ಬೆಳಗಾವಿ: ಇಂದಿನಿಂದ ವಿಧಾನ ಪರಿಷತ್ ಕಲಾಪ ಆರಂಭವಾಗಿದ್ದು, ಮೊದಲ ದಿನದ ಕಲಾಪದಲ್ಲಿ ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಹೆಚ್ಚಳವಾಗುತ್ತಿರುವ ಕುರಿತು ಗಂಭೀರವಾದ ಚರ್ಚೆ ನಡೆದಿದೆ.

ಸಿಸೇರಿಯನ್ ಹೆರಿಗೆ ಹೆಚ್ಚಳದ ಕುರಿತು ವಿಧಾನ ಪರಿಷತ್ ಸದಸ್ಯರ ಗೋವಿಂದರಾಜು ಪ್ರಸ್ತಾಪ ಮಾಡಿದ್ದು, ಅವರ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಉತ್ತರಿಸಿದ್ದಾರೆ.

ಕಲಾಪದಲ್ಲಿ ಮಾತನಾಡಿದ ಅವರು, ಕೇವಲ ಅಪೌಷ್ಟಿಕತೆಯಿಂದ ಸಿಸೇರಿಯನ್ ಹೆಚ್ಚಳವಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಅದೂ ಒಂದು ಕಾರಣ ಅಷ್ಟೆ. ಯಾಕೆಂದರೆ ಶಿಕ್ಷಿತರು, ಮೇಲು ವರ್ಗಗಳಲ್ಲಿ, ಮುಂದುವರೆದ ಪ್ರದೇಶಗಳಲ್ಲಿ ಸಿಸೇರಿಯನ್ ಹೆಚ್ಚು ಕಂಡುಬರುತ್ತದೆ. ಅದಕ್ಕೆ ಕಾರಣ ಭಯ, ಹೆರಿಗೆ ನೋವು ಸಹಿಸಿಕೊಳ್ಳುವುದು ಕಷ್ಟ ಎನ್ನುವ ಸಾಮಾಜಿಕ ನಂಬಿಕೆ ಹೀಗೆ ಹಲವಾರು ಕಾರಣಗಳಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆಚ್ಚಳವಾಗಲು ಹೆಚ್ಚಿನ ಬಿಲ್ ಮಾಡಬಹುದು, ರಿಸ್ಕ್ ಕಡಿಮೆ ಹೀಗೆ ಹಲವಾರು ಕಾರಣಗಳಿವೆ. ಸಹಜ ಹೆರಿಗೆ ಆದರೆ ಬಹಳ ಗಮನ ಇಟ್ಟು ಚಿಕಿತ್ಸೆ ನೀಡಬೇಕಾಗುತ್ತದೆ. ಕೆಲವು ಬಾರಿ ವೈದ್ಯಕೀಯ ಕಾರಣಕ್ಕೂ ಸಿಸೇರಿಯನ್ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಅದನ್ನು ವೈದ್ಯರು ಮಾತ್ರ ನಿರ್ಣಯ ಮಾಡಬಹುದಾಗಿದೆ ಎಂದರು.

ಸಿಸೇರಿಯನ್ ಹೆರಿಗೆ ಕುರಿತು ಈಗಾಗಲೇ ತುಮಕೂರಿನಲ್ಲಿ ಪೈಲಟ್ ಪ್ರೊಜೆಕ್ಟ್ ಮಾಡಿ, ವರದಿ ನಮ್ಮ ಕೈಸೇರಿದೆ. ಕೆಲವು ಆಸ್ಪತ್ರೆಗಳಲ್ಲಿ 75-80% ಸಿಸೇರಿಯನ್ ಆಗಿದೆ. ನಾವು ಅದನ್ನು ಸರಿಯಾಗಿ ಅವಲೋಕಿಸಬೇಕಿದೆ. ಇದು ಬಹಳ ಸೂಕ್ಷ್ಮ ವಿಚಾರ. ಸಹಜ ಹೆರಿಗೆ ಅಥವಾ ಸಿಸೇರಿಯನ್ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಇಲಾಖೆ ನೇರವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಉದ್ದೇಶ ಪೂರ್ವಕವಾಗಿ ಸಿಸೇರಿಯನ್ ಮಾಡುತ್ತಿದ್ದಾರೆ ಎನ್ನುವುದು ತಿಳಿದರೆ ಮಾತ್ರ ಕ್ರಮ ಕೈಗೊಳ್ಳಬಹುದು. ವೈದ್ಯಕೀಯ ಮತ್ತು ಸಾಮಾಜಿಕ ಜಾಗೃತಿಯನ್ನು ಗರ್ಭಿಣಿಯರು ಮತ್ತು ಅವರ ಕುಟುಂಬಸ್ಥರಿಗೆ ಮೂಡಿಸಬೇಕಾಗಿದೆ ಎಂದರು.












