ಉತ್ತರಾಖಂಡದ ಹರಿದ್ವಾರದಲ್ಲಿ ಡಿಸೆಂಬರ್ 17-19ರ ವರೆಗೂ ನಡೆದ ʻಧರ್ಮ ಸಂಸದ್ʼ ಕಾರ್ಯಕ್ರಮವು ಪೂರ್ತಿಯಾಗಿ ಹಿಂದೂ ಮಹಾಸಭಾದ ನಾಯಕರ ದ್ವೇಷಪೂರಿತ ಭಾಷಣಕ್ಕೆ ವೇದಿಕೆಯಾಗಿದ್ದು, ಇಲ್ಲಿ ಸಾರ್ವಜನಿಕವಾಗಿ ಮುಸ್ಲಿಂರ ಹತ್ಯೆಗೆ ಕರೆ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಕಣ್ಮುಚ್ಚಿಕೊಂಡು ಕುಳಿತಿರುವುದಕ್ಕೆ ಈ ಘಟನೆಯೇ ಮತ್ತೊಂದು ಉದಾಹರಣೆಯಾಗಿದೆ.
ಉತ್ತರಾಖಂಡ ಮೂಲದ ಬಲಪಂಥೀಯ ಸಂಘಟನೆ ಹಿಂದೂ ರಕ್ಷಾ ಸೇನೆಯ ಅಧ್ಯಕ್ಷ ಪ್ರಭೋಧಾನಂದ ಗಿರಿ ಮಾತನಾಡಿ, ಮೊದಲು ನಾವು ಸಿದ್ದತೆ ಮಾಡಿಕೊಳ್ಳಬೇಕು. ಆ ಸಿದ್ದತೆಗಳು ಯಾವ ತರಹದ್ದು ಎಂದರೆ ಮ್ಯಾನ್ಮರ್ ನಲ್ಲಿ ಹಿಂದೂಗಳನ್ನು ಹೊರಹಾಕಲಾಗುತ್ತಿದೆ. ಅಲ್ಲಿನ ಜನರನ್ನು ಹತ್ಯೆಗೈಯಲಾಗುತ್ತಿದೆ. ಈದನ್ನೆಲ್ಲ ಅಲ್ಲಿಯ ರಾಜಕಾರಣಿಗಳು ಮತ್ತು ಪೊಲೀಸರು ನೋಡಿ ಕೂಡ ಸುಮ್ಮನಿದ್ದಾರೆ. ನಾವು ಇದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಮುಂದುವರೆದು, ದೆಹಲಿಯ ಗಡಿ ಭಾಗದಲ್ಲಿ ಹಿಂದೂಗಳನ್ನ ಅಮಾನುಷವಾಗಿ ಕೊಂದು ಗಲ್ಲಿಗೇರಿಸಲಾಗಿದೆ. ಇದನ್ನೆಲ್ಲಾ ನೋಡಿಕೊಂಡು ಹೇಗೆ ಸುಮ್ಮನಿರುವುದು? ಇನ್ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ನಾವು ಪಾಲಿಸಬೇಕು. ಅಂದರೆ, ನಾವು ಕೂಡ ಅವರನ್ನು ಕೊಲ್ಲಬೇಕು. ಇಲ್ಲವಾದರೆ ನಾವು ಸಾಯಲು ಸಿದ್ದರಿರಬೇಕು. ಇಲ್ಲಿನ ಪೊಲೀಸರು, ರಾಜಕಾರಣಿಗಳು, ಸೇನೆ ಮತ್ತು ಪ್ರತಿಯೊಬ್ಬ ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಸ್ವಚ್ಛತಾ ಅಭಿಯಾನ ನಡೆಸಬೇಕಾಗಿದೆ ಎಂದು ದ್ವೇಷಪೂರಿತ ಭಾಷಣದಲ್ಲಿ ತಿಳಿಸಿದ್ದಾರೆ.
ಪ್ರಭೋಧಾನಂದರ ಈ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದು, ಕೋಮು ಸೌಹಾರ್ದ ಕದಡುವ ಪ್ರಯತ್ನ ಎಂದೇ ವ್ಯಾಖ್ಯಾನಿಸಲಾಗಿದೆ.
ಪ್ರಭೋಧಾನಂದರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಕಳೆದ ವರ್ಷ ಎಎಪಿ ಮುಖಂಡ ಮಾಜಿ ಸಚಿವ ನರೇಶ್ ಶರ್ಮಾ ಜೊತೆಗೆ ಪ್ರಭೋಧಾನಂದ ಕಾಣಿಸಿಕೊಂಡಿದ್ದರು. ಉತ್ತರಾಖಂಡ್ನ ಶಿಕ್ಷಣ ಮಂತ್ರಿ ಧನ್ ಸಿಂಗ್ ರಾವತ್ರೊಂದಿಗು ಸಹ ಕಾಣಿಸಿಕೊಂಡಿದ್ದರು. ಉತ್ತರಖಂಡದ ಮಾಜಿ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ಗೆ ಖಡ್ಗವನ್ನು ಉಡುಗೊರೆಯಾಗಿ ಪ್ರಭೋಧಾನಂದ ನೀಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ಇಲ್ಲಿಗಮನಿಸಬಹುದು.

ಪ್ರಭೋಧಾನಂದ ಈ ರೀತಿ ಮುಸ್ಲಿಂ ವಿರೋಧಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಹಿಂದೂ ಸಮಾಜವನ್ನು ರಕ್ಷಿಸುವ ಸಲುವಾಗಿ ಹಿಂದೂಗಳು ಎಂಟು ಮಕ್ಕಳನ್ನು ಹೊಂದಿರಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. 2018ರಲ್ಲಿ ಶಾಮ್ಲಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ʻಲವ್ ಜಿಹಾದ್ʼ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ಮುಸ್ಲಿಮರು ಅತ್ಯಾಚಾರ ಎಸಗುತ್ತಾರೆ ಎಂದು ಮಾತನಾಡುವ ಭರದಲ್ಲಿ ವಿವಾದವನ್ನ ಹುಟ್ಟುಹಾಕಿದ್ದರು.
ಈ ವರ್ಷ ಜೂನ್ ನಲ್ಲಿ ಸಾಧು ನರಸಿಂಗಾನಂದರೊಂದಿಗೆ ಮಾತನಡಿರುವ ವಿಡಿಯೋ ಸಹ ವಿವಾದವಾಗಿ ಮಾರ್ಪಟ್ಟಿತ್ತು. ಆ ವಿಡಿಯೋದಲ್ಲಿ ಮಾತನಾಡಿರುವ ಪ್ರಭೋಧಾನಂದ ʻಇಡೀ ಜಗತ್ತಿನಲ್ಲಿ ಮಾನವೀಯತೆ ಉಳಿಯಬೇಕಾದರೆ ನಾವು ಜಿಹಾದಿಗಳನ್ನು(ಮುಸ್ಲಿಮರನ್ನು) ನಿರ್ಮೂಲನೆ ಮಾಡಬೇಕು. ಇಸ್ಲಾಂನಲ್ಲಿ ಅತ್ಯಾಚಾರಿಗಳು ಜನಿಸಿದರೆ, ಜಿಹಾದಿಗಳು ಸಹ ಹುಟ್ಟುತ್ತಾರೆ. ನಾನೂ ಈ ವಿಚಾರವನ್ನ ಬಹಳ ದಿನದಿಂದ ಹೇಳುತ್ತಾ ಬಂದಿದ್ದೇನೆ. ಪ್ರತಿ ಮುಸ್ಲಿಮರ ಮನೆಯಲ್ಲಿ ಒಬ್ಬ ಜಿಹಾದಿ ಮತ್ತು ಭಯೋತ್ಪಾದಕ ಇರುತ್ತಾನೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜವು ಜಾಗೃತವಾಗಿ ಜಿಹಾದಿಗಳಿಗೆ ಒಂದು ಗತಿ ಕಾಣಿಸಬೇಕು. ಜಿಹಾದಿಗಳು ನಮ್ಮನ್ನು ಕೊಂದರೆ ದೇಶಾದ್ಯಂತ ಹೆಣಗಳ ರಾಶಿಯನ್ನ ಅವರು ನೋಡಬೇಕಾಗುತ್ತದೆ ಎಂದರು.
ಈ ಧರ್ಮ ಸಂಸದ್ನಲ್ಲಿ ತೆಗೆದುಕೊಳ್ಳುವ ನಿರ್ಧಾರ ದೇವರ ನಿರ್ಧಾರವಾಗಿರುತ್ತದೆ. ಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ 1857ರಲ್ಲಿ ನಡೆದ ದಂಗೆಗಿಂತ ಭೀಕರವಾಗಿ ದಂಗೆ ಏಳುತ್ತದೆ ಎಂದು ಆನಂದಸ್ವರೂಪ ಸ್ವಾಮಿ ಹೇಳಿದ್ದಾರೆ.
ಒಟ್ಟಾರೆ ಈ ಸ್ವಾಮೀಜಿಗಳು ಧರ್ಮಸಂಸದ್ ಹೆಸರಿನಲ್ಲಿ ಹೇಳಿಕೆ ಗಮನಿಸಿದರೆ ಸಮಾಜದ ಭಾವನೆಗೆ ಧಕ್ಕೆ ಉಂಟುಮಾಡುವುದಲ್ಲದೇ ಮುಂದಿನ ದಿನಗಳಲ್ಲಿ ದೇಶದಲ್ಲಿ ಕೋಮು ಸೌಹಾರ್ದವನ್ನು ಕದಡಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ.