ತಮ್ಮ ವಿರುದ್ಧದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಲು ನಟಿ ಕಂಗನಾ ರನೌತ್ ಸಲ್ಲಿಸಿದ್ದಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿಗೀತ ರಚನೆಕಾರ, ಲೇಖಕ ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಟಿವಿ ಸಂದರ್ಶನಗಳಲ್ಲಿತನ್ನ ವಿರುದ್ಧಮಾನಹಾನಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಅಖ್ತರ್ ಆರೋಪಿಸಿದ್ದರು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈವರೆಗೆ ಅಖ್ತರ್ ದೂರಿನ ಹಿನ್ನೆಲೆಯಲ್ಲಿ ನೀಡಿರುವ ಆದೇಶಗಳು, ಸಮನ್ಸ್ಗಳನ್ನೂ ಒಳಗೊಂಡಂತೆ ಅವರ ದೂರಿನ ಆಧಾರದಲ್ಲಿ ಚಾಲನೆ ನೀಡಿರುವ ಎಲ್ಲ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಪಡಿಸಿಬೇಕು ಎನ್ನುವುದು ಕಂಗನಾ ಅವರ ಮನವಿಯಾಗಿತ್ತು.
ಅಖ್ತರ್ ಅವರ ದೂರಿಗೆ ಸಂಬಂಧಿಸಿದಂತೆ ಪೊಲೀಸರಿಗೆ ವಿಚಾರಣೆ ನಡೆಸಲು ನಿರ್ದೇಶಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕಿರುವ ವಿವೇಚನಾಧಿಕಾರವನ್ನು ಎತ್ತಿ ಹಿಡಿದ ನ್ಯಾ. ರೇವತಿ ಮೋಹಿತೆ ದೆರೆ ಅವರು ಕಂಗನಾ ಮನವಿಯನ್ನು ವಜಾಗೊಳಿಸಿದರು.
ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ, ದೂರುದಾರರನ್ನು ಪರೀಕ್ಷಿಸುವುದು ಹಾಗೂ ದೂರಿನಲ್ಲಿ ತಿಳಿಸಿರುವ ಸಾಕ್ಷಿಯನ್ನು ಪರೀಕ್ಷಿಸುವುದು ಮ್ಯಾಜಿಸ್ಟ್ರೇಟ್ ಅವರ ಕರ್ತವ್ಯವಾಗಿದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 202ರ ಪ್ರಕಾರ ಮ್ಯಾಜಿಸ್ಟ್ರೇಟ್ ಅವರು ಇದನ್ನು ಪಾಲಿಸಬೇಕಿತ್ತೇ ಹೊರತು ತಮ್ಮ ಪರವಾಗಿ ಜುಹು ಪೊಲೀಸರಿಗೆ ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ಸುಮ್ಮನೆ ಸೂಚಿಸಬಾರದಿತ್ತು ಎಂದು ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ ಅಖ್ತರ್ ಪರ ವಕೀಲ ಜೇ ಕೆ ಭಾರಧ್ವಜ್, ಮ್ಯಾಜಿಸ್ಟ್ರೇಟ್ ಅವರ ಮುಂದೆ ಮೂರು ಆಯ್ಕೆಗಳಿರುತ್ತವೆ. ತಾವೇ ಖುದ್ದು ತನಿಖೆ ನಡೆಸುವುದು ಅಥವಾ ಪೊಲೀಸ್ ಅಧಿಕಾರಿಯ ಮೂಲಕ ತನಿಖೆ ನಡೆಸುವುದು ಇಲ್ಲವೇ ಮೂರನೇ ಪ್ರತ್ಯೇಕ ತನಿಖೆ ನಡೆಸುವುದು ಎಂಬುದಾಗಿ ವಾದಿಸಿದ್ದರು. ಮ್ಯಾಜಿಸ್ಟ್ರೇಟ್ ಅವರು ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ಲೋಪವಿಲ್ಲ ಎಂದು ವಾದಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದಬಾಂಬೆ ಹೈಕೋರ್ಟ್ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತ್ತು.