ತೆಲಂಗಾಣದಲ್ಲಿ ಕೇವಲ 10 ದಿನಗಳ ಅವಧಿಯಲ್ಲಿ ಸಣ್ಣ ಪ್ರಾಯದ ವ್ಯಕ್ತಿಗಳಲ್ಲಿ ಹಠಾತ್ ಹೃದಯಾಘಾತದ ಐದು ಪ್ರಕರಣಗಳು ವರದಿಯಾಗಿದೆ. ಶುಕ್ರವಾರದಂದು 18 ವರ್ಷದ ವಿದ್ಯಾರ್ಥಿಯೊಬ್ಬ ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಕಾಲೇಜು ಕಾರಿಡಾರ್‌ನಲ್ಲಿ ಕುಸಿದು ಬಿದ್ದಿದ್ದಾರೆ. ಸಿಎಂಆರ್ ಇಂಜಿನಿಯರಿಂಗ್ ಕಾಲೇಜಿನ ಬಿಟೆಕ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಸಚಿನ್, ಸ್ನೇಹಿತನೊಂದಿಗೆ ಕಾಲೇಜು ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾನೆ.
ವಿದ್ಯಾರ್ಥಿ ಕುಸಿದು ಬೀಳುತ್ತಿರುವ ಸಿಸಿಟಿವಿ ದೃಶ್ಯ ಇದೀಗ ವೈರಲ್ ಆಗಿದ್ದು, ಸಣ್ಣ ಪ್ರಾಯದಲ್ಲಿ ಹೃದಯ ಸ್ಥಂಭನಕ್ಕೊಳಗಾಗಿ ಕುಸಿದು ಬೀಳುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.

ಇದಕ್ಕೂ ಮುನ್ನ, ಮಂಗಳವಾರ ತಡರಾತ್ರಿ ಹೈದರಾಬಾದ್‌ನ ಲಾಲಾಪೇಟ್ ಪ್ರದೇಶದ ಪ್ರೊ.ಜಯಶಂಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಶ್ಯಾಮ್ ಯಾದವ್ (38) ಕುಸಿದು ಬಿದ್ದು ಸಾವನ್ನಪ್ಪಿದ್ದರು. ಕೂಡಲೇ ಅವರನ್ನು ಸರ್ಕಾರಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಫೆಬ್ರವರಿ 27 ರಂದು, ನಿರ್ಮಲ್ ಜಿಲ್ಲೆಯ ಪರ್ಡಿ ಗ್ರಾಮದಲ್ಲಿ 19 ವರ್ಷದ ಯುವಕ ತನ್ನ ಸಂಬಂಧಿಕರ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಕುಸಿದು ಸಾವನ್ನಪ್ಪಿದ್ದ.

ನಾಲ್ಕು ದಿನಗಳ ಹಿಂದೆ, 24 ವರ್ಷದ ಪೊಲೀಸ್ ಪೇದೆಯೊಬ್ಬರು ಹೈದರಾಬಾದ್‌ನ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ನೆಲಕ್ಕೆ ಕುಸಿದು ಮೃತಪಟ್ಟಿದ್ದರು. ಫೆಬ್ರವರಿ 20 ರಂದು ನಗರದ ಕಲಾಪತ್ಥರ್ ಪ್ರದೇಶದಲ್ಲಿ ಮಧ್ಯವಯಸ್ಕರೊಬ್ಬರು ಅಳಿಯನ ಮೇಲೆ ಹಳದಿ ಹಚ್ಚುವಾಗ ಹಠಾತ್ ಕುಸಿದು ಸಾವನ್ನಪ್ಪಿದರು.
ಹೃದಯ ಸ್ಥಂಭನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರವು CPR ಯಂತ್ರಗಳನ್ನು ಪರಿಚಯಿಸಿದ್ದು, CPR ಅನ್ನು ನಿರ್ವಹಿಸುವ ತರಬೇತಿ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದೆ.
