳಿದ ಹಿಂದುತ್ವವಾದಿಗಳ ಗುಂಪು ಲಿಂಗಾಯತ ಧರ್ಮದೊಳಗಿನ ಉಪ ಪಂಡಗಕ್ಕೆ ಸೇರಿರುವ ವೀರಶೈವ ಆರಾಧ್ಯ ಬ್ರಾಹ್ಮಣ ಆಚಾರ್ಯರ ಕೂಡ ಕೈಜೋಡಿಸಿ ಅಂದಿನ ಸರಕಾರ ಮತ್ತು ಹೋರಾಟಗಾರರ ವಿರುದ್ಧ ಧರ್ಮ ಒಡೆದರು ಎಂದು ಅಪಪ್ರಚಾರ ಮಾಡಿತು. ಹಿಂದುತ್ವವಾದಿ ಮಾಧ್ಯಮಗಳು ಈ ಅಪಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದವು. ಲಿಂಗಾಯತರು ಹಿಂದೂ ಮತ ಬ್ಯಾಂಕಿನಿಂದ ರಿಕ್ತರಾಗುತ್ತಾರೆ ಎಂಬ ಭಯದಿಂದ ಅಂದಿನಿಂದ ಹಿಂದುತ್ವವಾದಿಗಳು ಲಿಂಗಾಯತ ಸಮುದಾಯದ ವಿರುದ್ಧ ಸೇಡಿನ ಕ್ರಮವನ್ನು ಅನುಸರಿಸಲಾರಂಭಿಸಿದವು.
ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಮತ್ತು ಮಠಗಳನ್ನು ಮುಗಿಸುವ ಯೋಜನೆಯ ಭಾಗವಾಗಿ ರಾಜ್ ಎಂದು ಕೊನೆಗೊಳ್ಳುವ ಹೆಸರಿನ ಹಿಂದೂ ಸಂಘಟನೆಯ ಸಮನ್ವಯ ವೇದಿಕೆಯ ಕರ್ನಾಟಕ ರಾಜ್ಯ ಸಂಚಾಲಕನನ್ನು ನಿಯೋಜಿಸಲಾಯಿತು ಎನ್ನಲಾಗುತ್ತಿದೆ. ಆತ ಲಿಂಗಾಯತ ಧರ್ಮ ಪ್ರಚಾರ ಸಂಸ್ಥೆಗಳು ಹಾಗು ಪ್ರಮುಖ ಮಠಗಳನ್ನು ಆಗಾಗ ಸಂದರ್ಶಿಸುತ್ತಾನೆ. ಹೆಗಲಿಗೆ ಒಂದು ಚೀಲವನ್ನು ನೇತಾಕಿಕೊಂಡು ಆತ ಮಠಗಳಿಗೆ ಹೋಗುವುದುˌ ಅಲ್ಲಿ ಮಠಾಧೀಶರನ್ನು ನಮಸ್ಕರಿಸುವದುˌ ಸತ್ಕರಿಸುವು ಮಾಡುತ್ತ ಯಾವುದಾದರೊಂದು ನೆಪ ಮಾಡಿಕೊಂಡು ನಿಯಮಿತವಾಗಿ ಮಠಕ್ಕೆ ಬರುವದುˌ ಒಂದೆರಡು ದಿನ ಮಠದಲ್ಲಿ ಉಳಿದುಕೊಳ್ಳುವುದು ಮುಂದುವರೆಸುತ್ತಾನೆ. ಹೀಗೆ ಆತ ಆ ಮಠಗಳಲ್ಲಿ ನಡೆಯುವ ಕಾರ್ಯಕ್ರಮಗಳುˌ ಅಲ್ಲಿನ ಜನರ ನಡುವಿನ ಭಿನ್ನಾಭಿಪ್ರಾಯಗಳುˌ ಹಾಗು ದೌರ್ಬಲ್ಯಗಳನ್ನು ತಿಳಿದುಕೊಳ್ಳುತ್ತಾನೆ. ಹಿಂದುತ್ವವಾದಿಗಳ ಒಡೆದಾಳುವ ನೀತಿಯನುಸಾರ ಅಲ್ಲಿನ ದೌರ್ಬಲ್ಯ ಮತ್ತು ಭಿನ್ನಾಭಿಪ್ರಾಯಗಳನ್ನು ದುರುಪಯೋಗ ಪಡಿಸಿಕೊಳ್ಳುವ ವ್ಯವಸ್ಥಿತ ಕಾರ್ಯತಂತ್ರ ಹೆಣೆಯುತ್ತಾನೆ.
ಮಠಾಧೀಶರನ್ನು ಸಿಕ್ಕಿಹಾಕಿಸಲು ಬೇಕಾಗುವ ಎಲ್ಲಾ ಸಾಕ್ಷಗಳನ್ನು ˌ ಅದನ್ನು ಮಠದೊಳಗಿನ ಯಾವ ವ್ಯಕ್ತಿಯಿಂದ ಮಾಡಿಸಲಾಗುತ್ತದೊ ಆತನಿಗೆ ಬೇಕಾಗುವ ಕಾನೂನು ಹಾಗು ಹಣಕಾಸಿನ ಬೆಂಬಲವನ್ನು ಖಾತ್ರಿಪಡಿಸಲಾಗುತ್ತದೆˌ ಹಾಗು ಆತನಿಗೆ ರಾಜಕೀಯ ಅಥವಾ ಇನ್ನಿತರ ಬಗೆಯ ಆಮೀಷಗಳನ್ನು ಒಡ್ಡಲಾಗುತ್ತದೆ. ಪೂರ್ವತಯ್ಯಾರಿ ಎಲ್ಲಾ ಮುಗಿದ ಮೇಲೆ ಒಂದು ದಿನವನ್ನು ನಿಗದಿಗೊಳಿಸಿ ಆ ಸುದ್ದಿಯನ್ನು ಮಾಧ್ಯಮಗಳಲ್ಲಿ ಸತತವಾಗಿ ಬಿತ್ತರವಾಗುವಂತೆ ನೋಡಿಕೊಳ್ಳಲಾಗುತ್ತದೆ. ಮಾಧ್ಯಗಳು ಕೂಡ ಹಿಂದುತ್ವವಾದಿಗಳ ನಿಯಂತ್ರಣದಲ್ಲಿರುವುದರಿಂದ ಮಠದ ಅಥವಾ ಮಠಾಧೀಶರ ಅವ್ಯವಹಾರಗಳ ಸುದ್ದಿಗಳಿಗೆ ಬಣ್ಣ ಹಚ್ಚಿ ಪ್ರಸಾರ ಮಾಡಿಸಲಾಗುತ್ತದೆ. ಹೀಗೆ ಲಿಂಗಾಯತ ಮಠಗಳನ್ನು ಒಂದಾಂದಾಗಿ ಮುಗಿಸುವ ಕಾರ್ಯಯೋಜನೆಯ ಶಯಸ್ವಿ ಆರಂಭ ಹಿಂದುತ್ವವಾದಿ ಸಂಘಟನೆ ಈಗ ಆರಂಭಿಸಿದೆ. ಪ್ರಸ್ತುತ ಒಂದು ಪ್ರಕರಣದಲ್ಲಿ ಹಿಂದುತ್ವವಾದಿ ಸಂಘಟನೆ ಈ ಕಾರ್ಯತಂತ್ರ ಅನುಸರಿಸಿದೆ ಎನ್ನುವ ಸುದ್ದಿಗಳು ದಟ್ಟವಾಗಿ ಲಿಂಗಾಯತ ಸಮುದಾಯದಲ್ಲಿ ಹರಿದಾಡುತ್ತಿವೆ. ಈ ಕುರಿತು ಸಮಗ್ರ ಹಾಗು ನಿಸ್ಪಕ್ಷಪಾತ ತನಿಖೆಯ ಅಗತ್ಯವಿದೆ ಆದರೆ ಅದು ಆಗಲಾರದು ಕೂಡ.
ಇದರ ಮುಂದುವರೆದ ಯೋಜನೆಯ ಭಾಗವಾಗಿ ಹಳೆ ಮೈಸೂರು ಪ್ರಾಂತ್ಯದ ಮತ್ತೊಂದು ಬಲಾಢ್ಯ ಮಠವನ್ನು ಮುಗಿಸಲು ಇದೆ ಬಗೆಯ ಕಾರ್ಯತಂತ್ರ ಹಿಂದುತ್ವವಾದಿ ಸಂಘಟನೆ ರೂಪಿಸಿದೆ ಎಂಬ ಸುದ್ದಿಗಳು ಲಿಂಗಾಯತ ಸಮುದಾಯದಲ್ಲಿ ಹರಿದಾಡುತ್ತಿವೆ. ಮಾಧ್ಯಮಗಳು ಲಿಂಗಾಯತ ಮಠಗಳ ಪ್ರಕರಣದಲ್ಲಿ ಮಾಡಿದ ನಿರಂತರ ಅಪಪ್ರಚಾರ ಕರಾವಳಿ ಮತ್ತು ಮಲೆನಾಡು ಭಾಗದ ಎರಡು ಹಿಂದುತ್ವವಾದಿ ಸಮುದಾಯದ ಮಠಗಳ ವಿಷಯದಲ್ಲಿ ಏಕೆ ಮಾಡಲಿಲ್ಲ ಎನ್ನುವ ಸಂಶಯ ಜನರ ಮನದಲ್ಲಿ ಮೂಡಿದೆ. ಕಳೆದ ಹಲವು ವರ್ಷಗಳ ಹಿಂದೆ ಹಿಂದುತ್ವವಾದಿ ಸಮುದಾಯದ ಮಲೆನಾಡು ಭಾಗದ ಮಠಾಧೀಶನೊಬ್ಬನ ಲೈಂಗಿಕ ಹಗರಣ ಮತ್ತು ಕರಾವಳಿ ಭಾಗದ ಇನ್ನೊಂದು ಮಠದ ಮಠಾಧೀಶನೊಬ್ಬ ತನ್ನ ಸಮುದಾಯದ ಇನ್ನೊಬ್ಬ ಮಠಾಧೀಶನ ವಿರುದ್ಧ ಇದೇ ಬಗೆಯ ಲೈಂಗಿಕ ಹಗರಣದ ಆರೋಪ ಮಾಡಿ ನಿಘೂಡವಾಗಿ ಸಾವನ್ನಪ್ಪಿದ ಸುದ್ದಿಗಳನ್ನು ಮಾಧ್ಯಗಳು ವೈಭವೀಕರಿಸಲಿಲ್ಲ. ಈ ಎರಡೂ ಪ್ರಕರಣಗಳಲ್ಲಿ ಕಾನೂನು ಪ್ರಕ್ರೀಯೆಗಳು ಕೂಡ ಸರಿಯಾಗಿ ನಡೆಯಲಿಲ್ಲ ಎನ್ನುವ ಸಂಗತಿ ಜನಜನಿತ.
ಕೆಲವು ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿ ನಾಡಿನ ಎಲ್ಲ ಸಮುದಾಯದ ಮಠಗಳ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗೆಯ ಘಟನೆಗಳು ಸರ್ವೇಸಾಮಾನ್ಯವಾಗಿರುವ ಸಂಗತಿ ನಮಗೆಲ್ಲರಿಗೂ ತಿಳಿದದ್ದೆಯಾಗಿದೆ. ಆದರೆ ಲಿಂಗಾಯತ ಮಠಗಳನ್ನೆ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಗುಪ್ತ ಚಟುವಟಿಕೆಯ ಹಿಂದೆ ಹಿಂದುತ್ವವಾದಿಗಳ ಒಂದು ಬಲಾಢ್ಯ ಸಂಘಟನೆˌ ಅದು ನಿಯಂತ್ರಿಸುವ ರಾಜಕೀಯ ವೇದಿಕೆ ಹಾಗು ಅವುಗಳ ನಿಯಂತ್ರಣದಲ್ಲಿರುವ ಮಾಧ್ಯಗಳು ವ್ಯವಸ್ಥಿತವಾಗಿ ಮಾಡುತ್ತಿವೆ ಎನ್ನುವ ಗುಮಾನಿ ಮತ್ತು ಅದನ್ನು ದೃಢೀಕರಿಸುವ ಬೆಳವಣಿಗೆಗಳು ಈ ಸಂಶಯವನ್ನು ಮತ್ತಷ್ಟು ತೀವ್ರಗೊಳಿಸಿವೆ. ಲಿಂಗಾಯತ ರಾಜಕಾರಣಿಗಳು ನಡೆಸುವ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಕತೆಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ಅಲ್ಲಿಯೂ ಕೂಡ ಹಿಂದುತ್ವವಾದಿಗಳ ಪ್ರತಿನಿಧಿಗಳು ಎಲ್ಲ ಪ್ರಕಾರದ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿದ್ದಾರೆ.
ಬಹುತೇಕ ಲಿಂಗಾಯತ ಶಿಕ್ಷಣ ಸಂಸ್ಥೆಗಳ ಅನುದಾನ ರಹಿತ ವೃತ್ತಿಪರ ಕಾಲೇಜುಗಳ ಪ್ರಾಚಾರ್ಯˌ ವಿಭಾಗ ಮುಖ್ಯಸ್ಥ ˌ ಖಾಸಗಿ ವಿವಿಗಳ ರಿಜಿಸ್ಟ್ರಾರ್ˌ ಉಪಕುಲಪತಿˌ ಹಾಗು ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಗಳಂತ ಆಯಕಟ್ಟಿನ ಹುದ್ದೆಗಳಲ್ಲಿ ಹಿಂದುತ್ವವಾದಿ ಸಂಘಟಗಳೊಡನೆ ಗುಪ್ತ ನಂಟು ಹೊಂದಿರುವ ಕುಲಕರ್ಣಿ ˌ ಜೋಶಿˌ ದೇಶದಾಂಡೆˌ ಭಟ್ ಹೆಸರಿನವರು ಪ್ರತಿಷ್ಠಾಪನೆಗೊಂಡಿದ್ದಾರೆ. ಇವರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ನಂಬಿಕೆಯನ್ನು ಗಳಿಸಿಕೊಂಡು ಲಿಂಗಾಯತ ಧರ್ಮನಿಷ್ಟ ಪ್ರತಿಭಾವಂತ ಸಿಬ್ಬಂದಿ ಆಯಾ ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಸೇರ್ಪಡೆಯಾಗದಂತೆ ಅವರ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ವ್ಯವಸ್ಥಿತ ಸಂಚನ್ನು ಮಾಡುತ್ತಿದ್ದಾರೆ. ಬಹುತೇಕ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಹಿಂದುತ್ವವಾದಿಗಳ ಕಪಿಮುಷ್ಟಿಯಲ್ಲಿ ಸಿಲುಕಿವೆ.
ಈಗಾಗಲೆ ಒಬ್ಬ ಧರ್ಮಾಂಧ ಬಾಡಿಗೆ ಭಾಷಣಕಾರನನ್ನು ನಮ್ಮ ಮಠಗಳಿಗೆ ಕಳುಹಿಸಲಾಗುತ್ತಿದೆ. ಕೆಲವೊಮ್ಮೆ ನಮ್ಮ ಮಠಾಧೀಶರೆ ಆತನನ್ನು ಕರೆಸಿ ರಾಷ್ಟ್ರಭಕ್ತಿಯ ಹೆಸರಿನಲ್ಲಿ ಆತನಿಂದ ಜನಾಂಗೀಯ ದ್ವೇಷದ ಮಾತುಗಳು ಆಡಿಸುವ ಮೂಲಕ ಲಿಂಗಾಯತ ಎಳೆ ಮಕ್ಕಳು ಹಾಗು ಯುವಕರನ್ನು ಧರ್ಮಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ. ನಮ್ಮವರೆ ಒಬ್ಬ ಪ್ರಖ್ಯಾತ ಪ್ರವಚನಕಾರರ ಮೂಲಕ ಹಿಂದುತ್ವವಾದಿಗಳು ನಮ್ಮ ಪ್ರಮುಖ ಮಠಗಳನ್ನು ಬ್ರಾಹ್ಮಣೀಕರಣಗೊಳಿಸುತ್ತಿರುವ ಗುಮಾನಿಗಳಿವೆ. ಇದೆಲ್ಲವೂ ಮೇಲ್ನೋಟಕ್ಕೆ ಮಾಮೂಲಿನಂತೆ ಕಂಡರೂ ಇದೊಂದು ವ್ಯವಸ್ಥಿತ ಪೀತೂರಿಯ ಭಾಗವಾಗಿದೆ. ಮಾತಾಜಿ ಕಟ್ಟಿದ ಬಲಾಡ್ಯ ರಾಷ್ಟ್ರೀಯ ಬಸವ ದಳದ ಇತ್ತೀಚಿನ ಬೆಳವಣಿಗೆಗಳು ಆ ಸಂಘಟನೆ ಒಡೆಯುವ ಸಂಚಿನಂತೆ ಮತ್ತು ಅದರ ಹಿಂದೆ ಹಿಂದುತ್ವವಾದಿಗಳಿದ್ದಾರೆ ಎನ್ನುವ ಸಂಶಯವಿದೆ. ಇದು ಲಿಂಗಾಯತ ಸಮುದಾಯದ ಚಿಂತಕರಿಗೆ ಬಿಟ್ಟರೆ ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ. ಈಗಾಗಲೆ ಹಿಂದುತ್ವವಾದಿ ಪಕ್ಷದೊಂದಿದೆ ಗುರುತಿಸಿಕೊಂಡಿರುವ ಲಿಂಗಾಯತ ರಾಜಕಾರಣಿಗಳನ್ನು ಧರ್ಮಭ್ರಷ್ಟರನ್ನಾಗಿ ಮಾಡಲಾಗಿದೆ. ಎರಡನೇ ಆದ್ಯತೆಯನುಸಾರ ಮಠಗಳನ್ನು ಧರ್ಮಭ್ರಷ್ಟಗೊಳಿಸಿ ಮುಗಿಸಿ ಹಾಕುವ ಹಿಂದುತ್ವವಾದಿಗಳ ಯೋಜನೆ ಪ್ರಗತಿಯಲ್ಲಿದೆ ಎನ್ನಲಾಗುತ್ತಿದೆ.
ಹಿಂದುತ್ವವಾದಿ ಸಂಘಟನೆಗೆ ಸೇರಿದ ಸಮರತೆ ವೇದಿಕೆಯ ಮುಖ್ಯಸ್ಥ ರಾಜ್ ಎಂಬಾತ ಲಿಂಗಾಯತ ಮಠಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆ ಮಾಡುತ್ತಿರುವ ಸುದ್ದಿಗಳಿವೆ. ಯಾವಯಾವುದೊ ಕಾರಣಗಳಿಗಾಗಿ ಇಂದು ಲಿಂಗಾಯತ ಮಠಗಳುˌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉದ್ಯಮಿಗಳು ಹಿಂದುತ್ವವಾದಿಗಳುˌ ಅವರ ರಾಜಕೀಯ ವೇದಿಕೆˌ ಹಾಗು ಅವರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ. ಹಿಂದುತ್ವವಾದಿಗಳೊಂದಿಗೆ ಲಿಂಗಾಯತರು ತಮ್ಮ ನಂಟನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅವರ ಕುತಂತ್ರಕ್ಕೆ ಬಲಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ ಎನ್ನುವ ಆತಂಕ ಲಿಂಗಾಯತ ಚಿಂತಕರು ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಪ್ರಕರಣ ಲಿಂಗಾಯತ ಮಠಾಧೀಶರಿಗೆˌ ಶಿಕ್ಷಣ ಸಂಸ್ಥೆ ನಡೆಸುವ ರಾಜಕಾರಣಿಗಳಿಗೆ ಹಾಗು ಒಟ್ಟಾರೆ ಲಿಂಗಾಯತ ಸಮುದಾಯಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಬೇಕಿದೆ. ಇದನ್ನು ಒಂದು ಪಾಠವಾಗಿ ಪರಿಗಣಿಸಿ ಲಿಂಗಾಯತ ಸಮುದಾಯ ಸಮಗ್ರವಾಗಿ ಎಚ್ಚರಗೊಳ್ಳದಿದ್ದರೆ ಹಿಂದುತ್ವವಾದಿಗಳಿಂದ ಮುಂದೆ ಬಹಳ ದೊಡ್ಡ ಗಂಡಾಂತರಕ್ಕೆ ತುತ್ತಾಗಬೇಕಾಗುತ್ತದೆ ಎನ್ನಲಾಗುತ್ತಿದೆ.