ಬೆಂಗಳೂರು: 2026ನೇ ಸಾಲಿನ ಕಾಮನ್ ಎಂಟ್ರನ್ಸ್ ಟೆಸ್ಟ್ (CET) ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಪ್ರಕಟಿಸಿದೆ. ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಜಂಟಿಯಾಗಿ ನಡೆಸುವ ಈ ಪರೀಕ್ಷೆ 2026ರ ಏಪ್ರಿಲ್ 23 ಮತ್ತು 24ರಂದು ಎರಡು ದಿನಗಳ ಕಾಲ ನಡೆಯಲಿದೆ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಈ ಮಹತ್ವದ ಪರೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಿಷಯವಾರು ಪರೀಕ್ಷಾ ದಿನಾಂಕಗಳ ವಿವರ
ಏಪ್ರಿಲ್ 23, 2026ರಂದು ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ, ಏಪ್ರಿಲ್ 24, 2026ರಂದು ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರದ ಜೊತೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

CET 2026 ಪ್ರವೇಶಾತಿಗೆ ಜನವರಿ 17ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅರ್ಜಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿದ್ದು, ವಿದ್ಯಾರ್ಥಿಗಳು KEA ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆ ವೇಳೆ ದಾಖಲೆಗಳ ಅಪ್‌ಲೋಡ್, ಶುಲ್ಕ ಪಾವತಿ ಹಾಗೂ ಮಾಹಿತಿಯ ಪರಿಶೀಲನೆಗೆ ವಿಶೇಷ ಗಮನ ನೀಡುವಂತೆ KEA ಸೂಚಿಸಿದೆ.

ವಿದ್ಯಾರ್ಥಿಗಳಿಗೆ CET ಪ್ರವೇಶಾತಿ ಪ್ರಕ್ರಿಯೆ ಸುಲಭವಾಗಲೆಂಬ ಉದ್ದೇಶದಿಂದ CET ದಿಕ್ಸೂಚಿ (ಗೈಡ್ ಬುಕ್) ಅನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಬಿಡುಗಡೆ ಮಾಡಿದ್ದಾರೆ. ಈ ದಿಕ್ಸೂಚಿಯಲ್ಲಿ ಅರ್ಜಿ ಸಲ್ಲಿಕೆ ವಿಧಾನ, ಪರೀಕ್ಷಾ ಕ್ರಮ, ಅಂಕಗಳ ಲೆಕ್ಕಾಚಾರ, ರಿಸರ್ವೇಶನ್ ನಿಯಮಗಳು, ಕೌನ್ಸೆಲಿಂಗ್ ಹಂತಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ನೀಡಲಾಗಿದೆ.






