2021 ವರ್ಷಾರಂಭದಲ್ಲಿ ಐದು ವಿಧಾನಸಭಾ ಚುನಾವಣೆಗಳು ಮತ್ತು ಅಂತ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳು ನಡೆಯಲಿರುವುದರಿಂದ, ಕಾಂಗ್ರೆಸ್ ಬಿಜೆಪಿಯ ವಿರುದ್ಧದ ತನ್ನ ‘ಹಿಂದೂ vs ಹಿಂದುತ್ವವಾದಿ’ ಅಭಿಯಾನವನ್ನು ಶುರುಮಾಡುವ ಸೂಚನೆ ನೀಡಿದೆ. ಈ ಬಗ್ಗೆ ಅನೇಕ ಬಾರಿ ರಾಹುಲ್ ಗಾಂಧಿ ಸಹ ಮಾತನಾಡಿದ್ದಾರೆ. ಇನ್ನೊಂದೆಡೆ ಉತ್ತರ ಪ್ರದೇಶ ಚುನಾವಣೆಯಲ್ಲಿ ‘ಮಹಿಳಾ ಮುಖ’ವಾಗಿ ಪಕ್ಷದ ಉಸ್ತುವಾರಿ ವಹಿಸಿರುವ ಕಾಂಗ್ರಸ್ಸಿನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಡೆ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಕಾಂಗ್ರೆಸ್ನ ರಾಜ್ಯ ಘಟಕಗಳಿಗೆ ಸದ್ದಿಲ್ಲದೆ ಕಾಯಕಲ್ಲ ನೀಡಲಾಗುತ್ತಿದೆ.
ಈ ವರ್ಷ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ. ಈ ಪೈಕಿ ಪಂಜಾಬ್ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿಯೂ ಪಕ್ಷದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವಿನ ಭಿನ್ನಾಭಿಪ್ರಾಯಗಳು ಬಯಲಿಗೆ ಬಂದ ನಂತರ ಅಮರಿಂದರ್ ರಾಜೀನಾಮೆ ನೀಡಿದ್ದರು. ಈಗ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಉತ್ತರಾಖಂಡದಲ್ಲಿ, ಮಾಜಿ ಸಿಎಂ ಹರೀಶ್ ರಾವತ್ ಅವರಿಗೆ ಪಕ್ಷದ ಪ್ರಚಾರದ ಸಂಪೂರ್ಣ ಉಸ್ತುವಾರಿಯನ್ನು ವಹಿಸುವ ಮೊದಲು “ನನ್ನ ಕೈ ಕಾಲುಗಳನ್ನು ಬಂಧಿಸುವ ಪ್ರಯತ್ನಗಳ ಬಗ್ಗೆ ಕಳವಳವಾಗುತ್ತದೆ” ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಗೋವಾದಲ್ಲಿ, 2017 ರ ವಿಧಾನಸಭಾ ಚುನಾವಣೆಯಲ್ಲಿ 40 ಸದಸ್ಯರಿರುವ ಸದನದಲ್ಲಿ ಕಾಂಗ್ರೆಸ್17 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅಂತಿಮವಾಗಿ ಬಿಜೆಪಿ ಇತರ ಎರಡು ಪಕ್ಷಗಳೊಂದಿಗೆ ಸಮ್ಮಿಶ್ರವಾಗಿ ಸರ್ಕಾರವನ್ನು ರಚಿಸಿತು. ಆನಂತರ ರಾಜ್ಯದ ಇಬ್ಬರು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಮಣಿಪುರದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕಾ ಗಾಂಧಿ ವುಮೆನ್ ಫೈಯರ್ ಬ್ರ್ಯಾಂಡ್!
ಫೆಬ್ರವರಿ-ಮಾರ್ಚ್ 2022 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ರಾಜ್ಯದಲ್ಲಿ ಈಗಾಗಲೇ ‘ಲಡ್ಕಿ ಹೂ, ಲಡ್ಡ್ ಸಕ್ತಿ ಹೂ’ ಅಭಿಯಾನವನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶ ಅಧಿಕಾರ ಚುಕ್ಕಾಣಿ ಹಿಡಿಯುವುದು ಕಾಂಗ್ರೆಸ್ ಗೆ ದೊಡ್ಡ ಪ್ರತಿಷ್ಠೆಯೇ ಆಗಿದೆ. ಮುಖ್ಯವಾಗಿ ಪ್ರಿಯಾಂಕರನ್ನು ಮಹಿಳಾ ಫೈಯರ್ ಬ್ರ್ಯಾಂಡ್ ಆಗಿ ಬಿಂಬಿಸುತ್ತಿರುವುದರ ಗುರಿ ಚುನಾವಣಾ ಲಾಭ ಮಾತ್ರ ಅಲ್ಲ ಅನ್ನುವುದು ಪಕ್ಷದೊಳಗಿನ ಮಾಹಿತಿ. “ಇದು ನಾವು ನಡೆಸುತ್ತಿರುವ ಪ್ರಯೋಗವಾಗಿದೆ” ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಕಾರ್ಯಕಾರಿಯೊಬ್ಬರು ‘ದಿ ಪ್ರಿಂಟ್’ ಜೊತೆ ಹಂಚಿಕೊಂಡಿರುವುದಾಗಿ ಅದು ವರದಿ ಮಾಡಿದೆ.
ಉತ್ತರ ಪ್ರದೇಶದಲ್ಲಿ ನಾವು ಯಾವುದೇ ಮಹಿಳೆಯರ ಗುಂಪನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಜನರು ಮಹಿಳಾ ನಾಯಕಿಯಾಗಿ ಪ್ರಿಯಾಂಕಾ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ದೇಶ ಕಂಡ ಇತರ ಮಹಿಳಾ ನಾಯಕಿಗಳಂತೆ ಮಹಿಳಾ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಅವರು ಸಮರ್ಥರಾಗಿದ್ದಾರೆಯೇ ಎಂದು ನೋಡುವ ಪ್ರಯತ್ನವಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಿಳೆಯರು ಪ್ರಿಯಾಂಕಾರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅಳೆಯುವುದು ಮತ್ತು ನಂತರ ಕಾಂಗ್ರೆಸ್ ಸಾಂಸ್ಥಿಕವಾಗಿ ಪ್ರಬಲವಾಗಿರುವ ಇತರ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಪ್ರಭಾವ ಬೀರಲು ಅವರನ್ನು ನಿಯೋಜಿಸಬಹುದೇ ಎಂದು ಯೋಚಿಸುವುದೇ ಕಾಂಗ್ರೆಸ್ನ ಉದ್ದೇಶವಾದಂತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಮಾತನಾಡಿ, “ಪ್ರಿಯಾಂಕಾ ಅವರು ಹೋರಾಟದ ನಡುವೆ ಇರುವುದು ಬಿಜೆಪಿ ಅವರು ಒಡ್ಡುವ ಸಂಘರ್ಷಕ್ಕೆ ನೇರವಾಗಿ ಪ್ರತಿಕ್ರಿಯಿಸುವ ಅವರ ಸಾಮರ್ಥ್ಯವನ್ನು ಪಕ್ಷ ಬಳಸಿಕೊಳ್ಳುತ್ತಿದೆ” ಎಂದು ಹೇಳಿದ್ದಾರೆ. “ಪ್ರಿಯಾಂಕಾ ಗಾಂಧಿಯವರ ಹತ್ರಾಸ್ ಅಥವಾ ಆಗ್ರಾಕ್ಕೆ ಭೇಟಿ ನೀಡಿರುವುದನ್ನು ನೀವು ಉದಾಹರಣೆಯಾಗಿ ತೆಗೆದುಕೊಳ್ಳಿ. ಅಲ್ಲಿ ಅವರನ್ನು ಬಿಜೆಪಿ ಸರ್ಕಾರವು ಬಂಧಿಸಿತು. ಆದರೆ ಅವರು ರಾಜ್ಯ ಯಂತ್ರದ ವಿರುದ್ಧ ನಿಂತಿರುವ ಮೊದಲ ವ್ಯಕ್ತಿ ಎಂದು ಗುರುತಿಸಿಕೊಳ್ಳುವಂತಾಯಿತು” ಎಂದು ಹೇಳಿದ್ದಾರೆ.
“ಪ್ರಿಯಾಂಕಾ ಅವರು ರಾಜಕೀಯಕ್ಕೆ ಹೊಸ ಮುಖ ಮತ್ತು ಅವರ ಸಹೋದರನಿಗಿಂತ ಹೆಚ್ಚು ಸ್ನೇಹಪರ. ಆದ್ದರಿಂದ ಅವರಿಗೆ ದೊಡ್ಡ ಸಾಂಸ್ಥಿಕ ಪಾತ್ರವನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ” ಎಂದು ಕಾಂಗ್ರೆಸ್ ಮೂಲಗಳು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
“ಅವರ ಪ್ರಚಾರ ಸಭೆಗಳು ಉತ್ತರ ಪ್ರದೇಶದಲ್ಲಿ ಚುನಾವಣಾ ಫಲಿತಾಂಶಗಳನ್ನು ಬದಲಾಯಿಸದಿದ್ದರೂ, ಕಾಂಗ್ರೆಸ್ ತನ್ನನ್ನು ಉಳಿಸಿಕೊಂಡಿದೆ ಎಂದು ತೋರಿಸುತ್ತಿರುವ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಪಡೆದಿರುವ ಕರ್ನಾಟಕದಂತಹಾ ರಾಜ್ಯಗಳಲ್ಲಿ ಪ್ರಿಯಾಂಕಾ ಅವರ ಇದೇ ರೀತಿಯ ಪ್ರಚಾರಗಳು ಕಾರ್ಯನಿರ್ವಹಿಸಬಹುದು ಎಂಬ ಸುಳಿವು ನಮಗೆ ನೀಡಬಹುದು” ಎಂದು ಕಾಂಗ್ರೆಸ್ ಸಂಸದರೊಬ್ಬರು ಹೇಳಿರುವುದನ್ನೂ ಆನ್ಲೈನ್ ಪತ್ರಿಕೆ ವರದಿ ಮಾಡಿದೆ.
ಹಿಂದೂ Vs ಹಿಂದುತ್ವವಾದಿ ತಂತ್ರ
ಹಿಂದೂ vs ಹಿಂದುತ್ವವಾದಿ ಅಭಿಯಾನವನ್ನು ಬಿಜೆಪಿಯ ‘ಆದರ್ಶ ಹಿಂದು’ ಎಂಬ ಪರಿಕಲ್ಪನೆಗೆ ವಿರುದ್ಧವಾಗಿ ದೀರ್ಘಾವಧಿಯವರೆಗೆ ಬಳಸಿಕೊಳ್ಳಲು ಕಾಂಗ್ರೆಸ್ ಯೋಜಿಸುತ್ತಿದೆ. ಕಳೆದ ತಿಂಗಳು ಜೈಪುರ ಮತ್ತು ಡೆಹ್ರಾಡೂನ್ನಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಗಳಲ್ಲಿ ರಾಹುಲ್ ಗಾಂಧಿ ಈ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು.
“ಇಂದು ದೇಶದ ರಾಜಕೀಯದಲ್ಲಿ ಎರಡು ಪದಗಳ ನಡುವೆ ಪೈಪೋಟಿ ನಡೆಯುತ್ತಿದೆ. ಒಂದ ‘ಹಿಂದೂ’, ಎರಡನೆಯದು ‘ಹಿಂದುತ್ವವಾದಿ’. ಅವರೆಡೂ ಒಂದೇ ಅಲ್ಲ. ಅವು ಎರಡು ಪ್ರತ್ಯೇಕ ಪದಗಳು. ಮತ್ತು ಅವುಗಳ ಅರ್ಥಗಳೂ ವಿಭಿನ್ನವಾಗಿವೆ. ನಾನು ಹಿಂದೂ ಆದರೆ ನಾನು ಹಿಂದುತ್ವವಾದಿ ಅಲ್ಲ” ಎಂದು ಅವರು ಹೇಳಿದ್ದರು.
ಹಿಂದೂ ಪರಿಕಲ್ಪನೆಯ ಸುತ್ತ 2022ಕ್ಕೆ ಸಾಮಾಜಿಕ ಮಾಧ್ಯಮ ಕಾರ್ಯತಂತ್ರವನ್ನು ಯೋಜಿಸುತ್ತಿದೆ.
ಈ ಬಗ್ಗೆ ಮಾತಾಡಿರುವ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಉಸ್ತುವಾರಿ ರೋಹನ್ ಗುಪ್ತಾ, “ಬಿಜೆಪಿಯು ದ್ವೇಷ ಮತ್ತು ಸಂಕುಚಿತ ರಾಜಕೀಯದ ಮೇಲೆ ಕೆಲಸ ಮಾಡುತ್ತಿದೆ. ಬಿಜೆಪಿ ಹಿಂದೂ ಧರ್ಮ ಎಂದು ಭಾವಿಸುವ ಮತ್ತು ಕಾಂಗ್ರೆಸ್ ಹಿಂದೂ ಧರ್ಮ ಎಂದು ಭಾವಿಸುವ ಸೈದ್ಧಾಂತಿಕ ವ್ಯತ್ಯಾಸವನ್ನು ರಾಹುಲ್ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದ್ದಾರೆ. “ನಾವು 2022 ರ ಉದ್ದಕ್ಕೂ ಟ್ರೆಂಡ್ಗಳು, ಲೈವ್ ಶೋಗಳು, ವೀಡಿಯೊಗಳು ಇತ್ಯಾದಿಗಳ ಮೂಲಕ ಇದನ್ನು ಮತ್ತಷ್ಟು ಚರ್ಚೆಗೆ ತರಲಿದ್ದೇವೆ. ಇದು ಒಂದು ಸೈದ್ಧಾಂತಿಕ ಯುದ್ಧವಾಗಿದೆ” ಎಂದೂ ಅವರು ಹೇಳಿದ್ದಾರೆ.
ಆದರೆ ಪಕ್ಷದ ಕೆಲವು ನಾಯಕರಲ್ಲಿ ಈ ವಿಧಾನದ ಬಗ್ಗೆ ಕೆಲವು ಮಟ್ಟದ ಅನಿಶ್ಚಿತತೆ ಇದೆ. ಈ ವಿಧಾನದಿಂದ ನಾವು ಬಿಜೆಪಿ ಕಡೆಯಿರುವ ಹಿಂದು ಮತಗಳನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ಅನೇಕ ನಾಯಕರು ಹೇಳಿಕೊಂಡಿದ್ದಾರೆ.
ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಹ ಸಂದರ್ಶನವೊಂದರಲ್ಲಿ ಮಾತಾನಾಡುತ್ತಾ “ಬಿಜೆಪಿ ಕಳೆದ ಹಲವು ಚುನಾವಣೆಗಳಲ್ಲಿ ಹಿಂದುತ್ವದ ಆಧಾರದ ಮೇಲೆ ಶೇಕಡಾ 50 ರಷ್ಟು ಹಿಂದೂ ಮತಗಳನ್ನು ಗೆಲ್ಲಲು ಸಾಧ್ಯವಾಗಿದೆ. ಅಂದರೆ ಇತರ 50 ಪ್ರತಿಶತ ಹಿಂದೂಗಳು ಬಿಜೆಪಿಯ ಹಿಂದೂ ಅಥವಾ ಹಿಂದುತ್ವದ ವ್ಯಾಖ್ಯಾನಕ್ಕೆ ಚಂದಾದಾರರಾಗಿಲ್ಲ ಮತ್ತು ಹಿಂದೂಗಳಾಗಿ ಮತ ಚಲಾಯಿಸುವುದಿಲ್ಲ. ನಾನು ಹಿಂದೂ ಮತ್ತು ಹಿಂದುತ್ವವಾದಿಗಳ ಬಗ್ಗೆ ಚರ್ಚಿಸುವುದಕ್ಕಿಂತ ಆ ವಿಭಾಗದ ಮೇಲೆ ಗಮನ ಕೇಂದ್ರೀಕರಿಸುತ್ತೇನೆ ” ಎಂದು ಹೇಳಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕಪಡಿಸುವ ಅಭಿವೃದ್ಧಿಶೀಲ ಸಮುದಾಯಗಳ ಅಧ್ಯಯನ ಕೇಂದ್ರ (ಸಿಎಸ್ಡಿಎಸ್)-ಲೋಕನೀತಿಯ ಸಹನಿರ್ದೇಶಕ ಸಂಜಯ್ ಕುಮಾರ್ ಅವರು ‘ಮೃದು ಹಿಂದು’ ನಿಲುವು ಈಗ ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಅಗತ್ಯವಾಗಿದೆ ಎನ್ನುತ್ತಾರೆ
ಪ್ರತಿಪಕ್ಷಗಳ ಏಕತೆ ಮತ್ತು ರಾಜ್ಯ ಘಟಕಗಳಿಗೆ ಕಾಯಕಲ್ಪ ನೀಡುವುದು
ಟಿಎಂಸಿ, ಆಪ್ನಂತಹ ಇತರ ಪಕ್ಷಗಳ ಹೆಚ್ಚುತ್ತಿರುವ ಬಲವರ್ಧನೆಯ ಬಗ್ಗೆಯೂ ಕಾಂಗ್ರೆಸ್ ಗಮನ ಹರಿಸುತ್ತಿದೆ. 2017ರಲ್ಲಿ ಪಂಜಾಬಿನಲಿ ಆಪ್ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಗೋವಾ ಚುನಾವಣೆಯಲ್ಲೂ ಆಪ್ ಪಕ್ಷ ಕಾಂಗ್ರೆಸ್ನ ಓಟು ಕಸಿಯುವ ಎಲ್ಲಾ ಲಕ್ಷಣಗಳೂ ಇವೆ. ಯುಪಿಎಯ ಅಧ್ಯಕ್ಷ ಸ್ಥಾನವನ್ನು ಮತ್ತೊಂದು ಪಕ್ಷಕ್ಕೆ ಬಿಟ್ಟುಕೊಡಲು ಪಕ್ಷವು ಒಪ್ಪಬೇಕು ಎಂದು ಕೆಲವು ನಾಯಕರು ಹೇಳಿದ್ದಾರೆ. ಇದನ್ನು ಸಹ ಗಂಭೀರವಾಗಿ ಪರಿಗಣಿಸಲಾಗಿದೆ. ಆದರೆ, ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮುಂಬರುವ ಐದು ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ನ ಸಾಧನೆ ಈ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಹಾಯ ಮಾಡಲಿದೆ ಎನ್ನಲಾಗುತ್ತಿದೆ.
ಇವೆಲ್ಲದರ ನಡುವೆ ಪಕ್ಷವು ತನ್ನ ಸಂಘಟನೆಯನ್ನು ರಾಜ್ಯ ಘಟಕಗಳಲ್ಲಿ ಬಲಪಡಿಸುವ ಮೂಲಕ ಇತರ ಪ್ರಾದೇಶಿಕ ಪಕ್ಷಗಳ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ರೂಪುರೇಷೆ ಸಿದ್ಧಗೊಳಿಸಿಕೊಳ್ಳುತ್ತಿದೆ. ಕಾಂಗ್ರೆಸ್ನ ಪಂಜಾಬ್ ಮತ್ತು ಉತ್ತರಾಖಂಡ ಘಟಕಗಳಲ್ಲಿನ ಬದಲಾವಣೆ ಇದಕ್ಕೆ ಉದಾಹರಣೆ ಎಂದು ಹೇಳಲಾಗಿದೆ.
ಸಮರ್ಥ ನಾಯಕರು ರಾಜ್ಯ ಘಟಕಗಳ ಚುಕ್ಕಾಣಿ ಹಿಡಿಯುವುದು ಮತ್ತು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಪಕ್ಷದ ಮುಂದಿರುವ ಉತ್ತಮ ದಾರಿ ಎಂಬುದನ್ನು ಕರ್ನಾಟಕ ಸ್ಥಳೀಯ ಚುನಾವಣೆಯ ಫಲಿತಾಂಶಗಳು ಸಾಬೀತುಪಡಿಸಿವೆ ಎಂದು ಪಕ್ಷದ ಒಂದು ವರ್ಗ ಭಾವಿಸುತ್ತದೆ. ” ಡಿ.ಕೆ. ಶಿವಕುಮಾರ್ ಅಂತಹ ನಾಯಕರು ಎಲ್ಲಾ ರಾಜ್ಯ ಘಟಕಗಳ ಚುಕ್ಕಾಣಿ ಹಿಡಿಯಬೇಕು. ಕಾಂಗ್ರೆಸ್ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿದ ಸ್ಥಳಗಳಲ್ಲಿ, ಮತ್ತೆ ಎರಡನೇ ಸ್ಥಾನಕ್ಕೆ ಬರಬೇಕು ಅಥವಾ ಕನಿಷ್ಠ ಪಕ್ಷ ಎರಡನೇ ಸ್ಥಾನದಲ್ಲಿರುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿದೆ ”ಎಂದು ಸಂಸದೊರಬ್ಬರು ಸುದ್ದಿವಾಹಿನಿಯ ಜೊತೆ ಮಾತಾನಾಡುತ್ತಾ ಹೇಳಿದ್ದಾರೆ.
ಒಟ್ಟಿನಲ್ಲಿ ಸಮರ್ಥ ವಿರೋಧ ಪಕ್ಷವೊಂದಿದ್ದರೆ ಮಾತ್ರ ಆಡಳಿತ ಸರಿದಾರಿಗೆ ಬರಲು ಸಾಧ್ಯ. ಸದ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಎಲ್ಲಾ ರೀತಿಯಲ್ಲೂ ಎದುರಿಸಲು ಸಾಧ್ಯವಿರುವುದು ಕಾಂಗ್ರೆಸ್ಸಿಗೆ ಮಾತ್ರ. ಆ ಪಕ್ಷ ತನ್ನ ನಾಯಕರನ್ನು ಬೆಳೆಯಗೊಟ್ಟರೆ ದೇಶದ ಪ್ರಜಾಪ್ರಭುತ್ವ ಗಟ್ಟಿಗೊಂಡು ಆಡಳಿತ ಪಕ್ಷಕ್ಕೂ ಲಗಾಮು ಹಿಡಿದಂತಾಗಬಹುದು.