ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಹೋರಾಟ ಇದೇ ತಿಂಗಳ 26ಕ್ಕೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆ ನ. 26ರಂದು ರಾಜ್ಯದಲ್ಲೂ ರೈತ ಸಂಘಟನೆಗಳು ಬೃಹತ್ ಹೋರಾಟಕ್ಕೆ ಕರೆ ನೀಡಿದ್ದು, ರಾಜ್ಯದ ಎಲ್ಲಾ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಕುರಿತಾಗಿ ಅನ್ನದ ಋಣ ತಂಡದೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, “ದೆಹಲಿಯ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ನ.26 ರಂದು ಕರ್ನಾಟಕದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಿದ್ದೇವೆ. ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿದ್ದೇವೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಕೃಷಿ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಾಗ ಅದನ್ನು ತರಾತುರಿಯಲ್ಲಿ ಅನುಷ್ಠಾನಕ್ಕೆ ತಂದಿದ್ದು ಕರ್ನಾಟಕದಲ್ಲಿ ಅಧಿಕಾರಿದಲ್ಲಿರುವ ಬಿಜೆಪಿ ಸರ್ಕಾರ. ಹೀಗಾಗಿ ನ.26 ರಂದು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳಿಗೆ ಬಿಸಿ ಮುಟ್ಟಿಸುತ್ತೇವೆ” ಎಂದು ತಿಳಿಸಿದ್ದಾರೆ.
ರೈತರು ದೆಹಲಿ ಗಡಿಗಳಲ್ಲಿ ಹೋರಾಟ ನಡೆಸುತ್ತ ವರ್ಷ ಕಳೆಯುತ್ತ ಬಂದರೂ ಸರ್ಕಾರ ಮಾತ್ರ ರೈತರಿಗೆ ಸ್ಪಂದಿಸುತ್ತಿಲ್ಲ, “ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಪ್ರಧಾನಿ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿ ಒಂದಿಡೀ ವರ್ಷ ಪೂರೈಸಿದ ಐತಿಹಾಸಿಕ ಹೋರಾಟವೇ ನಮ್ಮ ಕಣ್ಣ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಹೋರಾಟ ನಿರತ ರೈತರ ಮೇಲೆ ದಾಳಿಗಳು ಕೂಡ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.
ಲಖಿಂಪುರ್ ಹಾಗೂ ಸಿಂಘು ಗಡಿಯಲ್ಲಿ ನಡೆದ ಘಟನೆಗಳು ಇದಕ್ಕೆ ತಾಜಾ ಉದಾಹರಣೆಗಳಂತಿವೆ. ಜೊತೆಗೆ ಸುಪ್ರೀಂಕೋರ್ಟ್ ಅಭಿಪ್ರಾಯವನ್ನೇ ನೆಪವಾಗಿಸಿಕೊಂಡು ಈ ಹಿಂದೆ ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ತಾನೇ ಹೆದ್ದಾರಿಗಳಿಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸುತ್ತಿದೆ. ಈ ಮೂಲಕ ರೈತರನ್ನು ಹೋರಾಟದ ಸ್ಥಳಗಳಿಂದ ಖಾಲಿ ಮಾಡಿಸಲು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಇಂತಹ ತುರ್ತು ಸ್ಥಿತಿಯಲ್ಲಿ ಕೃಷಿ ಕಾಯ್ದೆ ಹಾಗೂ ರೈತರ ಹಕ್ಕಿನ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ರೈತರ ಹಿತ ಕಾಪಾಡುವಂತೆ ಒಕ್ಕೂಟ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೇರವಾಗಿ ನಿರ್ದೇಶನ ನೀಡಬೇಕು ಎಂದು ಈ ವೇಳೆ ಮನವಿ ಮಾಡಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಎಡ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಸರ್ಕಾರ ಮಾತ್ರ ಹಗರಣಗಳಲ್ಲೇ ಕಾಲ ಹರಣ ಕಳೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ.
“ಮಳೆ ಹಾಗೂ ಅದರಿಂದ ನಷ್ಟಕ್ಕೊಳಗಾಗಿರುವ ರೈತರಿಗೆ ಸಿಗಬೇಕಾದ ಪರಿಹಾರದ ಬಗ್ಗೆ ಚರ್ಚೆ ನಡೆಸಲು ಸ್ವಲ್ಪ ಸಮಯ ಕೊಡಿ ನಾನು ಬ್ಯುಸಿಯಾಗಿದ್ದೀನಿ ಕೂತು ಮಾತಾಡೋಣ ಎಂದು ಮುಖ್ಯಮಂತ್ರಿ ನನಗೆ ಮಾತು ಕೊಟ್ಟು ಒಂದೂವರೆ ತಿಂಗಳಾಯ್ತು. ಆದರೆ, ಈವರೆಗೆ ಚರ್ಚೆಗೆ ಕರೆದಿಲ್ಲ. ಬೆಳಗಾವಿಯಲ್ಲಿ ರೈತರ ಕೃಷಿ ಭೂಮಿಯ ಮೇಲೆ ಬಲವಂತವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗುವ ಸರ್ಕಾರ, ಅದನ್ನು ಪ್ರಶ್ನಿಸಿದ ರೈತರ ಮೇಲೆ ಪೊಲೀಸ್ ಬಲ ಪ್ರಯೋಗಿಸಿ ಜೈಲಿಗೆ ಕಳುಹಿಸುತ್ತೆ.
ರೈತರು ಬೀದಿಯ ಮೇಲೆ ಹೆಣವಾಗುತ್ತಿದ್ದರೂ ಸರ್ಕಾರ ಮಾತ್ರ ಅದನ್ನು ಲೆಕ್ಕಿಸುತ್ತಿಲ್ಲ. ಮೆಕ್ಕೆ ಜೋಳ, ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳು ಕಟಾವಿಗೆ ಬಂದು ನಿಂತಿವೆ. ಆದರೆ, ನಿರಂತರ ಮಳೆಯಿಂದಾಗಿ ಬೆಳೆ ಕಟಾವು ಮಾಡಲಾಗದ ಇಕ್ಕಟ್ಟಿನ ಸ್ಥಿತಿಯಲ್ಲಿ ರೈತರು ಸಿಲುಕಿಕೊಂಡಿದ್ದಾರೆ. ಹೊಲದಲ್ಲಿಯೇ ಬೆಳೆಗಳು ಕೊಳೆತು, ಮೊಳಕೆಯೊಡೆಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜನರಪರವಾಗಿ ನಿಲ್ಲಬೇಕಿದ್ದ ಮುಖ್ಯಮಂತ್ರಿಗಳು ಟಿ.ವಿ, ಧಾರಾವಾಹಿ, ಸಿನಿಮಾದ ಖಾಸಗಿ ಕಾರ್ಯಕ್ರಮಗಳಲ್ಲಿ ಮಿಂಚುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೃಷಿ ಸಚಿವರಂತೂ ಬಣ್ಣದ ಮಾತುಗಳಿಗೇ ಸೀಮಿತವಾಗಿದ್ದಾರೆ. ರಸ ಗೊಬ್ಬರ ದರ ಏರಿಕೆ, ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಂಬರುವ ಬೆಳಗಾವಿ ಅಧಿವೇಶನದ ವೇಳೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು” ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.