ಎಲ್ಲರಿಗೂ ನಮಸ್ಕಾರ,
ಮೊದಲಿಗೆ ಪ್ರವಾಸೋದ್ಯಮದ ಎಲ್ಲಾ ಪಾಲುದಾರರು, ಗಣ್ಯರು ಹಾಗೂ ಅತಿಥಿಗಳಿಗೆ ಸುಸ್ವಾಗತವನ್ನು ಕೋರುತ್ತೇನೆ.
ಕರ್ನಾಟಕ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಎಕ್ಸ್ಪೋ 2025 : (KITE 2025) ಕಾರ್ಯಕ್ರಮವು ಭಾರತ ಮತ್ತು ವಿಶ್ವದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ಪ್ರವಾಸೋದ್ಯಮ ತಾಣವೆಂಬ ಸ್ಥಾನವನ್ನು ಧೃಡೀಕರಿಸಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಿ ಆಪರೇಟರ್ ಗಳು , ಟ್ರಾವೆಲ್ ಏಜೆಂಟರು, ಉದ್ಯಮದ ನಾಯಕರು, ಮತ್ತು ಮಾಧ್ಯಮದ ಸ್ನೇಹಿತರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ನಿಮ್ಮ ಉಪಸ್ಥಿತಿಯು ಕರ್ನಾಟಕದ ಬಗ್ಗೆ ಬೆಳೆಯುತ್ತಿರುವ ಜಾಗತಿಕ ಆಸಕ್ತಿಯನ್ನು ಹಾಗೂ ಅದರ ವ್ಯಾಪಕ ಸಾಮರ್ಥ್ಯವನ್ನು ಒತ್ತಿಹೇಳುತ್ತಿದೆ.
ಕರ್ನಾಟಕ ಇಂದು ಅದ್ವಿತೀಯ ವೈವಿಧ್ಯತೆಗಳ ಸಂಗಮದೊಂದಿಗೆ ಅವಕಾಶಗಳ ಹೆಬ್ಬಾಗಿಲಾಗಿರುವುದು ವಿಶೇಷ.
ಇಲ್ಲಿ ಪುರಾತನ ಪರಂಪರೆಯು ಆಧುನಿಕ ನಾವೀನ್ಯತೆಯನ್ನು ಸಂಧಿಸುತ್ತದೆ. ನಮ್ಮ ಭವ್ಯ ಪರಂಪರೆಯ ಹಂಪಿ, ಬಾದಾಮಿ, ಮತ್ತು ಮೈಸೂರಿನಿಂದ ಹಿಡಿದು, ಕರಾವಳಿಯ ಸುಂದರ ಕಡಲತೀರಗಳವರೆಗೆ ನಮ್ಮ ರಾಜ್ಯವು ಪ್ರವಾಸಿಗರ ಸ್ವರ್ಗ. ಜೈನಬಸದಿಗಳ ಕೇಂದ್ರವಾಗಿ, ವೈವಿಧ್ಯಮಯ ವಿಚಾರಧಾರೆಗಳ ಸೂಫಿ ಸಂತರ ನೆಲೆಬೀಡಾಗಿ ,ಚಿಕ್ಕ ಮಗಳೂರಿನ ಕಾಫಿ ಕೃಷಿಯ ಘಮ, ನಾಗರಹೊಳೆಯ ವನ್ಯಜೀವಿ ಸಂಪತ್ತು, ಚಾರಣಿಗರನ್ನು ಕೈ ಬೀಸಿ ಕರೆಯುವ ಪಶ್ಚಿಮ ಘಟ್ಟಗಳ ರಮಣೀಯ ನಿಸರ್ಗ, ಸಾಹಸಮಯ ಜಲ ಕ್ರೀಡೆಗಳು ಹೀಗೆ ಎಲ್ಲವನ್ನೂ ಒಳಗೊಂಡು ಕರ್ನಾಟಕ ಹೆಮ್ಮೆಯ ತಾಣವಾಗಿದೆ.
ನಮ್ಮ ರಾಜ್ಯದ ನಾಲ್ಕು ತಾಣಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, 35 ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯ, ಗಿರಿಧಾಮಗಳು, ಆಧ್ಯಾತ್ಮಿಕ ಕೇಂದ್ರಗಳು, ಸಾಹಸ ತಾಣಗಳು ಹಾಗೂ ದೇಶದಲ್ಲಿಯೇ ಅತ್ಯುತ್ತಮ ಕ್ಷೇಮ ಕೇಂದ್ರಗಳನ್ನು ಹೊಂದಿದೆ.
ಕರ್ನಾಟಕದ ಆರ್ಥಿಕ ಪ್ರಗತಿಗೆ ಪ್ರವಾಸೋದ್ಯಮ ವಲಯವು ಹೊಂದಿರುವ ಅಗಾಧ ಸಾಮರ್ಥ್ಯವನ್ನು ಸರ್ಕಾರ ಗುರುತಿಸಿದೆ.
ಮೂಲಸೌಕರ್ಯ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳು ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೇಲೆ ಹೂಡಿಕೆ ಮಾಡುವ ಮೂಲಕ ಕರ್ನಾಟಕ ಪ್ರಧಾನ ಪ್ರವಾಸ ತಾಣವಾಗಿ ಉಳಿಯುವಂತೆ ಮಾಡಲು ನಾವು ನಿರ್ಣಾಯಕ ಹೆಜ್ಜೆಗಳನ್ನು ಇರಿಸಿದ್ದೇವೆ.
ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರವು ರಾಜ್ಯದ ಪ್ರವಾಸೋದ್ಯಮ ವಲಯದಲ್ಲಿ ಮೂಲಸೌಕರ್ಯ, ಉತ್ಪನ್ನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ 440 ಕೋಟಿ ರೂ.ಗಳನ್ನು ಮೀಸಲಿರಿಸಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ನ್ನು ಜಾರಿ ಮಾಡಲಾಗಿದ್ದು, ಇದು ಅಭಿವೃದ್ಧಿ, ನಾವೀನ್ಯತೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಬುನಾದಿ ಹಾಕಿದೆ.

ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳಿಗೆ ಕರ್ನಾಟಕದಲ್ಲಿ ವ್ಯವಹಾರವನ್ನು ಸರಳಗೊಳಿಸಲು ನಾವು ಬದ್ಧರಾಗಿದ್ದೇವೆ. ಇದನ್ನು ಸಾಧ್ಯವಾಗಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆಯನ್ನು ಹಾಗು ಪ್ರವಾಸೋದ್ಯಮ ಮೂಲಸೌಕರ್ಯ, ವಸತಿ ಮತ್ತು ನೂತನ ಪ್ರವಾಸೋದ್ಯಮ ಉತ್ಪನ್ನಗಳನ್ನು ನಾವು ಉತ್ತೇಜಿಸುತ್ತಿದ್ದೇವೆ.

ನಮ್ಮ ಪ್ರವಾಸೋದ್ಯಮ ನೀತಿಯನ್ನು ಅನುಷ್ಠಾನಗೊಳಿಸಲು ನಾವು 1350 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಮೀಸಲಿರಿಸಿದ್ದೇವೆ.ಇದು 8000 ಕೋಟಿ ರೂ.ಗಳ ನೇರ ಹೂಡಿಕೆಯನ್ನು ಆಕರ್ಷಿಸುವ ಹಾಗೂ 1.5 ಲಕ್ಷ ಉದ್ಯೋಗಾವಕಾಶಗಳನ್ನು ಸೃಜಿಸುವ ಗುರಿಯನ್ನು ಹೊಂದಿದೆ. ಈ ನೀತಿಯು ಪ್ರವಾಸೋದ್ಯಮ ಉದ್ಯಮಿಗಳು ಅಭಿವೃದ್ಧಿಹೊಂದಲು , ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು ಹಾಗೂ ಕರ್ನಾಟಕದ ಅಭಿವೃದ್ಧಿಗೆ ಬುನಾದಿಯಾಗಲಿದೆ.
KITE 2025 ನಮ್ಮ ಪ್ರವಾಸೋದ್ಯಮ ವಲಯಕ್ಕೆ ಪ್ರಮುಖವಾಗಿರುವ ಕಾರ್ಯಕ್ರಮವಾಗಿದೆ. 90 ಅಂತರರಾಷ್ಟ್ರೀಯ ಖರೀದಿದಾರರು, 15 ಅಂತರರಾಷ್ಟ್ರೀಯ ಮಾಧ್ಯಮಗಳು, 230 ಸ್ಥಳೀಯ ಖರೀದಿದಾರರು,23 ಸ್ಥಳೀಯ ಮಾಧ್ಯಮಗಳು, 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಾಧ್ಯಮಗಳನ್ನು ಈ ಕಾರ್ಯಕ್ರಮ ಒಟ್ಟುಗೂಡಿಸಿದೆ. ಈ ಎಕ್ಸ್ಪೋ ವ್ಯಾಪಾರ ಪಾಲುದಾರಿಕೆಗಳು, ನೂತನ ಪ್ರವಾಸಿ ಪ್ಯಾಕೇಜಗಳು ಹಾಗೂ ಹೆಚ್ಚಿನ ಜಾಗತಿಕ ಅವಕಾಶಗಳನ್ನು ಸೃಜಿಸಲಿದೆ.

ಅತಿಥಿ ಸತ್ಕಾರ, ಸಂಪರ್ಕ ಮತ್ತುಮೂಲಸೌಕರ್ಯ
ಯಾವುದೇ ಪ್ರವಾಸಿ ಸ್ಥಳಕ್ಕೆ ಉತ್ತಮ ಸಂಪರ್ಕ ಮತ್ತು ಅತಿಥಿಸತ್ಕಾರ ಅತ್ಯವಶ್ಯ. ಕರ್ನಾಟಕ ರಾಜ್ಯವು ಸುಧಾರಿತ ವಿಮಾನ ಸಂಪರ್ಕವನ್ನು ಹೊಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಗುಣಮಟ್ಟದ ರಸ್ತೆ ಮತ್ತು ರೈಲ್ಪೆ ಸಂಪರ್ಕಗಳು ಉತ್ತಮ ಪ್ರಯಾಣದ ಅನುಭವವನ್ನು ನೀಡುತ್ತದೆ.
ಗುಣಮಟ್ಟದ ರೆಸಾರ್ಟ್ ಗಳಿಂದ ಹೋಂಸ್ಟೇಗಳವರೆಗೂ ಹರಡಿರುವ ಅತಿಥಿಸತ್ಕಾರದ ವ್ಯವಸ್ಥೆ ಕರ್ನಾಟಕದ ನಿಜ ಸೊಬಗನ್ನು ಪ್ರಯಾಣಿಕರಿಗೆ ತೆರೆದಿಡುತ್ತಿದೆ.
ಪ್ರವಾಸೋದ್ಯಮದ ಸುಸ್ಥಿರ ಕ್ರಮಗಳು ಕರ್ನಾಟಕದ ಪ್ರಾಕೃತಿಕ ಸೌಂದರ್ಯವನ್ನು ಮುಂದಿನ ಪೀಳಿಗೆಗೂ ಕಾಪಿಡುತ್ತಿದೆ.
*
1.ಮೂಲಸೌಕರ್ಯ ಅಭಿವೃದ್ಧಿ: ಉತ್ತಮ ಸಂಪರ್ಕ, ವಿಶ್ವದರ್ಜೆಯ ಸೌಕರ್ಯಗಳು, ವಿಸ್ತರಿಸಿದ ವಿಮಾನಸೌಲಭ್ಯ ಮತ್ತು ಸುಧಾರಿತ ಸಾರ್ವಜನಿಕ ಸಾರಿಗೆಗಳು ತಡೆರಹಿತ ಪ್ರಯಾಣಕ್ಕೆ ಸಹಕರಿಸುತ್ತದೆ.
2.ಕೌಶಲ್ಯಾಭಿವೃದ್ಧಿ- ಸ್ಥಳೀಯ ಮಟ್ಟದಲ್ಲಿ ಯುವಕ ಯುವತಿಯರಿಗೆ ಅತಿಥಿಸತ್ಕಾರ ಹಾಗೂ ಪ್ರವಾಸೋದ್ಯಮದ ಕ್ಷೇತ್ರದಲ್ಲಿ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಿದಂತಾಗುತ್ತದೆ.
3.ಪರಿಸರ ಪ್ರವಾಸೋದ್ಯಮ, ಸಮುದಾಯ ಆಧಾರಿತ ಪ್ರವಾಸೋದ್ಯ ಮತ್ತು ಜವಾಬ್ದಾರಿಯುತ ಪ್ರವಾಸಿ ಮಾದರಿಗಳಂತಹ ಸುಸ್ಥಿರ ಪ್ರವಾಸೋದ್ಯಮ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.’
4.ತಂತ್ರಜ್ಞಾನ ಆಧಾರಿತ ಕ್ರಮಗಳು: ಡಿಜಿಟಲ್ ಫ್ಲಾಟ್ಫಾರಂಗಳನ್ನು ಬಳಸಿಕೊಳ್ಳುವ ಮೂಲಕ ಕರ್ನಾಟಕದ ಪ್ರವಾಸೋದ್ಯಮವನ್ನು ಹೆಚ್ಚು ಸುಲಭ ಹಾಗೂ ಗ್ರಾಹಕಸ್ನೇಹಿಯಾಗಿಸಬಹುದು.
ಕರ್ನಾಟಕದ ಪ್ರವಾಸೋದ್ಯಮ ನಕ್ಷೆಯ ಪರಿವರ್ತನೆಯಲ್ಲಿ KITE 2025 ಪಾತ್ರ:
ನಮ್ಮ ಪ್ರವಾಸೋದ್ಯಮ ವಲಯಕ್ಕೆ KITE 2025 ಪ್ರಮುಖ ಕಾರ್ಯಕ್ರಮವಾಗಿದೆ. 2019 ರ ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ KITE ನ ಎರಡನೇ ಆವೃತ್ತಿಯನ್ನು ಆಯೋಜಿಸುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ.
KITE ನಂತಹ ಕಾರ್ಯಕ್ರಮಗಳು ಕರ್ನಾಟಕವನ್ನು ಪ್ರವಾಸಿಗರಿಗೆ ಆದ್ಯತೆಯ ತಾಣವಾಗಿ ಉಳಿಸುವುದಲ್ಲದೆ, ಜಾಗತಿಕ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಪರ್ಧಿಯಾಗಿ ತನ್ನ ಸ್ಥಾನವನ್ನು ಬಲಪಡಿಸಲಿದೆ. 14 ಸಾವಿರಕ್ಕೂ ಹೆಚ್ಚು ಪೂರ್ವಾನಿಗದಿತ B2B ಸಭೆಗಳ ಮೂಲಕ ಖರೀದಿದಾರರು ಹಾಗೂ ಕೊಳ್ಳುವವರ ನಡುವೆ ನೇರ ಮಾತುಕತೆಯನ್ನು ಉತ್ತೇಜಿಸಲಾಗುತ್ತಿದ್ದು, ತನ್ಮೂಲಕ ಕರ್ನಾಟಕದ ಪ್ರವಾಸೋದ್ಯಮ ವ್ಯವಹಾರಗಳು ವಿಶ್ವದ ಪ್ರಮುಖ ತ್ರಾವಲ್ ಕಂಪನಿಗಳೊಂದಿಗೆ ಸಂಪರ್ಕ ಹೊಂದುವುದನ್ನು ಖಾತ್ರಿ ಪಡಿಸಲಾಗುತ್ತಿದೆ.
ನಮ್ಮ ಅತಿಥಿ ಖರೀದಿದಾರರು ಹಾಗು ಪ್ರವಾಸ ವೃತ್ತಿಪರರು ಕರ್ನಾಟಕವನ್ನು ಸುತ್ತಾಡಿ ಅನುಭವ ಹೊಂದುವಂತೆ ಕೋರಿಕೊಳ್ಳುತ್ತೇನೆ. ನಮ್ಮ ಪಾರಂಪರಿಕ ತಾಣಗಳು, ಕರಾವಳಿಯ ಸೌಂದರ್ಯ, ಗಿರಿಧಾಮ ಗಳು ಹಾಗೂ ರೋಮಾಂಚಕ ಸಾಂಸ್ಕೃತಿಕ ಕೇಂದ್ರಗಳನ್ನು ಭೇಟಿ ಮಾಡಿ. ನಮ್ಮ ಜನರ ಹುರುಪು, ನಮ್ಮ ಸಂಪ್ರದಾಯಗಳ ಶ್ರೀಮಂತಿಕೆ ಮತ್ತು ನಮ್ಮ ವಿಶಿಷ್ಟ ಅಡುಗೆ ತಿನಿಸುಗಳ ರುಚಿಯನ್ನು ಸವಿಯಬೇಕು.
ಕರ್ನಾಟಕ ಕೇವಲ ಗಮ್ಯವಲ್ಲ; ಅದು ನಿಮ್ಮೊಂದಿಗೆ ಸದಾ ಉಳಿಯಲಿರುವ ಅನುಭವ
ನಮ್ಮ ಪಾಲುದಾರರಿಗೆ ಕ್ರಮ ವಹಿಸಲು ಕರೆ;
ಈ ಪಯಣದಲ್ಲಿ ನಾವು ಸಾಗಿರುವಾಗಲೇ, ಕರ್ನಾಟಕ ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಶ್ರೇಷ್ಠತೆಯಲ್ಲಿ ಮುಂಚೂಣಿಯಲ್ಲಿರಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಅನ್ವೇಷಣೆ, ಹೂಡಿಕೆ ಅಥವಾ ಪ್ರವಾಸೋದ್ಯಮಕ್ಕೆ ಉತ್ತೇಜನ ಈ ಯಾವ ಉದ್ದೇಶಗಳನ್ನು ನೀವು ಹೊಂದಿದ್ದರೂ, ನೀವೀಗ ಕರ್ನಾಟಕದ ಅಧ್ಬುತ ಕಥೆಯ ಭಾಗವಾಗಿದ್ದೀರಿ.
ಸಾಹಸವನ್ನು ಅಪೇಕ್ಷಿಸುವ ಪ್ರತಿ ಪ್ರವಾಸಿಗನನ್ನು , ಶಾಂತಿಯನ್ನು ಅರಸುವ ಪ್ರತಿ ಆತ್ಮವನ್ನು , ಜ್ಞಾನವನ್ನು ಬೇಡುವ ಪ್ರತಿ ಮನಸ್ಸನ್ನು; ಕರ್ನಾಟಕ ತೆರೆದ ಬಾಹುಗಳಿಂದ ಸ್ವಾಗತಿಸುತ್ತದೆ.
ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಹೆಮ್ಮೆಯಾಗಿಸೋಣ, ವಿಶ್ವಕ್ಕೆ ನಮ್ಮ ಅಚ್ಚರಿಯ ನಾಡನ್ನು ಬಿಂಬಿಸೋಣ. ಕರ್ನಾಟಕವನ್ನು ಭಾರತದ ಪ್ರಮುಖ ಪ್ರವಾಸಿ ತಾಣವಾಗಿಸುವ ಉಜ್ವಲ ಭವಿಷ್ಯವನ್ನು ಕಟ್ಟೋಣ. ಭವಿಷ್ಯದತ್ತ ನೋಡುವಾಗ, ಕರ್ನಾಟಕ ಭಾರತದ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ನಮ್ಮ ಎಲ್ಲಾ ಪಾಲುದಾರರಿಗೆ ಕರೆ ನೀಡುತ್ತೇನೆ.
ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಖರೀದಿದಾರರಲ್ಲಿ ನಾನು ಮನವಿ ಮಾಡುವುದೇನೆಂದರೆ ನಿಮ್ಮಮಾರುಕಟ್ಟೆಗಳಲ್ಲಿ ಕರ್ನಾಟಕವನ್ನು ಪ್ರಚುರಪಡಿಸಿ.ನಿಮ್ಮ ಪಟ್ಟಿಯಲ್ಲಿ ನಮ್ಮ ತಾಣಗಳನ್ನು ಸೇರಿಸಿ ಹಾಗು ಹೆಚ್ಚು ಹೆಚ್ಚು ಪ್ರವಾಸಿಗರಿಗೆ ನಮ್ಮ ರಾಜ್ಯದ ಕೌತುಕಗಳನ್ನು ಪರಿಚಯಿಸಿ.
*ಖಾಸಗಿ ವಲಯ ಹಾಗೂ ಹೂಡಿಕೆದಾರರಿಗೆ;
ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಕರ್ನಾಟಕ ಸರ್ಕಾರ ಅಗತ್ಯ ನೆರವು, ಪ್ರೋತ್ಸಾಹಕಗಳು, ಹಾಗೂ ಈ ಆಫ್ ಡೂಯಿಂಗ್ ಬ್ಯುಸಿನೆಸ್ ವ್ಯವಸ್ಥೆಗಳನ್ನು ಒದಗಿಸಲು ಬದ್ಧವಾಗಿದೆ. KITE ನಿಮ್ಮ ಕಾರ್ಯಕ್ರಮವಾಗಿದ್ದು , ಇದರ ಮುಂದಿನ ಆವೃತ್ತಿಯನ್ನು ಖಾಸಗಿ ವಲಯದ ನೇತೃತ್ವದಲ್ಲಿ ಏರ್ಪಡಿಸುವಂತಾಗಬೇಕು.
ಕರ್ನಾಟಕದ ಜನತೆ ನಮ್ಮ ರಾಜ್ಯದ ರಾಯಭಾರಿಗಳಾಗಬೇಕು. ಅತಿಥಿಗಳಿಗೆ ಬೆಚ್ಚನೆಯ ಸ್ವಾಗತ ನೀಡಿ ನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸಬೇಕು.
KITE 2025 ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಿರಂತರವಾಗಿ ಶ್ರಮಿಸಿರುವ ಎಲ್ಲಾ ಆಯೋಜಕರನ್ನು , ಪ್ರವಾಸೋದ್ಯಮ ಕ್ಷೇತ್ರದಿಂದ ಭಾಗವಹಿಸಿರುವವರು ಹಾಗೂ ಎಲ್ಲಾ ಪಾಲುದಾರರನ್ನು ನಾನು ಅಭಿನಂದಿಸುತ್ತೇನೆ. ನೂತನ ಪಾಲುದಾರಿಕೆಗಳು, ಉಪಕ್ರಮಗಳು ಮತ್ತು ಅವಕಾಶಗಳು ಈ ಕಾರ್ಯಕ್ರಮದಿಂದ ಆಗಲಿದೆ ಎಂದು ನಾನು ಎದುರುನೋಡುತ್ತೇನೆ.
ಭಾರತದಲ್ಲಿ ಕರ್ನಾಟಕವನ್ನು ಪ್ರಮುಖ ಪ್ರವಾಸೋದ್ಯಮ ತಾಣವಾಗಿಸಲು ಎಲ್ಲಾ ಪಾಲುದಾರರನ್ನು – ಅಂದರೆ ಟೂರ್ ಆಪರೇಟರ್ ಗಳು ಮತ್ತು ಉದ್ಯಮದ ವೃತ್ತಿಪರರು, ಹೂಡಿಕೆದಾರರು, ಉದ್ಯಮಿಗಳು ನಮ್ಮೊಂದಿಗೆ ಕೈಜೋಡಿಸುವಂತೆ ನಾನು ಕೋರುತ್ತೇನೆ. ಸಂಪರ್ಕಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಒಟ್ಟಾಗಿ ಕಾರ್ಯನಿರ್ವಹಿಸೋಣ ಹಾಗೂ ಕರ್ನಾಟಕದ ಪ್ರವಾಸೋದ್ಯಮದ ಭವಿಷ್ಯವನ್ನು ಉಜ್ವಲಗೊಳಿಸೋಣ.
KITE 2025 ಕಾರ್ಯಕ್ರಮದಲ್ಲಿ ನಿಮಗೆಲ್ಲಾ ಫಲಪ್ರದ ಹಾಗೂ ಸಮೃದ್ಧ ಅನುಭವವಾಗಲಿ ಎಂದು ಹಾರೈಸುತ್ತೇನೆ.
ನಮ್ಮ ಕರ್ನಾಟಕ, ನಮ್ಮ ಹೆಮ್ಮೆ!
ಧನ್ಯವಾದಗಳು