ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಎರಡೂ ಬಣಗಳಿಗೆ ತಲಾ 1 ವಿಧಾನ ಪರಿಷತ್ ಟಿಕೆಟ್ ನೀಡುವ ಸಮಾಧಾನ ಮಾಡುವ ಕೆಲಸ ಮಾಡಿದೆ.
ಜೂನ್ 3ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸಿದ್ದರಾಮಯ್ಯ ಬಣದ ನಾಗರಾಜ್ ಯಾದವ್ ಮತ್ತು ಡಿಕೆ ಶಿವಕುಮಾರ್ ಬಣದ ಅಬ್ದುಲ್ ಜಬ್ಬಾರ್ ಗೆ ಹೈಕಮಾಂಡ್ ಟಿಕೆಟ್ ನೀಡಿದೆ.
ಇದೇ ವೇಳೆ ಸೀತಾರಾಮ್ ಅವರ ಹೆಸರನ್ನು ಶಿಫಾರಸು ಮಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರನ್ನು ಹೈಕಮಾಂಡ್ ತರಾಟೆಗೆ ತೆಗೆದುಕೊಂಡರೆ, ಹೈಕಮಾಂಡ್ ಸೂಚಿಸಿದ್ದ ಎಂ.ಸಿ.ವೇಣುಗೋಪಾಲ್ ಗೆ ಟಿಕೆಟ್ ನೀಡುವುದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಇಬ್ಬರೂ ಟಿಕೆಟ್ ಪಡೆದಿಲ್ಲ. ಇದೇ ವೇಳೆ ಮಾಜಿ ವಿಧಾನ ಪರಿಷತ್ ನಾಯಕರಾಗಿ ಎಸ್.ಆರ್. ಪಾಟೀಲ್ ಗೆ ಕೂಡ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರಿಂದ ಅವರಿಗೂ ಟಿಕೆಟ್ ಕೈ ತಪ್ಪಿದೆ.
ನಾಗರಾಜ್ ಯಾದವ್ ಸಿದ್ದರಾಮಯ್ಯ ಬಣದ ಅಭ್ಯರ್ಥಿಯಾಗಿದ್ದು, ಸಿದ್ದರಾಮಯ್ಯ ಸರಕಾರದಲ್ಲಿ ಬಿಎಂಟಿಸಿ ಅಧ್ಯಕ್ಷರಾಗಿದ್ದರು.
ಇದೇ ವೇಳೆ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪ ಸಂಖ್ಯಾತ ಮುಖಂಡರೂ ಆಗಿದ್ದು, 2014ರಲ್ಲಿ ಮುಮ್ತಾಜ್ ಅಲಿಖಾನ್ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕಗೊಂಡು 45 ದಿನಗಳ ಕಾಲ ಪರಿಷತ್ ಸದಸ್ಯರಾಗಿದ್ದರು. ನಂತರ ಪುನರಾಯ್ಕೆಗೊಂಡು 6 ವರ್ಷಗಳ ಕಾಲ ಸದಸ್ಯರಾಗಿ ಅವಧಿ ಪೂರ್ಣಗೊಳಿಸಿದ್ದರು.