ಕೊಡಗು ಮತ್ತು ದಕ್ಷಿಣ ಕನ್ನಡ ಗಡಿಭಾಗ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಕಳೆದ ಹಲವುದಿನಗಳಿಂದ ಸುರಿದ ಮಳೆ ಇಂದು ಸಹ ತನ್ನ ಆರ್ಭಟವನ್ನು ಮುಂದುವರೆಸಿದೆ. ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇತ್ತ ಮೊಣ್ಣಂಗೇರಿ ಬಳಿ ಭೂಕುಸಿತ ವರದಿಯಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ಮೂಲಸೌಕರ್ಯಕ್ಕೆ ಹಾನಿಯನ್ನುಂಟುಮಾಡಿದೆ. ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆಯನ್ನು ಘೋಷಣೆ ಮಾಡಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 101.80 ಮಿ.ಮೀ ಮಳೆ ದಾಖಲಾಗಿದೆ. ಜುಲೈ 4ರಿಂದ ಇಲ್ಲಿಯವರೆಗೆ ವಿರಾಜಪೇಟೆ ತಾಲೂಕಿನಲ್ಲಿ 54.83 ಮಿ.ಮೀ ಹಾಗೂ ಸೋಮವಾರಪೇಟೆಯಲ್ಲಿ 40.87 ಮಿ.ಮೀ ಮಳೆಯಾಗಿದೆ.
ಸಂಪಾಜೆ (144 ಮಿ.ಮೀ.), ಭಾಗಮಂಡಲ (122 ಮಿ.ಮೀ.) ಮತ್ತು ಶಾಂತಳ್ಳಿ (111 ಮಿ.ಮೀ) ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜುಲೈ 5ರ ಬೆಳಗ್ಗೆ 8.30ರವರೆಗೆ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು.
ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಗೆ ಒಳಹರಿವು ಹೆಚ್ಚುತ್ತಲೇ ಇದೆ. ಜುಲೈ 5 ರಂದು ಒಳಹರಿವು 9,497 ಕ್ಯೂಸೆಕ್ ಮತ್ತು ಹೊರಹರಿವು 12,866 ಕ್ಯೂಸೆಕ್ ಎಂದು ವರದಿಯಾಗಿದೆ.

ಸಿದ್ದಾಪುರ ಸಮೀಪದ ಬಿಬಿಟಿಸಿ ಎಸ್ಟೇಟ್‌ನಲ್ಲಿ ಮರ ಬಿದ್ದು 11 ಕೆವಿ ಟ್ರಂಕ್ ಲೈನ್‌ಗಳ ಹತ್ತು ವಿದ್ಯುತ್ ಕಂಬಗಳು ಹಾನಿಗೀಡಾಗಿವೆ.
ಕುಶಾಲನಗರದಿಂದ ಮಡಿಕೇರಿವರೆಗಿನ 66 ಕೆವಿ ಮಾರ್ಗದ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಮಡಿಕೇರಿ ಪಟ್ಟಣದಲ್ಲಿ ಜುಲೈ 4 ರಂದು ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಜುಲೈ 5 ರಂದು ಮಡಿಕೇರಿ ತಾಲೂಕಿನ ಮಡೆಯಲ್ಲಿ 125 ಮಿಮೀ ಮತ್ತು ಗಾಳಿಬೀಡು 126 ಮಿಮೀ ಮಳೆ ದಾಖಲಾಗಿದೆ.


